ದೇಹ ಮತ್ತು ಚೇತನದ ಸಂಸರ್ಗದಿಂದ ಭಾವ ಹುಟ್ಟುವುದು…

photoದೇಹಬೋಧೆಯಿಂದ ಜನಿಸಿದ ಈ ‘ನಾನು’ ಭಾವವನ್ನು ‘ದೇಹ ಬುದ್ಧಿ’ ಎಂದು ಕರೆಯಲಾಗುತ್ತದೆ. ಈ ದೇಹಬುದ್ಧಿಯ ಅಭಾವ ಉಂಟಾದರೆ ನಾವು ಇತರರೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಇನ್ನೊಬ್ಬರೊಂದಿಗೆ, ಅನ್ಯರೊಂದಿಗೆ ಸಂಬಂಧ ಸಾಧಿಸಲು ದೇಹಭಾವ, ನಾನು ಭಾವ ಇರುವುದು ಪರಮ ಅವಶ್ಯಕ  ~ WHOSOEVER JI

ಚೇತನವು ಎಲ್ಲ ಶರೀರಗಳಲ್ಲಿಯೂ ಒಂದೇ ರೀತಿ ಇರುತ್ತದೆ. ಶರೀರದಲ್ಲಿ ಚೇತನವು ಇರದಿದ್ದರೆ ಅದು ಮೃತವಾಗುತ್ತದೆ ಮತ್ತು ರಿಸೈಕಲ್ ಆಗಲು, ಪುನರ್ಬಳಕೆಗೆ ಒದಗಲು ಸಿದ್ಧವಾಗುತ್ತದೆ. ಆದ್ದರಿಂದ ಎಲ್ಲಿಯೂ “ನಾನು” ಎನ್ನುವ ಸಂಗತಿಗೆ ಅವಕಾಶವೇ ಇರುವುದಿಲ್ಲ. ಯಾವ “ನಾನು” ಅಷ್ಟೊಂದು ಹೆದರಿದೆಯೋ, ಆತಂಕಗೊಂಡಿದೆಯೋ, ಇನ್‌ಸೆಕ್ಯೂರ್ಡ್ ಆಗಿದೆಯೋ ವಾಸ್ತವವಾಗಿ ಆ “ನಾನು” ಎಂಬುದೇ ಇಲ್ಲ! 

ಈಗ ಮತ್ತೆ ನಮ್ಮ ಮುಖ್ಯ ವಿಷಯ “ಚೇತನ”ದೆಡೆಗೆ ಹೊರಳೋಣ. 
ಮುಂಜಾನೆ ಎದ್ದ ಕೂಡಲೆ ಚೇತನವು ದೇಹವನ್ನು ಪ್ರಕಾಶಿಸುವುದರ ಜೊತೆಗೆ ನಾನು ‘ಇದ್ದೇನೆ’ ಎನ್ನುವ ಭಾವವು ಉದಿಸುತ್ತದೆ. ಈ ‘ಇದ್ದೇನೆ’ ಎನ್ನುವ ಅರಿವು ಮೂಡುವುದು ಚೇತನದಿಂದಾಗಿ. ಹಾಗೂ ‘ನಾನು’ ಎಂಬ ಭಾವ ಮೂಡುವುದು ಚೇತನವು ದೇಹದೊಂದಿಗೆ ತಾದಾತ್ಮ್ಯಗೊಳ್ಳುವುದರಿಂದಾಗಿ. 
ವಸ್ತುತಃ ‘ನಾನು’ ಎನ್ನುವ ಯಾವುದೇ ವಸ್ತು ಇರುವುದಿಲ್ಲ. ಈ ‘ನಾನು’ ಎನ್ನುವುದು ಕೇವಲ ಆಭಾಸವಷ್ಟೆ. ಇದು ದೇಹಬೋಧೆಯ ಒಂದು ರೀತಿಯಾಗಿದೆ, ಮಾಧ್ಯಮವಾಗಿದೆಯಷ್ಟೆ. 

ಜಗತ್ತಿನಲ್ಲಿ ಶರೀರದ ಕಾರ್ಯವ್ಯವಹಾರ ನಡೆಯಲಿಕ್ಕೆ ಇದರ ಇರುವಿಕೆಯ ಅಗತ್ಯ ಬಹಳವಿದೆ. ‘ನಾನು’ ಎನ್ನುವ ಭಾವವೇ ಇಲ್ಲದೆಹೋದರೆ ‘ನೀನು’ವಿನೊಂದಿಗೆ, ‘ಅನ್ಯ’ರೊಂದಿಗೆ ಅಥವಾ ಜಗತ್ತಿನೊಂದಿಗೆ ವ್ಯವಹರಿಸುವುದಾದರೂ ಹೇಗೆ? 
ದೇಹಬೋಧೆಯಿಂದ ಜನಿಸಿದ ಈ ‘ನಾನು’ ಭಾವವನ್ನು ‘ದೇಹ ಬುದ್ಧಿ’ ಎಂದು ಕರೆಯಲಾಗುತ್ತದೆ. ಈ ದೇಹಬುದ್ಧಿಯ ಅಭಾವ ಉಂಟಾದರೆ ನಾವು ಇತರರೊಂದಿಗೆ ಸಂಬಂಧ ಹೊಂದಲು ಸಾಧ್ಯವಾಗುವುದಿಲ್ಲ. ಇನ್ನೊಬ್ಬರೊಂದಿಗೆ, ಅನ್ಯರೊಂದಿಗೆ ಸಂಬಂಧ ಸಾಧಿಸಲು ದೇಹಭಾವ, ನಾನು ಭಾವ ಇರುವುದು ಪರಮ ಅವಶ್ಯಕ. ಸಂಸಾರದಲ್ಲಿ, ಸಮಾಜದಲ್ಲಿ ಜೀವಿಸಲಿಕ್ಕೆ ಹಾಗೂ ವ್ಯವಹರಿಸಲಿಕ್ಕೆ ಇದರ ಅವಶ್ಯಕತೆ ಇದೆ. ನಾನು ಇದನ್ನೊಂದು ದುರವಶ್ಯಕತೆ ಎಂದು ಕರೆಯುತ್ತೇನೆ. 
ಇದು ದುರ್ಬಳಕೆಯಾಗಿರುವುದರಿಂದಲೇ ಎಲ್ಲ ವಿಷಯ ತಲೆಕೆಳಗಾಗಿ ಹೋಗುತ್ತವೆ. ಯಾವುದು ವಸ್ತುತಃ ಇದೆಯೋ ಅದು ಈ ಭಾವದಿಂದ ಆವೃತವಾಗಿಹೋಗುತ್ತದೆ. ವಸ್ತುತಃ ಇಲ್ಲದ ‘ನಾನು’ ಭಾವವು ಅಧಿಕಾರಕ್ಕೆ ಬಂದುಬಿಡುತ್ತದೆ. ಈಗ ನಾನು ಭಾವದಿಂದ ಆಚ್ಛಾದಿತವಾದ ಚೇತನವು ಕೇವಲ ಛಾಯೆ ಮಾತ್ರವಾಗಿ ಉಳಿದುಕೊಳ್ಳುತ್ತದೆ. 

ಈ ‘ನಾನು’ ಭಾವವು ಈ ಕೋಣೆಯಂತೆಯೇ ಇರುತ್ತದೆ. ಇದಕ್ಕೆ ತನ್ನದೇ ಆದ ಯಾವುದೇ ಅಸ್ತಿತ್ವವಿರುವುದಿಲ್ಲ. ಅಸ್ತಿತ್ವ ಇರುವುದು ಈ ಕೋಣೆಯೊಳಗೆ ಇರುವ ಆಕಾಶದ್ದು, ಅದರೊಳಗಿನ ಶೂನ್ಯದ್ದು. 
ಹೇಗೆ ಈ ಕೋಣೆಯು ಕೇವಲ ಕೆಲಸದ ಕಾರಣಕ್ಕಾಗಿ ಇದೆಯೋ, ಹಾಗೆಯೇ ಈ ದೇಹಬುದ್ಧಿ ಕೂಡಾ. ಈ ನಾನು ಭಾವಕ್ಕೆ ತನ್ನದೇ ಆದ ಯಾವ ಅಸ್ತಿತ್ವವೂ ಇರುವುದಿಲ್ಲ. ಮತ್ತೂ ಹೆಳಬಹುದಾದರೆ, ಇದು ಭೂತದಂತೆ. ಭೂತವು ಒಂದು ಅನುಭವ ಅಷ್ಟೆ. ಅದು ಘಟಿಸಲು ಎಂದಿಗೂ ಸಾಧದಯವಿಲ್ಲ. ಅದೊಂದು ಕಾಲ್ಪನಿಕ ಅವಸ್ಥೆಯಾಗಷ್ಟೆ ನಿಲುಕುವುದು. 

ನೆನ್ನೆ ತಾನೆ ಗೆಳೆಯನೊಬ್ಬ ಹೇಳುತ್ತಿದ್ದ; ಅವನಿಗೆ ಯಾವಾಗಲೂ ಅವನ ಆಜೂಬಾಜೂ ದುಷ್ಟ ಆತ್ಮವು ಇರಬಹುದೆಂದು ಭಯವಾಗುತ್ತ ಇರುತ್ತದೆಯಂತೆ! ನಾನು ಹೇಳಿದೆ; ಅಂಥದ್ದು ಏನೂ ಇಲ್ಲ, ಎಲ್ಲಿಯೂ ಇಲ್ಲ. ಅದು ನಿನ್ನ ನಂಬಿಕೆಯ ಭಾಗವಷ್ಟೆ ಎಂದು. ನೀನು ಯಾವುದನ್ನು ನಂಬುತ್ತೀಯೋ ಅದೇ ಅಸ್ತಿತ್ವ ಪಡೆಯುತ್ತದೆ. ಯಾವಾಗ ನೀನು ನಿನ್ನದೇ ಕಲ್ಪನೆಗೆ ವಶವಾಗತೊಡಗುತ್ತೀಯೋ ಆಗಿಂದ ನೀನು ಆತಂಕಿತ ಬದುಕನ್ನು ಜೀವಿಸತೊಡಗುತ್ತೀಯ. 

ಇರಲಿ. ನಾವು ಈ ಕೋಣೆಯ ಬಗ್ಗೆ ಮಾತನಾಡುತ್ತಿದ್ದೆವು. ಇದರ ಅಸ್ತಿತ್ವದ ಬಗ್ಗೆ.,.. ಈ ಕೋಣೆಯು ಒಂದು ವ್ಯವಸ್ಥೆಯಾಗಿದೆ. ಉಪಯೋಗಕ್ಕೆಂದು ಮಾಡಿಕೊಂಡ ವ್ಯವಸ್ಥೆ. ಅದರ ಉಪಯೋಗ ಮಾಡಿಕೊಂಡರೇನೂ ಸಮಸ್ಯೆಯಾಗದು, ಮಾಡಿಕೊಳ್ಳಿ. ಕೋಣೆಯಂತೆಯೇ ಈ ನಾನು ಭಾವ ಕೂಡ ಒಂದು ವ್ಯವಸ್ಥೆ. ಇದೊಂದು ನೈಸರ್ಗಿಕ ವ್ಯವಸ್ಥೆ. ಇದರಿಂದಲೂ ಉಪಯೋಗವಿದೆ. ವ್ಯಾವಹಾರಿಕ ಪ್ರಯೋಜನಗಳಿವೆ. ಆದರೆ ಅದನ್ನು ಬಳಸುವಾಗ ಸ್ಪಷ್ಟವಾಗಿ ನೆನಪಿರಬೇಕು, ಅದು ಬರಿ ವ್ಯವಸ್ಥೆ ಮಾತ್ರವೆಂದು. ವಸ್ತುತಃ ಇಲ್ಲವೆಂದು. 

ಮೂಲತಃ ಇರುವುದು ಎರಡೇ ವಸ್ತುಗಳು. ಒಂದು ಚೇತನ, ಮತ್ತೊಂದು ದೇಹ. 
ನಾನು ಭಾವವು ಮೂರನೆಯ – ಅವಾಸ್ತವಿಕ, ಆದರೆ ಕೆಲಸಕ್ಕೆ ಬರುವ ವಸ್ತುವಾಗಿದೆ. 
ಚೇತನ ಹಾಗೂ ದೇಹದ ಸಂಸರ್ಗದಿಂದ ಹುಟ್ಟಿಕೊಲ್ಳುವ ಹೊಸ ವಸ್ತುವೇ ಈ ನಾನು ಭಾವ. ಮತ್ತು ಈ ನಾನು ಭಾವವು ಸುಷುಪ್ತಿಯಲ್ಲಿ ಮಾಯವಾಗಿಹೋಗುತ್ತದೆ ಹಾಗೂ ಜಾಗೃತಾವಸ್ಥೆಯಲ್ಲಿ ಪುನಃ ಪ್ರಕಾಶಿತಗೊಳ್ಳುತ್ತದೆ. ಏಕೆಂದರೆ ದೇಹದ ಅಸ್ತಿತ್ವದ ಅರಿವು ಮೂಡಿಸುವ ಚೇತನವು ಸುಷುಪ್ತಿಯ ಅವಧಿಯಲ್ಲಿ ಸ್ಥಗಿತವಾಗಿರುತ್ತದೆ. ಅದು ವಿಶ್ರಾಂತಿಯಲ್ಲಿರುತ್ತದೆ. 

ಹೇಗೆ ಈ ಕೋಣೆಯು ಕತ್ತಲಲ್ಲಿ ಕಳೆದುಹೋಗುವುದೋ, ಹಾಗೆಯೇ ನಾನು ಭಾವವು ಸುಷುಪ್ತಿಯ ಕತ್ತಲಲ್ಲಿ ಕಳೆದುಹೋಗುತ್ತದೆ. ಬೆಳಕಿನ ಜೊತೆಜೊತೆಗೇ ಈ ಕೋನೆಯು ಪುನಃ ಹೆಗೆ ಪ್ರಕಟಗೊಳ್ಳುವುದೋ ಹಾಗೆಯೆ ನಾನು ಭಾವವೂ ಪುನಃ ಪ್ರಕಟವಾಗುತ್ತದೆ. ಬಹುಶಃ ಈಗ ನಿಮಗೆ ಅರ್ಥವಾಗಿರುತ್ತದೆ; ಈ ನಾನು ಭಾವ ಅರ್ಥಾತ್ ದೇಹಬೋಧೆಯು ಚೇತನದ ಆಧಾರವಿಲ್ಲದೆ ಹೋದರೆ ಅಸ್ತಿತ್ವದಲ್ಲೇ ಇರುವುದಿಲ್ಲ ಎಂದು. 

ನೀವೇನನ್ನು ನೋಡುತ್ತಿದ್ದೀರೋ ಕೇಳುತ್ತಿದ್ದೀರೋ ಅವುಗಳಾಚೆಗೂ ಮತ್ತೇನೋ ಇದೆ ಅನ್ನುವುದನ್ನ ನೀವು ಹೇಗೆ ತಾನೆ ಊಹಿಸಿಕೊಳ್ಳಬಲ್ಲಿರಿ!? ನೀವು ಏನೇ ಕಲ್ಪನೆ ಮಾಡಿಕೊಂಡರೂ ಅದು ನಿಮ್ಮ ಹಿಂದಿನ ತಿಳಿವಳಿಕೆಯಿಂದ ಹೊಮ್ಮುವುದಷ್ಟೆ. ಕಲ್ಪನೆಗಳಷ್ಟೆ ಅಲ್ಲ, ನಿಮ್ಮ ಕನಸುಗಳೂ ನಿಮ್ಮ ಹಿಂದಿನ ತಿಳಿವಳಿಕೆಯ ಮೊತ್ತವಾಗಿರುವವಷ್ಟೆ. ಕಲ್ಪನಾ ಹೇಳಿದಳು, ಆಕೆ ಕನಸಿನಲ್ಲಿ ಪೂನಾಕ್ಕೆ ಹೋಗಿದ್ದಳಂತೆ. ಆಕೆ ಪೂನಾಕ್ಕೇ ಯಾಕೆ ಹೋದಳು? ಯಾಕೆಂದರೆ ಅವಳಿಗೆ ಆ ಸ್ಥಳದ ಪರಿಚಯವಿದೆ. ಕೊನೆಯ ಪಕ್ಷ ಕೇಳಿಯಾದರೂ ಆ ಸ್ಥಳವನ್ನು ಅವಳು ಬಲ್ಲಳು. ನಮಗೆ ಗೊತ್ತಿಲ್ಲದ್ದನ್ನು ಕಲ್ಪಿಸಿಕೊಳ್ಳಲು, ಕನಸಲು ಸಾಧ್ಯವೇ ಇಲ್ಲ.
ಆದರೆ ಚಿತ್ತಶುದ್ಧಿಯಾಗುತ್ತ ನಡೆದಂತೆಲ್ಲ. ಚಿತ್ತದ ವಿಕಾಸವಾಗುತ್ತ ಸಾಗಿದಂತೆಲ್ಲ ನಿಮ್ಮ ತಿಳಿಯುವ, ಗ್ರಹಿಸುವ ಸಾಮರ್ಥ್ಯವೂ ಬದಲಾಗತೊಡಗುತ್ತದೆ. ನಿಮಗೆ ಮೊದಲಿಗಿಂತ ಸ್ವಲ್ಪ ಹೆಚ್ಚು ಕಾಣತೊಡಗುತ್ತದೆ, ಕೇಳತೊಡಗುತ್ತದೆ. ಕ್ರಮೇಣ ಯಾವುದು ಅದೃಶ್ಯವೋ ಯಾವುದಕ್ಕೆ ರೂಪಾಕಾರಗಳಿಲ್ಲವೋ ಅವು ಕೂಡ ಕಾಣತೊಡಗುತ್ತವೆ. ಮತ್ತೀಗ ಇದು ಚಮತ್ಕಾರವಲ್ಲದೆ ಮತ್ತೇನು!?

ಹಿಂದಿನ ಭಾಗವನ್ನು ಇಲ್ಲಿ ಓದಿ: https://aralimara.com/2018/07/24/whosoeverji/

(ಮೂಲ ಹಿಂದಿ: ಶಿವೋಹsಮ್ | ಕರ್ತೃ: Whosoever Ji | ಕನ್ನಡಕ್ಕೆ : ಚೇತನಾ)

1 Comment

Leave a Reply