ನಮ್ಮ ಕುರಿತು

ನಮ್ಮ ನಿಲುವು

IMG_8472 1

ದೊಂದು ಕಾಲವಿತ್ತು.
ಧರ್ಮ ಅನ್ನೋದು ವ್ಯಕ್ತಿಯ ಖಾಸಗಿ ಸಂಗತಿಯಾಗಿತ್ತು. ಅಧ್ಯಾತ್ಮ ಅನ್ನುವ ಪದ ಕೇಳಲು ಸಿಗುತ್ತಿದ್ದುದೇ ಕಡಿಮೆ. ತೊಂಭತ್ತರ ದಶಕಕ್ಕೆ ಮುಂಚೆ ಹುಟ್ಟಿದವರು ಬಹುಶಃ ಕೇಳಿಯೇ ಇಲ್ಲ ಅನ್ನುವಷ್ಟು ಕಡಿಮೆ!
ತೀರಾ ಘನಗಂಭೀರ ಆಶ್ರಮಗಳ ಕಪಾಟಿನಲ್ಲಿ ಪುಸ್ತಕದ ಮೇಲು ಹೊದಿಕೆಯಲ್ಲಿ ‘ಅಧ್ಯಾತ್ಮ’ ರಾರಾಜಿಸುತ್ತಿತ್ತು. ಆ ಕಾಲದ ಸಹಜ ಜೀವಿಗಳಿಗೆ ಅಧ್ಯಾತ್ಮವನ್ನು ತಿಳಿಯುವ ಅಗತ್ಯವೇ ಇರಲಿಲ್ಲ. ಬಹುಶಃ ಅವರು ಅದನ್ನು ಬದುಕುತ್ತಿದ್ದರು.

ಅಧ್ಯಾತ್ಮ ಅಂದರೆ ಸರಳವಾಗಿ, ಸಹಜವಾಗಿ ಬದುಕುವುದು. 
ಸಹಿಷ್ಣುವಾಗಿ, ಕೂಡಿಕೊಂಡು ಬದುಕುವುದು. ಅಧ್ಯಾತ್ಮ ಅಂದರೆ ‘ಬದುಕುವುದು’.  ಅಷ್ಟೇ.

ಅನಂತರ ಕಾಲವೊಂದು ಬಂತು.
ವ್ಯಕ್ತಿಯ ಬದುಕಿನ ಶೈಲಿ ಬದಲಾಗುತ್ತಾ, ಮನುಷ್ಯ ಹೆಚ್ಚುಹೆಚ್ಚು ವ್ಯಕ್ತಿ ಕೇಂದ್ರಿತನಾಗಿ, ಸ್ವಯದ ಪ್ರಜ್ಞೆಯಲ್ಲಿ ಬದುಕತೊಡಗಿದಾಗ ಅಧ್ಯಾತ್ಮದ ಅಂಚು ಹಿಡಿಯಬೇಕಾಗಿ ಬಂತು.
ಆಡಂಬರದಲ್ಲಿ ಕಳೆದುಹೋಗುವುದು ಬದುಕಿನ ಅನಿವಾರ್ಯವಾದಾಗ ತನ್ನನ್ನು ತಾನು ಕಂಡುಕೊಳ್ಳಲು ಸಹಜತೆಯನ್ನು ಕಲಿಯಬೇಕಾಗಿ ಬಂತು.
ಅಧ್ಯಾತ್ಮ ಬಹುತೇಕ ಎಲ್ಲ ಓದು ಬಲ್ಲವರ ಮನೆಯ ಕಪಾಟುಗಳಲ್ಲಿ ಕಾಣಿಸಿಕೊಳ್ಳತೊಡಗಿದ್ದು ಅನಂತರದಲ್ಲಷ್ಟೇ.

ಅಧ್ಯಾತ್ಮ ತೀರಾ ಮೋಕ್ಷ ಹುಡುಕುವ ದಾರಿಯಾಗಬೇಕಿಲ್ಲ.
ಮೋಕ್ಷ, ಸಾವಿನ ಅನಂತರದ್ದು.
ಅಧ್ಯಾತ್ಮ ಬದುಕನ್ನು ಎಚ್ಚರದಿಂದ ಸಾಗಿಸುವ ದಾರಿಯೂ ಆಗಿದೆ.
ಆದ್ದರಿಂದಲೇ ಈ ಕಾಲಕ್ಕೆ ಕಾರ್ಪೊರೇಟ್ ಅಧ್ಯಾತ್ಮದಿಂದ ಹಿಡಿದು ಕಾಡು ಸೇರುವ ತನಕ ಬಗೆಬಗೆಯಲ್ಲಿ ಅದನ್ನು ವಿವರಿಸಲಾಗಿದೆ.

ಬಿಡಿ! ಹೊಟ್ಟೆ ತುಂಬಿದವರಿಗಷ್ಟೇ ಇವೆಲ್ಲಾ!! ಅನ್ನುವವರೂ ಇದ್ದಾರೆ.
ಅದು ನಿಜವೂ ಹೌದು. ಆದರೆ ಪೂರಾ ನಿಜವೇನಲ್ಲ.
ಹಸಿದವರಿಗೆ ಅಧ್ಯಾತ್ಮ ಬೇಡ ಅನ್ನುವುದು, ಹಸಿದವರಿಗೆ ವಿದ್ಯೆ ಅರಿವು ಅಥವಾ ಪ್ರಜ್ಞಾವಂತಿಕೆ ಬೇಡವೆಂದು ತಳ್ಳಿ ಹಾಕಿದಂತೆಯೇ.

“ಹಸಿದವರಿಗೆ ಒಂದು ಹೊತ್ತು ಅನ್ನ ನೀಡಿದರೆ ತಪ್ಪಿಲ್ಲ. ಆದರೆ ಆತ ನಾಳೆಯೂ ಹಸಿದಿರಬಹುದು. ಆದ್ದರಿಂದ ಅವನಿಗೆ ಅನ್ನವನ್ನು ದುಡಿದುಕೊಳ್ಳುವ ವಿದ್ಯೆ ಕಲಿಸಿ” ಅನ್ನುತ್ತಾರೆ ಸ್ವಾಮಿ ರಾಮತೀರ್ಥ. 

ಮಾನಸಿಕ ಕ್ಲೇಷಕ್ಕೆ ಕೌನ್ಸೆಲಿಂಗ್, ಒಂದು ಹೊತ್ತಿನ ಅನ್ನ.
ಅಧ್ಯಾತ್ಮ, ಚಿಕಿತ್ಸೆ ನೀಡುವ ವೈದ್ಯ.
ಅಧ್ಯಾತ್ಮವಿದ್ದಲ್ಲಿ ವಿಕಸನ. ವಿಕಸಿತ ಜೀವನಶೈಲಿಯಿಂದ ಬದುಕು ನಿರಾತಂಕ. 

ಈ ನಿಟ್ಟಿನಲ್ಲಿ ಅರಳಿಮರ ಒಂದು ಮಿಂಚುಹುಳವಾದರೂ ಆಗಲೆಂಬ ಆಶಯ ನಮ್ಮದು. 

 

ಪ್ರೀತಿಯಿಂದ,

ಅರಳಿ ಬಳಗ. 

ಸಂಪರ್ಕ: aralimara123@gmail.com