ಪ್ರೇಮದಲಿ ಜಗವ ಲಯಗೊಳಿಸುವ ಶಿವ

ಮೂಲದೊಳಗೆ ಒಂದಾಗುವ ಪ್ರಕ್ರಿಯೆ ಯಾವತ್ತೂ ಹರ್ಷದಾಯಕ. ಅದರಂತೆಯೇ ಮರಳಿ ಮನೆಗೆ ಕರೆದೊಯ್ಯುವ ಕ್ರಿಯೆ ಮಂಗಳ ಕಾರ್ಯವಾಗುತ್ತದೆ. ಶಿವ, ಪ್ರೇಮ ತಾಂಡವದ ಮೂಲಕ ಅದನ್ನು ನೆರವೇರಿಸುವ ಮಂಗಳ ಮೂರ್ತಿಯಾಗುತ್ತಾನೆ ~ ಚೇತನಾ ತೀರ್ಥಹಳ್ಳಿ

 ಬಹುಶಃ ಪ್ರಾಚೀನ ಭಾರತದ ಪ್ರೇಮಕಥೆಗಳಲ್ಲಿ ಶಿವ ಮಹಾಕಾಲನ ಪ್ರೇಮಗಾಥೆಯಷ್ಟು ವಿಶಿಷ್ಟವೂ ವಿಭಿನ್ನವೂ ಆದುದು ಮತ್ತೊಂದಿಲ್ಲ. ಶಿವ ಅತ್ಯಂತ ಪ್ರೇಮಮಯಿ. ಭಕ್ತವತ್ಸಲ. ಕೇಳಿದ್ದೆಲ್ಲ ನಿಂತ ಕಾಲಲ್ಲೇ ಕೊಟ್ಟು ಸಂತೋಷಪಡಿಸುವ ಆಶುತೋಷನೆಂದೇ ಪ್ರಸಿದ್ಧ. ಶಿವನ ಈ ಪ್ರೇಮಪ್ರವಾಹ ದೇವ ಬಳಗದಲ್ಲಿ ಉಂಟು ಮಾಡಿದ ಅಲ್ಲೋಲಕಲ್ಲೋಲಗಳು ಅದೆಷ್ಟೋ… ಪುರಾಣ ಕಥೆಗಳಲ್ಲಿ ಅವನ್ನೆಲ್ಲ ಓದುವುದೇ ಒಂದು ಹಬ್ಬ

ಇಂಥಾ ಶಿವನ ಸಾಂಗತ್ಯ ಪ್ರೇಮದ ಪರಿಯನ್ನಂತೂ ಹೇಳಿ ಮುಗಿಯುವುದಿಲ್ಲ. ಶಿವೆ, ಶಿವಾನಿ, ಭವಾನಿ, ಪಾರ್ವತಿ, ಸತಿ, ಗೌರಿ, ಮಹಾಕಾಳಿ –  ಹೀಗೆ ಹಲವು  ಹೆಸರುಗಳಿಂದ, ಹಲವು ರೂಪಗಳಲ್ಲಿ ಕರೆಯಲ್ಪಡುವ ಶಕ್ತಿ, ಶಿವನ ಸಂಗಾತಿ. ಶಿವ – ಶಕ್ತಿಯರ ಪ್ರೇಮ ಹಲವು ಆಯಾಮಗಳ ಚರ್ಚೆ. ಆಧ್ಯಾತ್ಮಿಕವಾಗಿ ಇವರಿಬ್ಬರ ಮಿಲನ ಕುಂಡಲಿನೀ – ಸಹಸ್ರಾರದ ಪಯಣವಾದರೆ, ಲೌಕಿಕರಿಗೆ ಈ ದೇವದಾಂಪತ್ಯವೊಂದು ಪರಮಾದರ್ಶ. ಭಕ್ತರಿಗೆ ಶಿವೆ ಜಗಜ್ಜನನಿಯಾದರೆ, ಶಿವ ಎಲ್ಲರನ್ನು ಸಲಹುವ ತಂದೆ. ತಾತ್ತ್ವಿಕವಾಗಿ, ತಾರ್ಕಿಕವಾಗಿ ಕೂಡಾ ಶಿವ ಶಕ್ತಿಯರ ಪ್ರೇಮ ಸಂಬಂಧ ಹಲವು ಬಗೆಯ ಜಿಜ್ಞಾಸೆಗೆ ತೆರೆದುಕೊಳ್ಳುತ್ತದೆ.  

**

ಶಿವ ಅಂದರೇನೇ ಮಂಗಳ ಎಂದರ್ಥ. ಹೀಗೆ ಹೆಸರಲ್ಲೇ ಮಾಂಗಲ್ಯವನ್ನು ಹೊತ್ತವನಿಗೆ ಲಯಕರ್ತನ ಪಟ್ಟವೇಕೆ? ಲಯವೆಂದರೆ ವಿನಾಶ. ವಿನಾಶವೆಂದರೆ ಲೌಕಿಕ ತಿಳಿವಳಿಕೆಯಲ್ಲಿ ಅಮಂಗಳ ಎಂದಲ್ಲವೆ? ಲಯಕರ್ತನಾದವನಿಗೆ ಮಂಗಳಸೂಚಕ ಹೆಸರೇಕೆ? ಶಿವನ ರಹಸ್ಯ ಅಡಗಿರುವುದೇ ಇಲ್ಲಿ. ಶಿವ ಮಹಾ ಪ್ರೇಮಿ. ಹಾಗೆಂದೇ ಅವನಲ್ಲಿ ದ್ವೈತಕ್ಕೆಡೆಯಿಲ್ಲ. ಪ್ರೇಮವೆಂದರೆ ನಮ್ಮನ್ನೆ ನಾವು ಲಯಗೊಳಿಸಿಕೊಳ್ಳುವ ಪ್ರಕ್ರಿಯೆ ಅಲ್ಲವೆ? ನಮ್ಮನ್ನು ಯಾರು ಪ್ರೀತಿಸುತ್ತಾರೋ ಅವರು ನಮ್ಮನ್ನು ತಮ್ಮಲ್ಲಿ ಲಯಗೊಳಿಸಿಕೊಳ್ಳುತ್ತಾರೆ. ಪ್ರೇಮದಲ್ಲಿ ನಾವು ನಾಶಗೊಳ್ಳದೆ ಹೋದರೆ ಅದು ಪ್ರೇಮ ಹೇಗಾಗುತ್ತದೆ? ಇಲ್ಲಿ ನಾಶ ಎಂದರೆ ನಕಾರಾತ್ಮಕ ಅರ್ಥದಲ್ಲಿ ಅಲ್ಲ. ನಾಶವಾಗುವುದು ಎಂದರೆ ನಮ್ಮ ಮಿಥ್ಯಾಹಂಕಾರದ ನಾಶ. ನಾನು – ನೀನೆಂಬ ಭೇದದ ನಾಶ. ಸೃಷ್ಟಿಯ ಮೂಲಕ ಬ್ರಹ್ಮ ದ್ವೈತಕ್ಕೆ ನಾಂದಿ ಹಾಡಿದರೆ, ವಿಷ್ಣು ಆ ದ್ವೈತಾವಸ್ಥೆಯನ್ನು ಕಾಯ್ದಿಡುವ ಹೊಣೆ ಹೊರುತ್ತಾನೆ. ಇನ್ನೀಗ ಶಿವನಿಗೆ ಅದನ್ನು ಮತ್ತೆ ಅದ್ವೈತಗೊಳಿಸುವ, ಶಕ್ತಿಮೂಲದಲ್ಲೇ ಎಲ್ಲವೂ ಲಯಗೊಳ್ಳುವಂತೆ ಮಾಡುವ ಜವಾಬ್ದಾರಿ. ಹೀಗೆ ಮೂಲದೊಳಗೆ ಒಂದಾಗುವ ಪ್ರಕ್ರಿಯೆ ಯಾವತ್ತೂ ಹರ್ಷದಾಯಕ. ಅದರಂತೆಯೇ ಮರಳಿ ಮನೆಗೆ ಕರೆದೊಯ್ಯುವ ಕ್ರಿಯೆ ಮಂಗಳ ಕಾರ್ಯವಾಗುತ್ತದೆ. ಶಿವ, ಪ್ರೇಮ ತಾಂಡವದ ಮೂಲಕ ಅದನ್ನು ನೆರವೇರಿಸುವ ಮಂಗಳ ಮೂರ್ತಿಯಾಗುತ್ತಾನೆ.

***

4775812785_7e51cc6d40_oಈ ಎಲ್ಲ ತಾತ್ತ್ವಿಕ ವಿವರಣೆಗಳಾಚೆಗೂ ಶಿವ ಅದ್ಭುತ ಪ್ರೇಮಿ. ಪರಸ್ಪರ ಪ್ರೇಮಿಸಿ ಮದುವೆಯಾಗುವ ಶಿವ – ಸತೀದೇವಿಯರ ಕಥೆಯನ್ನೇ ನೋಡಿ:

ದಕ್ಷ ಬ್ರಹ್ಮನ ಮಗಳಾದ ದಾಕ್ಷಾಯಿಣೀ ಸತಿ ಮತ್ತು ಸ್ಮಶಾನವಾಸಿ ಶಿವ ಪರಸ್ಪರ ಪ್ರೇಮಿಸುವುದೇ ಒಂದು ರೋಚಕ ಸಂಗತಿ. ಸುಕೋಮಲೆಯೂ ರಾಜಕುಮಾರಿಯೂ ಕುಲೀನ (ಕಥೆಯ ಮಾಪನದಂತೆ) ಮನೆತನದವಳಾಗಿಯೂ ಇದ್ದ ಸತಿ, ಹುಲಿಯ ಚರ್ಮ ಸುತ್ತಿಕೊಂಡು ಅಲೆಯುವ ಬೂದಿಬಡುಕ ಶಿವನನ್ನು ಪ್ರೇಮಿಸುತ್ತಾಳೆ. ಶಿವ ಪೂರ್ವಾಪರವಿಲ್ಲದ ಅಲೆಮಾರಿ. ದೇಹದ ಪರಿವೆಯೇ ಇಲ್ಲದೆ ಧ್ಯಾನಮಗ್ನವಾಗಿ ದಿನಗಟ್ಟಲೆ ಕುಳಿತುಬಿಡುವ ಯೋಗಿ. ಏಕಾಂಗಿಯಾಗಿರುತ್ತಿದ್ದುದರಿಂದ ವ್ಯವಹಾರವೂ ಒರಟು. ಇಂಥ ಶಿವನನ್ನೂ ಸತಿ ಸೆಳೆಯುತ್ತಾಳೆ. ಅವಳ ಮುಗ್ಧತೆ ಮತ್ತು ತನ್ನಂಥವನ್ನು ಮೆಚ್ಚುವ ಆರ್ದ್ರತೆಗೆ ಮಾರುಹೋಗುತ್ತಾನೆ ಶಿವ.

ಇಂಥಾ ಶಿವ – ಸತಿಯರ ದಾಂಪತ್ಯ ಹೇಗಿತ್ತು ಎಂದು ಊಹಿಸುವುದು ಕವಿಗಳಿಗೊಂದು ಹಬ್ಬ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ನಮ್ಮ ಕುವೆಂಪು, ಐತ – ಪೀಂಚಲು ಜೋಡಿಯಲ್ಲಿ ಶಿವಶಿವೆಯರನ್ನು ಕಾಣುತ್ತಾರೆ. ಕಾಡಿನಲ್ಲಿ ಹೊಂಬಾಳೆ ಹಿಡಿದು ಸುತ್ತುವ ಈ ಪ್ರೇಮಿಗಳು ಅವರಿಗೆ ಬಿಲ್ಲು ಹಿಡಿದು ಅಲೆಯುವ ಶಿವ ದಂಪತಿಯಂತೆ ತೋರುತ್ತಾರೆ. ಮಹಾಕವಿ ಕಾಳಿದಾಸನಿಗೆ ಪಾರ್ವತೀಪರಮೇಶ್ವರರು ‘ವಾಗರ್ಥಾವಿವ ಸಂಪೃಕ್ತೌ’ – ಮಾತು ಮತ್ತು ಅರ್ಥಗಳಂತೆ ಪರಸ್ಪರ ಪೂರಕವಾಗಿ, ಅವಿಚ್ಛಿನ್ನವಾಗಿ ಹೆಣೆದುಕೊಂಡಿರುವಂತೆ ತೋರುತ್ತಾರೆ. ಶಂಕರರ ಪಾಲಿಗೆ ಶಿವ ಶಕ್ತಿಯರು ಪ್ರೇಮಸಲ್ಲಾಪದಲ್ಲಿ ತೊಡಗಿಕೊಂಡು, ಆ ಮೂಲಕವೇ ಜಗತ್ತನ್ನು ನಡೆಸುವ ಮಾತಾಪಿತರು.

***

ಪುರಾಣಗಳ ಪ್ರಕಾರ ಶಿವ ಎರಡು ಬಾರಿ ಮದುವೆಯಾಗುತ್ತಾನೆ. ದಾಕ್ಷಾಯಿಣೀ ಸತೀ ತನ್ನ ತಂದೆ ದಕ್ಷನು ಶಿವನನ್ನು ಅವಮಾನಿಸಿದನೆಂದು ನೊಂದು ಯಜ್ಞಕುಂಡಕ್ಕೆ ಜಿಗಿದು ಪ್ರಾಣ ತೊರೆಯುತ್ತಾಳೆ. ಈ ಸುದ್ದಿ ತಿಳಿಯುತ್ತಲೇ ಅಲ್ಲಿಗೆ ಧಾವಿಸುವ ಶಿವ, ಅವಳ ಅರೆಬೆಂದ ಕಳೇವರವನ್ನು ಹೊರತೆಗೆದು, ಹೆಗಲ ಮೇಲೆ ಹೊತ್ತುಕೊಂಡು ದುಃಖೋನ್ಮತ್ತನಾಗಿ ಅಲೆಯತೊಡಗುತ್ತಾನೆ. ದಿನಕಳೆದಂತೆ ಶವ ಜೀರ್ಣವಾಗುತ್ತಾ ಒಂದೊಂದೇ ಅಂಗಗಳು ಕಳಚಿ ಬೀಳತೊಡಗುತ್ತವೆ. (ಹೀಗೆ ಅಂಗಗಳು ಬಿದ್ದವೆನ್ನಲಾದ ಕೆಲವು ಸ್ಥಳಗಳನ್ನು ಶಕ್ತಿಪೀಠಗಳೆಂದು ಕರೆಯುವ ಪ್ರತೀತಿ ಇದೆ). ಕೊನೆಗೆ ಕಳೇವರ ಸಂಪೂರ್ಣ ಬಿದ್ದುಹೋದಾಗ ಶಿವನ ವಿರಹ ತಾರಕಕ್ಕೆ ಏರುತ್ತದೆ.

ಆದರೆ, ಶಿವ ಒಬ್ಬ ಯೋಗಿ. ಮಹಾಯೋಗಿ. ತನ್ನನ್ನು ಸಾಂತ್ವನಗೊಳಿಸಿಕೊಳ್ಳುವ ಮಾರ್ಗವನ್ನು ಅವನು ಬಲ್ಲ. ಮಹಾಧ್ಯಾನಕ್ಕೆ ಕುಳಿತುಕೊಳ್ಳುವ ಶಿವ ಮತ್ತೆ ಕಣ್ತೆರೆಯುವುದು ಪಾರ್ವತಿಯ ಗಂಧ ಸೋಕಿದಾಗಲೇ!

ಸತೀದೇವಿಯೇ ಪರ್ವತ ರಾಜನ ಮಗಳಾಗಿ ಹುಟ್ಟಿಬಂದಳೆಂದು ಪುರಾಣಗಳು ಹೇಳುತ್ತವೆ. ಅವಳು ಬಾಲ್ಯದಿಂದಲೂ ಊರ ಹೊರಗಿನ ಹಿಮದಿಬ್ಬದ ಮೇಲೆ ವರ್ಷಗಟ್ಟಲೆಯಿಂದ ಧ್ಯಾನವಿಲೀನನಾಗಿರುವ ಶಿವನ ಕಥನ ಕೇಳಿ ಬೆಳೆದವಳು. ತನ್ನ ಹೆಂಡತಿಯಲ್ಲಿ ಅವನಿಟ್ಟಿದ್ದ ಒಲವು  ಪಾರ್ವತಿಯ ಅಂತರಂಗದಲ್ಲಿ ಪ್ರೇಮವಾಗಿ ಚಿಗುರಿತು. ಅವನೆದೆಯ ನಿರ್ವಾತವನ್ನು ತಾನು ತುಂಬುವೆನೆಂದು ಹೊರಟಳು. ದೇಹದ ಪರಿವೆಯಿಲ್ಲದೆ ಕುಳಿತಿದ್ದ ಹಠಯೋಗಿಯನ್ನು ಉಪಚರಿಸಿದಳು. ಧ್ಯಾನಭಂಗವಾಗದಂತೆ ಮೈ ತೊಳೆದಳು. ಗಂಧ ಲೇಪಿಸಿದಳು. ಚಳಿ ಸೋಕದಂತೆ ಭಸ್ಮ ಬಳಿದಳು. ಅವನು ತಿನ್ನುತ್ತಾನೋ ಬಿಡುತ್ತಾನೋ…. ಹಣ್ಣುಹಂಪಲನ್ನಂತೂ ದಿನದ ಎರಡೂ ಹೊತ್ತು ಅವನ ಮುಂದಿಟ್ಟುಬಂದಳು.

ಶಿವ ಕಣ್ತೆರೆದ. ಪಾರ್ವತಿಯನ್ನು ಕಂಡ. ಕಾಣುವ ಘಳಿಗೆ ಕಾಮನ ಬಾಣ ಅವನನ್ನು ನಾಟುತ್ತಿತ್ತು. ಶಿವನಿಗೆ ಬೇಕಿದ್ದುದು ಪ್ರೇಮ, ಕಾಮವಲ್ಲ. ಹಾಗೆಂದೇ ಕಾಮನನ್ನು ಸುಟ್ಟು ಪ್ರೇಮಿಯಾದ. ಶಿವಪಾರ್ವತಿಯರು ಜೋಡಿಯಾದರು. ಸಾಂಗತ್ಯಕ್ಕೆ ಪರಮ ಸಂಕೇತವಾದರು.

ಶಿವನ ಈ ಎಲ್ಲ ಪ್ರೇಮಗಾಥೆಗಳು ವಾಚ್ಯವಾಗಿಯೂ ಸೂಚ್ಯವಾಗಿಯೂ ಮಹತ್ ತತ್ತ್ವವನ್ನು ಸಾರುವಂಥವು. ಆಧ್ಯಾತ್ಮಿಕ ಸಾಧಕರಿಗೆ ಶಿವ ಶಿವೆಯರ ಸಾಂಗತ್ಯ ತಾವು ಪರಮತತ್ತ್ವದಲ್ಲಿ ಲೀನವಾಗುವ ಅಥವಾ ಲಯಗೊಳ್ಳುವ ಬಗೆಗೊಂದು ಪಾಠ. ಹಾಗೆಂದೇ ಶಿವ ಶಿಷ್ಟಕ್ಕೆ ಎಷ್ಟೋ ಜನಪದಕ್ಕೂ ಅಷ್ಟೇ ಇಷ್ಟದ ದೈವ.

3 Comments

Leave a Reply