ಆರಾಧನೆಯೇ ಹೆಣ್ಣಾಗಿ ರೂಪು ತಳೆದಳು ರಾಧೆ

ರಾಧಾ ಎಲ್ಲ ಮಡಿವಂತಿಗೆಗಳನ್ನು ಬಿಟ್ಟು ಕೊಳಲಿನ ಕರೆಯ ಜಾಡು ಹಿಡಿದು ನಡೆದಳು. ಲೌಕಿಕದಲ್ಲಿ ಇರುತ್ತಲೇ ಪಾರಮಾರ್ಥಿಕ ನೆಲೆಯಲ್ಲೂ ಜೀವಿಸಿದಳು. ಹಾಗೆಂದೇ ಕೃಷ್ಣನನ್ನು ಸೇರಿದಳು. ಅಮರಳಾದಳು ಮಾತ್ರವಲ್ಲ, ಪ್ರೇಮವನ್ನೂ ಕೃಷ್ಣನೊಳಗಿನ ಪ್ರೇಮಿಯನ್ನೂ ಅಮರವಾಗಿಸಿದಳು.

ರಾಧೆ… ಯಾರು ಹಾಗೆಂದರೆ? ಕೇಳುವ ಪ್ರಶ್ನೆಯೇ ಇಲ್ಲ. ಕೃಷ್ಣನ ಹೆಸರು ಗೊತ್ತಿರುವ ಎಲ್ಲರಿಗೂ ರಾಧೆಯ ಹೆಸರು ಗೊತ್ತು. ಆದರೂ ಇವಳೊಬ್ಬಳಿದ್ದಳು ಅನ್ನುವ ಬಗೆಗೇ ನೂರೆಂಟು ತರ್ಕ ವಿತರ್ಕ. ಅಷ್ಟೊಂದು ಸಮರ್ಪಣಾ ಭಾವದಲ್ಲಿ, ದ್ವೈತಾದ್ವೈತಗಳನ್ನು ಮೀರಿದ ಐಕ್ಯದಲ್ಲಿ ಇದ್ದುಕೊಳ್ಳುತ್ತ ಸಾಕ್ಷಾತ್ ಕೃಷ್ಣನನ್ನು ಪ್ರೇಮಿಸಿದವಳು ಒಬ್ಬಳಿದ್ದಳು ಎಂದರೆ ನಂಬುವುದು ಹೇಗೆ? ಬಹುಶಃ ಅದಕ್ಕೇ ಅವಳನ್ನು ಕೆಲವರು ಸಂಕೇತವೆಂದು ಕರೆದರು. ಕೃಷ್ಣನದೇ ಲೀಲೆಯೆಂದರು. ಜೀವಾತ್ಮ – ಪರಮಾತ್ಮರ ನಡುವಿನ ಪ್ರೇಮವನ್ನು ಸೂಚಿಸುವ ಭಾಷೆಯೆಂದರು ರಾಧೆಯನ್ನು.

ಇಷ್ಟಕ್ಕೂ ರಾಧೆ ಎನ್ನುವ ಹೆಸರಿನ ವ್ಯಾಕರಣ ಹೇಳುವುದು ಇದನ್ನೇ. `ಅನಯಾರಾಧಿತೋ ನೂನಮ್ ಭಗವಾನ್ ಹರಿರೀಶ್ವರಃ…’ ಭಾಗವತದ 9ನೇ ಅಧ್ಯಾಯದ 22ನೇ ಶ್ಲೋಕ. ಇಡಿಯ ಭಾಗವತದಲ್ಲಿ ರಾಧೆಯ ಹೆಸರು ಕಾಣಿಸಿಕೊಳ್ಳುವುದು ಇಲ್ಲಿ ಮಾತ್ರ. ಅದೂ ಇಷ್ಟು ಸೂಚ್ಯವಾಗಿ, ರಹಸ್ಯವಾಗಿ! ಹರಿಯ `ಆರಾಧನೆ’ಯೇ ತಾನಾದವಳು `ರಾಧಾ’. ಅವಳು ಸ್ವಯಂ ಆರಾಧನೆ.

ಅಷ್ಟಾದರೂ ಅವಳ ಹೆಸರಿಲ್ಲ…

ಇಂಥಾ ರಾಧೆಯ ಹೆಸರೇಕೆ ಭಾಗವತದಲ್ಲಿಲ್ಲ? ಕಾರಣ ಹೇಳುತ್ತಾರೆ ಹಿರಿಯರು. ಭಾಗವತ ಬೋಧಿಸಿದ ಶುಕಮುನಿಗೆ ರಾಧೆ ಎಂದರೆ ವಿಪರೀತ ಗೌರವ ಭಕ್ತಿ. ರಾಧೆಯ ಹೆಸರುಚ್ಚರಿಸಿದರೆ ಸಾಕು, ಅವರು ಸ್ಮೃತಿ ತಪ್ಪುತ್ತಿದ್ದರಂತೆ. ಭಾಗವತ ಸಪ್ತಾಹ ಏರ್ಪಡಿಸಿದ್ದ ಪರೀಕ್ಷಿತ ಮಹಾರಾಜನ ಪಾಲಿಗೆ ಇದ್ದು ಏಳು ದಿನಗಳ ಆಯಸ್ಸು ಮಾತ್ರ. ಪಾಠಕರೇ ಸ್ಮೃತಿ ತಪ್ಪಿ ಕುಳಿತರೆ ಮಹಾರಾಜನಿಗೆ ಶ್ರವಣ ಭಾಗ್ಯವಿಲ್ಲ. ಮೊದಲೇ ಶಪಿತ. ಇನ್ನು ಮುಕ್ತಿಯೂ ದೊರಕದೆ ಮತ್ತೆ ಕರ್ಮ ಚಕ್ರಕ್ಕೆ ಸಿಲುಕುವ ಆತಂಕ. ಆದ್ದರಿಂದಲೇ ತಂದೆಯಾದ ವ್ಯಾಸರಿಂದ ಭಾಗವತ ಶ್ರವಣ ಮಾಡಿ ಮನನ ಮಾಡಿಕೊಂಡಿದ್ದ ಶುಕ ಮುನಿ, ರಾಧೆಯ ಹೆಸರಿದ್ದೆಡೆಯೆಲ್ಲ ಅದನ್ನು ದೂರವಿಟ್ಟು ಭಾಗವತ ವಾಚನ ಮಾಡಿದರಂತೆ. ಜೊತೆಗೆ, ರಾಧೆಯ ಬಗ್ಗೆ ಹೇಳಿದ್ದರೂ ಎಷ್ಟು ಜನ ಅರ್ಥ ಮಾಡಿಕೊಂಡಾರು? ಅಥವಾ ಎಷ್ಟು ಜನಕ್ಕೆ ಅಪಾರ್ಥ ಮಾಡಿಕೊಳ್ಳದೆ ಇರುವ ಯೋಗ್ಯತೆ ಇದ್ದೀತು? ಅನ್ನುವ ಮುನ್ನೆಚ್ಚರಿಕೆ ಅವರದಾಗಿತ್ತು ಎನ್ನಿಸುತ್ತದೆ.

ಪುರಾಣ ಕಥೆಗಳು…

ಇಷ್ಟಕ್ಕೂ ರಾಧೆ ಯಾರು!? ತಲೆ ಕೆಡಿಸಿಕೊಂಡವರು ಕಡಿಮೆ. ಈಕೆಯ ಇತಿವೃತ್ತ ತಿಳಿದು ಆಗಬೇಕಾದ್ದೇನು? ಶ್ರೀಕೃಷ್ಣನ ಅತ್ಯಂತ ಪ್ರೀತಿಪಾತ್ರಳು ಎಂದಮೇಲೆ ರಾಧೆಗೆ ಬೇರೆ ಗುರುತಾದರೂ ಯಾಕಿರಬೇಕು? ಪ್ರೇಮವೆಂದರೆ ಅದೇ ತಾನೆ? ಗುರುತು ಕಳೆದುಕೊಳ್ಳೋದು!? ಅದಕ್ಕೇ ರಾಧೆ ಭಾರತೀಯರ ಪಾಲಿಗೆ ಪ್ರೇಮದ ಪರಮೋನ್ನತ ಐಕಾನ್. ಕೃಷ್ಣನೆಡೆಗಿನ ಆಕೆಯ ಪ್ರೇಮ ನಮ್ಮ ಸಂಸ್ಕೃತಿ ಕಥನದ ಒಂದು ಅವಿಚ್ಛಿನ್ನ ಭಾಗ. 

ರಾಧೆಯ ಬಗ್ಗೆ ಪದ್ಮಪುರಾಣ, ಬ್ರಹ್ಮ ವೈವರ್ತ ಪುರಾಣಗಳಲ್ಲಿ ಹೆಚ್ಚಿನ ವಿವರಗಳಿವೆ. ಉಳಿದಂತೆ ದೇಶಕಾಲಕ್ಕೆ ತಕ್ಕಂತೆ ಹತ್ತಾರು ಪ್ರಕ್ಷೇಪಗಳೂ ಇವೆ. ಒಂದು ಕಥೆಯ ಪ್ರಕಾರ ರಾಧೆ, ಕೃಷ್ಣನ ಸೋದರತ್ತೆ. ಅಂದರೆ, ನಂದಗೋಪನ ದೂರದ ತಂಗಿ. ಮತ್ತೊಂದು ಕಥೆ ಹೇಳುವಂತೆ ರಾಧಾ ಕೃಷ್ಣನ ಸಂಬಂಧಿಯೇನಲ್ಲ. ಆದರೆ ಆಕೆ ಅವನಿಗಿಂತ ವಯಸಿನಲ್ಲಿ ದೊಡ್ಡವಳು. ಕೆಲವು ಕತೆಗಳು ಆಕೆಯನ್ನು ಕನ್ಯೆಯೆಂದು ಬಣ್ಣಿಸಿದರೆ, ಕೆಲವು ಆಕೆಗೊಂದು ಮದುವೆಯನ್ನೂ ಮಾಡಿವೆ. ಅವಳೊಬ್ಬಳು ಗೋಪಿಕೆ. ಆಕೆಯ ಗಂಡ ಆಯತನ, ಕಂಸನ ದಂಡಿನಲ್ಲಿದ್ದವ. ಮತ್ತೊಂದು ಕಥೆ ಹೇಳುವಂತೆ ರಾಧಾ ರಾಣಿ ವರ್ಷಣದ ರಾಜ ವೃಷಭಾನು ಮತ್ತು ಕೀರ್ತಿದಾ ಸುಂದರಿಯ ಮಗಳು. ಆಕೆ ಮದುವೆಯಾಗಿ ಹೋಗುವುದು ವೃಂದಾವನಕ್ಕೆ. ಗಂಡ ಕಂಸನ ಸೇನಾಧಿಪತಿ. ಮನೆಯಲ್ಲಿ ಅತ್ತೆ ಜಟಿಲೆ ಮತ್ತು ನಾದಿನಿ ಕುಟಿಲೆಯರ ಕಡುಕಾಟ. ಈ ಎಲ್ಲದರ ನಡುವೆ ರಾಧೆ ಕೃಷ್ಣನ ಅಲೌಕಿಕ ಪ್ರೇಮದಲ್ಲಿ ಸದಾ ಧ್ಯಾನಸ್ಥೆ.

ರಾಧೆ ಒಂದು ಸಾರ್ವಕಾಲಿಕ ಸಾಮಾಜಿಕ ಸೂಕ್ಷ್ಮ. ಈಕೆಯ ಅಸ್ತಿತ್ವವನ್ನೂ ವ್ಯಕ್ತಿತ್ವವನ್ನೂ ಮೇಲು ನೋಟಕ್ಕೆ ಅಳೆಯಲಾಗದು. ಅಷ್ಟೇ ಅಲ್ಲ, ಸಾಮಾನ್ಯ ಸೂತ್ರದಡಿ ತಾಳೆ ಹಾಕಲೂ ಆಗದು.  ರಾಧೆ ಒಂದು ಅಧ್ಯಾತ್ಮ ದರ್ಶನವೂ ಹೌದು. `ಸ್ವ’ವನ್ನು ಅಳಿದೂ ಉಳಿಯುವ, ಹಾಗೆ ಉಳಿಯುತ್ತಲೇ ಕೃಷ್ಣನಲ್ಲಿ ಬೆರೆತು ಹೋಗುವ ದಿವ್ಯ ಜ್ಞಾನ ಅವಳು. 

ಕೊಳಲ ಕರೆಯ ಜಾಡುಹಿಡಿದು…

ಪ್ರೇಮ ಮತ್ತು ಭಕ್ತಿ ಎರಡೂ ಬೇರೆ ಬೇರೆ. ಪ್ರೇಮವಿಲ್ಲ ಭಕ್ತಿಯೂ ಇರುತ್ತದೆ. ಅದು ಭಯದಿಂದ ಉಂಟಾಗುವ ಭಕ್ತಿ. ಅಥವಾ ಶರಣಾಗತ ಭಾವದ ಭಕ್ತಿ. ಕೆಲ ಬಾರಿ ದೀನ ಭಕ್ತಿಯೂ ಹೌದು. ಆದರೆ ಭಕ್ತಿ ಇಲ್ಲದ ಪ್ರೇಮ ಶುಷ್ಕ. ರಾಧಾ ಪ್ರೇಮ ಭಕ್ತಿಯ ಸಾಕಾರ ರೂಪ. ರಾಧೆಯಷ್ಟೆ ಏಕೆ, ಇಡಿಯ ಗೋಪೀಕುಲವೇ ಪ್ರೇಮ ಭಕ್ತಿಯ ಔನ್ನತ್ಯ ಮೆರೆದಿತ್ತು ಎನ್ನುತ್ತವೆ ಪುರಾಣಗಳು. ಭಕ್ತಿಪೂರ್ಣ ಪ್ರೇಮವು ಭಗವಂತನನ್ನು ತಲುಪುವ ಸುಲಭ ದಾರಿ. ರಾಧಾ ಈ ದಾರಿಯ ಸೂತ್ರಧಾರಿ. ಆಕೆಯ ಈ ಹೆಜ್ಜೆಗಳಲ್ಲೆ ಗಜ್ಜೆ ಕಟ್ಟಿ ನಲಿಯುತ್ತಿದ್ದಾರೆ ಭಕ್ತರು ಇಂದಿನ ವರೆಗೂ. ರಾಧಾಪ್ರೇಮದ ರಸಪಾನ ಮಾಡುತ್ತ ಭಗವಂತನ ಧ್ಯಾನದಲ್ಲಿ ಮತ್ತರಾಗುವ `ರಾಧಾ ಪಂಥ’ವೇ ಇದೆ ನಮ್ಮ ನಡುವೆ.

ಕೃಷ್ಣನ ಉಳಿದೆಲ್ಲ ಲೀಲೆಗಳದೊಂದು ತೂಕವಾದರೆ, ರಾಧಾಕೃಷ್ಣರ ಲೀಲೆಗೇ ಒಂದು ತೂಕ. ಬೆಣ್ಣೆ ಚೋರಕೃಷ್ಣ, ವ್ರಜ ನಂದನ ಕೃಷ್ಣ, ಕಂಸಾರಿ ಕೃಷ್ಣ, ಗೀತಾಚಾರ್ಯ ಕೃಷ್ಣ, ಪಾರ್ಥ ಸಾರಥಿ ಕೃಷ್ಣ – ಕೃಷ್ಣನ ಈ ಎಲ್ಲ ಬಗೆಗಳ ಭಾವಕ್ಕಿಂತ ರಾಧಾಮಾಧವನ ಆರ್ದ್ರತೆಯೇ ಹೆಚ್ಚು ಆಪ್ತ. ಸರಳವಾಗಿ ಹೇಳುವುದಾದರೆ, ರಾಧೆ, ಕೃಷ್ಣನ ಒಳಗನ್ನು ಕಾಣುವ ಒಳಗಣ್ಣು…. ಅಂತರಂಗದ ಕಣ್ಣು.

ರಾಧೆ ಎಲ್ಲ ಕಟ್ಟುಗಳನ್ನು ಬಿಡಿಸಿಕೊಂಡು ಕೃಷ್ಣನೆಡೆಗೆ ನಡೆದವಳು. ಅವಳ ಕೃಷ್ಣ ನಿಷ್ಠೆ ಎಷ್ಟಿತ್ತೆಂದರೆ, ಅವಳ ಮೀರುವಿಕೆ ಒಂದು ಪ್ರಮಾದವಾಗಿ ಯಾವತ್ತೂ ಕಾಣಿಸಲಿಲ್ಲ. ಅಕ್ಕ ಚೆನ್ನ ಮಲ್ಲಿಕಾರ್ಜುನನಿಗಾಗಿ, ಮೀರಾ ಮಾಧವನಿಗಾಗಿ ನಡೆದು ಬಂದಾಗಲೂ ಆಯಾ ಸಾಮಾಜಿಕ ಸನ್ನಿವೇಶದಲ್ಲಿ ಅವರು ಗೌರವ ಪಡೆಯುವಂತಾಗಿದ್ದು ಪ್ರೇಮಭಕ್ತಿಯ ಕಾರಣದಿಂದಲೇ. ರಾಧೆ ಈ ಇಬ್ಬರ ಹಿರಿಯಕ್ಕನಂತೆ.

ರಾಧಾ ಎಲ್ಲ ಮಡಿವಂತಿಗೆಗಳನ್ನು ಬಿಟ್ಟು ಕೊಳಲಿನ ಕರೆಯ ಜಾಡು ಹಿಡಿದು ನಡೆದಳು. ಲೌಕಿಕದಲ್ಲಿ ಇರುತ್ತಲೇ ಪಾರಮಾರ್ಥಿಕ ನೆಲೆಯಲ್ಲೂ ಜೀವಿಸಿದಳು. ಹಾಗೆಂದೇ ಕೃಷ್ಣನನ್ನು ಸೇರಿದಳು. ಅಮರಳಾದಳು ಮಾತ್ರವಲ್ಲ, ಪ್ರೇಮವನ್ನೂ ಕೃಷ್ಣನೊಳಗಿನ ಪ್ರೇಮಿಯನ್ನೂ ಅಮರವಾಗಿಸಿದಳು.

ಗೀತಗೋವಿಂದದಲ್ಲಿ ರಾಧಾಕೃಷ್ಣರ ಸಂಬಂಧದ ನಿರೂಪಣೆಯು ಭೂಮಿಯಲ್ಲಿ ಸಾಧ್ಯವಿರುವ ಎಲ್ಲ ಬಗೆಯ ಸಂಬಂಧಗಳನ್ನೂ ಅಭಿವ್ಯಕ್ತಿಸುವಂತಿದೆ. ಅಂದಿನಿಂದ ಇಂದಿನವರೆಗೆ ನೂರಾರು ಕವಿಗಳು ಈ ಜೋಡಿಯನ್ನು ಹಾಡಿ ಕೊಂಡಾಡಿದ್ದಾರೆ. ಕನ್ನಡದಲ್ಲಿಯೂ ರಾಧಾಪ್ರೇಮದ ಬೆರಗು ಹಾಡಾಗಿ ಹರಿದಿದೆ, ಹರಿಯುತ್ತಲೇ ಇವೆ. ಲೋಕದಲ್ಲಿ ಕೃಷ್ಣನಿರುವವರೆಗೂ ರಾಧೆ ಇರುತ್ತಾಳೆ. ಅಥವಾ, ರಾಧೆಯ ಪ್ರೇಮ ನಮ್ಮೆದೆಗಳಲ್ಲಿ ಇರುವವರೆಗೂ ಕೃಷ್ಣನಿರುತ್ತಾನೆ. 

4 Comments

  1. ಅತ್ಯುತ್ತಮ ಬರಹಗಳ ಈ ಅರಳಿ ಮರ‌ ನಿಜವಾದ ಜ್ಞಾನಮಾರ್ಗ…

Leave a Reply to ಪದ್ಮಜಾ ಜೋಯ್ಸ್Cancel reply