ಪ್ರೇಮವೆಂದರೆ ಗಾಳಿಗಂಟದ ಘಮಲು, ಪ್ರೇಮವೆಂದರೆ ಪ್ರತಿಬಿಂಬಿಸುವ ಕನ್ನಡಿ…

ನಮ್ಮಲ್ಲಿ ಬಹುತೇಕರ ಪಾಲಿಗೆ ಪ್ರೇಮ ಘಮಲು ಹೊತ್ತ ಗಾಳಿಯಲ್ಲ, ಅದು ಬಲೂನಿನೊಳಗೆ ಬಂಧಿಸಿಟ್ಟ ಗಾಳಿಯಂತೆ! ಒಂದು ಚಿಕ್ಕ ಸೂಜಿಮೊನೆ ತಾಕಿದರೂ ಛಿದ್ರಗೊಳ್ಳುವಷ್ಟು ಅಸುರಕ್ಷಿತ. ವಾಸ್ತವದಲ್ಲಿ ಪ್ರೇಮ ನೀಡುವಷ್ಟು ಸುರಕ್ಷಿತ ಭಾವನೆ ಮತ್ಯಾವುದೂ ನೀಡಲಾರದು. ಆದರೆ ಈ ದಿನಗಳಲ್ಲಿ ಪ್ರೇಮ ಪ್ರಕರಣಗಳಿಂದಾಗಿಯೇ ಅಭದ್ರತೆ ಅನುಭವಿಸುವವರ ಸಂಖ್ಯೆ ಬಹಳ. ಕಾರಣವಿಷ್ಟೇ. ಅವರು ಪ್ರೇಮವನ್ನು ಅದಕ್ಕಿರುವ ಸರಳ ಅರ್ಥವೊಂದನ್ನು ಬಿಟ್ಟು ಮಿಕ್ಕೆಲ್ಲ ಅರ್ಥ ಹಚ್ಚಿ ಹೆಣಗುವುದು.

“ಟಕ್…ಟಕ್…” ಅವನು ಅವಳ ಮನೆಯ ಬಾಗಿಲು ತಟ್ಟಿದ.

“ಯಾರು?” ಅವಳು ಕೇಳಿದಳು.

“ನಾನು” ಅವನ ಉತ್ತರ.

“ಈ ಮನೆಯಲ್ಲಿ ನಾನು ಮತ್ತು ನೀನು ಒಟ್ಟಿಗೆ ಇರಲು ಸಾಧ್ಯವಿಲ್ಲ” ಅವಳು ಮುಚ್ಚಿದ ಬಾಗಿಲಿನಾಚೆಯಿಂದಲೇ ಉತ್ತರಿಸಿದಳು.

ಅವನು ನಿರಾಶನಾಗಿ ಹೊರಟುಹೋದ. ದಿನಗಳು ಉರುಳಿದವು.

ಮತ್ತೆ ಅವಳ ಮನೆಯ ಬಾಗಿಲ ಮುಂದೆ ನಿಂತ. ತಟ್ಟಿದ.

ಒಳಗಿನಿಂದ ಮತ್ತದೇ ಪ್ರಶ್ನೆ, “ಯಾರು?”

ಈ ಬಾರಿ ಅವನ ಉತ್ತರ, “ನೀನು”.

ಬಾಗಿಲು ತೆರೆಯಿತು.  

ಅವನು ಪ್ರೇಮಿಯಾಗಿದ್ದ, ಅವಳು ಪ್ರಿಯತಮೆ.

ಇದು ಸೂಫಿ ಕವಿ ಜಲಾಲುದ್ದಿನ್ ರೂಮಿಯ ‘ಮಸಾನವಿ’ಯ ಒಂದು ಹನಿ.

“ಪ್ರೇಮ… ಹಾಗೆಂದರೇನು?” ಈ ಪ್ರಶ್ನೆಗೆ ಪದಗಳಲ್ಲಿ ಉತ್ತರ ಕೊಟ್ಟವರಿಲ್ಲ. ಹಾಗೆ ಯಾರಾದರೂ ಕೊಟ್ಟಿದ್ದರೆ, ಅದು ಅರಿಯಾದ ಉತ್ತರವಲ್ಲ. ರುಚಿಯನ್ನು ನೀವು ಹೇಗೆ ವರ್ಣಿಸುತ್ತೀರಿ? ರುಚಿಗೊಂದು ಹೆಸರು ಕೊಡಬಹುದು. ಆದರೆ ಅದನ್ನು ಹೇಗೆ ತಿಳಿಯಪಡಿಸಬಲ್ಲಿರಿ? ಪ್ರೇಮ, ಬದುಕಿನ ರುಚಿ. ಪ್ರೇಮ ಗಾಳಿಗಂಟಿದ ಘಮಲಿನ ಹಾಗೆ. ಘಮಲು ಗಾಳಿಯನ್ನು ಆಶ್ರಯಿಸುತ್ತದೆ ಹೊರತು ಆಕ್ರಮಿಸುವುದಿಲ್ಲ. ಅದು ಗಾಳಿಗೆ ಅಂಟಿಕೊಳ್ಳುವುದಿಲ್ಲ. ಗಾಳಿಯನ್ನು ಭಾರಗೊಳಿಸುವುದಿಲ್ಲ. ಪ್ರೇಮವೂ ಹಾಗೆಯೇ. ಅದು ಹೊತ್ತವರ ಎದೆಗಳಿಗೆ ಯಾವತ್ತೂ ಭಾರವಲ್ಲ. ಪ್ರೇಮ ನಮ್ಮನ್ನು ಆಕ್ರಮಿಸುವುದಿಲ್ಲ. ಅದು ನಮ್ಮನ್ನು ಆಕ್ರಮಿಸತೊಡಗುತ್ತಿದೆ ಅನ್ನಿಸಿದ ಕ್ಷಣದಿಂದಲೇ ಅದು ಪ್ರೇಮವಾಗಿ ಉಳಿದಿರುವುದಿಲ್ಲ!

“ನಾವು ನಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಬರುವುದಿಲ್ಲ” ಅನ್ನುತ್ತಾರೆ ಬಾಬಾ ಫರೀದ್. ಪ್ರೇಮವೂ ನಮ್ಮ ಮುಖದ ಹಾಗೆಯೇ. ನಮ್ಮ ಮುಖವನ್ನು ಕನ್ನಡಿಯಲ್ಲಿ ಪ್ರತಿಬಿಂಬವಾಗಿ  ನೋಡಬಹುದೇ ಹೊರತು ನಾವು ಯಾರೂ ನಮ್ಮ ನಮ್ಮ ಮುಖವನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ ನಮ್ಮಲ್ಲಿ ಪ್ರೇಮವೆಷ್ಟಿದೆ ಅನ್ನುವುದನ್ನು ಅಳೆಯಲು ನಮ್ಮ ಪ್ರಿಯತಮರು ನಮ್ಮನ್ನು ಹೇಗೆ ಕಾಣುತ್ತಾರೆ ಅನ್ನುವುದೇ ಮಾಪನ. 

ಅಥವಾ ರೂಮಿ ಹೇಳಿದಂತೆ, ಪ್ರಿಯತಮರು ಉತ್ಕಟತೆಯಲ್ಲಿ ಒಂದೇ ಆಗಿಬಿಡುವುದು ಪ್ರೇಮ. ಒಂದೇ ಆಗುವುದೆಂದರೆ, ಪ್ರತಿಕ್ಷಣದ ಬದುಕನ್ನು ಪ್ರೇಮಿಯ ಇರುವಿನ ಅರಿವಲ್ಲೇ ಬದುಕುವುದು. 

ಸಾಮಾನ್ಯವಾಗಿ ಬದುಕಿನಲ್ಲಿ ಪ್ರೇಮ ಇಷ್ಟೆಲ್ಲ ಸರಳವಿಲ್ಲ. ನಮ್ಮಲ್ಲಿ ಬಹುತೇಕರ ಪಾಲಿಗೆ ಪ್ರೇಮ ಘಮಲು ಹೊತ್ತ ಗಾಳಿಯಲ್ಲ, ಅದು ಬಲೂನಿನೊಳಗೆ ಬಂಧಿಸಿಟ್ಟ ಗಾಳಿಯಂತೆ! ಒಂದು ಚಿಕ್ಕ ಸೂಜಿಮೊನೆ ತಾಕಿದರೂ ಛಿದ್ರಗೊಳ್ಳುವಷ್ಟು ಅಸುರಕ್ಷಿತ. ವಾಸ್ತವದಲ್ಲಿ ಪ್ರೇಮ ನೀಡುವಷ್ಟು ಸುರಕ್ಷಿತ ಭಾವನೆ ಮತ್ಯಾವುದೂ ನೀಡಲಾರದು. ಆದರೆ ಈ ದಿನಗಳಲ್ಲಿ ಪ್ರೇಮ ಪ್ರಕರಣಗಳಿಂದಾಗಿಯೇ ಅಭದ್ರತೆ ಅನುಭವಿಸುವವರ ಸಂಖ್ಯೆ ಬಹಳ. ಕಾರಣವಿಷ್ಟೇ. ಅವರು ಪ್ರೇಮವನ್ನು ಅದಕ್ಕಿರುವ ಸರಳ ಅರ್ಥವೊಂದನ್ನು ಬಿಟ್ಟು ಮಿಕ್ಕೆಲ್ಲ ಅರ್ಥ ಹಚ್ಚಿ ಹೆಣಗುವುದು.

ಪ್ರೇಮವನ್ನು ಸಂಬಂಧವಾಗಿ ಅಥವಾ ಬಂಧನವಾಗಿ, ಆಸರೆಯಾಗಿ, ಪ್ರಣಯಕ್ಕೆ ಸೀಮಿತವಾಗಿ, ಪ್ರೇಮಿಯನ್ನು ಸೊತ್ತಾಗಿ ನೋಡುವುದರಿಂದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ದೇಹದ ಆಕರ್ಷಣೆಗೆ ಪ್ರಣಯ ಮತ್ತು ಕಾಮವೆಂಬ ಹೆಸರಿವೆ. ಆಸರೆಗೆ ಸಂಬಂಧಗಳ ಹೆಸರಿದೆ. ಅವುಗಳಲ್ಲಿಯೂ ಪ್ರೇಮವಿರುತ್ತದೆ, ಇಲ್ಲವೆಂದಲ್ಲ. ಆದರೆ ಅವುಗಳೇ ಪ್ರೇಮವಲ್ಲ. ಅದು ಭಿನ್ನಲಿಂಗಿಗಳ ನಡುವೆ ಮಾತ್ರವಲ್ಲದೆ ಯಾವುದೇ ಮನುಷ್ಯರ ನಡುವೆ, ಸಹಜೀವಿಗಳ ಜೊತೆಗೆ, ಕೆಲವೊಮ್ಮೆ ಜಡವಸ್ತುಗಳೆಡೆಗೂ ಸಂಭವಿಸಬಹುದಾದ ಪ್ರಕ್ರಿಯೆ.

ಪ್ರೇಮವು ಪ್ರಕ್ರಿಯೆ ಹೇಗಾಗುತ್ತದೆ? ಏಕೆಂದರೆ ಪ್ರೇಮವು ಒಮ್ಮೆ ಮೂಡಿ ಸ್ಥಾಪನೆಯಾಗುವ ಘಟನೆಯಲ್ಲ. ಅದು ನಿರಂತರ ಘಟಿಸುತ್ತಲೇ ಇರುವ ಕ್ರಿಯೆಯಾಗಿದೆ. ಒಮ್ಮೆ ಒಬ್ಬ ವ್ಯಕ್ತಿಯೆಡೆಗೆ ಮೂಡಿದ ಭಾವನೆಯನ್ನೇ ನಾವು ಪ್ರೇಮ ಅಂದುಕೊಂಡರೆ, ಕಾಲಕ್ರಮದಲ್ಲಿ ವ್ಯಕ್ತಿ ಬದಲಾದಂತೆಲ್ಲ ನಾವು ಪ್ರೇಮವನ್ನು ಕಳೆದುಕೊಂಡಂತೆ ಭಾವಿಸತೊಡಗುತ್ತೇವೆ. ಮತ್ತು ಪ್ರಿಯತಮರಿಂದ ನಾವು ಮೋಸಹೋದೆವೆಂದು ದೂರುತ್ತೇವೆ. ಪ್ರೇಮ ಒಂದು ಪ್ರಕ್ರಿಯೆಯಾದಾಗ, ನಾವು ಪ್ರೀತಿಸುವ ವ್ಯಕ್ತಿಯ ಬದಲಾವಣೆಗೆ ತಕ್ಕಂತೆ ಅವರಲ್ಲಿ ಪ್ರೀತಿಯನ್ನಿರಿಸುತ್ತಾ ಸಾಗುತ್ತೇವೆ. ನಮ್ಮಿಂದ ಇದು ಸಾಧ್ಯವಾದರೆ ಮಾತ್ರ ಪ್ರೀತಿಯನ್ನು ಕಳೆದುಕೊಳ್ಳುವ ಭಯ ನಮ್ಮಲ್ಲಿ ಮೂಡುವುದಿಲ್ಲ.  

ಕೊನೆಯದಾಗಿ; ಯಾವುದು ನಮ್ಮನ್ನು ಭಯಪಡಿಸುತ್ತದೆಯೋ ಅದು ಪ್ರೇಮವಲ್ಲ. ಯಾವುದು ನಮ್ಮನ್ನು ದುಃಖಕ್ಕೀಡು ಮಾಡುತ್ತದೆಯೋ ಅದು ಪ್ರೇಮವಲ್ಲ. ಯಾವುದು ನಮ್ಮನ್ನು ಕ್ರೂರಿಗಳನ್ನಾಗಿಸುತ್ತದೆಯೋ ಅದು ಪ್ರೇಮವಲ್ಲ. ಯಾವುದು ನಮ್ಮನ್ನು ಸ್ವಾರ್ಥಿಗಳನ್ನಾಗಿಯೂ ಲೋಭಿಗಳನ್ನಾಗಿಯೂ ಮೋಹಿಗಳನ್ನಾಗಿಯೂ ಮದ – ಮತ್ಸರಿಗಳನ್ನಾಗಿಯೂ ಮಾಡುತ್ತದೆಯೋ ಅದು ಪ್ರೇಮವಲ್ಲ.

ಹೀಗೆ, ಪ್ರೇಮದ ವ್ಯಾಖ್ಯೆಗೆ ಒಗ್ಗದ ಸಂಗತಿಗಳನ್ನೆಲ್ಲ ಜರಡಿ ಹಿಡಿದು ತೂರಿಬಿಡಿ. ಜೊಳ್ಳಿನ ಕೆಳಗೆ ಅಡಗಿ ಕುಳಿತ ಗಟ್ಟಿಕಾಳುಗಳಂತೆ ನಿಮಗೆ ಪ್ರೇಮ ದಕ್ಕುವ ಬಗ್ಗೆ ಸಂಶಯವೇ ಬೇಡ!

Leave a Reply