ನಮ್ಮ ಜವಾಬ್ದಾರಿಗಳನ್ನು ದೇವರೆಂದು ನಂಬಿಕೊಂಡು ಅತೀತ ಶಕ್ತಿಯ ಮೇಲೆ ಹೊರೆಸುತ್ತೇವೆ. ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ತೇವೆ. ಹಾಗೆ ದೇವರು ಹೊಣೆ ಹೊರಲೆಂದು ಪೂಜೆ ಪ್ರಾರ್ಥನೆಗಳ ದೇಣಿಗೆಯನ್ನೂ ಕೊಟ್ಟು ‘ನಾವು ಕೊಟ್ಟೆವು, ನಾವು ಬೇಡಿದೆವು’ ಎಂದು ಲೆಕ್ಕ ಕೊಡುತ್ತೇವೆ.
ಒಂಟೆಯನ್ನು ಸಾಕಿದ್ದ ವ್ಯಾಪಾರಿಯೊಬ್ಬ ಒಂದು ದಿನ ಬಾಜಾರಿನಲ್ಲಿ ವ್ಯಾಪಾರ ಮುಗಿಸಿ ಊರಿಗೆ ವಾಪಸಾಗುತ್ತಿದ್ದ. ಅವತ್ತು ಭರ್ಜರಿ ಲಾಭ ಸಿಕ್ಕ ಖುಷಿಯಲ್ಲಿ ಆತ ಹಾಡು ಗುನುಗುತ್ತ ಒಂಟೆಯ ಮೇಲೆ ಸಾಗುತ್ತಿದ್ದ. ಅವನು ಸಾಗುತ್ತಿದ್ದ ರಸ್ತೆಯ ಒಂದು ಬದಿಯಲ್ಲಿ ಮಸೀದಿ ಕಾಣಿಸಿತು. ಅವನು ಒಳಗೆ ಹೋಗಿ ಅಲ್ಲಾನಿಗೆ ಪ್ರಾರ್ಥನೆ ಸಲ್ಲಿಸಿ ಕೃತಜ್ಞತೆ ಸಮರ್ಪಿಸಲು ಬಯಸಿದ.
ಮಸೀದಿಯ ಹೊರಗೊಂದು ಮರವಿತ್ತು. ಅದಕ್ಕೆ ಒಂಟೆಯನ್ನು ಕಟ್ಟಿದ. ಒಳಗೆ ಹೋಗಿ ಪ್ರಾರ್ಥನೆಗೆ ಕುಳಿತವನು ಜಗತ್ತನ್ನೇ ಮರೆತುಬಿಟ್ಟ. ಅಲ್ಲಾನ ಧ್ಯಾನದಲ್ಲಿ ಮುಳುಗಿದ್ದ ಆತನಿಗೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.
ಮಸೀದಿಯಿಂದ ಹೊರಗೆ ಬರುವಾಗ ಕತ್ತಲಾಗಿತ್ತು. ಒಂಟೆಯನ್ನು ಬಿಡಿಸಲೆಂದು ಮರದ ಬಳಿ ಬಂದರೆ ಅಲ್ಲಿ ಅದು ನಾಪತ್ತೆ! ಸುತ್ತಮುತ್ತ ಹುಡುಕಾಡಿದ. ಎಲ್ಲೂ ಅದರ ಸುಳಿವಿಲ್ಲ. ಅವನಿಗೆ ಅಲ್ಲಾನ ಮೇಲೆ ಸಿಟ್ಟೇ ಬಂದಿತು. “ನಿನ್ನ ಪ್ರಾರ್ಥನೆಗಾಗಿ ಒಂಟೆಯನ್ನು ಹೊರಗೆ ಬಿಟ್ಟು ಬಂದಿದ್ದಕ್ಕೆ ಇದೇ ಬಹುಮಾನವೇ” ಎಂದು ಸಿಡುಕಿದ. ಎರಡೂ ಕೈಗಳನ್ನು ಮೇಲಕ್ಕೆತ್ತಿ, ಆಕಾಶದತ್ತ ಮುಖ ಮಾಡಿ “ನೀನೊಬ್ಬ ಮೋಸಗಾರ! ನಿನ್ನನ್ನು ನಂಬಿದ್ದಕ್ಕೆ ಸರಿಯಾಗಿಯೇ ಚೂರಿ ಹಾಕಿದ್ದೀಯ. ಇದೆಲ್ಲಿಯ ನ್ಯಾಯ!?” ಎಂದು ಕೂಗಾಡಿದ.
ಅದೇ ದಾರಿಯಲ್ಲಿ ಹೋಗುತ್ತಿದ್ದ ಸೂಫಿಯೊಬ್ಬನಿಗೆ ಈ ಕೂಗಾಟ ಕೇಳಿಸಿತು. ನಗುತ್ತಾ ವ್ಯಾಪಾರಿಯ ಬಳಿ ಬಂದು ವಿಷಯ ಏನೆಂದು ಕೇಳಿದ. ವ್ಯಾಪಾರಿ ಎಲ್ಲವನ್ನೂ ತಿಳಿಸಲು, ಸೂಫಿ “ಅಲ್ಲಯ್ಯಾ… ಅಲ್ಲಾನ ಮೇಲೆ ಭರವಸೆ ಇಡುವುದು ಬೇರೆ ವಿಷಯ, ಒಂಟೆಯನ್ನು ಹೀಗೆ ಎಲ್ಲೆಂದರಲ್ಲಿ ಕಟ್ಟಿ ಹಾಕುವುದು ಬೇರೆ ವಿಷಯ. ಜೇನಿನ ಜಾಡಿಯನ್ನು ಮುಚ್ಚಳ ಹಾಕದೆ ಬಿಟ್ಟರೆ ಇರುವೆ ಮುತ್ತಿಕೊಳ್ಳುವುದು ಸಹಜ. ಅದಕ್ಕೆ ಅಲ್ಲಾ ತಾನೆ ಏನು ಮಾಡಿಯಾನು!? ಅಲ್ಲಾನನ್ನು ನಂಬುವುದು ಬೇರೆ ವಿಷಯ, ನಿನ್ನ ಜವಾಬ್ದಾರಿಯನ್ನು ನೀನು ನಡೆಸುವುದು ಬೇರೆ ವಿಷಯ” ಎಂದು ತಿಳಿ ಹೇಳಿದ.
“ವ್ಯಾಪಾರಿಗೂ ಹೌದೆನ್ನಿಸಿತು. ಅಲ್ಲಾ ಏನು ಒಂಟೆಗಳ ಕಾವಲುಗಾರನೇ? ನೀವೆನ್ನುವುದು ಸರಿ ಇದೆ” ಅನ್ನುತ್ತಾ ಪ್ರಯಾಣ ಮುಂದುವರೆಸಿದ.
~
ನಾವು ಕೂಡಾ ಹೀಗೆಯೇ. ನಮ್ಮ ಜವಾಬ್ದಾರಿಗಳನ್ನು ದೇವರೆಂದು ನಂಬಿಕೊಂಡು ಅತೀತ ಶಕ್ತಿಯ ಮೇಲೆ ಹೊರೆಸುತ್ತೇವೆ. ಜವಾಬ್ದಾರಿ ನಿಭಾಯಿಸುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ತೇವೆ. ಹಾಗೆ ದೇವರು ಹೊಣೆ ಹೊರಲೆಂದು ಪೂಜೆ ಪ್ರಾರ್ಥನೆಗಳ ದೇಣಿಗೆಯನ್ನೂ ಕೊಟ್ಟು ‘ನಾವು ಕೊಟ್ಟೆವು, ನಾವು ಬೇಡಿದೆವು’ ಎಂದು ಲೆಕ್ಕ ಕೊಡುತ್ತೇವೆ. ಕೊನೆಗೆ ಆ ಒಂಟೆ ವ್ಯಾಪಾರಿಯಂತೆ ಅದರ ನಷ್ಟವನ್ನು ನಾವೇ ಭರಿಸಬೇಕಾಗುತ್ತದೆ.
ಚಂದ
ಪ್ರಾರ್ಥನೆ, ಮನಸ್ಸಿಗೆ ಸಂಬಂಧಪಟ್ಟ ಕ್ರಿಯೆ. ಒಂಟೆ ವ್ಯಾಪಾರಿ ಮನಸ್ಸಿನಲ್ಲೇ ಅಲ್ಲಾನನ್ನು ಭಜಿಸುತ್ತ ಸಾಗಿ ಹೋಗಬೇಕಿತ್ತು, ಮಸೀದಿಯಲ್ಲೇ ಅಲ್ಲಾ ಇದ್ದಾನೆ ಅಂತ ಅಂದುಕೊಂಡಿದ್ದು ಅವನ ಭ್ರಮೆ.. ಎನೀವೆ ಕತೆ ಯೋಚನೆಗೆ ಹಚ್ಚುವಂತಿದೆ..