ಪವರ್ ಆಫ್ ಪ್ಲೀಸ್ : ಸಜ್ಜನಿಕೆ ಹೃದಯಗಳನ್ನು ಆಳುವುದು

ಅಧಿಕಾರ ಚಲಾಯಿಸುವುದು ಎಂದರೆ ತೀರ ಬಿಗುವಾಗಿ ವರ್ತಿಸುವುದೇ? ಕೆಲಸ ಮಾಡದೆ ಇರುವವರನ್ನು ಶಿಕ್ಷಿಸುವುದೇ? ಅಥವಾ ದಂಡ ವಿಧಿಸುವುದೇ? ಖಂಡಿತವಾಗಿಯೂ ಕೆಲಸ ಸುಸೂತ್ರವಾಗಿ ನೆರವೇರಲು ಈ ಎಲ್ಲವೂ ಕೂಡಾ ದಾರಿಗಳೇ ಆಗಿದ್ದರೂ ಇವೇ ದಾರಿಗಳಾಗಿ ಉಳಿದುಬಿಡಬಾರದು.

ಕೆಲವೊಮ್ಮೆ ಹೀಗಾಗುತ್ತದೆ. ನಾವು ಅಧಿಕಾರದಲ್ಲಿ ಇದ್ದರೂ ನಮ್ಮಿಂದ ಅದರ ಸರಿಯಾದ ಬಳಕೆ ಸಾಧ್ಯವಾಗುವುದಿಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಅಧಿಕಾರವೆಂದರೆ ಹುದ್ದೆ ನಿಭಾಯಿಸುವುದು. ದೊಡ್ಡ ಹುದ್ದೆಯಲ್ಲಿ ಇರುವವರು ಅಧಿಕಾರ ನಡೆಸುವುದು ಅವರ ಪಾಲಿನ ಕರ್ತವ್ಯವೂ ಆಗಿರುತ್ತದೆ. ಆದ್ದರಿಂದ ತಮ್ಮ ಕೆಳಗಿನವರಿಂದ ಕೆಲಸ ಮಾಡಿಸುವುದು ಕೂಡ ಅವರ ಕೆಲಸವೇ ಆಗಿರುತ್ತದೆ. ಅದು ಸಾಧ್ಯವಿಲ್ಲ ಎಂದಾದರೆ ಅವರು ಅಧಿಕಾರದಲ್ಲಿ ಇರಲು ಅನರ್ಹ ಎಂದೇ ಅರ್ಥ.

story

ಹಾಗೆಂದು ಅಧಿಕಾರ ಚಲಾಯಿಸುವುದು ಎಂದರೆ ತೀರ ಬಿಗುವಾಗಿ ವರ್ತಿಸುವುದೇ? ಕೆಲಸ ಮಾಡದೆ ಇರುವವರನ್ನು ಶಿಕ್ಷಿಸುವುದೇ? ಅಥವಾ ದಂಡ ವಿಧಿಸುವುದೇ? ಖಂಡಿತವಾಗಿಯೂ ಕೆಲಸ ಸುಸೂತ್ರವಾಗಿ ನೆರವೇರಲು ಈ ಎಲ್ಲವೂ ಕೂಡಾ ದಾರಿಗಳೇ ಆಗಿದ್ದರೂ ಇವೇ ದಾರಿಗಳಾಗಿ ಉಳಿದುಬಿಡಬಾರದು. ಏಕೆಂದರೆ ಕೆಲಸ ಮಾಡುವ ಸ್ಥಳದಲ್ಲಿ ಇರುವವರೆಲ್ಲರೂ ಮನುಷ್ಯರೇ. ಮೆಷೀನುಗಳಿಂದ ಕೆಲಸ ತೆಗೆಯುವಾಗ ಅವು ನಾವು ಕೊಡುವ ಕಮ್ಯಾಂಡ್’ಗಳನ್ನು ನಿರ್ಭಾವುಕವಾಗಿ ನೆರವೇರಿಸುವಂತೆ ಮನುಷ್ಯರೂ ಮಾಡಲು ಸಾಧ್ಯವಿಲ್ಲ. ಕೆಳಗಿನ ಹುದ್ದೆಗಳಲ್ಲಿ ಇದ್ದರೆ ತಾನೆ ಏನು? ಅವರು ಕೂಡಾ ಅಧಿಕಾರಿಗಳಂತೆ ಸಂಬಳಕ್ಕೆ ದುಡಿಯುವವರೇ ಆಗಿರುತ್ತಾರೆ. ಆದ್ದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಿಕೊಳ್ಳುವುದು ಸರಿಯಾದ ಮಾರ್ಗ.

~

ಒಮ್ಮೆ ಹೀಗಾಗುತ್ತದೆ.

ಒಂದು ಚಿಕ್ಕ ರಾಜ್ಯದಲ್ಲೊಬ್ಬ ರಾಜ. ಅವನಿಗೆ ತನ್ನ ಸೇವಕರಿಂದ ಕೆಲಸ ಮಾಡಿಸುವ ಬಗೆಯೇ ತಿಳಿದಿಲ್ಲ. ತೀರ ಪಾಪದವನಾದ ರಾಜನಿಗೆ ದರ್ಪ ತೋರಿಸಲೂ ಬರುವುದಿಲ್ಲ. ಶಿಕ್ಷೆಯ ಬೆದರಿಕೆಯೊಡ್ಡಲು ಕೂಡಾ ಮನಸಿಲ್ಲ. ಹೇಗಾದರೂ ಮಾಡಿ ತನ್ನ ಭೋಲೇತನಕ್ಕೂ ಭಂಗ ಬರದ ಹಾಗೆ, ಸೇವಕರೂ ಮಾತು ಕೇಳುವ ಹಾಗೆ ಮಾಡಬೇಕಲ್ಲ ಎಂದು ಅವನು ಯೋಚಿಸುತ್ತಾನೆ. ರಾಜ್ಯದ ಮೂಲೆಯೊಂದರಲ್ಲಿ ವಾಸವಿದ್ದ ಮಾಂತ್ರಿಕನನ್ನು ಕರೆಸಿ, ಸೇವಕರು ತನ್ನ ಮಾತು ಕೇಳುವಂಥ ಮಂತ್ರದಂಡವನ್ನು ಮಾಡಿಕೊಡು ಎಂದು ಕೇಳುತ್ತಾನೆ. ಮಾಂತ್ರಿಕ ನೂರಾರು ಬಗೆಯ ಮಂತ್ರಗಳನ್ನು ಬರೆದು ಸೋಲುತ್ತಾನೆ. ಅವನ ಮಂತ್ರಕ್ಕೆ ಆನೆಗಳು ತುದಿಗಾಲಲ್ಲಿ ನರ್ತಿಸುವುದು ಸಾಧ್ಯವಾಗುತ್ತದೆಯೇ ಹೊರತು ಸೇವಕರು ಆದೇಶ ಪಾಲಿಸುವಂತೆ ಮಾಡುವುದು ಸಾಧ್ಯವಾಗುವುದಿಲ್ಲ.

ರಾಜನಿಗೆ ತಲೆಬಿಸಿಯಾಗುತ್ತದೆ. ಹೀಗೆ ರಾಜ ಚಿಂತಾಕ್ರಾಂತನಾಗಿದ್ದಾನೆ ಅನ್ನುವ ವಿಷಯವನ್ನು ಅಂತಃಪುರದ ಕೆಲಸದಾಕೆ ತನ್ನ ಮನೆಯ ಪಕ್ಕದ ಶಿಕ್ಷಕನ ತಾಯಿಗೆ ಹೇಳುತ್ತಾಳೆ. ಶಿಕ್ಷಕನ ತಾಯಿ ಅದನ್ನು ಮಗನಿಗೆ ತಿಳಿಸಲು, ಮಗ ನಕ್ಕು, ಧೋತರ ಕೊಡವಿಕೊಂಡು ಶಾಲು ಹೊದ್ದು ಹೊರಡುತ್ತಾನೆ. ಹಾಗೆ ಹೊರಟ ಶಿಕ್ಷಕ ಬರುವುದು ಅರಮನೆಗೆ. ತಾನು ರಾಜನಿಗೆ ಮಂತ್ರದಂಡ ಮಾಡಿಕೊಡುವುದಾಗಿ ಘೋಷಿಸುತ್ತಾನೆ. ಮಾಂತ್ರಿಕನ ಪ್ರಯೋಗಗಳಿಂದ ಹೈರಾಣಾಗಿದ್ದ ರಾಜ ಆ ಯುವ ಶಿಕ್ಷಕನನ್ನು ಬರಮಾಡಿಕೊಳ್ಳುತ್ತಾನೆ.

ಯುವ ಶಿಕ್ಷಕ ಎರಡು ಬಣ್ಣದ ಚೀಟಿಗಳನ್ನು ತರಿಸಿಕೊಂಡು, ಎರಡು ಪದಗಳನ್ನು ಬರೆಯುತ್ತಾನೆ. ಒಂದನ್ನು ಕೊಟ್ಟು, “ಇದನ್ನು ಮಾತಿನ ಮೊದಲಲ್ಲಿ ಸೇರಿಸಿ ನಿಮಗೆ ಆಗಬೇಕಿರುವ ಕೆಲಸವನ್ನು ಹೇಳಿ” ಅನ್ನುತ್ತಾನೆ. ಮತ್ತೊಂದನ್ನು ಕೊಟ್ಟು, “ಇದನ್ನು ಕೆಲಸ ಮುಗಿದ ನಂತರ ಕೊಂಚ ಮುಗುಳ್ನಗೆಯೊಂದಿಗೆ ಹೇಳಿ. ಕೆಲಸ ಮುಗಿಸಿ ಆತನೂ ಮುಗುಳ್ನಕ್ಕರೆ ಆತ ಸದಾ ಕಾಲಕ್ಕೂ ನಿಮ್ಮ ಆದೇಶ ಪಾಲನೆ ಮಾಡುತ್ತಾನೆ. ಹೇಳುವ ಬಗೆಯಲ್ಲಿ ಮಾತ್ರ ವ್ಯತ್ಯಾಸ ಆಗಕೂಡದು” ಅನ್ನುತ್ತಾನೆ.

ರಾಜ ಆ ಪದಗಳನ್ನು ಉರು ಹೊಡೆಯುತ್ತಾನೆ. ಅವು ಕೆಲಸ ಮಾಡ್ತವೋ ಇಲ್ಲವೋ ನೋಡುವ ಕುತೂಹಲ ಅವನಿಗೆ. ಅದೇ ವೇಳೆ ಕೆಲಸದವನೊಬ್ಬ ಒಂದು ವಿಗ್ರಹವನ್ನು ಜಾಗ ಬದಲಾವಣೆಗಾಗಿ ಒಯ್ಯುತ್ತಿರುತ್ತಾನೆ. ರಾಜ ಚಪ್ಪಾಳೆ ತಟ್ಟಿ ಅವನ ಗಮನ ಸೆಳೆದು “ದಯವಿಟ್ಟು ಆ ವಿಗ್ರಹವನ್ನೊಮ್ಮೆ ಇಲ್ಲಿ ತಾ” ಅನ್ನುತ್ತಾನೆ. ಆ ವರೆಗೆ ರಾಜನ ಯಾವ ಮಾತನ್ನೂ ಕೇಳದ ಆ ಕೆಲಸದವ ಅಚ್ಚರಿಯ ಮುಖ ಭಾವ ಹೊತ್ತು ರಾಜನ ಬಳಿಗೆ ವಿಗ್ರಹವನ್ನು ಒಯ್ಯುತ್ತಾನೆ. ಅದನ್ನು ನೋಡಿದ ಬಳಿಕ ರಾಜ, “ಧನ್ಯವಾದ. ನಿನ್ನ ಕೆಲಸ ಮುಂದುವರೆಸು” ಅನ್ನುತ್ತಾನೆ, ಮುಗುಳ್ನಗುತ್ತಾ.

ಅದನ್ನು ಕಂಡು ಕೆಲಸದವನ ಮುಖದಲ್ಲೂ ನಗು ಮೂಡುತ್ತದೆ. ಅಲ್ಲಿಂದ ಮುಂದೆ ಆತ ರಾಜನ ಆಪ್ತ ಸೇವಕನಾಗುತ್ತಾನೆ. ಕ್ರಮೇಣ ಅರಮನೆಯ ಸೇವಾಸಿಬ್ಬಂದಿ ರಾಜನ ಆದೇಶ ಪಾಲಿಸಲು ತೊಡಗುತ್ತದೆ.

ರಾಣಿಗೆ ಖುಷಿ ಮತ್ತು ಅಚ್ಚರಿ. ಶಿಕ್ಷಕ ಅದ್ಯಾವ ಮಂತ್ರ ಬರೆದುಕೊಟ್ಟಿದ್ದಾನೆ ನೋಡೇಬಿಡೋಣವೆಂದು ಬಣ್ಣದ ಚೀಟಿಗಳನ್ನು ತೆರೆಯುತ್ತಾಳೆ. ಒಂದರಲ್ಲಿ ‘ದಯವಿಟ್ಟು’ ಎಂದೂ ಮತ್ತೊಂದರಲ್ಲಿ ‘ಧನ್ಯವಾದ’ ಎಂದೂ ಬರೆದಿರುತ್ತದೆ! ಈ ಎರಡು ಮಾಂತ್ರಿಕ ಪದಗಳಿಂದ ರಾಜ ರಾಜ್ಯದ ಜೊತೆಗೆ ಪ್ರಜೆಗಳ ಹೃದಯವನ್ನೂ ಆಳಲು ತೊಡಗುತ್ತಾನೆ.

~

ನಾವು ಮಾಡಬೇಕಿರುವುದೂ ಇಷ್ಟೇ.

ಪ್ರತಿ ವ್ಯಕ್ತಿಯಲ್ಲೂ ಒಂದು ವ್ಯಕ್ತಿತ್ವ ಇರುತ್ತದೆ. ಅದು ಹುದ್ದೆಗಳಿಗಿಂತ ದೊಡ್ಡದು. ಅಲ್ಲಿ ಹೆಚ್ಚುಕಡಿಮೆ ಎಂಬ ಅಳತೆಗಳು ಅನ್ವಯವಾಗುವುದಿಲ್ಲ. ನಮ್ಮ ಹಕ್ಕಿನ ಅಧಿಕಾರವನ್ನೇ ಚಲಾಯಿಸುವಾಗಲೂ, ಇತರರ ಕರ್ತವ್ಯವನ್ನು ನೆನಪಿಸುವಾಗಲೂ ನಾವೊಂದು ‘ಪ್ಲೀಸ್’ ಸೇರಿಸಿದರೆ ಕಳೆದುಕೊಳ್ಳುವಂಥದೇನೂ ಇಲ್ಲ. ಬದಲಿಗೆ ನಾವು  ವಿಶ್ವಾಸವನ್ನು, ಪ್ರೀತಿಯನ್ನು, ಸಹಕಾರವನ್ನು ಹೆಚ್ಚುವರಿಯಾಗಿ ಗಳಿಸುತ್ತೇವೆ. ಇದರಿಂದ ನಮ್ಮ ಅಧಿಕಾರ ನಡೆಸುವ ಕರ್ತವ್ಯವೂ ನೆರವೇರುತ್ತದೆ, ಕೆಲಸವೂ ಸುಸೂತ್ರವಾಗಿ ಆಗುತ್ತದೆ. ಇದು ಎಷ್ಟು ಸುಲಭ, ಅಲ್ಲವೆ? 

 

2 Comments

  1. ಪ್ಲೀಸ್ ಮತ್ತು ಥ್ಯಾಂಕ್ಸ್ ಗಳಿಗಿರೋ ಶಕ್ತಿ.. ಪುಟ್ಟ ಪುಟ್ಟ ಬರಹಗಳಾದರೂ ಲವಲವಿಕೆಯುಳ್ಳದ್ದು.

Leave a Reply