ರಾಮಕೃಷ್ಣರ ಸತ್ಯ ದರ್ಶನ : ದಾರ್ಶನಿಕ ಕವಿ ಕುವೆಂಪು ಕಂಡಂತೆ

“ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ, ಯೋಗಪ್ರವೀಣರು. ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲಹೃದಯದಿಂದಲೂ ಪರೀಕ್ಷಿಸಿ ಸಮನ್ವಯತತ್ತ್ವಸಿದ್ಧರಾದವರು. ಸರ್ವಧರ್ಮಸಮನ್ವಯಾಚಾರ್ಯರಾದವರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ದಾರಿಗಳು ಎಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ. ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸ್ಯಸತ್ಯವಾಗಿತ್ತು.” ಎಂದು ಬರೆಯುತ್ತಾರೆ ದಾರ್ಶನಿಕ ಕವಿ ಕುವೆಂಪು.

 “ಎಷ್ಟು ಮತಗಳಿವೆಯೋ ಅಷ್ಟು ಪಥಗಳಿವೆ. ನೀರನ್ನು ಯಾವ ಭಾಷೆಯಲ್ಲಿ ಕರೆದರೂ ಅದು ನೀರೇ ಆಗಿರುತ್ತದೆಯಲ್ಲವೆ? ಹಾಗೆಯೇ ಭಗವಂತನನ್ನು ಯಾವ ಹೆಸರಿನಿಂದ ಕರೆದರೂ ಆತ ಓಗೊಡುತ್ತಾನೆ” – ಇದು ರಾಮಕೃಷ್ಣ ಪರಮಹಂಸರ ಚಿಂತನೆಯ ಸಾರಸರ್ವ. ಅವರ ಈ ಮಾತುಗಳು ಸ್ವಾನುಭವದಿಂದ ಖಾತ್ರಿಪಡಿಸಿಕೊಂಡು ಆಡಿದ ಮಾತುಗಳು.

ರಾಮಕೃಷ್ಣರ ಕಾಲಘಟ್ಟ, ಭಾರತವು ಹಲವು ಬಗೆಯ ಸಂಕಷ್ಟಗಳನ್ನು ಎದುರಿಸುತ್ತಿದ್ದ ವಿಷಮ ಕಾಲಘಟ್ಟ. ಬ್ರಿಟಿಷ್ ಆಡಳಿತದ ಹೇರಿಕೆಗಳು ಒಂದೆಡೆಯಾದರೆ, ಭಾರತೀಯರ ಒಳಗಿನ ಒಡಕುಗಳು ಅದಕ್ಕಿಂತ ದೊಡ್ಡ ಸವಾಲಾಗಿ ಪರಿಣಮಿಸುತ್ತಿದ್ದ ದಿನಗಳವು. ಜಾತಿ ತಾರತಮ್ಯ, ಮತೀಯ ದ್ವೇಷ, ಸ್ತ್ರೀ ಶೋಷಣೆ ಇತ್ಯಾದಿಗಳು ತಾರಕಕ್ಕೇರುತ್ತಿದ್ದವು. ಪರಮಹಂಸರಿಗಿಂತ ಮುಂಚೆ ಆಗಿಹೋದ ರಾಜಾ ರಾಮಮೋಹನ ರಾಯ್, ದಯಾನಂದ ಸರಸ್ವತಿ ಮೊದಲಾದವರು ಸಾಮಾಜಿಕ ಸುಧಾರಣೆಯ ಜೊತೆಗೆ ಹಿಂದೂ ಧರ್ಮದ ಪುನರ್ ವ್ಯಾಖ್ಯಾನಕ್ಕೆ ಪ್ರಯತ್ನಿಸಿ, ಸಾಕಷ್ಟು ಯಶಸ್ವಿಯೂ ಆಗಿದ್ದರು. ಬಹುತೇಕವಾಗಿ ಬೌದ್ಧಿಕ ಹಾಗೂ ಮೇಲ್ಪದರಕ್ಕೆ ಸೀಮಿತವಾಗಿದ್ದ ಈ ಪ್ರಯತ್ನವನ್ನು ಜನ ಸಾಮಾನ್ಯರ ನಡುವೆ ಕೊಂಡೊಯ್ಯಲು, ಲೌಕಿಕ ಶಿಕ್ಷಣದ ತೋರುಗಾಣಿಕೆಯಿಲ್ಲದ, ಸಾಮಾನ್ಯರಲ್ಲಿ ಸಾಮಾನ್ಯನಾದ ವ್ಯಕ್ತಿಯೇ ಬೇಕಿತ್ತು. ಶ್ರೀ ರಾಮಕೃಷ್ಣ ಪರಮಹಂಸರು ಅಂತಹಾ ವ್ಯಕ್ತಿಯಾಗಿ ಹೊರಹೊಮ್ಮಿದರು.

ಗದಾಧರನೆಂಬ ಹೆಸರಿನಲ್ಲಿ ಕೌಮಾರ್ಯ ದಾಟಿದ ರಾಮಕೃಷ್ಣ ಪರಮಹಂಸರ ಹಿನ್ನೆಲೆ ಅಸಾಮಾನ್ಯವೇನಾಗಿರಲಿಲ್ಲ. ಬಹುತೇಕ ಆಗಿನ ಬಂಗಾಳದ ಜನಸಾಮಾನ್ಯರ ಬದುಕಿನಂತೆಯೇ ಅವರ ಬದುಕೂ ಇತ್ತು. ಆದರೆ ರಾಮಕೃಷ್ಣರ ಅಂತರಂಗ ಅತ್ಯಂತ ಸೂಕ್ಷ್ಮವೂ ಸಂವೇದನಾಶೀಲವೂ ಆಗಿತ್ತು. ಅವರು ಪ್ರತಿಯೊಂದನ್ನೂ ತಮ್ಮ ಅನುಭವದ ತೆಕ್ಕೆಗೆ ತೆಗೆದುಕೊಂಡು, ಗ್ರಹಿಸಿ, ಅರಿಯಲು ಪ್ರಯತ್ನಿಸುತ್ತಿದ್ದರು. ಅವರ ಈ ಗುಣವೇ ಅವರನ್ನು ಮುಂದೆ ಮಹಾಸಾಧಕನ ಸ್ಥಾನದಲ್ಲಿ ನಿಲ್ಲಿಸಿತು. ಅವರ ಬೋಧನೆಗಳೆಲ್ಲವೂ ಸಾಧನೆಯ ಸಿದ್ಧಿಯಿಂದ ಪಡೆದು ಬೋಧಿಸಿದಂಥವೇ ಆಗಿವೆ. ರಾಮಕೃಷ್ಣರ ಸಿದ್ಧಾಂತ, ಸ್ವಯಂ ಸಾಧನೆಯ ಸಿದ್ಧಾಂತವೇ ಹೊರತು ಕೇವಲ ತರ್ಕ ಸರಣಿಯಾಗಿರಲಿಲ್ಲ ಅನ್ನುವುದು ಅವರು ಜನಸಾಮಾನ್ಯರ ಗುಂಪಿಗೆ ಮತ್ತಷ್ಟು ಆಪ್ತವಾಗಲು ಕಾರಣವಾಯಿತು.

ರಾಮಕೃಷ್ಣರ ಈ ಸಾಧನೆಯ ಕುರಿತು ತಮ್ಮ ‘ಶ್ರೀ ರಾಮಕೃಷ್ಣ ಪರಮಹಂಸ’ ಕೃತಿಯಲ್ಲಿ ಹೀಗೆ ಬರೆಯುತ್ತಾರೆ; “ಪರಮಹಂಸರು ಬರಿಯ ಸಿದ್ಧಾಂತ ಲೋಲುಪರಲ್ಲ, ಯೋಗಪ್ರವೀಣರು. ಸತ್ಯಪರೀಕ್ಷೆಗೆ ಸಾಕ್ಷಾತ್ಕರಣವೆ ಪರಮ ಪ್ರಮಾಣ. ಅವರಿವರ ಮಾತುಗಳಿಗಿಂತಲೂ ಧರ್ಮಗ್ರಂಥಗಳ ವಾಕ್ಯಗಳಿಗಿಂತಲೂ ಸ್ವಾನುಭವವೆ ಅತ್ಯುತ್ತಮ ಸಾಕ್ಷಿ. ಆದ್ದರಿಂದಲೇ ರಾಮಕೃಷ್ಣರು ಸರ್ವಮತ ಸಿದ್ಧಾಂತಗಳನ್ನೂ ಸಾಧನೆಯ ಶಾಲೆಯಲ್ಲಿ ಅಸಮಸಾಹಸದಿಂದಲೂ ವಿಶಾಲಹೃದಯದಿಂದಲೂ ಪರೀಕ್ಷಿಸಿ ಸಮನ್ವಯತತ್ತ್ವಸಿದ್ಧರಾದರು. ಸರ್ವಧರ್ಮಸಮನ್ವಯಾಚಾರ್ಯರಾದರು. ಎಲ್ಲ ಮತಗಳೂ ಒಂದೇ ಸತ್ಯದೆಡೆಗೆ ಹೋಗುವ ಬೇರೆಬೇರೆ ದಾರಿಗಳು ಎಂಬುದನ್ನು ಅವರು ಬರಿಯ ಗ್ರಂಥಾಧ್ಯಯನದಿಂದ ಸಂಗ್ರಹಿಸಲಿಲ್ಲ. ಅದು ಅವರಿಗೆ ಪುಸ್ತಕದ ಬದನೆಕಾಯಿ ಆಗಿರಲಿಲ್ಲ. ಪ್ರತ್ಯಕ್ಷವಾದ ಸತ್ಯಸ್ಯಸತ್ಯವಾಗಿತ್ತು.”

ಈ ಮೊದಲು ಹೇಳಿದಂತೆ ಬ್ರಹ್ಮ ಸಮಾಜ, ಆರ್ಯ ಸಮಾಜಗಳ ಮೂಲಕ ಧರ್ಮ ಹಾಗೂ ಸಾಮಾಜಿಕ ಸುಧಾರಣಾಕಾರ್ಯಗಳು ಆರಂಭಗೊಂಡು ಹರಡಿಕೊಳ್ಳುತ್ತಿದ್ದವಾದರೂ ಅವು ಜನಸಾಮಾನ್ಯರನ್ನು ತಲುಪುವಲ್ಲಿ ದೊಡ್ಡ ಯಶಸ್ಸು ಕಾಣಲಿಲ್ಲ. ಏಕೆಂದರೆ ಈ ಸಂಸ್ಥೆಗಳು ಜ್ಞಾನ – ತರ್ಕ – ವಿಚಾರ ಪ್ರಾಧಾನ್ಯತೆಯನ್ನು ಹೊಂದಿದ್ದವು. ಅವುಗಳಲ್ಲಿ ಭಕ್ತಿ, ಮಾಧುರ್ಯಗಳ ತೀವ್ರ ಕೊರತೆಯಿತ್ತು. ಶ್ರೀರಾಮಕೃಷ್ಣರು ಈ ಕೊರತೆಯನ್ನು ನೀಗಿದರು.

ಮೇಲೆ ಉಲ್ಲೇಖಿಸಿದ ಕೃತಿಯಲ್ಲಿಯೇ ಕುವೆಂಪು, “ಪರಮಹಂಸರು ಜ್ಞಾನಗಂಗೆಯ ಮತ್ತು ಭಕ್ತಿ ಯಮುನೆಯ ಪ್ರಯಾಗ ಕ್ಷೇತ್ರವಾಗಿದ್ದರು. ವಿಚಾರವೂ ಪ್ರೇಮವೂ ಅವರಲ್ಲಿ ಕೂಡಿದ್ದವು.” ಎಂದು ಬರೆಯುತ್ತಾರೆ. ಮತ್ತೂ ಮುಂದುವರೆದು, “ಶ್ರೀ ರಾಮಕೃಷ್ಣರು ಕೆಲವು ಜ್ಞಾನಪಾಷಂಡಿಗಳಂತೆ ಶುಷ್ಕಹೃದಯರಾಗಿರಲಿಲ್ಲ. ದುಃಖಿಗಳನ್ನು ಕಂಡರೆ ದುಃಖ ಪಡುತ್ತಿದ್ದರು. ಅವರಿಗೆ ಜೀವವೇ ಶಿವವಾಗಿತ್ತು. ನಾನು ಉಪಕಾರ ಮಾಡುತ್ತೇನೆ, ಸಹಾಯ ಮಾಡುತ್ತೇನೆ, ಕಾಪಾಡುತ್ತೇನೆ – ಎಂದೆಲ್ಲ ಹೆಮ್ಮೆಪಡುವುದು ಈಶ್ವರನಿಂದೆಗೆ ಸಮನಾದುದು. ಆದುದರಿಂದ ಸೇವೆ ಮಾಡುತ್ತೇನೆ ಎಂಬ ನಮ್ರಭಾವದಿಂದ ಕೆಲಸ ಮಾಡಬೇಕು ಅನ್ನುವುದು ಅವರ ನಿಲುವಾಗಿತ್ತು.” ಎಂದು ಕುವೆಂಪು ಬರೆಯುತ್ತಾರೆ.

ಪರಮಹಂಸರ ಈ ಗುಣವಿಶೇಷವೇ ಅವರೆಡೆಗೆ ಆಬಾಲವೃದ್ಧರನ್ನೂ, ಅಶಿಕ್ಷಿತ – ಸುಶಿಕ್ಷಿತರನ್ನೂ ಸೆಳೆದು ತಂದದ್ದು. ಅಷ್ಟೇ ಅಲ್ಲ, ಪರಮಹಂಸರಿಗೆ ಪುರುಷ ಭಕ್ತರೆಷ್ಟಿದ್ದರೋ ಮಹಿಳಾ ಭಕ್ತರೂ ಅದೇ ಪ್ರಮಾಣದಲ್ಲಿ ಇದ್ದುದು ಕೂಡಾ ಈ ಕಾರಣದಿಂದಲೇ.

ಹಾಗೆಂದು ರಾಮಕೃಷ್ಣರು ಕಂಡಿದ್ದೆಲ್ಲವನ್ನೂ ಹೋಗಿ ಪರೀಕ್ಷೆ ಮಾಡುತ್ತಿರಲಿಲ್ಲ ಮತ್ತು ಎಲ್ಲವನ್ನೂ ಅಪ್ಪಿಕೊಳ್ಳಲು ಉತ್ಸುಕವಾಗಿರಲಿಲ್ಲ. ಯಾವುದು ಎಷ್ಟು ಯೋಗ್ಯ ಅನ್ನುವುದನ್ನು ಅವರು ಕೂಲಂಕಷವಾಗಿ ಪರಿಶೀಲಿಸಿಯೇ ನಂತರದಲ್ಲಿ ಅದರ ಅಧ್ಯಯನಕ್ಕೆ ಮುಂದಾಗುತ್ತಿದ್ದರು. ಅವರ ಸತ್ಯಾನ್ವೇಷಣೆಯ ಪಯಣ ಸುಸಂಬದ್ಧವಾಗಿಯೇ ಇತ್ತು. “ಪರಮಹಂಸರ ವಿಮರ್ಶಕ ಬುದ್ಧಿ ಸರ್ವದಾ ತೀಕ್ಷ್ಣವಾಗಿತ್ತು. ಬಾಹ್ಯಾಡಂಬರಕ್ಕಾಗಲೀ, ಲೌಕಿಕ ವಿಖ್ಯಾತಿಗಾಗಲೀ, ಮೇಧಾಶಕ್ತಿ ವಿದ್ವತ್ತುಗಳಿಗಾಗಲೀ, ಅಥವಾ ಲೋಕವನ್ನೆ ಮಂತ್ರಮುಗ್ಧವಾಗಿಸುವ ವಾಚಾಲತೆಗಾಗಲೀ ಅವರೆಂದಿಗೂ ಮರುಳಾಗಲಿಲ್ಲ. ಖೋಟಾ ನಾಣ್ಯಗಳನ್ನು ಕಂಡುಹಿಡಿಯುವುದರಲ್ಲಿ ಅವರು ಅದ್ವಿತೀಯ ಪಂಡಿತರಾಗಿದ್ದರು” ಎಂದು ಕುವೆಂಪು ತಮ್ಮ ಕೃತಿಯಲ್ಲಿ ರಾಮಕೃಷ್ಣರ ಪ್ರಶಂಸೆ ಮಾಡುತ್ತಾರೆ.

ಹೀಗೆ ರಾಮಕೃಷ್ಣರು ಜನಸಾಮಾನ್ಯರಿಗೆ ಯಾವ ತಿಳಿವನ್ನು ನೀಡಬೇಕೋ ಅದನ್ನು ಸ್ವತಃ ಜನರೆದುರಲ್ಲೇ ಅಧ್ಯಯನ ನಡೆಸಿ, ಆತ್ಮಗತಗೊಳಿಸಿಕೊಂಡು, ಅನುಭವಿಸಿ ತಿಳಿದು ಅನಂತರ ನೀಡುತ್ತಿದ್ದರು. ಅದನ್ನು ಕೂಡಾ ಅವರು ಬೋಧನೆ ಎಂದಲ್ಲದೆ, ತಮ್ಮ ಅರಿವಿನ ವಿತರಣೆ ಎಂಬಂತೆ, ತಮ್ಮ ಪಾಲಿನ ಕರ್ತವ್ಯ ಎಂಬಂತೆ ಮಾಡುತ್ತಿದ್ದರು. ತಮ್ಮ ಈ ಸರಳತೆ ಹಾಗೂ ಒಳಗೊಳ್ಳುವಿಕೆಯಿಂದಾಗಿಯೇ ರಾಮಕೃಷ್ಣ ಪರಮಹಂಸರು ಅತ್ಯಲ್ಪ ಕಾಲದಲ್ಲಿ ಬಂಗಾಲ ಪ್ರಾಂತ್ಯದಲ್ಲಿ ಮನೆಮಾತಾಗಿದ್ದು. ಮತ್ತು ಅದರಾಚೆಗೂ ತಮ್ಮ ಶಿಷ್ಯರ ಮೂಲಕ ಅಧ್ಯಾತ್ಮ ತಳಹದಿಯ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಲು ಸಾಧ್ಯವಾಗಿದ್ದು. 

 

1 Comment

Leave a Reply