ಧ್ಯಾನ : ಏಕಾಗ್ರತೆ ಗದ್ದಲವನ್ನು ನಿಯಂತ್ರಿಸುತ್ತದೆ, ಮೌನವನ್ನು ತರುವುದಿಲ್ಲ

ಮನಸಿನ ಪರದೆಯ ಮೇಲೆ ಅಚ್ಚೊತ್ತಿದ ಚಿತ್ರಗಳು ಸ್ವಲ್ಪ ಪರುಸೊತ್ತು ಸಿಕ್ಕರೂ ಆಟೋ ರನ್ ಆಗುವಂತೆ ತನ್ನಿಂತಾನೆ ಚಲಿಸಲು ಆರಂಭವಾಗುತ್ತವೆ. ಈ ಅನಿರೀಕ್ಷಿತ, ಓತಪ್ರೋತ ಚಲನೆ ಅಂತರಂಗದಲ್ಲಿ ಕಂಪನವನ್ನು ಹುಟ್ಟಿಸುತ್ತದೆ. ಈ ಕಂಪನವೇ ನಮ್ಮೊಳಗೆ ತರಂಗಗಳನ್ನು ಹುಟ್ಟಿಸುವುದು. ಈ ತರಂಗಗಳೇ ನಮ್ಮೊಳಗಿನ ಶಬ್ದರಹಿತ ಗದ್ದಲವಾಗಿ ಮೌನವನ್ನು ಮುರಿಯುವುದು.

ನಮ್ಮ ಈ ಹಿಂದಿನ ಪ್ರಶ್ನೆ : ಮೌನವನ್ನು ಸಾಧಿಸುವುದು ಹೇಗೆ? ಆಲೋಚನಾ ತರಂಗಗಳನ್ನು ಶಬ್ದರಹಿತ ಮಾತು ಎನ್ನಲಾಯಿತು. ಹಾಗಾದರೆ ಆಲೋಚನಾ ತರಂಗಗಳು ಏಳದೆ ಇರುವ ಸ್ಥಿತಿಯೇ ಮೌನ ಎಂದಾಗುವುದಲ್ಲವೆ?

ಆದರೆ ನಾವು ಆಲೋಚನೆ ಮಾಡದೆ ಇರಲು ಹೇಗೆ ಸಾಧ್ಯ?

ಇದಕ್ಕೆ ಉತ್ತರಿಸುವ ಮೊದಲು ನಾವು ಎಂತಹಾ ಆಲೋಚನೆಗಳನ್ನು ಮಾಡುತ್ತೇವೆ ಮತ್ತು ಯಾಕೆ ಮಾಡುತ್ತೇವೆ ಅನ್ನುವುದರ ಉತ್ತರ ಕಂಡುಕೊಳ್ಳೋಣ. ಧ್ಯಾನಕ್ಕೆ ಎಂದೇನಲ್ಲ, ದಿನದ ಯಾವುದಾದರೂ ಹೊತ್ತಿನಲ್ಲಿ ಹತ್ತು ನಿಮಿಷಗಳ ಕಾಲ ಸುಮ್ಮನೆ ಕುಳಿತುಕೊಳ್ಳಿ. ಆ ಹತ್ತು ನಿಮಿಷಗಳ ಕಾಲ ನಿಮ್ಮ ಮನಸ್ಸಿನಲ್ಲಿ ಏನೆಲ್ಲ ಹಾದುಹೋಗುವುದೋ ಅದನ್ನು ಬರೆದಿಡಿ. ಸ್ವಲ್ಪ ಹೊತ್ತು ಬಿಟ್ಟು ಅದನ್ನು ತೆರೆದು ಓದಿಕೊಳ್ಳಿ. ನೀವು ಬರೆದಿಟ್ಟ ಸಂಗತಿಗಳು ನಿಮಗೆಷ್ಟು ಮಹತ್ವದ್ದಾಗಿವೆ? ಅವುಗಳ ಕುರಿತು ನಿಮ್ಮಲ್ಲಿ ಯೋಚನೆ ಮೂಡಲು ಕಾರಣವೇನು? ಆ ಯೋಚನೆಯಿಂದ ನಿಮಗೆ ಲಾಭವೇನಾದರೂ ಇದೆಯೇ? ಕಂಡುಕೊಳ್ಳಿ.

ಹೀಗೆ ಮಾಡುವುದರಿಂದ, ಸುಮ್ಮನೆ ಕುಳಿತಾಗ ಮನಸಿನಲ್ಲಿ ಹಣಕುವ ಯಾವ ಸಂಗತಿಯೂ ಪ್ರಯೋಜನಕಾರಿಯಲ್ಲ ಎನ್ನುವುದನ್ನು ನೀವೇ ಕಂಡುಕೊಳ್ಳುವಿರಿ. ಅವು ನಿಮ್ಮ ಮೌನವನ್ನು, ನಿಮ್ಮ ನೆಮ್ಮದಿಯನ್ನು ಕಸಿಯಲು ಬರುತ್ತವೆಯಷ್ಟೇ ಅನ್ನುವುದು ನಿಮಗೆ ಅರ್ಥವಾಗುತ್ತದೆ.

ಉದಾಹರಣೆಗೆ, ಒಮ್ಮೆ ಒಬ್ಬರು ಮೂವತ್ತರ ಆಸುಪಾಸಿನ ಮಹಿಳೆಗೆ ಈ ಪ್ರಯೋಗ ಮಾಡಲು ಹೇಳಲಾಯಿತು. ಆಕೆ ಹತ್ತು ನಿಮಿಷ ಸುಮ್ಮನೆ ಕುಳಿತು, ತಮ್ಮ ಮನಸ್ಸಿನಲ್ಲಿ ಹಾದುಹೋಗಿದ್ದನ್ನೆಲ್ಲ ಬರೆದಿಟ್ಟರು. ಆಮೇಲೆ ಅದನ್ನು ಓದುವಾಗ ಆಕೆ ಜೋರಾಗಿ ನಕ್ಕುಬಿಟ್ಟರು.

ಅವರ ಆ ಪಟ್ಟಿಯಲ್ಲಿ ಚಾಕೊಲೇಟಿನಿಂದ ಹಿಡಿದು ನಾಲ್ಕು ದಿನಗಳ ಹಿಂದೆ ರಸ್ತೆಯಲ್ಲಿ ನೋಡಿದ್ದ ನಾಯಿಮರಿಯವರೆಗೆ ಹಲವು ಸಂಗತಿಗಳು ಹಾದುಹೋಗಿದ್ದವು.  ಅದರ ನಡುವೆ ಕೆಲಸದ ಒತ್ತಡ, ಸಂಬಂಧಗಳು, ಹಣದ ಬಿಕ್ಕಟ್ಟಿನ ಚಿಂತೆಯೂ ನುಸುಳಿತ್ತು. ಆ ಹತ್ತು ನಿಮಿಷಗಳಲ್ಲಿ ಆಕೆಯ ತಲೆಯಲ್ಲಿ ಹತ್ತು ವರ್ಷಗಳಿಗಾಗುವಷ್ಟು ಸಂಗತಿಗಳು ಅಲ್ಟ್ರಾಸ್ಪೀಡಿನಲ್ಲಿ ಹಾದುಹೋಗಿದ್ದವು. ಮಾತನಾಡಲು ಕುಳಿತರೆ ಹತ್ತು ನಿಮಿಷಗಳಲ್ಲಿ ಇವಿಷ್ಟರಲ್ಲಿ ಒಂದು ಸಂಗತಿಯ ಬಗ್ಗೆಯೂ ಮಾತನಾಡಲು ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು.

ಹಾಗಾದರೆ ಆ ಯೋಚನೆಗಳು ಬಂದದ್ದು ಎಲ್ಲಿಂದ? ಅವು ಎಲ್ಲೋ ಹೊರಗಿನಿಂದ ಬರುವುದಿಲ್ಲ. ನಮ್ಮೊಳಗೇ ಇರುತ್ತವೆ. ನಮ್ಮ ದೈನಂದಿನ ಜೀವನದ ಕೆಲವು ಅರೆಬರೆ ತುಣುಕುಗಳು ಮನಃಪಟಲದಲ್ಲಿ ಅಚ್ಚಾಗಿರುತ್ತವೆ.  ಸ್ವಲ್ಪ ಪರುಸೊತ್ತು ಸಿಕ್ಕರೂ ಆಟೋ ರನ್ ಆಗುವಂತೆ ತನ್ನಿಂತಾನೆ ಚಲಿಸಲು ಆರಂಭವಾಗುತ್ತವೆ. ಈ ಅನಿರೀಕ್ಷಿತ, ಓತಪ್ರೋತ ಚಲನೆ ಅಂತರಂಗದಲ್ಲಿ ಕಂಪನವನ್ನು ಹುಟ್ಟಿಸುತ್ತದೆ. ಈ ಕಂಪನವೇ ನಮ್ಮೊಳಗೆ ತರಂಗಗಳನ್ನು ಹುಟ್ಟಿಸುವುದು. ಈ ತರಂಗಗಳೇ ನಮ್ಮೊಳಗಿನ ಶಬ್ದರಹಿತ ಗದ್ದಲವಾಗಿ ಮೌನವನ್ನು ಮುರಿಯುವುದು.

ಹೀಗೆ ‘ಆಟೋ ರನ್’ ಆಗುವ ಮಾತು / ಗದ್ದಲವನ್ನು ನಿಯಂತ್ರಿಸುವುದು ಒಮ್ಮೆಲೇ ಕಷ್ಟವೆನ್ನಿಸುತ್ತದೆ. ಅದಕ್ಕಾಗಿ ಮೊದಲೊಂದಷ್ಟು ದಿನ ಹೀಗೆ ಮಾಡಿ. ಸುಮ್ಮನೆ ಕುಳಿತಾಗ ಯಾವುದಾದರೂ ಒಂದು ವಿಷಯವನ್ನು ನೀವೇ ಆಯ್ಕೆ ಮಾಡಿಕೊಂಡು ಅದರ ಕುರಿತಾದ ಯೋಚನೆಗಳಿಗಷ್ಟೇ ಆಸ್ಪದ ನೀಡಿ.

ಆಗಲೂ ಮನಸ್ಸು ಸುಮ್ಮನೆ ಇರುವುದಿಲ್ಲ. ನಿಮ್ಮ ಗಮನ ಅದರಿಂದ ಸರಿದು ಬೇರೆಡೆ ಹರಿಯುವಂತೆ ಏನಾದರೊಂದು ಅಡ್ಡಿಯನ್ನು ತರುತ್ತಲೇ ಇರುತ್ತದೆ. ಹಾಗೆ ನಿಮ್ಮ ಕೆಂದ್ರೀಕೃತ ಆಲೋಚನೆಗೆ ಹೊರತಾದ ಯಾವುದೇ ಸಂಗತಿ ಬಂದರೂ ಅದನ್ನು ಅಲ್ಲಿಯೇ ತುಂಡರಿಸಿ, ಮತ್ತೆ ನಿಮ್ಮ ಆಲೋಚನೆಗೆ ಮರಳಿ. ಎಷ್ಟು ಬಾರಿ ಅಡ್ಡಿ ಬರುವುದೋ ಅಷ್ಟು ಬಾರಿಯೂ ಅವನ್ನು ತುಂಡರಿಸುತ್ತಲೇ ಇರಿ. ಹೀಗೆ ಮಾಡುತ್ತ ಒಂದು ಹಂತದಲ್ಲಿ ಅಡ್ಡ ಆಲೋಚನೆಗಳು ಮೂಡುವ ಫ್ರೀಕ್ವೆನ್ಸಿ ಕಡಿಮೆಯಾಗುತ್ತದೆ. ಆಗುತ್ತ ಆಗುತ್ತ ಕೊನೆಗೊಮ್ಮೆ ಅವುಗಳ ಬರುವಿಕೆ ನಿಂತುಹೋಗುತ್ತದೆ. ಆಮೇಲೆ ಅಲ್ಲಿ ನೀವು ಆಯ್ದುಕೊಂಡ ವಸ್ತುವಿನ ಆಲೋಚನೆಯಷ್ಟೇ ಉಳಿಯುತ್ತದೆ.

ಆದರೆ ಹೀಗೆ ಅಡ್ಡ ಆಲೋಚನೆಗಳ ಕಾಟ ಕಳೆದುಕೊಂಡು ಒಂದು ಆಲೋಚನೆಯೆಡೆಗೆ ಗಮನ ಕೇಂದ್ರೀಕರಿಸುವ ಕ್ರಿಯೆ ಧ್ಯಾನವಲ್ಲ. ಮತ್ತು ಅಲ್ಲಿ ಮೌನವೂ ಇರುವುದಿಲ್ಲ. ಈ ಪ್ರಕ್ರಿಯೆ ಧ್ಯಾನ ಸಿದ್ಧಿಯ ಪ್ರಾಥಮಿಕ ಹಂತವಾದ ‘ಏಕಾಗ್ರತೆ’ಯಾಗಿರುತ್ತದೆ ಅಷ್ಟೇ. ಮತ್ತು ಏಕಾಗ್ರತೆ ಗದ್ದಲವನ್ನು ನಿಯಂತ್ರಿಸುತ್ತದೆ ಹೊರತು ಮೌನವನ್ನು ತರುವುದಿಲ್ಲ. 

ಹಾಗಾದರೆ ನಮ್ಮ ಪ್ರಶ್ನೆ ಹಾಗೆಯೇ ಉಳಿದುಹೋಯಿತಲ್ಲವೆ? ಮೌನವನ್ನು ಸಿದ್ಧಿಸಿಕೊಳ್ಳುವುದು ಹೇಗೆ!?

(ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಧ್ಯಾನ : ಮೌನವಾಗಿರುವುದು ಎಂದರೆ ನಿಶ್ಶಬ್ದವಾಗಿರುವುದು ಎಂದಷ್ಟೇ ಅಲ್ಲ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.