ನಿಮ್ಮ ಹಸಿವೊಂದು ತಪಸ್ಸಾಗಿರಲಿ! ~ ಗಿಬ್ರಾನ್ ಕಾವ್ಯ

'ಲಾ ಚಿತ್ರ

ಮೂಲ: ಖಲೀಲ್ ಗಿಬ್ರಾನ್, ‘ಪ್ರಾಫೆಟ್’
ಅನುವಾದ : ಪುನೀತ್ ಅಪ್ಪು.

ಛತ್ರ ಕಾಯುತ್ತಿದ್ದ ವೃದ್ಧನೊಬ್ಬ ಕೇಳುತ್ತಿದ್ದ
‘ಆಹಾರ’ದ ಬಗ್ಗೆ ಹೇಳು.

ಅಲ್ ಮುಸ್ತಾಫ ನಗುತ್ತಿದ್ದ;

ನೀವೇನು ಸಸ್ಯಗಳಂತೆ
ಭೂಮಿಯ ಸುಗಂಧದಿಂದ,
ಸೂರ್ಯನ ಬೆಳಕಿನಿಂದ ಬದುಕಬಲ್ಲಿರೆ?

ಆಹಾರಕ್ಕಾಗಿ ಕೊಲ್ಲಲೇ ಬೇಕಾದರೆ,
ಆಗ ತಾನೆ ಜನಿಸಿದ ಕರುವಿನಿಂದ
ಅದರ ತಾಯಿಯ ಹಾಲನ್ನು
ಕಸಿಯುವುದರಿಂದಲೇ,
ನಿಮ್ಮ ದಾಹ ತಣಿಯುವುದಾದರೆ,
ನಿಮ್ಮ ಹಸಿವೊಂದು ತಪಸ್ಸಾಗಿರಲಿ!

ನಿಮ್ಮ ಒಲೆಗಳನು ಹೊಕ್ಕು
ಭಸ್ಮವಾಗುವ ಆ ಪರಿಶುದ್ಧ,
ಮುಗ್ಧ ಕಾಡಿನ ಕಟ್ಟಿಗೆಗಳಿಗಿಂತಲೂ
ನಿಮ್ಮ ಮನಸ್ಸು ಮುಗ್ಧವಾಗಿರಲಿ!

ಆ ಮೃಗವನ್ನು ನಿಪಾತಿಸುವಾಗ
ನಿಮ್ಮ ಹೃದಯವು ಹೀಗೆ ಹೇಳಲಿ,
ಯಾವ ಶಕ್ತಿಯಿಂದ ನಿನ್ನನ್ನು
ನಾಶ ಪಡಿಸುತ್ತಿರುವೆನೋ
ನಾನೂ ಅದೇ ರೀತಿ ನಶಿಸಲ್ಪಡುವೆ,
ನಾನೂ ಜೀರ್ಣಿಸಲ್ಪಡುವೆ !

ನಿನ್ನನ್ನು ನನ್ನ ಕೈ ಸೇರಿಸಿದ ಆ ಪ್ರಕೃತಿಯೇ
ನನ್ನನ್ನು ಇನ್ನೊಂದು ಸಶಕ್ತ ಹಸ್ತದಲ್ಲಿರಿಸಲಿದೆ !

ಆ ಪ್ರಕೃತಿಯ ಮಹಾವೃಕ್ಷಕ್ಕೆ
ನೀರುಣಿಸುವ ಬೇರುಗಳಲ್ಲಿ
ನಮ್ಮಿಬ್ಬರ ರಕ್ತಗಳು ಒಂದಾಗಲಿವೆ !

ಸೇಬು ಹಣ್ಣನ್ನು ನಿನ್ನ ಹಲ್ಲುಗಳಿಂದ
ಕಚ್ಚುವಾಗೊಮ್ಮೆ
ನಿನ್ನ ಹೃದಯಕ್ಕೆ ಹೇಳಿ ಬಿಡು,
ನಿನ್ನ ಬೀಜಗಳು ನನ್ನಲ್ಲಿ ಮೊಳಕೆಯೊಡೆಯಲಿ,
ಭವಿಷ್ಯದ ಚಿಗುರುಗಳು ಎನ್ನೆದೆಯಲ್ಲಿ ಅರಳಲಿ,
ನಿನ್ನ ಸುಗಂಧವೇ ಉಸಿರಾಗಲೆನ್ನ,
ಆನಂದದಿಂದ ಈ ಋತುಕಾಲಗಳಲ್ಲಿ
ಜೊತೆಯಾಗೋಣ !

ಸುಗ್ಗಿಯಲ್ಲಿ ಆ ದ್ರಾಕ್ಷಿ ಹಣ್ಣುಗಳನ್ನು
ನಿನ್ನ ದ್ರಾಕ್ಷಿ ತೋಟಗಳಿಂದ ಆರಿಸಿಕೊಂಡು
ತುಳಿತಾಗಾರಕ್ಕೆ ಸಾಗಿಸುವಾಗ
ಹೃದಯವು ನೆನಪಿಸಲಿ,

ನಾನೇ ದ್ರಾಕ್ಷಿತೋಟವಾಗಿರುವೆ,
ನನ್ನಾತ್ಮವು ದ್ರಾಕ್ಷಿ ಹಣ್ಣುಗಳಂತೆ ಒಟ್ಟಾಗಿ
ಕಾಲಕೋಶದೊಳಗೆ ತುಳಿಯಲ್ಪಡಲಿದೆ !

ಚಿರ ಮದ್ಯದಂತೆ ಕಾಲದ
ಅನಂತತೆಯ ಪಾತ್ರೆಗಳಲ್ಲಿ
ಎನ್ನಾತ್ಮವು ತುಂಬಿಕೊಳ್ಳಲಿದೆ.

ಚಳಿಗಾಲದಲ್ಲಿ ಆ ಮಧ್ಯವನು ಸುರಿಯೆ,
ಒಂದೊಂದು ಪಾತ್ರೆಗೂ
ಹೃದಯದೊಳಗೊಂದು ಸಂಗೀತವಿರಲಿ !

ಆ ಸುಗ್ಗಿಯ ನೆನಪಿಗಾಗಿ
ಆ ಸಂಗೀತವಿರಲಿ,
ಆ ದ್ರಾಕ್ಷಿ ತೋಟಗಳಿಗಾಗಿ
ಅಲ್ಲಿ ತುಳಿಯಲ್ಪಟ್ಟ
ದ್ರಾಕ್ಷಿಹಣ್ಣುಗಳಿಗಾಗಿ,
ಮತ್ತು; ತುಳಿದವರಿಗಾಗಿ !!

 

 

 

2 Comments

Leave a Reply