ಜಗತ್ತು ಯಾವಾಗ ಕೊನೆಗೊಳ್ಳುತ್ತದೆ?

Mulla.jpg

ಮ್ಮೆ ಪಂಚಾಯ್ತಿ ಕಟ್ಟೆಯಲ್ಲಿ ಭಾರೀ ಚರ್ಚೆ ಏರ್ಪಟ್ಟಿತು. ಹಳ್ಳಿಯ ಹತ್ತು ಸಮಸ್ತರು ಬಂದು ಕುಳಿತಿದ್ದರು. ತತ್ತ್ವಜ್ಞಾನಿಗಳು, ಪಂಡಿತರು ಅಲ್ಲಿದ್ದರು. “ಜಗತ್ತು ಯಾವಾಗ ಕೊನೆಗೊಳ್ಳುತ್ತದೆ” ಎನ್ನುವುದು ಅವರ ಚರ್ಚೆಯ ವಿಷಯವಾಗಿತ್ತು. ಸಂಜೆ ಮುಗಿದರೂ ಅವರ ಚರ್ಚೆ ಮುಗಿಯುವ ಲಕ್ಷಣಗಳು ಕಾಣಲಿಲ್ಲ.

ಪಶ್ಚಿಮದಲ್ಲಿ ಮುಳುಗುವ ಸೂರ್ಯನ ಕೆಂಬಣ್ಣದ ಹಿನ್ನೆಲೆಯಲ್ಲಿ ಮುಲ್ಲಾ ನಸ್ರುದ್ದಿನ್ ಕತ್ತೆ ಹೊಡೆದುಕೊಂಡು ಬರುತ್ತಿರುವುದು ಕಾಣಿಸಿತು. ಇನ್ನು ಮಾತಾಡಿ ಉಪಯೋಗವಿಲ್ಲ ಎಂದು ಬಟ್ಟೆ ಕೊಡವಿಕೊಂಡು ಏಳುತ್ತಿದ್ದವರೆಲ್ಲ ಹಾಗೇ ಕುಳಿತರು.

ಸಮಸ್ತರಲ್ಲಿ ಒಬ್ಬ ಮುಲ್ಲಾ ನಸ್ರುದ್ದೀನನನ್ನು ತಡೆದು, “ನೋಡು, ಬೆಳಗಿನಿಂದ ನಾವು ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಅನ್ನುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಯಾವ ರೀತಿ ಲೆಕ್ಕ ಹಾಕಿದರೂ ನಮಗದು ಗೊತ್ತಾಗಲಿಲ್ಲ. ಈ ಬಗ್ಗೆ ನಿನಗೇನಾದರೂ ಗೊತ್ತಿದೆಯೇ?” ಎಂದು ಕೇಳಿದ.

ಮುಲ್ಲ ತಲೆದೂಗುತ್ತಾ, “ಹೌದು, ಗೊತ್ತಿದೆ” ಎಂದ.

ಅಲ್ಲಿದ್ದವರಿಗೆ ಅಚ್ಚರಿಯಾಯ್ತು. “ಏನು!? ಜಗತ್ತು ಯಾವಾಗ ಕೊನೆಗೊಳ್ಳುತ್ತದೆ ಎಂದು ನಿನಗೆ ಗೊತ್ತಿದೆಯೇ? ಹಾಗಾದರೆ ಹೇಳು ನೋಡೋಣ!” ಎಂದು ಸವಾಲೆಸೆದರು.

ಮುಲ್ಲಾ ನಸ್ರುದ್ದೀನ್ ಗಡ್ಡ ನೀವಿಕೊಳ್ಳುತ್ತಾ “ನಾನು ಸತ್ತಾಗ” ಅಂದ.

“ನೀನು ಸತ್ತರೆ ಜಗತ್ತು ಕೊನೆಗೊಳ್ಳುವುದು ಹೇಗೆ?” ಪ್ರಶ್ನೆ ತೂರಿಬಂತು.

“ನಾನು ಸತ್ತಾಗ ನನ್ನ ಜಗತ್ತು ಕೊನೆಗೊಳ್ಳುತ್ತದೆ. ನಿಮ್ಮದು ಗೊತ್ತಿಲ್ಲ” ಅಂದ ನಸ್ರುದ್ದೀನ್, ಕತ್ತೆ ಹೊಡೆದುಕೊಂಡು ತನ್ನ ಯಾನ ಮುಂದುವರೆಸಿದ.

4 Comments

  1. ಅರಳಿಮರ ದ ಲೇಖನಗಳು ವಿಚಾರಪ್ರಚೋದಕವೂ ಚೇತೋಹಾರಿಯಾಗಿಯೂ ಇವೆ. ಅರಳಿಮರ ಬಳಗಕ್ಕೆ ಧನ್ಯವಾದಗಳು.

Leave a Reply