ಸ್ವಾತಂತ್ರ್ಯ ಬಯಸಿದ ಹೆಂಡತಿ, ಮತ್ತವಳ ಗಂಡ!

ದಾಂಪತ್ಯದಲ್ಲಿ ಉತ್ಕಟ ಪ್ರೇಮ, ಅರ್ಥ ಮಾಡಿಕೊಳ್ಳುವಿಕೆ ಹಾಗೂ ಗಂಡ ಹೆಂಡತಿಯರಿಬ್ಬರಿಗೂ ಸಮಾನ ಸ್ವಾತಂತ್ರ್ಯ ಇಲ್ಲದಾಗ ಏನಾಗುತ್ತದೆ ಎಂಬುದನ್ನು ತಿಳಿಸಲು ಸ್ವಾಮಿ ರಾಮತೀರ್ಥರು ಒಂದು ದೃಷ್ಟಾಂತ ಹೇಳುತ್ತಾರೆ:

251701_10151924779236002_843850590_n

ಒಂದು ಹಳ್ಳಿಯಲ್ಲಿ ರೈತ ದಂಪತಿ ವಾಸಿಸುತ್ತ ಇರುತ್ತಾರೆ. ಒಂದು ದಿನ ಹೆಂಡತಿಗೆ ಮನೆಯಿಂದ ಮನೆಗೆ ಭಿಕ್ಷೆ ಬೇಡಿಕೊಂಡು ತಿರುಗುವ ಜೋಗಯ್ಯ ಕಣ್ಣಿಗೆ ಬೀಳುತ್ತಾನೆ. ಬೇಕೆಂದಲ್ಲಿಗೆ ಓಡಾಡುವ ಅವನ ಸ್ವಾತಂತ್ರ್ಯಕ್ಕೆ ಅಸೂಯೆಪಟ್ಟು, ತಾನೂ ಅಂತಹ ಸ್ವಾತಂತ್ರ್ಯವನ್ನು ಒಂದು ದಿನದ ಮಟ್ಟಿಗಾದರೂ ಅನುಭವಿಸಲು ಬಯಸುತ್ತಾಳೆ. ಅಳುಮೋರೆ ಹಾಕಿಕೊಂಡು ಗಂಡನನ್ನೆ ಕಾಯುತ್ತ ಕೂರುತ್ತಾಳೆ. ಅವನು ಬಂದ ಕೂಡಲೇ, `ನನ್ನ ಅಮ್ಮನಿಗೆ ಜೋರು ಕಾಯಿಲೆಯೆಂದು ಸುದ್ದಿ ಬಂದಿದೆ. ನಾನು ತವರಿಗೆ ಹೋಗಿ ಬರ್ತೀನಿ’ ಎಂದು ಗೋಳಾಡುತ್ತಾಳೆ. ಗಂಡ ಅವಳನ್ನು ಹೋಗಗೊಡುತ್ತಾನೆ.

ಹೆಂಡತಿ ಸ್ವಲ್ಪ ಹಣ ತೆಗೆದುಕೊಂಡು ಪಕ್ಕದೂರಿಗೆ ಹೋಗುತ್ತಾಳೆ. ಸಂತೆ ಬೀದಿ ಸುತ್ತುತ್ತಾಳೆ. ಮಧ್ಯಾಹ್ನ ದೇವಸ್ಥಾನದಲ್ಲಿ ಉಣ್ಣುತ್ತಾಳೆ. ಸಂಜೆ ಪೂರ್ತಿ ಮನ ಬಂದಲ್ಲಿ ತಿರುಗುತ್ತಾಳೆ. ಸಂಜೆ ಸ್ವಲ್ಪ ಕಡಲೆ ಪುರಿ ಕೊಂಡು ತಿಂದು ಮಕ್ಕಳಂತೆ ಖುಷಿ ಪಡುತ್ತಾಳೆ. ರಾತ್ರಿ ಹೊಲವೊಂದರ ಕಾವಲು ಗುಡಿಸಲಲ್ಲಿ ಮಲಗುತ್ತಾಳೆ. ಬೆಳಗ್ಗೆ ಸ್ವಲ್ಪ ತಡವಾಗಿ ಏಳುತ್ತಾಳೆ. ಇನ್ನೇನು ಆಕೆ ಮೈಮುರಿದು ಕೆಳಗಿಳಿಯಬೇಕು, ಹೊಲದಲ್ಲಿ ಗಂಡನ ದನಿ ಕೇಳಿಸುತ್ತದೆ! ಜೊತೆಗೆ ಜೋಗಯ್ಯನದೂ…

ಆ ಗಂಡನೂ ಜೋಗಯ್ಯನನ್ನು ಕಂಡು ಕರುಬಿ, ತಾನೂ ಅವನಂತೆಯೇ ಸುತ್ತಾಡಿಬರಲು ಹಪಹಪಿಸಿರುತ್ತಾನೆ. ಹೆಂಡತಿ ಅತ್ತ ಹೊರಟ ಕೂಡಲೆ ತಾನೂ ಹೊರಟುಬಿಟ್ಟಿರುತ್ತಾನೆ! ಆದರೆ ಇಬ್ಬರೂ ಮನದಾಸೆ ತೊಡಿಕೊಂಡರೆ ಅವಿಶ್ವಾಸ ತೋರಿದಂತಾಗುತ್ತದೆ ಎಂದು ಭಯಪಟ್ಟು ಸುಮ್ಮನಿರುತ್ತಾರೆ.

ನಮ್ಮ ನಡುವಿನ ದಂಪತಿಗಳಕಥೆ ಅನ್ಯೋನ್ಯತೆ ಇಂಥಾ ತೋರುಗಾಣಿಕೆ ಮತ್ತು ಭಯದಿಂದ ಉತ್ಪನ್ನವಾಗಿರುವಂತಹದು!

Leave a Reply