ನಮ್ಮ ಬಹು ದೊಡ್ಡ ಶತ್ರು ಯಾರು?

ಯಾವುದು ನಮ್ಮನ್ನು ನರಳಿಸುತ್ತದೆಯೋ, ಬೇಸರ ಪಡಿಸುತ್ತದೆಯೋ ಅದನ್ನು ಕಾಪಾಡಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ಆದರೆ ನಾವು ಅದೇ ತಪ್ಪನ್ನು ಮಾಡುತ್ತೇವೆ. ಯಾರದೋ ಟೀಕೆಯನ್ನು, ಗೇಲಿಯನ್ನು ಮನಸ್ಸಿನಲ್ಲಿ ನಿಧಿಯ ಹಾಗೆ ಕಾಪಾಡಿಕೊಂಡು ಹೋಗುತ್ತೇವೆ. ಅದರ ಜೊತೆಗೇ ನಮಗೆ ಅರಿವಿಲ್ಲದಂತೆ ನರಳಿಕೆಯನ್ನೂ ಕಾಪಾಡಿಕೊಂಡು ಹೋಗುತ್ತೇವೆ.

~ ವಿದ್ಯಾಧರ 

ನಮ್ಮ ಬಹು ದೊಡ್ಡ ಶತ್ರು ಯಾರು? ಪ್ರತಿಯೊಬ್ಬರ ಬಹುದೊಡ್ಡ ಶತ್ರು ಆತನೇ / ಆಕೆಯೇ ಆಗಿರುತ್ತಾರೆ.

ಅದು ಹೇಗೆ? ಯಾವುದೇ ಊಹೆಯಿಲ್ಲದೆ, ಪೂರ್ವಾಗ್ರಹವಿಲ್ಲದೆ ಅದನ್ನು ನಾವೇ ಕಂಡುಕೊಳ್ಳೋಣ. ಒಂದು ಅತ್ಯಂತ ಸರಳ ವಿಧಾನದ ಮೂಲಕ ನಮ್ಮ ಶತ್ರು ಯಾರೆಂದು ಖಾತ್ರಿ ಮಾಡಿಕೊಳ್ಳೋಣ.

ಮೊದಲಿಗೆ ಒಂದು ಪ್ರಶ್ನೆ ಮತ್ತೊಬ್ಬರ ಜೊತೆ ನಿಮ್ಮನ್ನು ಹೋಲಿಕೆ ಮಾಡುವುದು, ಮಾಡಿ ಟೀಕಿಸುವುದು ಯಾರು? ತೀರಾ ಅಪರೂಪದ ಸನ್ನಿವೇಶಗಳಲ್ಲಿ ಬೇರೆಯವರು. ಆದರೆ ಬಹುಪಾಲು ನಮ್ಮನ್ನು ಇತರರೊಡನೆ ಹೋಲಿಸಿಕೊಂಡು ಟೀಕೆ ಮಾಡಿಕೊಳ್ಳುವವರು ನಾವೇ ಆಗಿರುತ್ತೇವೆ. ನಮ್ಮ ನಕಾರಾತ್ಮಕ ಚಿಂತನೆಗಳಿಗೆ ನಾವು ನೀರು – ಗೊಬ್ಬರ ಎರೆಯುವಷ್ಟು ಇನ್ಯಾರೂ ಎರೆಯುವುದಿಲ್ಲ.

 

ಉದಾಹರಣೆಗೆ ನೋಡಿ. ಯಾರಾದರೂ ನಿಮ್ಮನ್ನು ಒಂದು ಗಂಟೆ ಹೊಗಳಿ, ನಡುವಲ್ಲಿ ಒಂದು ಸಾಲು ಏನೋ ಟೀಕೆ ಅಥವಾ ವಿಮರ್ಶೆ ಮಾಡುತ್ತಾರೆ. ಅವರು ಒಂದು ಗಂಟೆ ಕಾಲ ನಿಮ್ಮನ್ನು ಹೊಗಳಿದ್ದರೂ ದೀರ್ಘ ಕಾಲ ನಿಮ್ಮ ಮನಸ್ಸಿನಲ್ಲಿ ಉಳಿಯುವುದು ಅವರು ಮಾಡಿದ ಟೀಕೆಯೇ. ನನಗೆ ಹೀಗಂದುಬಿಟ್ಟರಲ್ಲ ಎಂದು ಅದನ್ನೇ ಮತ್ತ ಮತ್ತೆ ನೆನೆಯುತ್ತೀರಿ. ತಿಂಗಳುಗಟ್ಟಲೆ, ವರ್ಷಗಟ್ಟಲೆ ನೆನಪಿನಲ್ಲಿ ಇಟ್ಟುಕೊಳ್ಳುತ್ತೀರಿ. ಇಪ್ಪತ್ತು – ಇಪ್ಪತ್ತೈದು ವರ್ಷಗಳ ನಂತರ ಅವರನ್ನು ನೋಡಿದಾಗಲೂ ಅವರು ನನಗೆ ಹೀಗಂದಿದ್ದರಲ್ಲ ಎಂದು ನೆನಪಿಸಿಕೊಳ್ಳುತ್ತೀರಿ.

ವಾಸ್ತವದಲ್ಲಿ ಅದನ್ನು ನಾವು ನೆನಪಿಟ್ಟುಕೊಳ್ಳಬೇಕಾಗಿದ್ದೇ ಇಲ್ಲ. ಯಾವುದು ನಮ್ಮನ್ನು ನರಳಿಸುತ್ತದೆಯೋ, ಬೇಸರ ಪಡಿಸುತ್ತದೆಯೋ ಅದನ್ನು ಕಾಪಾಡಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ಆದರೆ ನಾವು ಅದೇ ತಪ್ಪನ್ನು ಮಾಡುತ್ತೇವೆ. ಯಾರದೋ ಟೀಕೆಯನ್ನು, ಗೇಲಿಯನ್ನು ಮನಸ್ಸಿನಲ್ಲಿ ನಿಧಿಯ ಹಾಗೆ ಕಾಪಾಡಿಕೊಂಡು ಹೋಗುತ್ತೇವೆ. ಅದರ ಜೊತೆಗೇ ನಮಗೆ ಅರಿವಿಲ್ಲದಂತೆ ನರಳಿಕೆಯನ್ನೂ ಕಾಪಾಡಿಕೊಂಡು ಹೋಗುತ್ತೇವೆ.

ಈಗ ಹೇಳಿ, ನಮ್ಮನ್ನು ಹೆಚ್ಚು ನರಳಿಸುವುದು ನಾವೆಯೋ, ಬೇರೆಯವರೋ!? ಯಾರು ನಮಗೆ ಶತ್ರುಗಳು?

ಇಲ್ಲೊಂದು ತಮಾಷೆಯಿದೆ.

ಒಮ್ಮೆ ಒಬ್ಬ ತನ್ನ ಗೆಳೆಯನಿಗೆ ಒಂದು ಜೋಕ್ ಹೇಳಿದ. ಗೆಳೆಯ ಅದನ್ನು ಕೇಳಿ ಎಂಜಾಯ್ ಮಾಡಿಕೊಂಡು ನಗಾಡಿದ.

ಎರಡು ದಿನಗಳ ಬಳಿಕ ಆತ ಮತ್ತೆ ಅದೇ ಗೆಳೆಯನಿಗೆ ಆ ಹಳೆಯ ಜೋಕನ್ನೇ ಹೇಳಿದ. ಈ ಬಾರಿ ಗೆಳೆಯ ಚೂರು ಪಾರು ನಕ್ಕಂತೆ ಮಾಡಿದ. ಮತ್ತಷ್ಟು ದಿನ ಕಳೆದು ಆತ ಅದೇ ಗೆಳೆಯನಿಗೆ ಅದೇ ಜೋಕನ್ನು ಹೇಳಿದ. ಈ ಸಲ ಗೆಳೆಯನಿಗೆ ಸ್ವಲ್ಪವೂ ನಗು ಬರಲಿಲ್ಲ. ಯಾಕೆ ಅಂತ ಕೇಳಿದಾಗ, “ಏನಯ್ಯಾ? ಒಮ್ಮೆ ಕೇಳಿದ ಜೋಕ್ ಮತ್ತೆ ಕೇಳಿದರೆ ನಗು ಬರುತ್ತದೆಯೇ?” ಎಂದು ರೇಗಿದ.

ನಮ್ಮ ಪಾಡು ಇದು. ಯಾವುದನ್ನು ಮತ್ತೆ ಮತ್ತೆ ಕೇಳುವುದರಿಂದ ಆನಂದ ಪಡಬಹುದೋ ಅದರ ರಸಕ್ಕೆ ನಾವು ಸ್ಪಂದಿಸುವುದಿಲ್ಲ. ಯಾವುದರಿಂದ ನಮಗೆ ದುಃಖವಾಗುತ್ತದೆಯೋ ಅದಕ್ಕೆ ಸ್ಪಂದಿಸುತ್ತೇವೆ. ಒಮ್ಮೆ ಅನುಭವಿಸಿದ ಟೀಕೆ, ನಷ್ಟ, ಬೈಗುಳ ಮೊದಲಾದವನ್ನು ಎಷ್ಟು ಬಾರಿ ನೆನೆದರೂ ನಮ್ಮನ್ನು ವಿಷಾದ ಆವರಿಸಿಕೊಳ್ಳುತ್ತದೆ. ಆದರೆ ಒಮ್ಮೆ ಪಟ್ಟ ಸಂತೋಷವನ್ನು ನೆನೆದು ಪುಳಕಗೊಳ್ಳಲು, ಆನಂದ ಹೊಂದಲು ನಮಗೆ ಬರುವುದಿಲ್ಲ.

ಈಗ ಹೇಳಿ. ಯಾರಿಗೆ ಯಾರು ಶತ್ರು? ಒಮ್ಮೆ ಬೈದವರು. ಒಮ್ಮೆ ಟೀಕಿಸಿದವರು ನಮ್ಮ ಶತ್ರುವೋ? ಆ ಬೈಗುಳ, ಆ ಟೀಕೆಯನ್ನು ಕಾಪಾಡಿಕೊಂಡು ಮತ್ತೆ ಮತ್ತೆ ನೆನೆದು ದುಃಖ ತಂದುಕೊಳ್ಳುವ ನಾವೇ ನಮಗೆ ಶತ್ರುವೋ?

 

Leave a Reply