ಹೆಸರು ಅಳಿಯುವ ಹೆದರಿಕೆ ಏಕೆ!?

ನಮ್ಮನ್ನು ನಾವು ಭೌತಿಕವಾಗಿ ಸಾಬೀತುಪಡಿಸಿಕೊಳ್ಳಲು ಹೆಸರಿನ ಗುರುತಿಗೆ ಮೊರೆ ಹೋಗುತ್ತೇವೆ. ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತರಾಗುತ್ತೇವೆ. ನಾವು ನಮ್ಮ ಗುರುತಿನ ವಲಯದಿಂದ ಅಂತರ ಕಾಯ್ದುಕೊಂಡರೆ, ಅದರಿಂದ ಹೊರಗೆ ಬಂದರೆ ಎಲ್ಲಿ ಜನ ನಮ್ಮನ್ನು ಮರೆತುಬಿಡುತ್ತಾರೋ ಅನ್ನುವ ಅಭದ್ರತಾ ಭಾವ ಕಾಡತೊಡಗುತ್ತದೆ. 

ಣ್ಣಿಗೆ ಕಾಣದ್ದನ್ನು ನಿರಾಕರಿಸಬೇಕು, ಯಾವುದು ವೈಚಾರಿಕವಾಗಿ ಸ್ಥಾಪಿತವೋ ವೈಜ್ಞಾನಿಕವಾಗಿ ಸಾಬೀತಾಗಿದೆಯೋ ಅದನ್ನು ಒಪ್ಪಬೇಕು ಎಂದು ಅತೀತಗಳನ್ನು ಆಚೆಗಿಟ್ಟು ವಾದ ಹೂಡುವ ನಾವು, ಕಣ್ಣಿಗೆ ಕಾಣುವ, ವೈಚಾರಿಕವಾಗಿಯೂ ವೈಜ್ಞಾನಿಕವಾಗಿಯೂ ಸ್ಥಾಪಿತವಾಗಿರುವ ಸಾವನ್ನು ಮಾತ್ರ ಒಪ್ಪಿಕೊಳ್ಳಲು ಹಿಂಜರಿಯುತ್ತೇವೆ. ಮಾತುಕತೆಯಲ್ಲಿ ಸಾವನ್ನು ಒಪ್ಪಿಕೊಂಡಂತೆ ಕಂಡರೂ ನಡವಳಿಕೆಯಲ್ಲಿ ಮಾತ್ರ ನಾವು ಶಾಶ್ವತ ಎಂಬಂತೆ ವರ್ತಿಸುತ್ತೇವೆ.

ಮನುಷ್ಯ ಸಮುದಾಯದ ಅತಿ ದೊಡ್ಡ ದೋಷವೆಂದರೆ ಗುರುತಿನ ವ್ಯಸನ. ಅಲೆಮಾರಿ ಮನುಷ್ಯ ಸಮುದಾಯ, ಗೋಡೆಗಳನ್ನು ಕಟ್ಟಿಕೊಂಡು ಕುಟುಂಬಗಳಾಗಿ ವಿಂಗಡಣೆಗೊಂಡಿತು. ಮುಂದೆ ಅದು ವ್ಯವಹಾರಕ್ಕೆ ಭಾಷೆಯನ್ನು ಬಳಸತೊಡಗಿದಾಗ ಆಯಾ ಕುಟುಂಬಕ್ಕೊಂದು ಹೆಸರಿಡುವ ರೂಢಿ ಚಾಲ್ತಿಗೆ ಬಂತು. ಆ ಕುಟುಂಬದ ಹೆಸರಿನ ಆಧಾರದ ಮೇಲೆ ಅದರ ಮುಖ್ಯಸ್ಥ, ಆ ಮುಖ್ಯಸ್ಥನ ಹೆಂಡತಿ, ಅವರ ಮಗು – ಹೀಗೆ ಹೆಸರಿಡುವ ಪದ್ಧತಿ ಶುರುವಾಗಿ, ಅನಂತರ ವ್ಯಕ್ತಿಗೊಂದು ಹೆಸರಾಯ್ತು.

ಹೆಸರಿಟ್ಟುಕೊಳ್ಳುವ ಪದ್ಧತಿ ಶುರುವಾದ ಮೇಲೆ ಅದರ ವ್ಯಾಮೋಹ ಶುರುವಾಯ್ತೋ ಅಥವಾ ವ್ಯಕ್ತಿಗೆ ತನಗೊಂದು ಗುರುತು ಬೇಕೆನ್ನುವ ವ್ಯಾಮೋಹ ಹುಟ್ಟಿದ ನಂತರವೇ ಹೆಸರಿಡುವ ಪದ್ಧತಿ ಶುರುವಾಯ್ತೋ… ಒಟ್ಟಿನಲ್ಲಿ ಹೆಸರಿನ ಜೊತೆಜೊತೆಗೆ ಅದರೊಡನೆ ಗುರುತಿಸಿಕೊಳ್ಳುವ, ಹೆಚ್ಚು ಹೆಚ್ಚು ಸಂಖ್ಯೆಯ ಜನರ ಮೆಚ್ಚುಗೆಗೆ ಮಾತ್ರವಾಗುವ ಬಯಕೆಯೂ ಬಹುತೇಕರಲ್ಲಿ ಶುರುವಾಯ್ತು.

ಪುರಂದರ ದಾಸರು ತಮ್ಮ ಗೀತೆಯೊಂದರಲ್ಲಿ,

ಮುನ್ನ ಶತಕೋಟಿ ರಾಯರುಗಳಾಳಿದ ನೆಲವ
ತನ್ನದೆಂದೆನುತ ಶಾಸನವ ಬರೆಸಿ…
ಎಂದು ಹೆಸರಿನ ವ್ಯಾಮೋಹವನ್ನು ಮೂದಲಿಸುತ್ತಾರೆ.

ರಾಜನೊಬ್ಬ ತಮ್ಮ ಹೆಸರು ಚಿರಸ್ಥಾಯಿಯಾಗಲೆಂದು ಅದಾಗಲೇ ನೂರಾರು ಅರಸರು ಆಳಿದ ನೆಲವನ್ನು ತನ್ನದೆಂದು ಸಾಧಿಸಿ ಶಾಸನದ ಕಲ್ಲು ನೆಡುತ್ತಾನೆ!

ನಾವೂ ಹಾಗೆಯೇ ಅಲ್ಲವೆ?

ವ್ಯಾವಹಾರಿಕವಾಗಿ, ಇಂದಿನ ಅನುಕೂಲಗಳಿಗಾಗಿ ಹೆಸರಿನ, ಅದರ ಸ್ಥಾಪನೆಯ ಅಗತ್ಯ ಇರುವುದೇನೋ ಸರಿ. ಆದರೆ ಆ ಹೆಸರಿನೊಂದಿಗೆ ಇಡಿಯ ಬದುಕನ್ನೆ ಗುರುತಿಸಿಕೊಂಡು ಅದೇ ನಾವೆನ್ನುವಂತೆ ಕ್ಲೈಮ್ ಮಾಡಿಕೊಳ್ಳುತ್ತೇವಲ್ಲ! ನಾವು ಪಡುವ ಬಹಳಷ್ಟು ಸಂಕಟಗಳು ಉಂಟಾಗುವುದು ಇದರಿಂದಲೇ ಅನ್ನುವ ಅರಿವು ನಮಗೆ ಮೂಡುವುದೇ ಇಲ್ಲ.

ವಾಸ್ತವದಲ್ಲಿ ಹೆಸರಿನ ಮೋಹವೊಂದು ಬಂಧನದಂತೆ. ಅದು ಕೋಟೆಯಂತೆ ನಮ್ಮನ್ನು ಕಾಪಾಡಿದರೂ ಒಂದು ಸಂಕುಚಿತ ಅವಕಾಶದಲ್ಲಿ ಬಂಧಿಯಾಗಿಡುತ್ತದೆ. ಆಧುನಿಕ ಪೀಳಿಗೆ ಸಮಾಜದ ಒಳಗೇ ಇಂಥ ಕೋಟೆಗಳನ್ನು ಕಟ್ಟಿಕೊಂಡು ಸೀಮಿತಗೊಳ್ಳುತ್ತಿರುವುದನ್ನು ನಾವು ನೋಡಬಹುದು. ಸಾಮಾಜಿಕ ತಾಣಗಳಲ್ಲಿ ತಮ್ಮದೊಂದು ಖಾತೆ ತೆರೆದು, ಅದರ ಮೂಲಕ ಮಿಥ್ಯಾ ಜಗತ್ತೊಂದನ್ನು ಸೃಷ್ಟಿಸಿಕೊಂಡು, ತಮ್ಮ ಬದುಕನ್ನೇ ಅದರ ಸುಪರ್ದಿಯಲ್ಲಿ ನಡೆಸುವಂಥ ಉತ್ಪ್ರೇಕ್ಷಿತರೂ ನಮ್ಮ ನಡುವೆ ಇದ್ದಾರೆ. ನಾವು ಇಂತಿಷ್ಟು ಸಂಖ್ಯೆಯ ಜನರಿಗೆ ಪರಿಚಿತರು ಅನ್ನುವ ಗುರುತಿಗೆ ತೃಪ್ತಿಪಟ್ಟುಕೊಳ್ಳುತ್ತಾ, ಆ ಗುರುತನ್ನು ಕಾಪಾಡಿಕೊಳ್ಳಲು ಹೆಣಗುವವರು ಇದ್ದಾರೆ. ಈ ಹೆಣಗಾಟವೊಂದು ಗೀಳಾಗಿ ಪರಿಣಮಿಸುತ್ತಾ, ಮಿಥ್ಯಾ ಜಗತ್ತು ವಾಸ್ತವವನ್ನು ಅತಿಕ್ರಮಿಸಿ, ಕೇವಲ ಭೌತಿಕ ಸಂಗತಿಗಳಷ್ಟಕ್ಕೆ ಅದು ಮಿತಗೊಳ್ಳುತ್ತ ಸಾಗುತ್ತಿದೆ.

ಯಾವುದೇ ವ್ಯಕ್ತಿಗೆ ತಾನು ಈ ಹಂತವನ್ನು ತಲುಪಿತ್ತಿದ್ದೇನೆ ಎಂದು ಗೊತ್ತಾದಾಗ  ಮಿಥ್ಯಾಗುರುತಿನಲ್ಲಿ ಕಳೆದುಹೋಗದಂತೆ ಎಚ್ಚರ ವಹಿಸಲು ಆರಂಭಿಸಬೇಕು. ಅಥವಾ ಅಂಥವರು ಕಂಡಾಗ ಹಿತೈಷಿಗಳಾದರೂ ಈ ಬಗ್ಗೆ ತಿಳಿ ಹೇಳಬೇಕು. ತಮ್ಮ ಬದುಕಿನ ಪ್ರತಿಯೊಂದು ಸಂಗತಿಯನ್ನೂ ಸದ್ದಿಲ್ಲದೆ ಜಗತ್ತಿಗೆ ಕೂಗಿ ಹೇಳಬೇಕೆನ್ನುವ ಮನಸ್ಥಿತಿ ಬೆಳೆಯುತ್ತಿದೆಯಾದರೆ, ಅದನ್ನು ಆ ಕೂಡಲೆ ಕತ್ತರಿಸಲು ಮುಂದಾಗಬೇಕು. ಆಯಾ ಸಂಪರ್ಕ ಜಾಲತಾಣಗಳಿಂದ ಹೊರಬರುವುದು ಅಥವಾ ಕೊನೆಯ ಪಕ್ಷ ಒಂದು ಅಂತರವನ್ನು ಕಾಪಾಡಿಕೊಳ್ಳುವುದು ಈ ನಿಟ್ಟಿನ ಮೊದಲ ಹೆಜ್ಜೆ.

ಹಾಗೆ ನಮ್ಮ ಗುರುತಿನ ವಲಯದಿಂದ ಹೊರಬರುವುದಾಗಲೀ ಅಂತರ ಕಾಯ್ದುಕೊಳ್ಳುವುದಾಗಲೀ ಸುಲಭದ ವಿಷಯವಲ್ಲ. ಹಾಗೆ ಆ ವಲಯದಿಂದ ಹೊರಗೆ ಬರಬೇಕು ಅಂದುಕೊಳ್ಳುವ ಕ್ಷಣದಲ್ಲೇ ನಾವು ಮತ್ತಷ್ಟು ಅದಕ್ಕೆ ಅಂಟಿಕೊಳ್ಳುತ್ತೇವೆ. ಯಾವಾಗಲೂ ಆಗುವುದು ಹಾಗೇ. ನೆಲಕ್ಕೆ ಅಂಟಿಕೊಂಡಷ್ಟೂ ಕುಸಿಯುವ ಭಯ ನಮ್ಮನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ. ನಮ್ಮನ್ನು ನಾವು ಭೌತಿಕವಾಗಿ ಸಾಬೀತುಪಡಿಸಿಕೊಳ್ಳಲು ಹೆಸರಿನ ಗುರುತಿಗೆ ಮೊರೆ ಹೋಗುತ್ತೇವೆ. ಸಂಪೂರ್ಣವಾಗಿ ಅದರ ಮೇಲೆ ಅವಲಂಬಿತರಾಗುತ್ತೇವೆ. ಜೊತೆಗೇ ಅದನ್ನು ಕಳಕೊಳ್ಳುವ ಭಯ ಆವರಿಸಿಕೊಳ್ಳತೊಡಗುತ್ತದೆ. ನಾವು ನಮ್ಮ ಗುರುತಿನ ವಲಯದಿಂದ ಅಂತರ ಕಾಯ್ದುಕೊಂಡರೆ, ಅದರಿಂದ ಹೊರಗೆ ಬಂದರೆ ಎಲ್ಲಿ ಜನ ನಮ್ಮನ್ನು ಮರೆತುಬಿಡುತ್ತಾರೋ ಅನ್ನುವ ಅಭದ್ರತಾ ಭಾವ ಕಾಡತೊಡಗುತ್ತದೆ.

ಇಲ್ಲಿ ಆ ಜನರೊಂದಿಗೆ ನಮಗೆ ಯಾವುದೇ ಸಂಬಂಧ ಇರುವುದಿಲ್ಲ. ಲೌಕಿಕ ಜೀವನದ ಲಾಭಗಳು ಒದಗುವುದಿಲ್ಲ. ಅಂತಹ ಮಿಥ್ಯಾ ವಲಯಗಳಲ್ಲಿ ಯಾರು ನಮ್ಮನ್ನು ಮರೆತರೂ ನಮಗೆ ನಷ್ಟವಾಗುವುದಿಲ್ಲ. ಆದರೆ ನಾವು ಮಾತ್ರ ಸದಾ ಅಲ್ಲಿ ಪ್ರಸ್ತುತವಾಗಿರಲು ಬಯಸುತ್ತೇವೆ. ಇದಕ್ಕೆ ಕಾರಣ ಹೆಸರಿನ ಹಪಾಹಪಿಯಲ್ಲದೆ ಮತ್ತೇನೂ ಅಲ್ಲ.

ಕೇವಲ ಖ್ಯಾತರಾದವರಿಗೆ, ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಅಥವಾ ಜನಪ್ರಿಯ ವ್ಯಕ್ತಿಗಳಿಗೆ ಮಾತ್ರ ಹೆಸರು ಉಳಿಸಿಕೊಳ್ಳುವ, ಪ್ರಸ್ತುತರಾಗಿರುವ ಅವಶ್ಯಕತೆ ಇರುತ್ತದೆ ಎಂದೇನೂ ಭಾವಿಸಬೇಕಿಲ್ಲ. ಜನ ಸಾಮಾನ್ಯರು ಕೂಡಾ ತಮ್ಮನ್ನು ತಾವು ಆ ಜನಪ್ರಿಯರ ಸ್ಥಾನದಲ್ಲಿ ಕಲ್ಪಿಸಿಕೊಂಡು, ಅಥವಾ ತಮ್ಮದೇ ಆದ ಒಂದು ಗುರತಿನ ವಲಯ ಕಟ್ಟಿಕೊಳ್ಳುವ ಮೂಲಕ ಪೊಳ್ಳು ಜನಪ್ರಿಯತೆಯನ್ನು ಆರೋಪಿಸಿಕೊಳ್ಳುತ್ತಾರೆ. ಮತ್ತು ತಾವು ಅವರ ನಡುವೆ ಇರುವುದು ಬಹಳ ಮುಖ್ಯ ಎಂದು ತಮ್ಮ ಇರುವಿಕೆಯ ಮಹತ್ವವನ್ನು ತಮ್ಮ ಮೇಲೆಯೇ ಹೇರಿಕೊಳ್ಳುತ್ತಾರೆ.

ಈ ಎಲ್ಲ ಪ್ರಕ್ರಿಯೆಗಳು ನಮ್ಮ ಬದುಕನ್ನು ಭಾರವಾಗಿಸುತ್ತ ಹೋಗುತ್ತದೆಯೇ ಹೊರತು ಬೇರಾವ ಉಪಯೋಗವೂ ಇಲ್ಲ. ಎಲ್ಲಕ್ಕಿಂತ ಮೊದಲು ಈ ಸೃಷ್ಟಿಯೇ ಮಿಥ್ಯೆ – `ಜಗನ್ಮಿಥ್ಯಾ’ – ಎನ್ನುತ್ತಾರೆ ಶಂಕರಾಚಾರ್ಯರು. ಈ ಮಿಥ್ಯಾ ಜಗತ್ತಿನೊಳಗೂ ಒಂದು ಭ್ರಮೆಯ ಜಗತ್ತನ್ನೂ ಗುರುತನ್ನೂ ಸಂಬಂಧಗಳನ್ನೂ ನಾವು ರೂಪಿಸಿಕೊಂಡಿದ್ದೇವೆ. ನಾವೇ ಹೆಣೆದುಕೊಂಡ ಕಾಲ್ಪನಿಕ ಜಾಲದಲ್ಲಿ ಸಿಲುಕಿ ಅದರಿಂದ ಹೊರಬರುವ ಇಚ್ಛೆಯೇ ಇಲ್ಲದೆ ಒದ್ದಾಡುತ್ತಿದ್ದೇವೆ.

ನಮ್ಮ ಈ ಒದ್ದಾಟಕ್ಕೆ `ಅನ್‍ಇನ್ಸ್‍ಟಾಲ್ ಸಿಂಡ್ರೋಮ್’ ಎಂದು ಹೆಸರು ಕೊಡಬಹುದು. ಇದು ನಮ್ಮ ಸ್ಮಾರ್ಟ್ ಫೋನ್‍ನಿಂದ ಫೇಸ್ ಬುಕ್ ಅಥವಾ ವಾಟ್ಸಪ್ ಆ್ಯಪ್ ಅನ್ನು ಅನ್‍ಇನ್‍ಸ್ಟಾಲ್ ಮಾಡುವಾಗ ಅನುಭವಿಸುವ ಮನಸ್ಥಿತಿ. ನಾವು ಈ ತಾಣಗಳಲ್ಲಿ ಅದೊಂದು ಗೀಳಾಗುವಂತೆ ತೊಡಗಿಕೊಳ್ಳುತ್ತೇವೆ. ಈ ಗೀಳು ನಮ್ಮ ಸಮಯವನ್ನು ನುಂಗುತ್ತಿದೆ ಎನ್ನುವ ಅರಿವು ಮೂಡಿದಾಗ ನಮ್ಮ ಸೆಲ್‍ನಿಂದ ಆ ಆ್ಯಪ್‍ಗಳನ್ನು ತೆಗೆದುಬಿಡುವ ನಿರ್ಧಾರವನ್ನೂ ತೆಗೆದುಕೊಳ್ತೇವೆ. ಆದರೆ ಅದು ಅಷ್ಟು ಸುಲಭವಾಗುವುದಿಲ್ಲ. ಈ ಪ್ರಕ್ರಿಯೆಯಿಂದ ಎಷ್ಟೆಲ್ಲ ಜನರ ಸಂಪರ್ಕ ಕಡಿದುಹೋಗಬಹುದು? ಏನೆಲ್ಲ ನಷ್ಟವಾಗಬಹುದು? `ಔಟ್ ಆಫ್ ಸೈಟ್ ಔಟ್ ಆಫ್ ಮೈಂಡ್’ ಅನ್ನುವಂತೆ ನಾನು ಇಲ್ಲಿ ಕಾಣಿಸಿಕೊಲ್ಳದೆ ಹೋದರೆ ಅವರೆಲ್ಲರ ಮನಸಿನಿಂದಲೂ ದೂರಾಗಿಬಿಡ್ತೀನಲ್ಲ – ಎನ್ನುವ ಯೋಚನೆಗಳು ಅಡ್ಡಗಾಲಾಗುತ್ತವೆ.

ನಮ್ಮ ಮಿಥ್ಯಾ ಜಗತ್ತಿನಲ್ಲಿ ಗುರುತಿಸಿಕೊಳ್ಳುವಿಕೆಯ ವಿಷಯದಲ್ಲಿ ಏನೆಲ್ಲ ಅನುಭವಿಸುತ್ತೇವೋ ಆ ಎಲ್ಲ ಗೊಂದಲಗಳನ್ನು ಮಿಥ್ಯೆಯೊಳಗಿನ ಕಡುಮಿಥ್ಯೆಯ ಜಗತ್ತಿನಲ್ಲೂ ಅನುಭವಿಸುವುದು ನಾವು ಮಾನಸಿಕವಾಗಿ ಅದೆಷ್ಟು ದುರ್ಬಲರು ಎನ್ನುವುದನ್ನು ಸೂಚಿಸುತ್ತದೆಯಷ್ಟೆ. ಹಾಗೆಯೇ, ನಮ್ಮ ಒಳಗಲ್ಲಿ ನಮ್ಮನ್ನು ಕಂಡುಕೊಳ್ಳುವ ಬದಲು, ಹೆಸರಿನಲ್ಲಿ ನಮ್ಮನ್ನು ಹುಡುಕಿಕೊಳ್ಳುವ ನಮ್ಮ ಗೋಜಲನ್ನೂ!

Leave a Reply