ಬಟ್ಟೆಯ ಗಂಟು ಮತ್ತು ಝೆನ್

ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ ಹೋಟಿ ಎಂಬ ಝೆನ್ ಗುರು ಇದ್ದ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ. ಯಾವಾಗಲೂ ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ.

ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ.

 ‘ಝೆನ್‍’ನ ಮಹತ್ವವೇನು?’ ಎಂದು ಹೋಟಿಯನ್ನು ಕೇಳಿದ.

ಹೋಟಿ ತಟ್ಟನೆ ತನ್ನ ಹೆಗಲ ಮೇಲಿದ್ದ  ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ  ಉತ್ತರವಾಗಿತ್ತು.

ಆ ಮತ್ತೊಬ್ಬ ಗುರುವಿಗೆ ಮತ್ತಷ್ಟು ಪರೀಕ್ಷಿಸುವ ಹಂಬಲ. ‘ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?’ ಎಂದು ಆ ಗುರು ಮತ್ತೆ ಕೇಳಿದ.

ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.


Leave a Reply