ನಮಗೆ ಬೇಕಿರುವುದು ಶಾಂತ, ಸುಂದರ, ಬುದ್ಧ ಮೌನ!

ನಮಗೆ ಸ್ಮಶಾನ ಮೌನ ಬೇಕಿಲ್ಲ, ಆಂತರ್ಯದ ಸಂವಹನ ಸಾಧ್ಯವಾಗುವಂತಹ ಚಲನಶೀಲ ಮೌನ ನಮ್ಮದಾಗಬೇಕು.

buddha

ಮಾತು ಮುತ್ತು, ಮೌನ ಬಂಗಾರ ನಿಜ. ಆದರೆ ಮಾತನಾಡದಿರುವಿಕೆ ಮೂಕತನವಾಗಬಾರದು. ಮಾತಿಲ್ಲದಿದ್ದಾಗ ಕ್ರಿಯೆ ನಡೆಯುತ್ತಿದ್ದರೆ ಮೌನಕ್ಕೆ ತೂಕ ಬರುತ್ತದೆ. ಮೌನ, ಮಾತು ಕೂಡ ಹೇಳಲಾಗದ್ದನ್ನು ಹೇಳುತ್ತದೆ. ಆದರೆ ಕೆಲವೊಮ್ಮೆ ಹೇಳಲೇಬೇಕಾದ ಮಾತುಗಳನ್ನು ನುಂಗುವ, ಎಂದೆಂದಿಗೂ ಅರಗಿಸಿಕೊಳ್ಳಲಾಗದ ಪ್ರಮಾದವೂ ಆಗಿಬಿಡುತ್ತದೆ.

ಮೌನ ಜಗತ್ತಿನ ಅದ್ಭುತ ಸಂಗೀತ ಅನ್ನುತ್ತಾರೆ. ಆದರೆ ಮೌನ ಕೆಲವೊಮ್ಮೆ ಬೇಸತ್ತ ಮನಸುಗಳ ನಡುವೆ ಕಂದಕ ಹೆಚ್ಚಿಸುವ, ಸಂಬಂಧಗಳಿಗೆ ಇತಿ ಹಾಕುವ ಚರಮಗೀತೆಯೂ ಆಗಿಬಿಡುತ್ತದೆ.

‘ಮೌನಂ ಸಮ್ಮತಿ ಲಕ್ಷಣಂ’ ಅನ್ನೋದು ರೂಢಿ ಮಾತು. ಆದರೆ ಅದೇ ಪರಮಸತ್ಯವೇನೂ ಅಲ್ಲ. ಕೆಲವೊಮ್ಮೆ ಮೌನ ಅಸಹಾಯಕತೆಯೂ ಸಿಡುಕೂ ಅಸಹನೆಯೂ ಆಗಿರುತ್ತದೆ. ಆದ್ದರಿಂದ ಮೌನ ಅನ್ನುವುದು ಮಾತಿಲ್ಲದಿರುವಿಕೆಯಷ್ಟೇ ಆಗಿಬಿಡಬಾರದು. ಅದು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಸ್ತ್ರವಾಗಬಾರದು.

‘ಎಲ್ಲ ಬಲ್ಲವನು ಮೌನಿಯಾಗಿರುತ್ತಾನೆ’ ಅನ್ನುತ್ತದೆ ದಾವ್. ಹಾಗೆಯೇ ಮೂರ್ಖನೂ ಕೂಡ ಉತ್ತರಗಳು ತಿಳಿಯದೆ ಮೌನವಾಗಿರುತ್ತಾನೆ. ನಮ್ಮ ಮೌನ ತಿಳಿವಿನಿಂದ ಉಂಟಾಗಿದ್ದೋ ಅಥವಾ ಮೂರ್ಖತನದಿಂದಲೋ? ಇದನ್ನು ಕಂಡುಕೊಳ್ಳಬೇಕು. ಏಕೆಂದರೆ ಮೌನ ನಮ್ಮ ಸಾಮರ್ಥ್ಯವಾಗಿರಬೇಕೇ ವಿನಃ ದೌರ್ಬಲ್ಯವಾಗಿರಬಾರದು. ದೌರ್ಬಲ್ಯವಾಗಿರಬಾರದು.

ಜಗತ್ತಿನ ಉಗಮವಾಗಿದ್ದೇ ಮೌನದ ಗರ್ಭದಿಂದ. ಹಾಗೆಯೇ ನಮ್ಮೆಲ್ಲ ಯೋಚನೆಗಳು ನಮ್ಮೊಡಲಿನ ಮೌನದಿಂದಲೇ ಹುಟ್ಟಿಕೊಳ್ಳುವವು. ಅವುಗಳನ್ನು ಹೋಗಲಾಡಿಸಬೇಕೆಂದರೆ, ತಾಯಿಯ ತೊಡೆಯ ಮೇಲೆ ಮಗುವಾಗಿ ಮಲಗುವಂತೆ, ಮೌನದ ಆಸರೆ ಪಡೆಯಬೇಕು. ನಾವಾಡುವ ಮಾತುಗಳಿಂತ ಹೆಚ್ಚಾಗಿ ಮನಸ್ಸಿನ ಹರಟೆಗಳನ್ನು ನಿಲ್ಲಿಸಬೇಕು. ಆಗ ಪರಿಹಾರ ತಾನೇ ತಾನಾಗಿ ಒದಗುತ್ತವೆ, ಚಿಂತೆಗಳು ದೂರವಾಗುತ್ತವೆ.

ಹಾಗಂತ ನಮಗೆ ಸ್ಮಶಾನ ಮೌನ ಬೇಕಿಲ್ಲ, ಆಂತರ್ಯದ ಸಂವಹನ ಸಾಧ್ಯವಾಗುವಂತಹ ಚಲನಶೀಲ ಮೌನ ನಮ್ಮದಾಗಬೇಕು.

ಬುದ್ಧನ ಕಥೆಗಳಲ್ಲಿ ಮೌನವನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ಅದರ ಪ್ರಕಾರ ಬುದ್ಧನ ಬೋಧನೆ – ಮೌನ, ಮೌನ ಮತ್ತು ಮೌನ….

ಗುರು, ಶಿಷ್ಯರು ಮರದ ಕೆಳಗೆ ಸುಮ್ಮನೆ ಕುಳಿತಿರುತ್ತಿದ್ದರು, ಒಬ್ಬರನ್ನೊಬ್ಬರು ದಿಟ್ಟಿಸುತ್ತಾ. ಅಲ್ಲಿ ಜ್ಞಾನದ ಕೊಡು – ಕೊಳ್ಳುವಿಕೆಯ ಅದ್ಭುತ ಕ್ರಿಯೆ ನಡೆಯುತ್ತಿತ್ತು. ಮೌನ ಸಾರ್ಥಕವಾಗುತ್ತಿತ್ತು.

ನಮ್ಮೆಲ್ಲ ವಾಚಾಳಿತನಗಳ ನಡುವೆ ಬೇಕಿರುವುದು ಇಂತಹ ಕ್ರಿಯಾತ್ಮಕ ಮೌನ…. ಶಾಂತ, ಸುಂದರ, ಬುದ್ಧ ಮೌನ!

Leave a Reply