ತೋರಲಿಲ್ಲಾಗಿ ಬೀರಲಿಲ್ಲ, ಅರಿಯದುದು ಬಗೆಹರಿಯಲು ಸಾಧ್ಯವೇ ಇಲ್ಲ!

ಕೆಟ್ಟ ಆಲೋಚನೆಯೇ ಬರದಂತೆ, ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದರಿಂದ ಏನಾಯಿತು?! ಒಳ್ಳೆಯ-ಕೆಟ್ಟ ಆಲೋಚನೆಗಳೆಂಬ ವರ್ಗೀಕರಣ ಆಯಿತು! ಒಳ್ಳೆಯ ಆಲೋಚನೆಗಳನ್ನು ಉಳಿಸಿ – ಬೆಳೆಸುವ ಮತ್ತು ಕೆಟ್ಟ ಆಲೋಚನೆಗಳನ್ನು ಬಿಡುವ ‘ಸದಾ ಕಾಲದ ಸಂಘರ್ಷ’ ಆರಂಭವಾಯಿತು. ಆದಾಗಲೇ ವಿಚಲಿತವಾಗಿರುವ ಮನಸ್ಸಿಗೆ ಸಂಘರ್ಷ ಸ್ಥಿತಿಯನ್ನು ಕೊಡಲಾಯಿತು!

~ ವಿದ್ಯಾಧರ

ಯಾವುದೇ ಸಮಸ್ಯೆಯೊಂದರ ನಿವಾರಣೆಗೆ ಮೊದಲು, ಆ ನಿರ್ದಿಷ್ಟ ಸಮಸ್ಯೆಯನ್ನು ‘ಪೂರ್ಣವಾಗಿ’ ಅರಿತುಕೊಳ್ಳಬೇಕಾಗುತ್ತದೆ. ಅಂದರೆ ಸಮಸ್ಯೆಯನ್ನು ಅದು ಇದ್ದ ಹಾಗೆಯೇ ನೋಡಬೇಕು; ಅದರ ಬಗ್ಗೆ ಆಲೋಚಿಸುವುದಲ್ಲ. ಸಮಸ್ಯೆಯ ಮೇಲೆ ಯಾವುದೇ ಸಿದ್ಧಾಂತ, ಐಡಿಯಾ, ಅಭಿಪ್ರಾಯಗಳನ್ನು ಹೇರದೇ ನೋಡಬೇಕು. ಅಂದರೆ ಸಮಸ್ಯೆಯನ್ನು ಅದು ಇರುವ ಹಾಗೆಯೇ ನೋಡಬೇಕು; ಅದರ ಬಗ್ಗೆ ಆಲೋಚಿಸುವುದಲ್ಲ.  ಸಮಸ್ಯೆಯೊಂದನ್ನು ಪೂರ್ಣವಾಗಿ ಅರಿಯದೆ ಅದರ ನಿವಾರಣೆ ಹೇಗೆ ಸಾಧ್ಯ?! ಪೂರ್ಣವಾಗಿ ‘ಅರಿಯಲು’ ನಿಶ್ಚಲ ಮತ್ತು ಶಾಂತಿಪೂರ್ಣ ಮನಸ್ಸು ಅತ್ಯಗತ್ಯ. ಕಾರಣ- ನಿಶ್ಚಲವಾದ, ಶಾಂತಿಪೂರ್ಣ ಮನಸ್ಸು ಮಾತ್ರ, ಸಮಸ್ಯೆಯೊಂದನ್ನು ನೇರವಾಗಿ, ಪೂರ್ಣವಾಗಿ ಮತ್ತು ಸರಳವಾಗಿ ನೋಡಬಲ್ಲುದು. ಐಡಿಯಾ, ಸಿದ್ಧಾಂತ, ಅಭಿಪ್ರಾಯಗಳನ್ನು ಹೇರುವುದು ಎಂದರೆ  ಅದು ‘ಆಲೋಚನೆ’ ಆಗುತ್ತದೆ ಹೊರತು ‘ಅರಿಯುವಿಕೆ’ ಆಗುವುದಿಲ್ಲ.

ಸಮಸ್ಯೆಯ ಬಗ್ಗೆ ಆಲೋಚಿಸಲು ತೊಡಗುತ್ತಿದ್ದಂತೆಯೇ,  ನಾವು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವುದರಿಂದ ದೂರ ಹೋಗಿರುತ್ತೇವೆ. ಆದ್ದರಿಂದ, ಯಾವುದೊಂದು ಸಮಸ್ಯೆಯ ನಿವಾರಣೆಗೆ ಇರುವ ಬಹು ದೊಡ್ಡ ಅಡಚಣೆ ಅಂದರೆ, ಅದು ಆಲೋಚನೆಯೇ ಆಗಿದೆ. ಯಾವುದನ್ನಾದರೂ ಅರಿಯಲು ನಾವು ‘ಸಮಗ್ರ ಗಮನ’ ಕೊಡಬೇಕು. ಆಲೋಚನೆಯು ಸಮಗ್ರ ಗಮನವನ್ನು ಮುಕ್ಕು ಮಾಡಿಬಿಡುತ್ತದೆ. ಹೇರಿಕೆಗಳಿಂದ ಸೃಷ್ಟಿಯಾಗುವ ಆಲೋಚನೆಗಳೇ ನಮಗೆ  ‘ಪೂರ್ಣವಾಗಿ ಗ್ರಹಿಸಲು’ ಅಡಚಣೆ ಆಗಿದೆ.

ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಬಹುತೇಕ ಎಲ್ಲರೂ ಆರಿಸಿಕೊಂಡಿರುವ ಮಾರ್ಗ, ಕೆಟ್ಟ ಆಲೋಚನೆಗಳನ್ನು ಬಿಡುವುದು. ಅದರ ವಿರುದ್ಧ ಹೋರಾಡುವುದು. ಕೆಟ್ಟ ಆಲೋಚನೆಯೇ ಬರದಂತೆ ನೋಡಿಕೊಳ್ಳುವುದು. ಒಳ್ಳೆಯ ಆಲೋಚನೆಗಳನ್ನು ರೂಢಿಸಿಕೊಳ್ಳುವುದು. ಆದರೆ, ಹೀಗೆ ಮಾಡುವುದರಿಂದ ಏನಾಯಿತು?! ಒಳ್ಳೆಯ-ಕೆಟ್ಟ ಆಲೋಚನೆಗಳೆಂಬ ವರ್ಗೀಕರಣ ಆಯಿತು! ಒಳ್ಳೆಯ ಆಲೋಚನೆಗಳನ್ನು ಉಳಿಸಿ – ಬೆಳೆಸುವ ಮತ್ತು ಕೆಟ್ಟ ಆಲೋಚನೆಗಳನ್ನು ಬಿಡುವ ‘ಸದಾ ಕಾಲದ ಸಂಘರ್ಷ’ ಆರಂಭವಾಯಿತು. ಆದಾಗಲೇ ವಿಚಲಿತವಾಗಿರುವ ಮನಸ್ಸಿಗೆ ಸಂಘರ್ಷ ಸ್ಥಿತಿಯನ್ನು ಕೊಡಲಾಯಿತು!

ಸದಾಕಾಲ ಸಂಘರ್ಷದಲ್ಲಿರುವ ಮನಸ್ಸು, ಸಮಸ್ಯೆಯನ್ನು ಹೇಗೆ ತಾನೇ ಅರಿಯಬಲ್ಲುದು!? ಆಳವಾಗಿ ನೋಡಿದಾಗ, ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳೆಂಬ ವರ್ಗೀಕರಣವು ‘ಆಲೋಚಕ’ ಮತ್ತು ‘ಆಲೋಚನೆ’ ಎಂಬ ದ್ವೈತವನ್ನು ಸೃಷ್ಟಿಸಿದೆ ಎಂದು ಗೊತ್ತಾಗುತ್ತದೆ. ಆಲೋಚಕನು ಒಳ್ಳೆಯ ಆಲೋಚನೆಯ ಪ್ರತಿನಿಧಿ ಮತ್ತು ಆಲೋಚನೆ ಎಂಬುದು  ಕೆಟ್ಟ ಆಲೋಚನೆಗಳ ಸಂಗ್ರಹಾಲಯ ಎಂದಾಯಿತು. ಅದರೊಂದಿಗೆ, ಆಲೋಚಕನೆಂಬ ಹೀರೊವನ್ನು ಶಕ್ತಿವಂತನನ್ನಾಗಿ ಮಾಡಿ; ಆಲೋಚನೆ ಎಂಬ ಖಳನನ್ನು ಮಣಿಸುವ ಕಾರ್ಯವೇ ‘ಸಾಧನಾಪಥ’ ಆಯಿತು. ಆಲೋಚಕ ಮತ್ತು ಆಲೋಚನೆ ಎರಡೂ ಒಂದೇ ಆಗಿರುವಾಗ- ಆಲೋಚಕನನ್ನು ಶಕ್ತಿವಂತ ಮಾಡಿ; ಅದೇ ಸಮಯದಲ್ಲಿ ಅಲೋಚನೆಗಳನ್ನು ನಿರ್ಮೂಲನ ಮಾಡಲು ಸಾಧ್ಯವೇ!?

ಆದ್ದರಿಂದ, ಒಳ್ಳೆಯದೋ, ಕೆಟ್ಟದ್ದೋ… ಒಟ್ಟಾರೆಯಾಗಿ ಯಾವುದೇ ಆಲೋಚನೆಯ ಆಗಮನವೇ ಸಮಸ್ಯೆಯ ‘ಅರಿಯುವಿಕೆ’ಗೆ ಇರುವ ಏಕೈಕ ಅಡ್ಡಿ. ಯಾವುದೊಂದನ್ನು ಇದ್ದ ಹಾಗೆಯೇ ‘ನೋಡುತ್ತಿರುವಾಗ’ ಆಲೋಚನೆ ಮಧ್ಯೆ ಬಂದು ಅದು ನಮ್ಮ ಗಮನವನ್ನು ತಪ್ಪಿಸುವುದು. ಗಮನವು ವಿಚಲಿತವಾದಾಗ ಸಹಜವಾಗಿಯೇ ಸಮಸ್ಯೆಯ ಅರಿಯುವಿಕೆಯು ಅಪೂರ್ಣವಾಗುವುದು. ಆ ಕಾರಣ ಅದೇ ಸಮಸ್ಯೆಯು ಪುನರಾವರ್ತಿತ ಆಗುತ್ತಲೇ ಇರುವುದು. ಪ್ರತೀಬಾರಿ ಆಲೋಚನಾ ಅಭ್ಯಾಸವು ಮಧ್ಯೆ ಬಂದು ಸಮಸ್ಯೆಯ ಅರಿಯುವಿಕೆ ಅಪೂರ್ಣವಾಗಿಯೇ ಉಳಿಯುವುದು.

ಅರಿಯದುದು ಬಗೆಹರಿಯಲು ಸಾಧ್ಯವೇ ಇಲ್ಲ! ”ತೋರಲಿಲ್ಲಾಗಿ ಬೀರಲಿಲ್ಲ; ಗುಹೇಶ್ವರ ಲಿಂಗದರಿವು- ಅನುಭಾವಿ-ಸುಖಿ ಬಲ್ಲ’

1 Comment

  1. ತೋರಲಿಲ್ಲಾಗಿ ಬೀರಲಿಲ್ಲ –> ಇರುವುದೆರಡೇ ಪದಗಳು ಆದರೆ ಆಧ್ಯಾತ್ಮಿಕ ಸಾಧಕರಿಗೂ ಸಾಮಾನ್ಯ ಸಂಸಾರಿಗಳಿಗೂ ಒಂದೇ ಕಿವಿಮಾತು. ಸಮಸ್ಯೆ ಯಾವುದಾದರೇನು, ಅದಕ್ಕೆ ಪರಿಹಾರ ಹುಡುಕುವ ಮೊದಲು ಅದನ್ನು ಅರಿತುಕೊಳ್ಳಬೇಕು. ಅರಿತುಕೊಳ್ಳಲು ಮುಕ್ತ ಮನಸ್ಸು ಬೇಕು. ಮುಕ್ತ ಎಂದರೆ ಆಲೋಚನೆಗಳಿಂದ ಮುಕ್ತವಾದ ಮನಸ್ಸು. ಅರಿತ ಮೇಲೆ ಪರಿಹಾರ ಹುಡುಕಬೇಕು.
    ವಾಹ್.. ತುಂಬಾ ಸೂಪರ್ ಆಗಿದೆ _/\_

Leave a Reply