ಆದ್ಯತೆಯಂತೆ ಬದುಕು ನಡೆಸುವ ಬಗೆ

ಬುದ್ಧನ ಬದ್ಧತೆ ಹೊಂದಿರುವವರಿಗೆ ಮಾತ್ರ ಆದ್ಯತೆಯಂತೆ ನಡೆಯುವ ಅಧಿಕಾರ ಇರುತ್ತದೆ ….| ಆನಂದಪೂರ್ಣ

buddhaಸಾಮಾನ್ಯವಾಗಿ ಹೀಗಾಗುತ್ತದೆ; ವಿಶೇಷವಾಗಿ ಸಂಗಾತಿಗಳ ನಡುವೆ ಹಾಗೂ ಸ್ನೇಹಿತರಲ್ಲಿ. “ನಿನಗೆ ನನಗಿಂತ ಅದೇ ಮುಖ್ಯವಾಗಿಹೋಯಿತು” ಎಂದು ಕೆಲಸವನ್ನೋ ನಿಮ್ಮ ಹವ್ಯಾಸವನ್ನೋ ಮತ್ತೇನನ್ನೋ ದೂರುತ್ತಾರೆ. ಅಂಥ ಸಂದರ್ಭಗಳಲ್ಲಿ ನೀವು ಏನು ಉತ್ತರಿಸಬೇಕೆಂದು ತೋಚದೆ ತಡಬಡಾಯಿಸುತ್ತೀರಿ. ಮತ್ತು ಕೆಲವೊಮ್ಮೆ ಯೋಚನೆಗೆ ಬೀಳುವುದೂ ಇದೆ. ನೀವು ಅವರಿಗೆ ಯಾವ ಕೊರತೆಯನ್ನೂ ಮಾಡಿರುವುದಿಲ್ಲ. ಪ್ರತಿಯೊಂದನ್ನೂ ಆ ಕ್ಷಣಕ್ಕೆ ಅಲ್ಲವಾದರೂ ಮತ್ತೊಮ್ಮೆ ಒದಗಿಸಿರುತ್ತೀರಿ. ಹಾಗಿದ್ದೂ “ನಾನು ಮುಖ್ಯ ಅಲ್ಲವೆ?” ಅನ್ನುವ ಪ್ರಶ್ನೆ ಅವರಿಂದ ಯಾಕೆ ಬರುತ್ತದೆ?

ಹೌದಲ್ಲ, ನಿಮ್ಮ ಆದ್ಯತೆ ಏನು? ನಿಮ್ಮ ಸಂಗಾತಿ/ಸ್ನೇಹಿತ/ ಕುಟಂಬವೇ ಅಥವಾ ನಿಮ್ಮ ಉದ್ಯೋಗ/ಆಸಕ್ತಿಗಳೇ? ಇಷ್ಟಕ್ಕೂ ನಿಮಗೆ ಯಾವುದು ಮುಖ್ಯ!?  

ಯಾವುದೇ ವ್ಯಕ್ತಿಯು ಸಾಂಗತ್ಯ, ಸಂಸಾರ ಹಾಗೂ ಸಮಾಜದ ಒಳಹೆಣಿಗೆಯಂತೆ ಬದುಕು ನಡೆಸುತ್ತಾನೆ/ಳೆ ಅನ್ನುವುದು ನಿಜವಾದರೂ ಯಾವುದೇ ವ್ಯಕ್ತಿಯು ಪ್ರತ್ಯೇಕವಾಗಿ ಒಂದು ಜೀವ ಅನ್ನುವುದು ಕೂಡ ನಿಜವೇ. ಆದ್ದರಿಂದ ಆತ/ಆಕೆ ಆ ಎಲ್ಲಕ್ಕೆ ಬದ್ಧವಾಗಿರುತ್ತಲೇ ತನ್ನ ಬದುಕನ್ನು ಬಾಳಲಿಕ್ಕೂ ತಾನು ಬದ್ಧವಾಗಿರಬೇಕು. ತನ್ನ ಬಾಳಿಗೆ ಬದ್ಧವಾಗಿರಲು ಆಗದ ಮನುಷ್ಯ ಮತ್ತೊಬ್ಬರಿಗೆ ಅದು ಹೇಗೆ ಪೂರ್ಣವಾಗಿ, ಪ್ರಾಮಾಣಿಕವಾಗಿ ಬದ್ಧತೆ ತೋರಿಸಲು ಸಾಧ್ಯವಾದೀತು?

ಆದ್ಯತೆಯಂತೆ ನಡೆಯಲು ಸುಲಭ ಸೂತ್ರಗಳು

ನಿಮ್ಮ ಆದ್ಯತೆಗಳಂತೆ ನಡೆಯಬೇಕೆಂದು, ಅವನ್ನು ನಿಮ್ಮ ಜೊತೆಗಾರರು ಅರ್ಥಮಾಡಿಕೊಂಡು ಜೊತೆಯಾಗಬೇಕೆಂದು  ಬಯಸುತ್ತೀರಾ? ಹಾಗಾದರೆ ಹೀಗೆ ಮಾಡಿ:

  • ಜೊತೆಗಾರರಿಗೆ ಸಲ್ಲುತ್ತಲೇ ನಿಮ್ಮನ್ನು ನಿಮಗೇ ಸಂದಾಯ ಮಾಡಿಕೊಳ್ಳುವುದು ಕೂಡ ಮುಖ್ಯ. ಆದ್ದರಿಂದ ನಿಮಗೆ ನಿಮ್ಮಿಂದ ಏನೆಲ್ಲ ಬೇಕಾಗಿದೆ ಅನ್ನುವುದನ್ನು ಪಟ್ಟಿ ಮಾಡಿಕೊಳ್ಳಿ.
  • ನಿಮ್ಮ ಆಸಕ್ತಿ, ಹವ್ಯಾಸ ಅಥವಾ ಉದ್ಯೋಗ ನಿಮ್ಮ ಜೊತೆಗಾರರಿಗೂ ಲಾಭದಾಯಕವೇ ಅನ್ನುವುದನ್ನು ಪರೀಕ್ಷಿಸಿಕೊಳ್ಳಿ.
  • ಬದುಕು ಹಲವು ಆಯಾಮಗಳ ಮೊತ್ತ. ಸಂಬಂಧಗಳ ಆಯಾಮದಲ್ಲಿ ನಿಮ್ಮ ಜೊತೆಗಾರರಿಗೆ ಯಾವ ಸ್ಥಾನ ಕೊಟ್ಟಿದ್ದೀರಿ? ಅದನ್ನು ಸರಿಯಾಗಿ ನಿಭಾಯಿಸುತ್ತಿದ್ದೀರಾ? ಯೋಚಿಸಿ. ಸಂಬಂಧದ ಆಯಾಮವನ್ನು ನೀವು ಸರಿಯಾಗಿ ನಿರ್ವಹಿಸುತ್ತಿದ್ದರೆ ಮಾತ್ರ ನೀವು ನೆಮ್ಮದಿಯಿಂದ ವೈಯಕ್ತಿಕ ಆಯಾಮದ ಆದ್ಯತೆಗಳನ್ನು ಯಶಸ್ವಿಯಾಗಿ ಪೂರೈಸಬಲ್ಲಿರಿ.
  • ನಿಮ್ಮ ಆದ್ಯತೆಗಳು ನಿಮ್ಮ ಜೊತೆಗಾರರನ್ನು ಕಡೆಗಣಿಸುವ ಉದ್ದೇಶ ಹೊಂದಿಲ್ಲವೆಂದು ಅವರಿಗೆ ಮನದಟ್ಟು ಮಾಡಿ. ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರೆ ಮಾತ್ರ ನಿಮ್ಮ ಕೆಲಸ ಸಲೀಸು. ಇಲ್ಲವಾದರೆ ಅವರ ಅಸಮಾಧಾನದ ಬಿಸಿಯುಸಿರು ನಿಮ್ಮ ಭಾವಕೋಶವನ್ನು ಸುಡಲುತೊಡಗುವುದು.
  • ಆದ್ಯತೆಗಳನ್ನು ಹೊಂದಿರುವುದು ಜೀವನದ ಅತ್ಯಂತ ಸಹಜ ಭಾಗ ಹಾಗೂ ಆದ್ಯತೆಗಳೆಂದರೆ ಪ್ರಾಮುಖ್ಯತೆಯ ಆಧಾರದ ಮೇಲೆ ಮಾಡುವ ಶ್ರೇಣೀಕರಣವಲ್ಲ ಅನ್ನುವುದನ್ನು ನಿಮ್ಮ ನಡವಳಿಕೆಯ ಮೂಲಕ ಖಾತ್ರಿ ಪಡಿಸಿ. ಹಾಗೂ ನಿಮ್ಮ ಜೊತೆಗಾರರ ಆದ್ಯತೆಗಳನ್ನು ಗೌರವಿಸಿ, ಆ ಮೂಲಕ ಅವರಿಗೂ ಅದರಂತೆ ನಡೆಯಲು ಪ್ರೇರೇಪಿಸಿ.

ಇಷ್ಟೆಲ್ಲ ಮಾಡುವ ಮೊದಲು, ನಿಮ್ಮ ಆದ್ಯತೆಗಳನ್ನು ಸರಿಯಾಗಿ ನಿಕ್ಕಿ ಮಾಡಿಕೊಳ್ಳಿ. ನಿಮ್ಮ ಯಾವುದೇ ಕೆಲಸ ನಿಮ್ಮ ಆಂತರಿಕ ವಿಕಸನಕ್ಕೆ ಪೂರಕವಾಗಿರಲಿ. ನೀವು ಮೊದಲ ಆದ್ಯತೆಯಿಂದ ಮಾಡುವ ಕೆಲಸ ನಿಮಗೆ ಫಲ ಕೊಡದೇ ಹೋದರೆ, ಉಳಿದೆಲ್ಲವೂ ನಿಷ್ಫಲವಾಗುವುದು ಖಚಿತ.

ನಿಮ್ಮ ಅಂತರಂಗದಂತೆ ನಡೆಯುವುದು ನಿಮ್ಮ ಆದ್ಯತೆಯಾಗಿರಲಿ.  ಬಹಳ ಬಾರಿ ನಮ್ಮ ಬಯಕೆಗಳು ಮತ್ತೊಬ್ಬರಿಗೆ ಕಷ್ಟದಾಯಕವಾಗಿರುತ್ತದೆ. ಅಥವಾ ಸಮಾಜದ ದೃಷ್ಟಿಯಿಂದ ಪ್ರಮಾದವಾಗುತ್ತದೆ. ಆದರೆ, ಅಪರಾಧವಲ್ಲದ, ಮಾರಕವಲ್ಲದ ಯಾವುದೇ ಬಯಕೆಯಂತೆ ನಡೆಯಲು ನೀವು ಸ್ವತಂತ್ರರಿದ್ದೀರಿ. ಅದರಂತೆ ನಡೆಯಿರಿ. ನಿಮ್ಮ ಹೆಜ್ಜೆಗಳಲ್ಲಿ ದೃಢತೆ ಹಾಗೂ ಬದ್ಧತೆ ಇರುವುದಷ್ಟೆ ಮುಖ್ಯ.

ಬುದ್ಧ ನಡುರಾತ್ರಿಯಲ್ಲಿ ಮನೆ ಬಿಟ್ಟು ಹೊರಟಾಗ ಆತನಿಗೆ ತನ್ನ ಹೆಂಡತಿ ಮತ್ತು ಮಗುವಿನ ಮೇಲೆ ಪ್ರೀತಿ ಇರಲಿಲ್ಲ ಎಂದಲ್ಲ. ಆತ ಅವರೆಡೆಗಿನ ತನ್ನ ಕರ್ತವ್ಯಗಳನ್ನು ಖಂಡಿತವಾಗಿಯೂ ಮಾಡಿದ್ದ. ಮುಂದೆಯೂ ಮಾಡಿದ. ಜ್ಞಾನವನ್ನರಸುವುದು, ಬೋಧೆಯನ್ನು ಪಡೆಯುವುದು ಬುದ್ಧನ ಆದ್ಯತೆಯಾಗಿತ್ತು. ಅದರಂತೆ ಆತ ಸಂಸಾರ ಬಿಟ್ಟು ಹೊರಟ. ನೆನಪಿಡಿ. ಬುದ್ಧನ ಬದ್ಧತೆ ಹೊಂದಿರುವವರಿಗೆ ಮಾತ್ರ ಆದ್ಯತೆಯಂತೆ ನಡೆಯುವ ಅಧಿಕಾರ ಇರುತ್ತದೆ.

 

Leave a Reply