ದಾವೂದನು ಕಿರಿಯನಾದ ಸಾಲೊಮನ್’ಗೆ ದೊರೆಯ ಪಟ್ಟ ಕಟ್ಟಿದ್ದು ಯಾಕೆ?

ಇಸ್ರೇಲಿನ ದೊರೆ ದಾವೂದನಿಗೆ ವಯಸ್ಸಾಯಿತು. ಕಣ್ಣುಗಳು ಮಂಜಾಗತೊಡಗಿದವು. ಇನ್ನೇನು ಜೀವ ತೊರೆಯುವ ಕಾಲ ಹತ್ತಿರ ಬಂದಿದೆ ಎಂದು ಅವನಿಗೆ ತಿಳಿಯಿತು. ದಾವೂದನಿಗೆ ಇಬ್ಬರು ಮಕ್ಕಳು. ಹಿರಿಯವನು ಅಡೊನಿಸ್, ಕಿರಿಯವನು ಸಾಲೊಮನ್. ಇವರಿಬ್ಬರಲ್ಲಿ ತನ್ನ ಉತ್ತರಾಧಿಕಾರಿಯನ್ನಾಗಿ ಯಾರನ್ನು ಆಯ್ಕೆ ಮಾಡಲಿ ಎಂಬ ಚಿಂತೆ ಅವನನ್ನು ಕಾಡತೊಡಗಿತು. ಅದಕ್ಕಾಗಿ ಅವನೊಂದು ಉಪಾಯ ಹೂಡಿದನು.

ಒಂದು ಮೇಜಿನ ಮೇಲೆ ಕೆಂಪು ರೂಬಿ, ಖಡ್ಗ, ಕಿರೀಟಗಳನ್ನೂ; ಇನ್ನೊಂದು ಮೇಜಿನ ಮೇಲೆ ಒಂದು ರೊಟ್ಟಿ ಚೂರು, ಕೋಲು ಮತ್ತು ರೈತನ ರುಮಾಲನ್ನೂ ಇಟ್ಟನು. ಮತ್ತು ತನ್ನಿಬ್ಬರು ಮಕ್ಕಳನ್ನೂ ಬರಲು ಹೇಳಿದನು. ಅಡೊನಿಸ್ ಮತ್ತು ಸಾಲೊಮನ್ ಬಂದು ತಂದೆ ಎದುರು ಕೈಕಟ್ಟಿ, ತಲೆಬಾಗಿ ನಿಂತರು.

“ಮಕ್ಕಳೇ, ಈ ಮೇಜುಗಳ ಮೇಲೆ ಕೆಲವು ವಸ್ತುಗಳನ್ನು ಇರಿಸಿದ್ದೇನೆ. ನೀವು ಯಾರು ಯಾವ ಮೇಜಿನ ವಸ್ತುಗಳನ್ನು ಆಯ್ದುಕೊಳ್ಳಲು ಬಯಸುತ್ತೀರಿ? ನನ್ನ ಕಾಲ ಮುಗಿಯುತ್ತಾ ಬಂತು. ಹೊರಡುವ ಮುನ್ನ ಕೆಲವು ಏರ್ಪಾಟುಗಳನ್ನು ಮಾಡಬೇಕಿದೆ”  ಎಂದನು ದಾವೂದ್.

ಅಡೊನಿಸ್ ಮುಂದೆ ಬಂದು “ನಾನು ರೂಬಿ, ಖಡ್ಗ ಹಾಗೂ ಕಿರೀಟಗಳನ್ನು ತೆಗೆದುಕೊಳ್ಳುತ್ತೇನೆ. ಕಿರೀಟ ತೊಟ್ಟು ನಿಮ್ಮ ವಂಶದ ಮೊದಲ ರಾಜಕುಮಾರನಾಗುತ್ತೇನೆ. ರೂಬಿಯನ್ನು ಆಸ್ಥಾನದಲ್ಲಿ ಸಂಪತ್ತಿಗಾಗಿ ಇರಿಸುತ್ತೇನೆ. ಹಾಗೂ ಖಡ್ಗವನ್ನು ಹಿಡಿದು ಶತ್ರುಗಳಿಂದ ರಾಜ್ಯರಕ್ಷಣೆ ಮಾಡುತ್ತೇನೆ” ಎಂದ.

ಸಾಲೊಮನ್, “ನನಗೆ ರೊಟ್ಟಿ ಚೂರು, ರೈತನ ರುಮಾಲು ಮತ್ತು ಕೋಲು ಬಹಳ ಮಹತ್ವದ ವಸ್ತುಗಳಾಗಿವೆ. ರೊಟ್ಟಿ ನಮ್ಮ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ. ಅದರ ಮಹತ್ವವನ್ನು ನೆನಪಿಡಲಿಕ್ಕಾಗಿ ರೊಟ್ಟಿ ಚೂರನ್ನು ಇರಿಸಿಕೊಳ್ಳುತ್ತೇನೆ. ರೈತನ ರುಮಾಲು ದೇಶದ ಸಾಮಾನ್ಯ ಪ್ರಜೆಯೊಬ್ಬನ ಬೆವರಿನ ಶ್ರಮವನ್ನು ಸೂಚಿಸುತ್ತದೆ. ರಾಜ್ಯವು ಸುಭಿಕ್ಷವಾಗಿರುವುದು ಹೊಣೆಯರಿತು ದುಡಿಯುವ – ನಡೆಯುವ ಪ್ರಜೆಗಳಿಂದಲೇ ಹೊರತು ಸಾಮ್ರಾಟರಿಂದಲ್ಲ. ಹಾಗೆಯೇ ಯುದ್ಧಕ್ಕೆಳೆಸುವ, ಜೀವ ಹಾನಿಗೆ ಹೊಣೆಯಾಗುವ ಖಡ್ಗ ನನಗೆ ಬೇಡ. ವೃದ್ಧಾಪ್ಯದಲ್ಲಿ ಆಸರೆಯಾಗುವ ಊರುಗೋಲು ಬೇಕಾದಷ್ಟಾಯಿತು” ಎಂದ.

ಇಬ್ಬರ ಮಾತುಗಳನ್ನು ಕೇಳಿದ ದಾವೂದ್ ಎರಡು ನಿಮಿಷ ಮೌನಕ್ಕೆ ಜಾರಿದ. ನಂತರ ಸಾಲೊಮನ್ನನ ಬೆರಳಿಗೆ ತನ್ನ ರಾಜಮುದ್ರೆ ತೊಡಿಸುತ್ತಾ, “ಶಾಂತಿಪ್ರಿಯನಾದ ನನ್ನ ಮಗನೇ, ನಿನಗೆ ರೊಟ್ಟಿಯ ಬೆಲೆ ಗೊತ್ತಿದೆ. ಶ್ರಮದ ಬೆಲೆ ಗೊತ್ತಿದೆ. ನೀನೇ ನನಗೆ ಸೂಕ್ತ ಉತ್ತರಾಧಿಕಾರಿ” ಎನ್ನುತ್ತಾ ಆತನಿಗೆ ರಾಜನ ಪಟ್ಟ ಕಟ್ಟಿದ.

1 Comment

Leave a Reply