ಪ್ರೇಮವೇ ಭಗವಂತನೆಂದ ಸೂಫಿ : ರಾಬಿಯಾ

ರಾಬಿಯಾ ಯಾವಾಗಲೂ ಒಂದು ಕೈಲಿ ಕೊಳ್ಳಿ, ಒಂದು ಕೈಲಿ ಹೂಜಿ ಹೊತ್ತುಕೊಂಡು ಅಲೆಯುತ್ತಿದ್ದಳು. ಯಾಕೆ ಅಂತ ಕೇಳಿದರೆ, “ನರಕದ ಭಯದಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ನರಕದ ಬೆಂಕಿ ನಂದಿಸಲಿಕ್ಕೆ; ಮತ್ತು ಸ್ವರ್ಗದ ಆಸೆಯಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ಸ್ವರ್ಗವನ್ನ ಸುಟ್ಟುಹಾಕಲಿಕ್ಕೆ ಅನ್ನುತ್ತಿದ್ದಳು! ~ ಚೇತನಾ 

rabiabarsi.jpgರಾಬಿಯಾ ಅಲ್ ಬಸ್ರಿ, ಇರಾಕ್ ದೇಶದ ಬಸ್ರ್ ಪಟ್ಟಣದಲ್ಲಿ ಹುಟ್ಟಿ ಬೆಳೆದ ಹೆಣ್ಣುಮಗಳು. ಚಿಕ್ಕವಳಿರುವಾಗಲೇ ಅವಳಪ್ಪ ಅಮ್ಮ ಸತ್ತುಹೋಗ್ತಾರೆ. ರಾಬಿಯಾ ಶ್ರೀಮಂತನ ಮನೆಯೊಂದರಲ್ಲಿ ಗುಲಾಮಳಾಗಿ ಬೆಳೆದುಕೊಳ್ತಾಳೆ. ದೇಹಕ್ಕೆ ಗುಲಾಮಗಿರಿ ಕಟ್ಟಬಹುದು, ಮನಸಿಗೆ ಯಾರ ಜೀತ? ರಾಬಿಯಾ ಪ್ರಜ್ಞಾವಂತೆ. ಎಷ್ಟು ಎಚ್ಚರದ ಹೆಣ್ಣೆಂದರೆ, ಅವಳ ಮಾಲೀಕ ಅವಳನ್ನ ದಂಡಿಸಲು ಚಿಕ್ಕ ಅವಕಾಶವನ್ನೂ ಉಳಿಸಲಿಲ್ಲ ರಾಬಿಯಾ. ಆಮೇಲಾಮೇಲೆ ಮಾಲೀಕ ಇವಳನ್ನು ಆಳುವ ಸಾಮರ್ಥ್ಯ ತನಗಿಲ್ಲವೆಂದು ಮನಗಂಡ. ಸರಿಯೇ! ಅಂತರಂಗದಲ್ಲಿ ಸರ್ವತಂತ್ರ ಸ್ವತಂತ್ರರಾಗಿರುವವರನ್ನ ಯಾರು ತಾನೆ ಬಾಹ್ಯದಲ್ಲಿ ಆಳಬಲ್ಲರು!? 
ರಾಬಿಯಾಳದ್ದು ಪ್ರೇಮತಪ್ತ ಅಧ್ಯಾತ್ಮ. ಅನಾಥೆಯಾಗಿ ಬೆಳೆದ ಹೆಣ್ಣು ಜಗತ್ತಿನದೇ ಕುಟುಂಬ ಕಟ್ಟಿಕೊಳ್ಳಲು ಬಯಸಿದಳು. ಇದಕ್ಕವಳು ಆಯ್ದುಕೊಂಡ ಸಂಗಾತಿ ಜಗತ್ತು ಹುಟ್ಟಿಸಿದವನಲ್ಲದೆ ಮತ್ಯಾರು? 
ಅಲ್ಲಾಹನ ಪ್ರೇಮದಲ್ಲಿ ಮತ್ತಳಾದ ರಾಬಿಯಾ ಪದ್ಯಗಳನ್ನೂ ಬರೆದಿದ್ದಾಳೆ. ಸೂಫಿ ಸಾಹಿತ್ಯದಲ್ಲಿ, ಸೂಫೀ ಪರಂಪರೆಯಲ್ಲಿ ಇವಳಿಗೊಂದು ಮಹತ್ವದ ಸ್ಥಾನವಿದೆ. 
~

ರಾಬಿಯಾ ಯಾವಾಗಲೂ ಒಂದು ಕೈಲಿ ಕೊಳ್ಳಿ, ಒಂದು ಕೈಲಿ ಹೂಜಿ ಹೊತ್ತುಕೊಂಡು ಅಲೆಯುತ್ತಿದ್ದಳು. ಯಾಕೆ ಅಂತ ಕೇಳಿದರೆ, “ನರಕದ ಭಯದಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ನರಕದ ಬೆಂಕಿ ನಂದಿಸಲಿಕ್ಕೆ; ಮತ್ತು ಸ್ವರ್ಗದ ಆಸೆಯಿಂದ ದೇವರನ್ನ ಪ್ರೇಮಿಸೋದಾದರೆ ಅಂಥಾ ಸ್ವರ್ಗವನ್ನ ಸುಟ್ಟುಹಾಕಲಿಕ್ಕೆ. ದೇವನಿಗಾಗಿಯಷ್ಟೆ ಅವನನ್ನ ಪ್ರೇಮಿಸಬೇಕು. ಶಿಕ್ಷೆಯ ಭಯದಿಂದ ಅಥವಾ ಬಹುಮಾನದ ಆಸೆಯಿಂದ ಅಲ್ಲ. ಇದನ್ನ ಜನರಿಗೆ ನೆನಪಿಸಲಿಕ್ಕೆ ಮತ್ತು ನನಗೆ ನಾನೇ ಮರೆಯದೆ ಇರೋದಕ್ಕಾಗಿಯೂ ಇವನ್ನ ಹೊತ್ತುಕೊಂಡು ಅಲೀತೀನಿ” ಅನ್ನುತ್ತಿದ್ದಳು. 
~

ಒಮ್ಮೆ ರಾಬಿಯಾಳನ್ನು ಯಾರೋ ಕೇಳಿದರು, `ನೀನು ದೇವರನ್ನು ಪ್ರೀತಿಸ್ತೀಯಾ?’ 
ಅವಳಂದಳು, `ಹೌದು’. 
`ಹಾಗಾದರೆ ಸೈತಾನನ್ನು ದ್ವೇಷಿಸ್ತೀಯಾ?’ ಮತ್ತೊಂದು ಪ್ರಶ್ನೆ. 
ಇದನ್ನು ಕೇಳಿ ನಗುತ್ತಾಳೆ ರಾಬಿಯಾ. 
`ದೇವರನ್ನು ಪ್ರೀತಿಸುತ್ತೀನೆಂದರೆ ಎಲ್ಲವನ್ನೂ ಪ್ರೀತಿಸಿದಂತೆಯೇ ಅಲ್ವೆ? ನನ್ನ ಹೃದಯದಲ್ಲಿ ಅದೆಷ್ಟು ಪ್ರೇಮ ತುಂಬಿಕೊಂಡಿದೆಯೆಂದರೆ, ಯಾರ ಬಗೆಗಾದರೂ ದ್ವೇಷ ತುಂಬಿಕೊಳ್ಳಲು ಅಲ್ಲಿ ಜಾಗವೇ ಇಲ್ಲ! ಸೈತಾನನನ್ನು ಕೂಡಾ… “
~

ರಾಬಿಯಾಳ ಪ್ರೇಮ ಶ್ರದ್ಧೆ ಅದೆಷ್ಟೆಂದು ನೋಡಿ!
ಒಮ್ಮೆ ಅವಳು ಕುರಾನ್ ಹಸ್ತ ಪ್ರತಿಯ ಕೆಲವು ಹಾಳೆಗಳನ್ನು ಹರಿಯುತ್ತ ಕೂತಿದ್ದಳು. ಮೌಲ್ವಿ ಬಂದು ಗದರಿದ. ಕುರಾನ್ ಹರಿಯುವುದು ತಪ್ಪು ಅಂದ. 
“ಕುರಾನ್ ನನ್ನ ಅಲ್ಲಾಹನ ಸಂದೇಶ. ಅಲ್ಲಿ ಪ್ರೇಮಕ್ಕೆ, ಒಳಿತಿಗಷ್ಟೆ ಜಾಗ. ನನ್ನ ದೇವನಿರುವಲ್ಲಿ ದ್ವೇಷ ಮತ್ತು ಸೈತಾನನ ಉಲ್ಲೇಖಕ್ಕೂ ಅವಕಾಶವಿಲ್ಲ” ತಣ್ಣಗೆ ಉತ್ತರಿಸಿದಳು ರಾಬಿಯಾ. 

Leave a Reply