ದೇವರು ಅಂದರೆ ಬದನೆಕಾಯಿ

 

Mullaದೊಂದು ಸಂಜೆ ಊರಿನ ವಿದ್ವಾಂಸರೆಲ್ಲ ಸೇರಿ ಒಂದು ಸಭೆಯನ್ನು ಏರ್ಪಡಿಸಿದ್ದರು. ಅವರ ಚರ್ಚೆಯ ವಸ್ತು “ದೇವರ ಸ್ವರೂಪ” ಎಂಬುದಾಗಿತ್ತು.

ಒಬ್ಬರಾದಮೇಲೆ ಒಬ್ಬರು ಪಂಡಿತರು ಗಹನವಾಗಿ ವಿಚಾರ ಮಂಡನೆ ಮಾಡಿದರು. ವೀಕ್ಷಕರಾಗಿ ಬಂದಿದ್ದವರೆಲ್ಲ ತಮ್ಮ ಮುಂಡಾಸಿನೊಳಗೆ ಕೈತೂರಿ ಕೆರೆದುಕೊಂಡು ಜಾಗ ಮಾಡಿಕೊಟ್ಟರೂ ಒಂದಕ್ಷರ ತಲೆಯೊಳಗೆ ಹೋಗಲಿಲ್ಲ.

ಕೊನೆಗೆ ಮುಲ್ಲಾ ನಸ್ರುದ್ದೀನನ ಸರದಿ ಬಂತು.

ಮುಲ್ಲಾ ಠೀವಿಯಿಂದ ಎದ್ದು ನಿಂತ.

“ದೇವರೆಂದರೆ…” ಎಂದು ಶುರು ಮಾಡಿದ. ಮುಂದೇನು ಹೇಳಬೇಕೆಂದು ತೋಚದೆ ಗಂಟಲು ಸರಿ ಮಾಡಿಕೊಂಡು ಜನರತ್ತ ನೋಡಿದ. ಕೊನೆಗೆ ಏನೋ ನೆನಪಾದವರಂತೆ ತನ್ನ ನಿಲುವಂಗಿಯ ಜೇಬಿಗೆ ಕೈಹಾಕಿ “ದೇವರೆಂದರೆ ಈ ಬದನೇಕಾಯಿ” ಎನ್ನುತ್ತಾ ಒಂದು ಬದನೆಕಾಯಿಯನ್ನು ಹೊರತೆಗೆದ.

ಊರಜನರೆಲ್ಲ ಹೋ ಎಂದು ನಕ್ಕರು. ಪಂಡಿತರು ಸಿಟ್ಟಾದರು. ಸಭೆಯಲ್ಲಿ ಗದ್ದಲ ಶುರುವಾಯಿತು.

ಅವರಲ್ಲೊಬ್ಬ ಹಿರಿಯ ಎದ್ದು ನಿಂತು ಎಲ್ಲರನ್ನೂ ಸುಮ್ಮನಾಗಿಸುತ್ತಾ ಹೇಳಿದ, “ನಸ್ರುದ್ದೀನ್, ನಿನ್ನ ಮಾತಿನ ಅರ್ಥವನ್ನು ವಿವರಿಸು”

ನಸ್ರುದ್ದೀನ್ ಬದನೆ ಕಾಯಿಯನ್ನು ಎಲ್ಲರ ಮುಂದೆ ಹಿಡಿಯುತ್ತಾ ಕೇಳಿದ, “ನಿಮಗೆಲ್ಲರಿಗೂ ಬದನೆಕಾಯಿ ಗೊತ್ತಲ್ಲವೆ?”

ಜನ ಹೂಂಗುಟ್ಟಿದರು.

ಉತ್ಸಾಹಿತನಾದ ನಸ್ರುದ್ದೀನ್ ಮುಂದುವರೆದ; “ಇಷ್ಟೊತ್ತಿನವರೆಗೆ ಈ ಪಂಡಿತರೆಲ್ಲ ದೇವರ ಸ್ವರೂಪದ ಬಗೆಗೆ ನಾವು ನೋಡದ, ನೋಡಲಾಗದ ಆಧಾರಗಳನ್ನು ಕೊಡುತ್ತಾ ಮಾತನಾಡಿದರು. ದೇವರು ಎಲ್ಲ ಕಡೆಯೂ ಇದ್ದಾನೆ ಅಂದ ಮೇಲೆ ಈ ಬದನೆಕಾಯಿಯಲ್ಲೂ ಇದ್ದಾನೆ. ಆದ್ದರಿಂದ, ದೇವರ ಸ್ವರೂಪವನ್ನು ನಿಮಗೆ ಕಣ್ಣಿಗೆ ಕಟ್ಟುವಂತೆ ನಾನು ವಿವರಿಸುತ್ತಿದ್ದೇನೆ. ಸರಿಯಾಗಿ ನೋಡಿಕೊಳ್ಳಿ, ದೇವರೆಂದರೆ ಈ ಬದನೆಕಾಯಿ” ಎಂದು ಆತ್ಮವಿಶ್ವಾಸದಿಂದ ಹೇಳಿದ ಮುಲ್ಲಾ. 

 

1 Comment

Leave a Reply