ಸಾಧನೆಯ ಹಾದಿಯಲ್ಲಿ ನಮಗೆ ದೊಡ್ಡ ಅಡ್ಡಿಯೆಂದರೆ ಭಯ. ನಾವು ನಿರ್ಭೀತರಾಗಿರಬೇಕು. ಆಗ ಮಾತ್ರ ನಮ್ಮ ಕೆಲಸ ಪರಿಪೂರ್ಣವಾಗುವುದು.
ಮುಂದೆ ಏನಾಗುತ್ತದೆ ಎಂಬುದನ್ನೇ ಯೋಚಿಸುತ್ತಾ ಕುಳಿತುಕೊಂಡರೆ ಯಾವ ಕೆಲಸವೂ ಸಾಗುವುದಿಲ್ಲ. ಯಾವುದು ಸತ್ಯ, ಯಾವುದು ಸರಿ ಎಂದು ನೀವು ಖಚಿತವಾಗಿ ನಂಬಿದ್ದೀರೋ ಅದನ್ನು ಈ ಕ್ಷಣವೇ ಮಾಡಿಬಿಡಿ. ಮುಂದೆ ಏನಾಗುತ್ತದೆ, ಏನಾಗುವುದಿಲ್ಲ ಎಂದು ಯಾಕೆ ಯೋಚಿಸಬೇಕು? ಜೀವನವಿರುವುದು ಕೆಲವೇ ವರ್ಷಗಳ ಕಾಲ ಮಾತ್ರ. ಅದರಲ್ಲಿ ಫಲಾಫಲಗಳನ್ನು ಎಣಿಸುತ್ತಾ ಯಾರಾದರೂ ಕೆಲಸ ಮಾಡುವುದು ಸಾಧ್ಯವೇ? ಆದ್ದರಿಂದ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸವನ್ನು ಮಾಡುತ್ತಾ ಹೋಗಿ.
ಉಪನಿಷತ್ತಿನ ಮಂತ್ರಗಳು ಶಕ್ತಿಗೆ ಹೆಚ್ಚಿನ ಒತ್ತು ಕೊಟ್ಟಿವೆ.
ಉಪನಿಷತ್ತಿನ ಒಂದು ಸಂಭಾಷಣೆ ಹೀಗಿದೆ:
“ಎಲೈ ಮಾನವ! ಶಕ್ತನಾಗು, ದುರ್ಬಲನಾಗಬೇಡ”
“ಮಾನವಸಹಜ ದೌರ್ಬಲ್ಯಗಳು ಇವೆಯಲ್ಲವೇ?”
“ಹೌದು, ಇವೆ. ಆದರೆ ಹೆಚ್ಚಿನ ದೌರ್ಬಲ್ಯವು ಅದನ್ನು ಗುಣಪಡಿಸಬಹುದೆ? ಕೊಳೆಯಿಂದ ಕೊಳೆಯನ್ನು ತೊಳೆಯಬಲ್ಲೆಯಾ? ಪಾಪವು ಪಾಪವನ್ನು ಗುಣಪಡಿಸುವುದೆ? ಆದ್ದರಿಂದ ಎಲೈ ಮಾನವ, ಶಕ್ತನಾಗು. ಎದ್ದು ನಿಲ್ಲು. ಧೀರನಾಗು.”
ಇದು ಉಪನಿಷತ್ತಿನ ಸಂದೇಶ. “ಅಭೀಃ – ನಿರ್ಭೀತರಾಗಿರಿ”. ನಿರ್ಭಯತೆಯೇ ಆಸರೆ – “ಅಭಯಂ ಪ್ರತಿಷ್ಠಾಂ”. ಯಾರು ತಮ್ಮ ಜೀವನದಲ್ಲಿ ವಿಪರೀತ ಎಚ್ಚರಿಕೆಯ ಕಾಳಜಿ ವಹಿಸುವರೋ ಅವರೇ ತೊಂದರೆಗೆ ಸಿಲುಕುವುದು ಹೆಚ್ಚು. ಯಾರು ತಮ್ಮ ಗೌರವ – ಖ್ಯಾತಿಗಳು ಎಲ್ಲಿ ಹೋಗುವವೋ ಎಂದು ಹೆದರುವರೋ ಅವರೇ ಹೆಚ್ಚು ಅವಮಾನಕ್ಕೀಡಾಗುವರು. ಯಾರು ನಷ್ಕ್ಕೆ ಭಯಪಡುವರೋ ಅವರೇ ಹೆಚ್ಚು ನಷ್ಟಕ್ಕೀಡಾಗುವರು. ಆದ್ದರಿಂದ, ಹೆದರಬೇಡಿ. ಭಯಪಡಬೇಡಿ. ನಿರ್ಭೀತರಾಗಿರಿ.