ಒನ್ ವೇ ಲವ್ ‘ನಿಂದ ಉಂಟಾಗುವ ಹತಾಶೆ ವ್ಯಕ್ತಿಯನ್ನು ಕ್ರೂರಿಯನ್ನಾಗಿಸುವ ಸಾಧ್ಯತೆ ಇರುತ್ತದೆ. ಅಥವಾ ಅದು ತೀವ್ರ ಖಿನ್ನತೆಗೆ ದೂಡುವುದೂ ಉಂಟು. ಇದರಿಂದ ಹೊರಬರಲು ಪರಿವರ್ತನ ಪ್ರಕ್ರಿಯೆಯ ಧ್ಯಾನ ಸಹಾಯ ಮಾಡುತ್ತದೆ ~ ಚಿತ್ಕಲಾ
ಪ್ರೇಮ ಏಕಮುಖ ಆಗಿರುವಾಗ, ಅದು ನೀಡುವ ನೋವು ಹತಾಶೆಗಳಿಂದ ಹೊರಬರಲು ‘ಪರಿವರ್ತನ’ ಧ್ಯಾನ ನಿಮಗೆ ಸಹಾಯ ಮಾಡುತ್ತದೆ. ಇದು ಕಠಿಣವಾದುದೇನೂ ಅಲ್ಲ. ಮುಖ್ಯವಾಗಿ ನೀವು ಅದರಿಂದ ಹೊರಕ್ಕೆ ಬರಲು ಮನಸ್ಸು ಮಾಡಬೇಕಷ್ಟೆ.
ಪರಿವರ್ತನ ಪ್ರಕ್ರಿಯೆ, ಹೆಸರೇ ಹೇಳುವಂತೆ ಒಂದು ಪ್ರಕ್ರಿಯೆ. ಇದೊಂದು ಪ್ರೊಸೀಜರ್. ಈ ಧ್ಯಾನ ಒಂದಷ್ಟು ಹೊತ್ತು, ಒಂದು ಕಡೆ ಕುಳಿತು ಮಾಡುವಂಥದ್ದಲ್ಲ. ಇದು ದಿನಪೂರ್ತಿ ಪ್ರಜ್ಞಾಪೂರ್ವಕವಾಗಿ ನಮ್ಮ ಆಲೋಚನೆಗಳ ಮೇಲೆ ಗಮನ ಹರಿಸುವ ಮೂಲಕ ಪರಿವರ್ತನೆಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆಯನ್ನು ಹೊಂದಿದೆ. ಇದನ್ನು ಕ್ರಿಯಾತ್ಮಕ ಅಥವಾ ಪ್ರಕ್ರಿಯಾತ್ಮಕ ಧ್ಯಾನ ಎಂದೂ ಕರೆಯಬಹುದು. ಈ ಪ್ರಕ್ರಿಯೆಯಲ್ಲಿ ನೀವು ಸಾಧ್ಯವಾದಷ್ಟೂ ಲವಲವಿಕೆಯ ವಾತಾವರಣದಲ್ಲಿರಲು ಪ್ರಯತ್ನಿಸಬೇಕು. ಇದು ದಿನಪೂರ್ತಿ ನಿಮ್ಮೊಡನೆ ನೀವು ಇರುವ ಧ್ಯಾನ. ಪ್ರಜ್ಞಾಪೂರ್ವಕವಾಗಿ ನಿಮ್ಮ ಪ್ರತಿಯೊಂದು ಕೆಲಸವನ್ನು ಗಮನಿಸುತ್ತಾ ನಿಮಗೆ ನೀವು ಜೊತೆಯಾಗುವ ಧ್ಯಾನ.
ನೀವು ಯಾರನ್ನಾದರೂ ಅತ್ಯಂತ ಗಾಢವಾಗಿ ಪ್ರೇಮಿಸುತ್ತಿದ್ದರೆ ಅವರ ನೆನಪು ಪ್ರತಿಕ್ಷಣ ನಿಮ್ಮ ಸುಪ್ತ ಮನಸ್ಸಿನಲ್ಲಿ ಹರಿಯುತ್ತಲೇ ಇರುತ್ತದೆ. ಬೆಳಗೆ ಎದ್ದ ಕೂಡಲೆ ನಿಮಗೆ ಅವರ ನೆನಪಾಗುತ್ತದೆ. ಅಥವಾ ದಿನದ ಕೆಲಸದಲ್ಲಿ ತೊಡಗಿಕೊಂಡಾಗ ಅವರ ನೆನಪಾಗಿ, ಅವರು ನಿಮಗೆ ಸಿಗಲಾರರು ಎಂಬ ಅರಿವೂ ಹಿಂಬಾಲಿಸಿ ಬಂದು ನಿಮ್ಮ ದಿನ ವಿಷಾದದ ಛಾಯೆಯೊಂದಿಗೆ ಶುರುವಾಗುತ್ತದೆ.
ಆದ್ದರಿಂದ ಹೀಗೆ ಮಾಡಿ. ಬೆಳಗ್ಗೆ ನಿಮಗೆ ಅವರ ನೆನಪಾದಾಗ ಅದರಿಂದ ತಪ್ಪಿಸಿಕೊಳ್ಳಲು ಯತ್ನಿಸಬೇಡಿ. ನೀವು ತಪ್ಪಿಸಿಕೊಂಡಷ್ಟೂ ಅದು ನಿಮ್ಮ ಬೆನ್ನಟ್ಟುತ್ತದೆ. ನೆನಪನ್ನು ಗಮನಿಸುತ್ತಾ ಇರಿ. ಅವರೊಡನೆ ಕಳೆದ ಕ್ಷಣ, ಅವರ ಜೊತೆಗಿನ ಮಾತುಕಥೆ, ಮೆಸೇಜ್’ಗಳು, ಅವರ ಹಾವಭಾವ… ಏನೆಲ್ಲ ನೆನಪಾಗುತ್ತದೆಯೋ ಆಗಲಿ. ಅದನ್ನು ತುಂಡರಿಸಲು ಹೋಗಬೇಡಿ. ಈ ನೆನಪಿನ ಚಿತ್ರಗಳ ಓಟ ಕೊನೆಗೊಳ್ಳುವಾಗ ನಿಮ್ಮ ಉಸಿರಾಟವನ್ನು ಗಮನಿಸಿ. ನೀವು ಉದ್ವೇಗಕ್ಕೆ ಒಳಗಾಗಿರುವುದು ಉಸಿರಾಟದ ಏರುಪೇರಿನಿಂದ ಗೊತ್ತಾಗುತ್ತದೆ. ಮೊದಲು ಉಸಿರಾಟವನ್ನು ತಹಬಂದಿಗೆ ತಂದುಕೊಳ್ಳಿ. ಈ ಪ್ರಕ್ರಿಯೆಯು ದುಃಖ ತರಲಿದ್ದ ನೆನಪಿನ ಸರಣಿಯನ್ನು ಮತ್ತೆ ಉಲ್ಲಸಿತ ಚಿತ್ರಗಳ ನೆನವರಿಕೆಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೆ.
ಮತ್ತೆ ನೀವು ಕೆಲಸ, ಓದು ಅಥವಾ ಇನ್ಯಾವುದೇ ಚಟುವಟಿಕೆಯಲ್ಲಿ ತೊಡಗಿರುವಾಗ ಕೈಗೆಟುಕದ ಪ್ರೇಮಿಯ ನೆನಪಾದರೆ, ಆ ನೆನಪನ್ನು ಸಂಜೆಯ ಒಂದು ನಿಗದಿತ ಸಮಯದಲ್ಲಿ ಮುಂದುವರೆಸಿಕೊಳ್ಳುವುದಾಗಿ ನಿಮ್ಮ ಮನಸ್ಸಿಗೆ ಹೇಳಿ. ಉದಾ: ಮಧ್ಯಾಹ್ನ ಹನ್ನೆರಡೂವರೆಗೆ ನಿಮಗೆ ನೆನಪು ಕಾಡತೊಡಗಿದರೆ, “ಮನಸೇ! ಕೊಂಚ ತಾಳು. ಸಂಜೆ ಆರೂ ಮುಕ್ಕಾಲಿಗೆ ಈ ನೆನಪುಗಳ ಸುರುಳಿ ಬಿಚ್ಚೋಣ” ಎಂದು ಕನ್ವಿನ್ಸ್ ಮಾಡಿ. ಹಾಗೂ ನೀವು ಮಾಡುತ್ತಿರುವ ಕೆಲಸದಲ್ಲಿ ಗಮನವನ್ನು ಕೇಂದ್ರೀಕರಿಸಿ. ನಿಮ್ಮ ಏಕಾಗ್ರತೆಯೆಲ್ಲ ಕೆಲಸದ ಮೇಲೆ ನೆಟ್ಟಾಗ, ಗಮನವೂ ಪರಿವರ್ತನೆಗೊಂಡು ನೀವು ಹತಾಶೆಯಿಂದ ಮುಕ್ತರಾಗುತ್ತೀರಿ. ಆದರೆ ಇದನ್ನು ನೀವು, ಹೀಗೆ ಮನಸ್ಸಿನ ಗಮನ ತಿರುಗಿಸುವುದು ತನ್ನಿಂತಾನೇ ರೂಢಿಯಾಗುವ ವರೆಗೂ ಕೃತಕವಾಗಿ ಮಾಡಲೇಬೇಕಾಗುತ್ತದೆ. ಹತ್ತು ದಿನಗಳಲ್ಲಿ ನಿಮಗದು ರೂಢಿಯೂ ಆಗುತ್ತದೆ. ಕ್ರಮೇಣ ನಿಮಗೆ ಹಾಗೆ ಕೈಗೆಟುಕದ ಪ್ರೇಮಿಗಾಗಿ ಕೊರಗುವುದು ಒಂದು ಅತಿರೇಕದಂತೆ ಕಾಣತೊಡಗುತ್ತದೆ. ಪ್ರೇಮವನ್ನು ಉಳಿಸಿಕೊಂಡು, ಕೊರಗನ್ನು ಹೊರದೂಡಿ ನಿರುಮ್ಮಳವಾಗಿರುವುದು ಸಾಧ್ಯವಾಗುತ್ತದೆ.
ನೆನಪಿಡಬೇಕಾದ ಅಂಶ: ಈ ಧ್ಯಾನ ಒಂದು ಚಿಕಿತ್ಸಾ ಧ್ಯಾನ. ಇದನ್ನು ಮಾಡುವ ಅವಧಿಯಲ್ಲಿ ನೀವು ಯಾವ ಕಾರಣಕ್ಕೂ ನಿಮ್ಮ ಸ್ವಾನುಕಂಪ ಹೆಚ್ಚಿಸುವಂಥ ಸಿನೆಮಾ ನೋಡುವುದು, ಸಾಹಿತ್ಯ ಓದುವುದು ಮಾಡಬೇಡಿ. ಏಕಮುಖ ಪ್ರೇಮದ ವೈಫಲ್ಯ ಬದುಕಿನ ವೈಫಲ್ಯವಲ್ಲ. ಅದಕ್ಕಾಗಿ ನೀವು ಸ್ವಾನುಕಂಪ ಪಡುವ ಅಗತ್ಯವಿಲ್ಲ. ಹಾಗೆಯೇ ವಿಷಾದ ಗೀತೆಗಳನ್ನು (ಗಜಲ್ ಥರದ) ಕೂಡಾ ಅವಾಯ್ಡ್ ಮಾಡಿ. ಲವಲವಿಕೆಯ ವಾತಾವರಣದಲ್ಲಿರಲು ಪ್ರಯತ್ನಿಸಿ.
ಹಿಂದಿನ ಕಂತನ್ನು ಇಲ್ಲಿ ಓದಿ : https://aralimara.com/2018/04/03/lovehealing/