ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?

Ra um final

~ ಯಾದಿರಾ

ರಾ-ಉಮ್ ಎದುರು ಪ್ರಶ್ನೆಗಳನ್ನಿಡುವುದೆಂದರೆ ಶಿಷ್ಯರಿಗೆ ಬಹಳ ಇಷ್ಟ. ಗಂಭೀರ ಜಿಜ್ಞಾಸೆಯ ಲೇಪ ಹಚ್ಚಿಕೊಂಡು ಬರುವ ಪ್ರಶ್ನೆಗಳ ಮೂರ್ಖ ಆಯಾಮವನ್ನು ಅನಾವರಣಗೊಳಿಸುವ ಶಕ್ತಿ ರಾ-ಉಮ್‌ಗೆ ಇದ್ದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆಯೇ ಮೂರ್ಖ ಪ್ರಶ್ನೆ ಎಂದು ಎಲ್ಲರೂ ಭಾವಿಸಿದ್ದ ಪ್ರಶ್ನೆಯಲ್ಲಿರುವ ಗಂಭೀರ ಜಿಜ್ಞಾಸೆಯನ್ನು ಗುರುತಿಸಿ ಉತ್ತರಿಸುವ ಸೂಕ್ಷ್ಮ ಒಳನೋಟವೂ ಆಕೆಗಿತ್ತು.

ಸಂಜೆಯ ಹೊತ್ತಿನ ಪ್ರಶ್ನೋತ್ತರದಲ್ಲಿ ಹೊಸತಾಗಿ ಆಶ್ರಮ ಸೇರಿದ್ದ ವಿದ್ಯಾರ್ಥಿ ಒಂದು ಪ್ರಶ್ನೆ ಎತ್ತಿದ. ‘ಮನುಷ್ಯನಿಗೆ ಜೀವನದಲ್ಲಿ ಅತಿ ಮುಖ್ಯವಾದ ದಿನಗಳು ಯಾವುವು?’

ರಾ-ಉಮ್ ಪಾನೀಯದ ಬುರುಡೆಯೆದುರು ಧ್ಯಾನಸ್ತ ಸ್ಥಿತಿಯಲ್ಲಿ ಕುಳಿತಿದ್ದಳು. ಕೆಲವು ಹಿರಿಯ ಶಿಷ್ಯರು ಈ ಪ್ರಶ್ನೆಗೆ ಉತ್ತರಿಸುವ ಪ್ರಯತ್ನ ಮಾಡಿದರು. ಬದುಕಿನ ವಿವಿಧ ಸಂಸ್ಕಾರಗಳನ್ನು ಪಡೆಯಲು ಆರಂಭಿಸುವ ದಿನಗಳು ಯಾಕೆ ಮುಖ್ಯ ಅಥವಾ ಅಮುಖ್ಯ ಎಂಬ ಚರ್ಚೆ ಆರಂಭವಾಯಿತು. ಯಾರೊಬ್ಬರಿಂದಲೂ ಹೊಸ ವಿದ್ಯಾರ್ಥಿಯ ಜಿಜ್ಞಾಸೆಗೆ ಉತ್ತರ ಬರಲಿಲ್ಲ.

ಸ್ವಲ್ಪ ಹೊತ್ತಿನ ನಂತರ ರಾ-ಉಮ್ ಪ್ರಶ್ನೆ ಕೇಳಿದವನನ್ನು ಹತ್ತಿರ ಕರೆದು ತನ್ನೆದೆರು ಕುಳ್ಳಿರಿಸಿ ಹೇಳಿದಳು. ‘ನಿನ್ನ ಬದುಕಿನಲ್ಲಿ ಎರಡು ಬಹಮುಖ್ಯವಾದ ದಿನಗಳಿರುತ್ತವೆ. ಒಂದು ನೀನು ಹುಟ್ಟಿದ ದಿನ. ಮತ್ತೊಂದು ನೀನೇಕೆ ಹುಟ್ಟಿದೆ ಎಂದು ತಿಳಿದುಕೊಂಡ ದಿನ’.

ಆ ಶಿಷ್ಯ ಭಯಮುಕ್ತನಾಗಿ ರಾ-ಉಮ್‌ನ ಬುರುಡೆಯನ್ನೆತ್ತಿ ಅದರಲ್ಲಿ ಉಳಿದಿದ್ದ ಎಲ್ಲವನ್ನೂ ಗಂಟಲಿಗಿಳಿಸಿದ.

1 Comment

Leave a Reply