ಕೃಷ್ಣನಲ್ಲಿ ಕುಂತೀದೇವಿಯ ಪ್ರಾರ್ಥನೆ

ಜೀವಿತದ ಅರ್ಧಕ್ಕಿಂತಲೂ ಹೆಚ್ಚು ಕಾಲ ತನ್ನ ಕುಟುಂಬದ, ತನ್ನ ಮಕ್ಕಳ ಅಧಿಕಾರ ಪ್ರಾಪ್ತಿಗಾಗಿ ಪರಿತಪಿಸಿದ್ದ ಕುಂತಿ ಅಂತ್ಯಕಾಲದಲ್ಲಿ ತನ್ನ ಈ ಸಾಂಸಾರಿಕ ಗುರುತನ್ನೆ ಅಳಿಸಿ ಹಾಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾಳೆ. `ನಾನು ಇಂತಹ ಮನೆತನಕ್ಕೆ ಸೇರಿದವಳು ಎನ್ನುವ ಭಾವನೆಯನ್ನು ಅಳಿಸಿ ಹಾಕು ಕೃಷ್ಣ’ ಎಂದಾಕೆ ಪ್ರಾರ್ಥಿಸುತ್ತಾಳೆ  ~ ಗಾಯತ್ರಿ

ವಿಪದಃ ಸಂತು ನಃ ಶಶ್ವತ್ ತತ್ರತತ್ರ ಜಗತ್ಪತೇ |
ಭವತೋ ದರ್ಶನಂ ಯತ್ ಸ್ಯಾದಪುನರ್ಭವದರ್ಶನಮ್ ||
`ಜಗತ್ತಿಗೆ ಒಡೆಯನಾದವನೇ, ನೀನು ಏನಾದರೂ ಕೊಡುವುದಿದ್ದರೆ ನನ್ನ ಜೀವನದುದ್ದಕ್ಕೂ ಕಷ್ಟವನ್ನು ಕೊಡು’ ~ ಇದು ಕುಂತೀದೇವಿಯು ಕೃಷ್ಣನನ್ನು ಕುರಿತು ಮಾಡುವ ಪ್ರಾರ್ಥನೆ.  

kunti

ಕುಂತಿ ಹೀಗೇಕೆ ಕೇಳಿದಳು? ಕಷ್ಟವನ್ನು ಕೊಡುವ ಭಗವಂತನೇ ಅದನ್ನು ಎದುರಿಸುವ ಆತ್ಮಸ್ಥೈರ್ಯವನ್ನೂ ಕೊಡುವನು ಎಂಬ ಅರಿವು ಆಕೆಗಿದೆ. ಈ ಮುಖಾಮುಖಿಯಲ್ಲಿ ಭಗವಂತನನ್ನು ಅರಿಯುವ, ಆತನ ಸಾನ್ನಿಧ್ಯ – ಸ್ಮರಣೆಗಳಲ್ಲಿ ತೊಡಗುವ ಅವಕಾಶಗಳು ಹೆಚ್ಚು ಒದಗುತ್ತವೆ ಎಂಬುದು ಕುಂತೀದೇವಿಯ ತರ್ಕ. ಜಗತ್ತಿನ ಪಾಲಕನಾದ ನೀನು ಕೊಡುವ ಕಷ್ಟ ನಮಗೆ ರಕ್ಷಣೆಯೇ ಸರಿ. ಆ ಮೂಲಕ ಆತ ಸದಾ ನಮ್ಮನ್ನು ಅಹಂಕಾರ ಮುಕ್ತನಾಗಿಸಿ ಶರಣಾಗತ ಭಾವದಲ್ಲಿರಿಸುತ್ತಾನೆ ಎಂಬ ಭಾವನೆ ಕುಂತಿಯದು.
ಆದ್ದರಿಂದಲೇ ಆಕೆ, `ಯಾವ ಕಷ್ಟದಿಂದ ನಿನ್ನ ದರ್ಶನ ಸಾಧ್ಯವೋ ಅಂತಹ ಕಷ್ಟಕ್ಕಿಂತ ದೊಡ್ಡ ಭಾಗ್ಯ ಜೀವನದಲ್ಲಿ ಇನ್ನೊಂದಿಲ್ಲ. ನಿನ್ನ ದರ್ಶನ ಸಾಮಾನ್ಯ ವಿಷಯವೇ? ಋಷಿಗಳು ನಿನ್ನನ್ನು ಕಾಣಬೇಕು ಎಂದು ಜನ್ಮ-ಜನ್ಮದಲ್ಲಿ ಪರಿತಪಿಸುತ್ತಾರೆ. ಹಾಗಿರುವಾಗ ಕಷ್ಟಕಾಲದಲ್ಲಿ ಅನಾಯಾಸವಾಗಿ ನಿನ್ನ ದರ್ಶನ ಭಾಗ್ಯ ಸಿಗುವುದರಿಂದ ಸದಾ ನನಗೆ ಕಷ್ಟ ಕೊಡು’ ಎಂದು ಕೇಳುತ್ತಾಳೆ.

ಕೃಷ್ಣನ ನಿಜಸತ್ವವನ್ನು ಅರಿತಿದ್ದ ಕುಂತಿಯು ಅದನ್ನು ತೋರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ನಿಜವಾದ ಜ್ಞಾನಿಗಳೂ ಪಕ್ವಗೊಂಡ ಭಕ್ತರೂ ತಮ್ಮ ಅರಿವನ್ನು ಪ್ರದರ್ಶನಕ್ಕಿಡುವುದಿಲ್ಲ. ಅಂತೆಯೇ ಕನ್ತಿ ಕೂಡ ಇಲ್ಲಿ ವಿನಯವಂತಿಕೆಯನ್ನೆ ತೋರುತ್ತಾಳೆ. `ಸಂಸಾರದಲ್ಲಿ ಮುಳುಗಿದ ಒಬ್ಬ ಸಾಮಾನ್ಯ ಸ್ತ್ರೀ ನಾನು. ಆದರೆ ನೀನು ಪರಮಹಂಸರ, ಮುನಿಗಳ ಮತ್ತು ಸಾಧುಸಂತರ ಭಕ್ತಿಗೆ ದಕ್ಕುವವನು. ಇಂತಹ ನಿನ್ನನ್ನು ನನ್ನಂತ ಸಾಮಾನ್ಯ ಸ್ತ್ರೀ ಅರಿಯಲು ಸಾಧ್ಯವೇ?’ ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತಾಳೆ ಕುಂತಿ.

ಯುದ್ಧ ಎಂಥವರನ್ನೂ ಒಂದು ಕ್ಷಣಕಾಲವಾದರೂ ಆಂತರಿಕವಾಗಿ ಕಲಕುತ್ತದೆ. ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ಪಾಂಡವರು ಗೆಲ್ಲುತ್ತಾರೇನೋ ಸರಿ. ಆ ಗೆಲುವಿಗಾಗಿ ಕಾಲಗಟ್ಟಲೆಯಿಂದ ಹಂಬಲಿಸಿದ್ದ ಯಾರೂ ಕೂಡ ಸಂಭ್ರಮ ಪಡಲಾಗುವುದಿಲ್ಲ. ಏಕೆಂದರೆ ಯುದ್ಧದಲ್ಲಿ ಹತರಾದವರೆಲ್ಲ ಸ್ವಂತದ ಸಂಬಂಧಿಗಳೇ. ಧೃತರಾಷ್ಟ್ರ ಪುತ್ರರ ಮೇಲೆ ತನ್ನ ಮಕ್ಕಳು ಗೆಲುವು ಸಾಧಿಸಬೇಕೆಂದು ಜೀವನವನ್ನೇ ತಪಸ್ಸಾಗಿಸಿಕೊಂಡಿದ್ದ ಕುಂತೀದೇವಿಯೂ ಕೂಡ ಇದರಿಂದ ಹೊರತಾಗಿ ಉಳಿಯಲಿಲ್ಲ. ರಾಜಮಾತೆಯಾಗಿ ಮಕ್ಕಳೊಂದಿಗೆ ರಾಜ್ಯಭಾರದಲ್ಲಿ ಉಳಿಯಲು ಆಕೆ ಮನಸ್ಸು ಮಾಡುವುದಿಲ್ಲ. ಬದಲಾಗಿ, ಗಾಂಧಾರಿ, ಧೃತರಾಷ್ಟ್ರ ಹಾಗೂ ವಿದುರರೊಂದಿಗೆ ತಾನೂ ವಾನಪ್ರಸ್ಥಕ್ಕೆ ಹೊರಟು ನಿಲ್ಲುತ್ತಾಳೆ. ನಿರ್ಣಾಯಕ ಘಟ್ಟದಲ್ಲಿ ಕುಂತಿ ಏಕಾಂತ ಬಯಸತೊಡಗುತ್ತಾಳೆ.

ವಿಜಯಶಾಲಿಗಳಾದ ಮಕ್ಕಳ ಸಂಗಾತವನ್ನು ತೊರೆದು ಕಾಡಿಗೆ ಹೊರಟು ನಿಲ್ಲುವ ಕುಂತೀದೇವಿಯ ಅಂತರಂಗ ಅರಿತವನು ಶ್ರೀ ಕೃಷ್ಣನೊಬ್ಬನೇ. ಸಂಬಂಧದಲ್ಲಿ ಆತ ಆಕೆಗೆ ಸೋದರಳಿಯ. ಹಾಗೆಂದು ಕುಂತಿಗೆ ಅವನೆಂದರೆ ಸಲಿಗೆಯಿಲ್ಲ, ಬದಲಿಗೆ ಭಕ್ತಿ ಇದೆ. ವಾಸ್ತವದಲ್ಲಿ ಆತ ಏನಾಗಿದ್ದಾನೆ ಅನ್ನುವುದು ಆಕೆಯ ಆತ್ಮಕ್ಕೆ ತಿಳಿದಿದೆ. ಹಾಗೆಂದೇ ಕುಂತಿಯು ಪ್ರಯಾಣಕ್ಕೆ ಮುನ್ನ ಕೃಷ್ಣನನ್ನು ಕಾಣಲು ಬಯಸುತ್ತಾಳೆ. ಅವನೊಂದಿಗೆ ಇಹಪರದ ಮಾತುಗಳನ್ನಾಡುತ್ತಾಳೆ. ಮಾರ್ಗದರ್ಶನ ಪಡೆಯುತ್ತಾಳೆ. ಇನ್ನು ಮುಂದೆ ನೀನೇ ನನ್ನ ಮಕ್ಕಳಿಗೆ ತಾಯಿ ಸ್ಥಾನದಲ್ಲಿ ನಿಂತು ಅವರನ್ನು ಮುನ್ನಡೆಸು ಎಂದು ಕೇಳಿಕೊಳ್ಳುತ್ತಾಳೆ. ಯುದ್ಧದ ಸಾವು ನೋವುಗಳು ತಂದಿತ್ತ ವೈರಾಗ್ಯಕ್ಕೆ ಸಂಪೂರ್ಣ ಶರಣಾಗುತ್ತಾಳೆ ಕುಂತಿ.

ಕುಂತಿಗೆ ಕೃಷ್ಣ ಏನೆಂಬುದು ಗೊತ್ತು. ಆತನೆ ಜಗನ್ನಿಯಾಮಕ ಎಂಬುದನ್ನು ಆಕೆ ಅರ್ಥ ಮಾಡಿಕೊಂಡಿದ್ದಾಳೆ. ಆದ್ದರಿಂದಲೇ ಕುಂತಿ, `ಗುಣತ್ರಯಗಳಿಂದ ದೇಹವನ್ನು ಸೃಷ್ಟಿಮಾಡಿ, ಆ ದೇಹದೊಳಗೆ ನಮ್ಮನ್ನಿಟ್ಟು, ನಮ್ಮೊಳಗೆ ಅಂತರ್ಯಾಮಿಯಾಗಿ ನೆಲೆಸಿದ ಪರಮ ಪುರುಷ ನೀನು’ ಎಂದು ಅವನನ್ನು ಸ್ತುತಿಸುತ್ತಾಳೆ.
ಬ್ರಹ್ಮಾಂಡ ಸೃಷ್ಟಿಗೂ ಮೊದಲು ಬ್ರಹ್ಮಾಂಡಕ್ಕಿಂತಲೂ ದೊಡ್ಡದಾಗಿ, ಅನಂತ ಆಕಾಶದಲ್ಲಿ ತುಂಬಿರುವ ಭಗವಂತನೇ `ಪರಮ ಪುರುಷ’. ಇಂತಹ ಭಗವಂತ ಬ್ರಹ್ಮಾಂಡ ಸೃಷ್ಟಿ ಮಾಡಿ, ಬ್ರಹ್ಮಾಂಡದೊಳಗೆ ತುಂಬಿದ. ನಂತರ ಬ್ರಹ್ಮಾಂಡದಲ್ಲಿ ಸಮಸ್ತ ಪಿಂಡಾಂಡಗಳನ್ನು ಸೃಷ್ಟಿಸಿ, ಪ್ರತಿಯೊಂದು ಪಿಂಡಾಂಡದಲ್ಲಿ ತುಂಬಿದ. ಪ್ರಕೃತಿಯಿಂದ ದೇಹವನ್ನು ಸೃಷ್ಟಿಮಾಡಿ ಅದರೊಳಗೆ ತಾನೂ ಸೇರಿದ ಭಗವಂತ ಪ್ರಕೃತಿಗೆ ಬದ್ಧನಾಗಿಲ್ಲ. ಏಕೆಂದರೆ ಆತ ಗುಣಾತೀತ. ಹೀಗೆ ಗುಣದ ಲೇಪವಿಲ್ಲದೆ, ಗುಣಬದ್ಧ ಶರೀರದಲ್ಲಿ ಭಗವಂತ ನೆಲೆಸಿದ್ದಾನೆ. ಕುಂತಿ ಹೇಳುತ್ತಾಳೆ `ನಮಗೆ ಅಗೋಚರನಾಗಿ ನಮ್ಮ ಮಾತು-ಮನಗಳಿಗೆ ಮೀರಿ ನಮ್ಮೊಳಗೆ ನೀನು ತುಂಬಿದ್ದೀಯ’ ಎಂದು ಕುಂತಿಯು ಕೃಷ್ಣನನ್ನು ನಿರ್ದೇಶಿಸಿ ಹೇಳುವಾಗ ಆಕೆ ಜಗನ್ನಿಯಾಮಕನಾದ ಮಹಾವಿಷ್ಣುವನ್ನೇ ಕುರಿತು ಹೇಳುತ್ತಿದ್ದಾಳೆ. ಯಾವುದನ್ನು ಜ್ಞಾನಿಗಳು `ಬ್ರಹ್ಮ’ ಎಂದು ಕರೆಯುತ್ತಾರೋ ಆ ಅರಿವನ್ನು ಕುರಿತು ಹೇಳುತ್ತಿದ್ದಾಳೆ.

ಹಾಗಿದ್ದರೆ ಕುಂತಿಗೆ ಈ ಯಾವುದೂ ಮೊದಲು ಗೊತ್ತಿರಲಿಲ್ಲವೆ? ಅವಳು ಕೃಷ್ಣನಲ್ಲಿ ಸದಾ ಲೌಕಿಕ ಭದ್ರತೆಯನ್ನೆ ಏಕೆ ಕೇಳುತ್ತಿದ್ದಳು? ಈಗಲೂ ತನ್ನ ಮಕ್ಕಳನ್ನು ವಾತ್ಸಲ್ಯದಿಂದ ನೋಡು ಎಂದು ಕೇಳಿಕೊಳ್ಳುತ್ತಿದ್ದಾಳೆಯೇ ಹೊರತು ಮೋಕ್ಷ ಜ್ಞಾನವನ್ನು ನೀಡು ಎಂದೇಕೆ ಕೇಳುತ್ತಿಲ್ಲ? ಪ್ರಶ್ನೆಗಳು ಏಳುತ್ತವೆ.

ವಾಸ್ತವದಲ್ಲಿ ಕುಂತಿ ಸಾಮಾನ್ಯ ಹೆಣ್ಣಲ್ಲ. ಆಕೆಯೊಬ್ಬಳು ದಿವ್ಯ ಸ್ತ್ರೀ. ದೇವತೆಗಳಿಂದ ಮಕ್ಕಳನ್ನು ಪಡೆದ ಪುಣ್ಯವಂತೆ. ಆದರೆ ಲೀಲಾನಾಟಕ ನಿಮಿತ್ತವಾದ ಮಾಯೆಯ ಪರದೆ ಆಕೆಯನ್ನೂ ಮುಸುಕಿರುತ್ತದೆ. ಅಧರ್ಮ ನಾಶ ಹಾಗೂ ಧರ್ಮ ಸಂಸ್ಥಾಪನೆಯ ಕೃಷ್ಣಕಾರ್ಯದಲ್ಲಿ ಆಕೆಯ ಪಾತ್ರವೂ ಮಹತ್ವದ್ದೇ ಆಗಿರುತ್ತದೆ. ಆದ್ದರಿಂದಲೇ ಕುಂತಿ ತನ್ನ ಮಕ್ಕಳಿಗೆ ಬಾಲ್ಯದಿಂದಲೂ ಕ್ಷಾತ್ರ ಕೆಚ್ಚನ್ನು ತುಂಬುತ್ತ ಬರುತ್ತಾಳೆಯೇ ಹೊರತು ಆತ್ಮಜ್ಞಾನವನ್ನಲ್ಲ. ಕೃಷ್ಣನಿಂದಲೂ ಆಕೆ ಅದಕ್ಕೆ ಪೂರಕವಾದ ಸಹಾಯವನ್ನೆ ಬಯಸುತ್ತಾಳೆ. ಇಲ್ಲಿ ಆಕೆ ಒಬ್ಬ ಸಮರ್ಥ ರಾಜಮಾತೆಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾಳೆ.

ಹಾಗೆಂದು ಕುಂತಿಗೆ ತನ್ನನ್ನು ಆವರಿಸಿದ್ದ ಮಾಯೆಯ ಬಗೆಗೂ ಅರಿವಿದೆ. ಆಕೆ ಕೃಷ್ಣನಿಗೆ ಹೇಳುತ್ತಾಳೆ, `ಹೇ ಕೃಷ್ಣ! ಮಾಯೆಯ ಪರದೆಯ ಮರೆಯಲ್ಲಿ ಮರೆಯಾಗಿ ನಿಂತವನು ನೀನು. ನಮ್ಮಿಬ್ಬರ ನಡುವೆ ಇಳಿ ಬಿದ್ದಿರುವ ಈ ಪರದೆಯು ನಿನ್ನನ್ನು ನನ್ನ ಸಂಬಂಧಿಯಾಗಿ ತೋರಿಸುತ್ತಿದೆಯೇ ಹೊರತು, ನಿಜದ ನಿನ್ನನ್ನಲ್ಲ!’ ಎಂದು. `ನಾವು ಹುಟ್ಟು-ಸಾವಿಗೆ ಬದ್ಧರಾದವರು. ಆದರೆ ನೀನು ಪ್ರತ್ಯಕ್ಷಕ್ಕೆ ಗೋಚರನಾಗದ ಅಧೋಕ್ಷಜ. ಇಂತಹ ನಿನ್ನನ್ನು ಒಬ್ಬ ಸಾಮಾನ್ಯಳಾದ ನಾನು ಕಾಣುವುದುಂಟೇ? ಪರದೆಯ ಹಿಂದಿರುವ ನಟನಂತೆ, ನಮ್ಮ ಎದುರಿಗಿದ್ದರೂ ನಮಗೆ ಗೋಚರನಾಗದ ಕೃಷ್ಣ ನೀನಲ್ಲವೇ?’ ಎಂದು ಪ್ರಶ್ನಿಸುತ್ತಾಳೆ ಕುಂತಿ. ಜೀವಿತದ ಅರ್ಧಕ್ಕಿಂತಲೂ ಹೆಚ್ಚು ಕಾಲ ತನ್ನ ಕುಟುಂಬದ, ತನ್ನ ಮಕ್ಕಳ ಅಧಿಕಾರ ಪ್ರಾಪ್ತಿಗಾಗಿ ಪರಿತಪಿಸಿದ್ದ ಕುಂತಿ ಅಂತ್ಯಕಾಲದಲ್ಲಿ ತನ್ನ ಈ ಸಾಂಸಾರಿಕ ಗುರುತನ್ನೆ ಅಳಿಸಿ ಹಾಕೆಂದು ಕೃಷ್ಣನಲ್ಲಿ ಕೇಳಿಕೊಳ್ಳುತ್ತಾಳೆ. `ನಾನು ಇಂತಹ ಮನೆತನಕ್ಕೆ ಸೇರಿದವಳು ಎನ್ನುವ ಭಾವನೆಯನ್ನು ಅಳಿಸಿ ಹಾಕು ಕೃಷ್ಣ’ ಎಂದಾಕೆ ಪ್ರಾರ್ಥಿಸುತ್ತಾಳೆ. `ನನ್ನ ಕುಲ ಎನ್ನುವ ಸ್ನೇಹಪಾಶ ನನ್ನನ್ನು ಕಾಡದಂತೆ ಅದನ್ನು ಹರಿದುಬಿಡು. ಈ ಸ್ನೇಹಪಾಶ ಮತ್ತೆ ನನ್ನನ್ನು ಸಂಸಾರದಲ್ಲಿ ಸಿಲುಕಿಸುವುದು ಬೇಡ’ ಎನ್ನುವ ಮೂಲಕ ತನ್ನ ವೈರಾಗ್ಯವನ್ನು ಸ್ಪಷ್ಟಪಡಿಸುತ್ತಾಳೆ ಕುಂತಿ.

ಆವರೆಗೆ ಸೇಡು – ಕೆಚ್ಚುಗಳ ಮುಸುಕು ಆಕೆಯನ್ನು ಆಧ್ಯಾತ್ಮಿಕ ಅರಿವಿನಿಂದ ದೂರವಿಟ್ಟಿರುತ್ತದೆ. ಆದರೆ ಯುದ್ಧದ ದಾರುಣ ಫಲಿತಾಂಶ, ಗೆಲುವಿನ ಕೈಗಂಟಿದ ರಕ್ತದ ಕಲೆ ಆಕೆಯ ಮನಸ್ಸನ್ನು ಮುಕ್ತಿಮಾರ್ಗದೆಡೆಗೆ ತಿರುಗಿಸುತ್ತದೆ. ಕೃಷ್ಣನನ್ನು ಪರಿಪರಿಯಾಗಿ ಪ್ರಾರ್ಥಿಸಿ, ಆತನಿಂದ ಅಭಯ ಪಡೆದು ಕಾಡಿಗೆ ತೆರಳುವ ಕುಂತಿ ಗೆಲುವಿನ ಹಂಬಲದ ನಿರರ್ಥಕತೆಯ ಸಂಕೇತದಂತೆ ಭಾಸವಾಗುತ್ತಾಳೆ.

 

Leave a Reply