ಭಕ್ತಿಯ ಭಂಡಾರ ಶರಣ ಗುರು ಬಸವೇಶ್ವರ

ಬಸವಣ್ಣನವರನ್ನು ಮೊದಲನೆಯದಾಗಿ ಧಾರ್ಮಿಕ ಕ್ರಾಂತಿಯ ಹರಿಕಾರನಾಗಿ ಗುರುತಿಸಲಾಗುತ್ತದೆ. ಬಸವಣ್ಣನವರ ಕ್ರಾಂತಿಯ ಮೂಲ ಬೇರುಗಳು ಇರುವುದು ಅಧ್ಯಾತ್ಮ, ವೈಚಾರಿಕ ಧಾರ್ಮಿಕತೆ ಹಾಗೂ ಭಕ್ತಿಯಲ್ಲಿ. 

basavanna3

ಸವಣ್ಣ ‘ಕ್ರಾಂತಿ ಯೋಗಿ’ ಹೇಗೋ ಹಾಗೇ ‘ಭಕ್ತಿ ಭಂಡಾರಿ’ಯೂ ಹೌದು. ಸಾಮಾನ್ಯವಾಗಿ ಭಕ್ತಿ ಮತ್ತು ಕ್ರಾಂತಿ ವಿರುದ್ಧ ದಿಕ್ಕಿನತ್ತ ಸಾಗುವ ಸಂಗತಿಗಳು ಎಂಬ ತಿಳಿವಳಿಕೆಯಿದೆ. ಏಕೆಂದರೆ, ಭಕ್ತಿ ಇರುವಲ್ಲಿ ವಿಚಾರಕ್ಕೆ ಅವಕಾಶ ಇರುವುದಿಲ್ಲ. ಭಕ್ತಿ ಎಂದರೆ ಶರಣಾಗತಿ. ಶರಣಾಗತರಾದವರು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ. ವಿಚಾರ ಮಾಡದೆ, ಪ್ರಶ್ನೆ ಎತ್ತದೆ ಕ್ರಾಂತಿ ಸಂಭವಿಸುವುದು ಹೇಗೆ?
ಅದಕ್ಕೇ ಬಸವಣ್ಣ ವಿಶಿಷ್ಟರಾಗಿ ನಿಲ್ಲುವುದು.

ಬಸವಣ್ಣ ಏಕಕಾಲಕ್ಕೆ ಕ್ರಾಂತಿಕಾರಿಯೂ ಭಕ್ತಿ ಭಂಡಾರಿಯೂ ಆಗಿದ್ದವರು. ಅವರಿಗೆ ಭಕ್ತಿ ಇದ್ದುದು ತಾವು ರೂಪಿಸಿಕೊಂಡ ಧರ್ಮದಲ್ಲಿ. ತಾವು ಸೃಷ್ಟಿಸಿಕೊಂಡ ಇಷ್ಟಲಿಂಗದಲ್ಲಿ. ತಾವು ಒಡನಾಡಿದ ಕೂಡಲಸಂಗಮದೇವನಲ್ಲಿ. ಯಾರು ಭಕ್ತಿಯನ್ನಿಡಲು ಬೇರೆ ಯಾರನ್ನೂ/ ಯಾವುದನ್ನೂ ಅವಲಂಬಿಸದೆ ಸ್ವತಂತ್ರರಾಗಿರುತ್ತಾರೋ; ಯಾರು ತಮ್ಮನ್ನು ಅರಿತುಕೊಂಡು, ತಮ್ಮೊಳಗಿನ ಭಗವಂತನಲ್ಲಿ ಭಕ್ತಿ ಇರಿಸುತ್ತಾರೋ; ಸುತ್ತಮುತ್ತಲಿನ ಪ್ರತಿಯೊಂದರಲ್ಲೂ ಭಗವಂತನನ್ನೇ ಕಾಣಬಲ್ಲರೋ ಅವರು ವಿಚಾರವಂತರೂ ಆಗಿರುತ್ತಾರೆ. ಏಕೆಂದರೆ ಅವರು ಸ್ಥಾಪಿತ ಅಥವಾ ಸಿದ್ಧಮಾದರಿಯ ಧರ್ಮ ಮತ್ತು ದೇವರ ಕಲ್ಪನೆಗಳಿಂದ ಹೊರತಾದವರು. ಅವರು ತಮ್ಮದೇ ದೇವರನ್ನೂ ಧರ್ಮವನ್ನೂ ಸೃಷ್ಟಿಸಿಕೊಳ್ಳಬಲ್ಲವರು. ಬಸವಣ್ಣ ಅಂಥಾ ವಿಚಾರವಂತ ಭಕ್ತಶ್ರೇಷ್ಠರಾಗಿದ್ದರು.

ಬಸವಣ್ಣನವರ ಬಂಡಾಯಕ್ಕೆ ಅವರ ಗಾಢಭಕ್ತಿಯೇ ಮೂಲವಾಗಿತ್ತು ಎಂಬ ಸುಳಿವನ್ನು ಅವರ ವಚನಗಳು ನೀಡುತ್ತವೆ.
ಓದಿನ ಹಿರಿಯರು, ವೇದದ ಹಿರಿಯರು, ಶಾಸ್ತ್ರದ ಹಿರಿಯರು,
ಪುರಾಣದ ಹಿರಿಯರು, ವೇಷದ ಹಿರಿಯರು, ಭಾಷೆಯ ಹಿರಿಯರು,
ಇವರೆಲ್ಲರು ತಮ್ಮ ತಮ್ಮನೆ ಮೆರೆದರಲ್ಲದೆ ನಿಮ್ಮ ಮೆರೆದುದಿಲ್ಲ.
ತಮ್ಮ ಮರೆದು ನಿಮ್ಮ ಮೆರೆದಡೆ ಕೂಡಿಕೊಂಡಿಪ್ಪ
ನಮ್ಮ ಕೂಡಲಸಂಗಮದೇವರು
~ ಉದಾಹರಣೆಗೆ ಈ ವಚನವನ್ನೇ ನೋಡಿ.
ಪಂಡಿತೋತ್ತಮರು, ವೈಯಾಕರಣಿಗಳೆಲ್ಲರ ಮೆರೆದಾಟವನ್ನು ಆಕ್ಷೇಪಿಸುವ ಬಸವಣ್ಣ ಶುದ್ಧ ಕ್ರಾಂತಿಕಾರಿ. ಅಲ್ಲದಿದ್ದರೆ ಹಾಗೆ ಆ ಜನರನ್ನು ಎದುರು ಹಾಕಿಕೊಳ್ಳುವುದುಂಟೆ!? ಅವರ ಈ ಪ್ರತಿರೋಧ ಹುಟ್ಟಿದ್ದು ಎಲ್ಲಿಂದ? “ಕೂಡಲಸಂಗಮ ದೇವರೇ ಎಲ್ಲವೆಲ್ಲದರ ಹಿರಿಯ” ಅನ್ನುವ ನಂಬಿಕೆಯಿಂದ. ಆ ಭಕ್ತಿಯಿಂದ. ಘನದ ಹಿರಿಮೆಯನ್ನು ಮೆರೆಸಬೇಕಾಗಿದ್ದಲ್ಲಿ ಪಂಡಿತೋತ್ತಮರು ತಮ್ಮ ತಮ್ಮ ಪ್ರತಿಭಾಪ್ರದರ್ಶನ ಮಾಡುತ್ತಿದ್ದಾರೆ ಎಂದು ಹೇಳುವಾಗ ಬಸವಣ್ಣನವರಿಗೆ ಈ ಘನದ ಮಹಿಮೆ ತಿಳಿದಿರಲೇಬೇಕಲ್ಲವೆ? ಆ ತಿಳಿವು ಮೂಡಿದ್ದು ಭಕ್ತಿಯಿಂದಲೇ.

ಹಾಗಾದರೆ ಬಸವಣ್ಣ ಭಕ್ತಿಯಲ್ಲಿ ಶರಣಾಗತರಾಗಲೇ ಇಲ್ಲವೆ? ಆಗಿಲ್ಲದೆ ಏನು? ಬಸವಣ್ಣ ಮಹಾಶರಣ. ಶರಣರ ಶರಣ!! ಬಸವಣ್ಣ ಮಾತ್ರವಲ್ಲ, ಇಡಿಯ ಶರಣ ಸಂಕುಲದ  ಶರಣಾಗತಿ ಯಾರೋ ಬರೆದಿಟ್ಟ ಶಾಸ್ತ್ರದಂತೆ ಪೂಜೆಗೊಳ್ಳುವ, ನಾಲ್ಕು ಗೋಡೆಗಳ ಮಧ್ಯ ನೆಲೆ ನಿಂತ ವಿಗ್ರಹದ ದೇವರಿಗಲ್ಲ; ತರತಮದ ಸಂಪ್ರದಾಯಗಳಿಗಲ್ಲ; ಅವರ ಶರಣಾಗತಿ ತಮ್ಮ ಅಂಗೈಮೇಲಿನ ಇಷ್ಟಲಿಂಗದೆಡೆಗೆ. ಅವರ ಶರಣಾಗತಿ, ತಾವು ಕಂಡುಕೊಂಡ ತಮ್ಮದೇ ಭಗವಂತನೆಡೆಗೆ.
ಬಸವಣ್ಣನವರಂತೂ ತಮ್ಮ ಈ ಭಕ್ತಿಯನ್ನು ಮತ್ತೆಮತ್ತೆ ಒರೆಗೆ ಒಡ್ಡಿಕೊಳ್ಳಲು ಬಯಸುತ್ತಿದ್ದರು.
ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ.
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ.
ಒಂದು ಜವೆ ಕೊರತೆಯಾದಡೆ
ಎನ್ನನದ್ದಿ ನೀನೆದ್ದು ಹೋಗು, ಕೂಡಲಸಂಗಮದೇವಾ
~ ಎಂದು ತನ್ನನ್ನು ಪರೀಕ್ಷಿಸು ಎಂಬ ಸವಾಲನ್ನೂ ಹಾಕುತ್ತಿದ್ದರು ಬಸವಣ್ಣ! ತಮ್ಮ ಭಕ್ತಿಯಲ್ಲಿ ಕಿಂಚಿತ್ತಾದರೂ ಕಡಿಮೆಯಾದರೆ ಕರುಣೆ ತೋರದೇ (ಭವಸಾಗರದಲ್ಲಿ) ಮುಳುಗಿಸಿ, ಕೈಬಿಟ್ಟು ಹೋಗು ಎಂದು ಕೂಡಲಸಂಗಮನಲ್ಲಿ ಬಗೆಬಿನ್ನಹ ಮಾಡಿದ್ದರು.

ಭಕ್ತಿಯ ನಿಜಾರ್ಥ ಭಜನೆ. ಸದಾ ಇಷ್ಟದೈವವನ್ನು ಭಜಿಸುವುದೇ ಭಕ್ತಿ. ಭಜಿಸುವುದು ಎಂದರೆ ಸ್ಮರಿಸುವುದೂ ಹೌದು. ತಡೆಯಿಲ್ಲದ ನಿರಂತರ ಸ್ಮರಣೆ. ಬಸವಣ್ಣನವರ ಇಷ್ಟದೈವ ಕೂಡಲಸಂಗಮ ದೇವ, ಅವರಿಗೆ ಪ್ರತಿಯೊಬ್ಬ ಮನುಷ್ಯರಲ್ಲೂ, ಪ್ರತಿಯೊಂದು ಜೀವಜಂತುವಿನಲ್ಲೂ, ಎಲ್ಲ ಜಡಚೇತನಗಳಲ್ಲೂ ಕಾಣುವನು. ಬಸವಣ್ಣನವರು ಈ ಜನಸಾಮಾನ್ಯರ ಒಡನಾಟ ಮತ್ತು ಅವರಿಗೆ ಸೇವೆ ಸಲ್ಲಿಸುವ ದಾರಿಯಾಗಿ ದಾಸೋಹವನ್ನು ನಡೆಸುವ ಮೂಲಕ ಸದಾ ತಮ್ಮ ಇಷ್ಟದೇವನ ಸಂಪರ್ಕದಲ್ಲಿರುವರು!

ಹೀಗೆ ಅವಿರತ ಜನಚಿಂತನೆಯಲ್ಲಿ ತೊಡಗಿದ್ದು, ಅವರ ಸಾಧನೆಯನ್ನು ಸಾಧ್ಯವಾಗಿಸುವುದೇ ತಮ್ಮ ಸಾಧನೆಯೆಂದು ಬದುಕಿದ ಬಸವಣ್ಣ, ಭಕ್ತಿಯ ಭಂಡಾರವೇ ಆಗಿದ್ದರು ಅನ್ನುವುದರಲ್ಲಿ ಅನುಮಾನವೇನಾದರೂ ಇದೆಯೆ!?

 

Leave a Reply