ಶವಪೆಟ್ಟಿಗೆಯನ್ನು ಜೋಪಾನವಾಗಿ ಎತ್ತಿಡು!

tao

ಒಂದು ಊರಿನಲ್ಲೊಬ್ಬ ರೈತನಿದ್ದ. ಕಷ್ಟಪಟ್ಟು ದುಡಿಮೆ ಮಾಡಿ ಹೊಲವನ್ನು ಹಸನುಗೊಳಿಸಿದ್ದ. ಆ ರೈತನಿಗೊಬ್ಬ ಸೋಮಾರಿ ಮತ್ತು ಸ್ವಾರ್ಥಿಯಾದ ಮಗನಿದ್ದ.

ರೈತ ಕಾಲ ಕಳೆದಂತೆ ಮುದಿಯಾಗಿ, ಕೆಲಸ ಮಾಡಲು ಅಶಕ್ತನಾದ. ಈಗ ಅವನಿಗೆ ಹೊಲದಲ್ಲಿ ದುಡಿಯಲು ಆಗುತ್ತಿರಲಿಲ್ಲ.
ಸ್ವಾರ್ಥಿಯಾದ ಸೋಮಾರಿ ಮಗನಿಗೆ ಇನ್ನು ಈ ಮುದಿತಂದೆಯಿಂದ ಉಪಯೋಗವಿಲ್ಲ ಅನ್ನಿಸಿತು. ಸುಮ್ಮನೆ ಕೂಳು ದಂಡಕ್ಕೆ ಇವನೇಕೆ ಬದುಕಿರಬೇಕು ಎಂದು ಆಲೋಚಿಸಿದ ಅವನು, ದೊಡ್ಡದೊಂದು ಶವಪೆಟ್ಟಿಗೆ ಮಾಡಿಸಿದ. ಅದರಲ್ಲಿ ಮುದಿ ರೈತನನ್ನು ಮಲಗಲು ಹೇಳಿದ.

ರೈತ ಮರುಮಾತಾಡದೆ ಶವಪೆಟ್ಟಿಗೆಯಲ್ಲಿ ಮಲಗಿದ. ಅವನ ಮಗ ಪೆಟ್ಟಿಗೆಯನ್ನು ಎಳೆದುಕೊಂಡು ಬೆಟ್ಟದ ತುದಿವರೆಗೆ ತಂದ. ಅಲ್ಲಿಂದ ಅದನ್ನು ಪ್ರಪಾತಕ್ಕೆ ತಳ್ಳುವುದು ಅವನ ಉದ್ದೇಶವಾಗಿತ್ತು.

ಬೆಟ್ಟದ ತುದಿ ತಲುಪಿದ ಮೇಲೆ ಪೆಟ್ಟಿಗೆಯ ಒಳಗಿಂದ ಮುದಿರೈತ ಮುಚ್ಚಲ ತಟ್ಟುವ ಸದ್ದು ಕೇಳಿಬರತೊಡಗಿತು. ವಿಷಯವೇನು ನೋಡೋಣ ಅಂದುಕೊಂಡು ಮಗ ಹಾಗೇ ನಿಂತ.

ಮುದಿ ರೈತ ಶವಪೆಟ್ಟಿಗೆಯ ಮುಚ್ಚಳ ತೆಗೆದು ಹೊರಗೆ ಬಂದು, “ಮಗನೇ! ನೀನು ನನ್ನನ್ನು ಪ್ರಪಾತಕ್ಕೆ ತಳ್ಳಲಿದ್ದೀಯೆಂದು ಗೊತ್ತಿದೆ. ನಾನು ತಯಾರಿದ್ದೀನಿ. ಹೀಗೇ ತಳ್ಳಿಬಿಡು. ಸುಮ್ಮನೆ ಶವಪೆಟ್ಟಿಗೆಯನ್ನೇಕೆ ಹಾಳು ಮಾಡುತ್ತೀಯ? ಇದನ್ನು ಜೋಪಾನವಾಗಿ ತೆಗೆದಿಡು. ಮುಂದಕ್ಕೆ ನಿನ್ನ ಮಗನ ಉಪಯೋಗಕ್ಕೆ ಬರುತ್ತದೆ” ಅಂದ.
ಸ್ವಾರ್ಥಿ ಮಗನಿಗೆ ತನ್ನ ತಪ್ಪಿನ ಅರಿವಾಗಿ ನಾಚಿಕೆಯಾಯ್ತು. ತಂದೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿ ಮರಳಿ ಮನೆಗೆ ಕರೆದೊಯ್ದ.

Leave a Reply