ಗುರುತು ಉದಿಸುವುದು ಅರಿವುಗೇಡಿತನದಿಂದ!

photoಪ್ರತಿಯೊಬ್ಬ ವ್ಯಕ್ತಿಯೂ ಯುದ್ಧದಲ್ಲಿ ತೊಡಗಿಕೊಂಡಿದ್ದಾನೆ. ಪ್ರತಿ ಕ್ಷಣ ನೀವು ರಣಾಂಗಣದಲ್ಲಿದ್ದೀರಿ, ಸಂಘರ್ಷ ನಡೆಸುತ್ತಿದ್ದೀರಿ. ನಿಮ್ಮ ಚಿತ್ತವೇ ಆ ರಣಾಂಗಣವಾಗಿದೆ ಮತ್ತು ಉಭಯ ಪಕ್ಷದಲ್ಲೂ ನೀವೇ ಇದ್ದುಕೊಂಡು ನಿಮ್ಮ ಮೇಲೆಯೇ ಯುದ್ಧ ನಡೆಸುತ್ತಿದ್ದೀರಿ. ಕೃಷ್ಣನು ಅರ್ಜುನನಿಗೆ ಏನೇ ಹೇಳಿರಲಿ, ಆದರೆ ಅದು ನಿಮ್ಮ ಅನುಭವವೇನೂ ಅಲ್ಲ. ಮತ್ತು ಧ್ಯಾನ ಮಾಡುವುದರಿಂದ ಅನುಭವ ಹುಟ್ಟಿಕೊಳ್ಳುತ್ತೆಂದು ನೀವು ತಿಳಿದಿದ್ದೀರಿ! ಹಾಗಾಗುವುದಿಲ್ಲ… ಧ್ಯಾನದ ಜೊತೆಜೊತೆಯಲ್ಲಿ ಅರಿವೂ ಬೆಳೆಯದೆ ಹೋದರೆ, ಅದು ಸಾಧ್ಯವೆ ಆಗುವುದಿಲ್ಲ ~ Whosoever Ji

ದೇಹದ ಮೂಲಕ ಯಾವುದೆಲ್ಲ ಕೆಲಸಗಳು ನಡೆಯುತ್ತವೆ, ಅವೆಲ್ಲವೂ ಜಾಗೃತಾವಸ್ಥೆಯಲ್ಲೆ ನಡೆಯುವಂಥದ್ದು. ಜಾಗೃತಾವಸ್ಥೆಯಲ್ಲಿನಮಗೆ ‘ನಾನು ಮಾಡುತ್ತಿದ್ದೇನೆ’ ಅನ್ನಿಸುತ್ತದೆ. ನಾನು ಇದನ್ನು ಮಾಡ್ತೀನಿ, ನಾನು ಅದನ್ನು ಮಾಡ್ತೀನಿ; ನಾನು ಹೀಗೆ ಮಾಡಬೇಕು, ನಾನು ಹಾಗೆ ಮಾಡಬೇಕು; ನಾನು ಹೀಗೆ ಮಾಡಿದೆ, ನಾನು ಹಾಗೆ ಮಾಡಿದೆ…. ಹೀಗೆಲ್ಲ ಅನ್ನಿಸುತ್ತದೆ. ನಾನು ನೆನ್ನೆ ನಿಮಗೆ ಹೇಳಿದ್ದೆ. ಇದರ ಕುರಿತು ಧ್ಯಾನಿಸಿ, ಯೋಚಿಸಿ, ವಿಚಾರ ಮಾಡಿ… ಇದು ನಿಜವೇನು? ನಿಮ್ಮ ಬದುಕಲ್ಲಿ ಸಾಕಷ್ಟು ಜೀವಯಾಪನೆ ಮಾಡಿದ್ದೀರಿ. ಹಿಂದಿನ ದಿನಗಳತ್ತ ಒಮ್ಮೆ ಇಣುಕಿ ನೋಡಿ – ಇದು ನಿಜವೇನು? ಕೆಲವರು ಇಪ್ಪತ್ತು ವರ್ಷಗಳು, ಕೆಲವರು ಇಪ್ಪತ್ತೈದು ವರ್ಷಗಳು ಕೆಲವರು ಮೂವತ್ತು ವರ್ಷಗಳು ಮತ್ತೆ ಕೆಲವರು ಇನ್ನೂ ಹೆಚ್ಚು ವರ್ಷಗಳ ಕಾಲ ಜೀವನ ನಡೆಸಿದ್ದೀರಿ. ಈ ಸಂದುಹೋದ ವರ್ಷಗಳ ಕಾಲ ನೀವೇನು ಮಾಡಿದ್ದೀರೋ, ಅವೆಲ್ಲವೂ ನೀವು ಮಾಡಿದ್ದೋ ಅಥವಾ ಅವು ಘಟಿಸಿದ್ದೋ?
ನಾನು ಕರ್ತನಲ್ಲ ಎಂಬುದನ್ನು ಕೇಳಿಸಿಕೊಂಡರಷ್ಟೆ ಸಾಕಾಗುವುದಿಲ್ಲ. ನಾನು `ಕರ್ತಾ’ ಆಗಿದ್ದೀನೇ? ಮಾಡುವವನು ನಾನೇ ಆಗಿದ್ದೀನೇ? ಎಂದು ಪರೀಕ್ಷಿಸಿಕೊಳ್ಳುವುದು ಬಹಳ ಅವಶ್ಯಕ. ನೀನು ಕರ್ತಾ ಆಗಿಲ್ಲವೆಂದು ಸಾರುವುದೇ ಅಧ್ಯಾತ್ಮದ ಮೂಲ ಸೂತ್ರ.

ಗೀತೆಯು ಸಂಪೂರ್ಣವಾಗಿ ಇದೇ ವಿಷಯವನ್ನು ಚರ್ಚಿಸುತ್ತದೆ. ಅರ್ಜುನನಿಗೆ ನೀನು ಕರ್ತಾ ಅಲ್ಲವೆನ್ನುವುದನ್ನು ಮನದಟ್ಟು ಮಾಡಿಸಲಿಕ್ಕಾಗಿಯೇ ಅದನ್ನು ಹೇಳಲಾಗುತ್ತಿದೆ. ಅರ್ಜುನನಿಗೆ ಯುದ್ಧ ಮಾಡುತ್ತಿರುವವನು ತಾನೇ ಎಂದೆನ್ನಿಸಿದೆ. ಆದ್ದರಿಂದಲೇ ಅವನು ತನ್ನ ಬಂಧುಬಾಂಧವರ ಸಾವಿಗೆ ಕಾರಣನಾಗಬೇಕಾಗುವುದೆಂದು ಶೋಕಿಸುತ್ತಿದ್ದಾನೆ. ಅವನು ಬಹಳ ದೊಡ್ಡ ಬಿಲ್ಗಾರ, ಧೀರ ಯೋಧ. ಯುದ್ಧದಲ್ಲಿ ಯಾರೆಲ್ಲ ಸಾಯುತ್ತಾರೋ ಆ ಎಲ್ಲರ ಸಾವಿಗೆ ತಾನು ಹೊಣೆಯಾಗುವೆನೆಂಬ ಯೋಚನೆ ಅವನನ್ನು ಹಿಡಿದಿಟ್ಟುಕೊಂಡಿದೆ. ಅವರನ್ನು ಕೊಂದ ಪಾಪ ಅನುಭವಿಸಬೇಕಾಗುವುದು ಎಂಬ ಚಿಂತೆ ಕಾಡುತ್ತಿದೆ. ಕೃಷ್ಣನು ಅವನಿಗೆ ಅವೆಲ್ಲವನ್ನು ಮಾಡುತ್ತಿರುವವನು ನೀನಲ್ಲ; ನೀನು ಕರ್ತಾ ಆಗುವ ಯತ್ನವನ್ನು ಕೂಡ ಮಾಡಬೇಡ ಎಂದು ತಿಳಿ ಹೇಳುತ್ತಿದ್ದಾನೆ. ಆದರೆ ಅರ್ಜುನನಿಗೆ ಈ ಚಿಕ್ಕ ವಿಷಯ ಅರ್ಥವೇ ಆಗುತ್ತಿಲ್ಲ. ಹಾಗೆಂದೇ ಅದನ್ನು ಹದಿನೆಂಟು ಅಧ್ಯಾಯಗಳಷ್ಟು ವಿಸ್ತಾರವಾಗಿ ಹೇಳಬೇಕಾಗಿದೆ. ಹದಿನೆಂಟು ಅಧ್ಯಾಯಗಳಷ್ಟು ವಿವರಣೆ ನೀಡಿದ ಮೇಲೆ ಅವನಿಗೆ ತಾನು ಕರ್ತಾ ಅಲ್ಲವೆಂದು ಮನದಟ್ಟಾಗುತ್ತದೆ ಮತ್ತು ಯುದ್ಧ ಶುರುವಾಗುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ಯುದ್ಧದಲ್ಲಿ ತೊಡಗಿಕೊಂಡಿದ್ದಾನೆ. ಪ್ರತಿ ಕ್ಷಣ ನೀವು ರಣಾಂಗಣದಲ್ಲಿದ್ದೀರಿ, ಸಂಘರ್ಷ ನಡೆಸುತ್ತಿದ್ದೀರಿ. ನಿಮ್ಮ ಚಿತ್ತವೇ ಆ ರಣಾಂಗಣವಾಗಿದೆ ಮತ್ತು ಉಭಯ ಪಕ್ಷದಲ್ಲೂ ನೀವೇ ಇದ್ದುಕೊಂಡು ನಿಮ್ಮ ಮೇಲೆಯೇ ಯುದ್ಧ ನಡೆಸುತ್ತಿದ್ದೀರಿ. ಕೃಷ್ಣನು ಅರ್ಜುನನಿಗೆ ಏನೇ ಹೇಳಿರಲಿ, ಆದರೆ ಅದು ನಿಮ್ಮ ಅನುಭವವೇನೂ ಅಲ್ಲ. ಮತ್ತು ಧ್ಯಾನ ಮಾಡುವುದರಿಂದ ಅನುಭವ ಹುಟ್ಟಿಕೊಳ್ಳುತ್ತೆಂದು ನೀವು ತಿಳಿದಿದ್ದೀರಿ! ಹಾಗಾಗುವುದಿಲ್ಲ… ಧ್ಯಾನದ ಜೊತೆಜೊತೆಯಲ್ಲಿ ಅರಿವೂ ಬೆಳೆಯದೆ ಹೋದರೆ, ಅದು ಸಾಧ್ಯವೆ ಆಗುವುದಿಲ್ಲ.

ಅರಿವು ಮತ್ತೊಬ್ಬರಿಂದ ಸಿಗುವುದಿಲ್ಲ, ನೆನಪಿಟ್ಟುಕೊಳ್ಳಿ. ಮತ್ತೊಬ್ಬರಿಂದ ಸಿಗುವ ಹಾಗಿದ್ದರೆ ಈ ಹೊತ್ತಿಗಾಗಲೇ ನೀವದನ್ನು ಪಡೆದುಕೊಂಡಾಗಿರುತ್ತಿತ್ತು. ಬಹಳ ಹಿಂದೆಯೇ ಕೃಷ್ಣನು ಬಂದುಹೋಗಿದ್ದಾನೆ, ಬುದ್ಧನೂ ಆಗಿಹೋಗಿದ್ದಾನೆ, ಮಹಾವೀರರೂ ಅವತರಿಸಿದ್ದಾರೆ. ಇತ್ತೀಚೆಗಿನ್ನೂ ಓಶೋ ಬಂದಿದ್ದಾರೆ, ಜಿಡ್ಡು ಕೃಷ್ಣಮೂರ್ತಿ, ರಮಣರು, ಮೆಹರ್ ಬಾಬಾ – ಇವರೆಲ್ಲ ಬಂದುಹೋಗಿದ್ದಾರೆ. ಎಷ್ಟೊಂದು ಜನ ಬುದ್ಧ ಪುರುಷರು ಆಗಿಹೋಗಿದ್ದಾರೆ! ಆದರೆ ಅವರಿಂದ ಎಷ್ಟು ಜನಕ್ಕೆ ಈ ಸಂಗತಿ ಅರಿವಾಗಿದೆ? ಯಾಕೆ ಅದು ಸಾಧ್ಯವಾಗುತ್ತಿಲ್ಲ?
ಯಾಕೆ ಆಗೋದಿಲ್ಲ ಅಂದರೆ, ನಾವು ಕೆಲವು ಪೊಳ್ಳು ಗುರುತುಗಳಲ್ಲಿ ಕಳೆದುಹೋಗಿದ್ದೇವೆ. ಹುಸಿ ಪಂಥಗಳ ಬಾಲ ಹಿಡಿದು ಅಲೆಯುತ್ತಿದ್ದೇವೆ. ಯಾವುದೋ ಸುಳ್ಳು ವಿಶ್ವಾಸದ ಭರವಸೆಯಲ್ಲಿ ಜೀವಿಸುತ್ತಿದ್ದೇವೆ. ನಮ್ಮನ್ನು ಮುತ್ತಿಕೊಂಡಿರುವ ಈ ಗುರುತು, ನಂಬಿಕೆ ಹಾಗೂ ವಿಶ್ವಾಸಗಳಿಂದ ನಾವು ಬಿಡುಗಡೆ ಪಡೆಯುವ ತುರ್ತು ಇದೆ. ಹೊಸತೇನಾದರೂ ತರಬೇಕೆಂದಿದ್ದರೆ, ಅದಕ್ಕೆ ಮುನ್ನೆ ಹಳತರಿಂದ ಮುಕ್ತಿ ಪಡೆಯಬೇಕು. ನಮ್ಮ ಬಹಳಷ್ಟು ಗುರುತುಗಳು ನಮ್ಮ ತಾಯ್ತಂದೆಯರಿಂದ ಒದಗುತ್ತವೆ. ಕೆಲವು ಗುರುತುಗಳು ಜಾತಿಗತವಾಗಿ ಮತ್ತೆ ಕೆಲವು ಸಮಾಜದಿಂದಾಗಿ ಒದಗುತ್ತವೆ.

ರಾಷ್ಟ್ರವಿರಲಿ ಅಥವಾ ಧರ್ಮಗುರುಗಳು, ಯಾರೂ ಗುರುತುಗಳಿಂದ ಹಿಂದೆ ಉಳಿದಿಲ್ಲ. ಅವರಿಂದಲೂ ನಮಗೆ ಹಲವು ಗುರುತುಗಳು ದಕ್ಕಿವೆ. ಯಾವುದನ್ನು ನೀವು ನಿಮ್ಮ ಅರಿವು ಅಂದುಕೊಂಡಿದ್ದೀರೋ, ಯಾವುದನ್ನು ನಿಮ್ಮ ಸಂಪತ್ತು ಅಂದುಕೊಂಡಿದ್ದೀರೋ ಮತ್ತು ಯಾವುದು ಹುಸಿವಿಶ್ವಾಸವಲ್ಲದೆ ಮತ್ತೇನೂ ಆಗಿಲ್ಲವೋ ಅದನ್ನು ಕಿತ್ತುಕೊಳ್ಳಲು ಬಿಡಿ ನನಗೆ! ನಾನು ಕಿತ್ತುಕೊಳ್ಳಲು ಪ್ರಯತ್ನ ಪಡ್ತಿದ್ದರೆ, ನೀವು ಪ್ರತಿರೋಧ ತೋರಿಸ್ತಿದ್ದೀರಿ. ಆದರೆ ನಿಮ್ಮ ಅರಿವುಗೇಡಿತನ ನಿಮಗೆ ಅರಿವುಗೇಡಿತನವೆಂದೇನೂ ಅನ್ನಿಸ್ತಿಲ್ಲ. ಆದ್ದರಿಂದಲೇ ನೀವದರ ರಕ್ಷಣೆಗೆ ಕಟಿಬದ್ಧರಾಗಿದ್ದೀರಿ. ಯಾವಾಗ ನಿಮಗೆ ನಿಮ್ಮ ಗುರುತು, ನಂಬಿಕೆ, ವಿಶ್ವಾಸಗಳೆಲ್ಲವೂ ನಿಮ್ಮ ಅರಿವುಗೇಡಿತನದಿಂದಲೇ ಉದಿಸಿವೆ ಎಂದು ಅರಿವಾಗ್ತದೆಯೋ ಆವಾಗ ನೀವು ಅವನ್ನು ಬಿಟ್ಟುಕೊಡಲು ಅಂಜಾಣಿಸಲಾರಿರಿ.

2 Comments

  1. ಸರ್ ಅರಳಿಮರದಲ್ಲಿ ಬರುವ ಪ್ರತಿಯೊಂದು ವಿಷಯವು ಅತ್ಯದ್ಬುತ. ನನಗೆ ದುಖ:ವಾದಾಗ ಸ್ವಾಂತನ ನೀಡಿದ್ದು ಇದೇ ಅರಳಿ ಮರ.ಇದು ಹೀಗೆ ಮುಂದುವರೆಯಲಿ

Leave a Reply