ಸೂರ್ಯನ ಮೋಹದ ಹೋಮಾ ಹಕ್ಕಿ

ಎತ್ತರದಲ್ಲಿರುವುದು ಎಂದರೆ ಅದೊಂದು ಬಹಳ ದೊಡ್ಡ ಜವಾಬ್ದಾರಿ. ಆ ಎತ್ತರದಲ್ಲಿ ಅಸ್ತಿತ್ವ ಕಾಯ್ದುಕೊಳ್ಳುತ್ತ ಒಂದಲ್ಲ ಒಂದು ಹಂತದಲ್ಲಿ ದಣಿವು ಆವರಿಸಿಕೊಳ್ಳಲೂಬಹುದು. ಈ ದಣಿವಿಗೆ ಕೈಸೋತಂತೆಲ್ಲ ಹೇಗೆ ಮತ್ತೆ ಛಲ ತುಂಬಿಕೊಂಡು ಮೇಲಕ್ಕೇರಬೇಕು ಎನ್ನುವುದನ್ನೂ ಸಂಕೇತಿಸುತ್ತದೆ ಈ ಹೋಮಾ ಹಕ್ಕಿ ~ಚೇತನಾ ತೀರ್ಥಹಳ್ಳಿ

ವೇದ ಹಾಗೂ ಪುರಾಣಗಳಲ್ಲಿ `ಹೋಮಾ’ ಎಂಬ ಹಕ್ಕಿಯ ಉಲ್ಲೇಖವಿದೆ. ಈ ಹಕ್ಕಿ ಆಕಾಶದಲ್ಲಿ ಬಹಳ ಎತ್ತರದಲ್ಲಿ ಹಾರಾಡುತ್ತಲೇ ಇರುತ್ತದೆ. ಅಲ್ಲಿಯೇ ಮೊಟ್ಟೆಯನ್ನೂ ಇಡುತ್ತದೆ. ಅದು ಎಷ್ಟು ಎತ್ತರದಲ್ಲಿ ಹಾರುತ್ತ ಇರುತ್ತದೆ ಅಂದರೆ, ಹಕ್ಕಿ ಇಟ್ಟ ಮೊಟ್ಟೆಯು ಆಕಾಶದಿಂದ ಕೆಳಗೆ ಬೀಳುತ್ತಿರುವಾಗಲೇ ಮರಿ ಹೊರಗೆ ಬರುತ್ತದೆ. ಮತ್ತು ಆ ಮರಿಯು ಕೆಳಗೆ ಬೀಳುತ್ತಿರುವಾಗಲೇ ಕಣ್ತೆರೆದುಕೊಳ್ಳುತ್ತದೆ. ಬೀಳುತ್ತ ಬೀಳುತ್ತಲೇ ರೆಕ್ಕೆಗಳೂ ಬಿಚ್ಚಿಕೊಳ್ಳುತ್ತವೆ. ಕಣ್ತೆರೆದ ಹಕ್ಕಿಗೆ ತಾನು ನೆಲ ಸೋಕುವುದರ ಅರಿವಾಗಿ ರೆಕ್ಕೆಗಳನ್ನು ಹರಡಿ ಬೀಸತೊಡಗುತ್ತದೆ ಮತ್ತು ಮರಳಿ ಮುಗಿಲಿನ ಎತ್ತರಕ್ಕೆ, ಸೂರ್ಯನತ್ತ ಹಾರಲು ಶುರು ಮಾಡುತ್ತದೆ.
ಇದೊಂದು ಕಾಲ್ಪನಿಕ, ಸಾಂಕೇತಿಕ ಹಕ್ಕಿ.

ಈ ಹೋಮಾ ಹಕ್ಕಿಯ ಕಥೆ ಪರ್ಷಿಯನ್ ಪ್ರಾಚೀನ ಸಾಹಿತ್ಯದಲ್ಲೂ ಬರುತ್ತದೆ. ಅಲ್ಲಿ ಅದನ್ನು `ಹುಮಾ’ ಎಂದು ಕರೆಯುತ್ತಾರೆ. ಹೆಚ್ಚೂ ಕಡಿಮೆ ಪಾಶ್ಚಾತ್ಯ ಪುರಾಣಗಳ `ಫೀನಿಕ್ಸ್’ ಕಥೆಯನ್ನು ಹೋಲುವ ಹೋಮಾ ಹಕ್ಕಿ, ಸೂಫೀ ಅನುಭಾವ ಸಾಹಿತ್ಯದಲ್ಲೂ ಕಾಣ ಸಿಗುತ್ತದೆ.

ಓಶೋ ರಜನೀಶ್ ಹೋಮಾ ಹಕ್ಕಿಯ ಕಥೆಗೆ ಬಲು ಸೊಗಸಾದ ವ್ಯಾಖ್ಯಾನ ನೀಡುತ್ತಾರೆ. ಈ ಕಥೆ ಮನುಷ್ಯನ ಅಂತರಂಗದ ಕಥೆ. ಇದು ಅವನ ಅಂತರ್ವ್ಯಥೆಯೂ ಹೌದು. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಮನುಷ್ಯನ ಯಾತ್ರಾಪಥದ ತಿಳಿವು ಮೂಡುತ್ತದೆ ಎನ್ನುತ್ತಾರೆ ಓಶೋ. ಅವರು ಮತ್ತೂ ಹೇಳುತ್ತಾರೆ, `ಇದು ಯಾವುದೇ ಹಕ್ಕಿಯ ಕಥೆಯಲ್ಲ. ಇದು ಮನುಷ್ಯನದೇ ಕಥೆ. ಅವನ ಪತನ ಮತ್ತು ಬೋಧದ ಕಥೆ ಇದು. ನಮ್ಮ ಸ್ವಗೃಹ ಇರುವುದು ಆಕಾಶದಲ್ಲಿ, ಅತಿ ಎತ್ತರದಲ್ಲಿ. ಆದರೆ ನಮ್ಮ ಹುಟ್ಟಿನೊಂದಿಗೇ ನಮ್ಮ ಅಧಃಪತನವೂ ಆರಂಭವಾಗುತ್ತದೆ. ಈ ಪತನಕ್ಕೆ ಅಂತ್ಯವೇ ಇಲ್ಲ, ಯಾಕೆಂದರೆ ನಾವು ಬೀಳುತ್ತಿರುವುದು ತಳವಿಲ್ಲದ ಕಮರಿಗೆ. ಪತನಕ್ಕೆ ಬಿದ್ದಿದ್ದು ಮುಗಿತು ಎಂಬ ಅನುಭವ ಕೊಡುವ ಸೀಮಾರೇಖೆ ಇಲ್ಲವೇ ಇಲ್ಲ. ಆದ್ದರಿಂದ ಎಷ್ಟು ಬೇಕಾದರೂ ಬೀಳಬಹುದು. ಹೀಗೆ ಬೀಳುತ್ತಿರುವಾಗ ಒಮ್ಮೊಮ್ಮೆ ಕಣ್ಣುಗಳು ತೆರೆದುಕೊಳ್ತವೆ. ಬೀಳುವ ನೋವಿಗೆ ಕಣ್ಣುಗಳು ತೆರೆದುಕೊಳ್ಳುತ್ತವೆ. ಹೀಗೆ ಕಣ್ಣುಗಳು ತೆರೆದುಕೊಂಡಾಗಲಷ್ಟೆ ಮನುಷ್ಯನಿಗೆ ತಾನು ಪತನದ ಯಾವ ಹಂತ ತಲುಪಿದ್ದೇನೆ ಎಂದು ಅರಿವಾಗುವುದು. ಆಗಲೇ ಅವನು ತನ್ನೆಲ್ಲ ಬಲವನ್ನೂ ಒಗ್ಗೂಡಿಸಿ ಮತ್ತೆ ಮೇಲಕ್ಕೆ ಹಾರಲು, ತನ್ನ ಸ್ವಗೃಹ ಸೇರಲು ಪ್ರಯತ್ನಿಸುವುದು’.

ಇಚ್ಛಾಶಕ್ತಿಯ ಸಂಕೇತ
ಬೀಳುತ್ತಿರುವ ಮೊಟ್ಟೆ ಸುಮ್ಮನೆ ಒಡೆಯುವುದಿಲ್ಲ. ಒಂದು ಹಂತದ ಬೆಳವಣಿಗೆಯಾದ ನಂತರ ಒಳಗಿನಲ್ಲಿ ಮಿಸುಕಾಟ ಆರಂಭವಾದರೆ, ರೆಕ್ಕೆಗಳು ಚಿಗುರಿ ಹಾರಾಟದ ತುಡಿತ ತೋರತೊಡಗಿದರೆ, ತಾನು ಒಳಗೆ ಬಂಧಿಯಾಗಿರುವುದನ್ನು ಒಪ್ಪದೆ ಕೊಕ್ಕಿನಿಂದ ಕುಕ್ಕತೊಡಗಿದರೆ, ಆಗ ಮೊಟ್ಟೆ ಒಡೆಯುತ್ತದೆ. ವ್ಯಕ್ತಿಯಾದರೂ ಅಷ್ಟೇ. ತನ್ನ ಸುರಕ್ಷೆಯನ್ನು ಒಪ್ಪಿಕೊಳ್ಳದೆ, ತುಸುವಾದರೂ ಅಭಿಯಾನ ಮಾಡಿ, ಕೊಂಚ ಹುಡುಕಾಟ ನಡೆಸಿ, ಕೊಂಚ ಜಿಜ್ಞಾಸೆ ಉಂಟಾದಾಗ ಮೊಟ್ಟೆ (ಆವರಣ) ಒಡೆಯುತ್ತದೆ.

ಈ ಮೊಟ್ಟೆಯೇನೋ ಒಡೆಯುತ್ತದೆ. ಆದರೆ ಕೆಲವರ ಕಣ್ಣುಗಳು ತೆರೆದುಕೊಳ್ಳುವುದಿಲ್ಲ. ಇವರು ಕಣ್ಣು ಮುಚ್ಚಿಕೊಂಡೇ ಬೀಳುತ್ತ ಇರುತ್ತಾರೆ. ಇಂಥವರು ಧರ್ಮದ ಬಗ್ಗೆ ವಿಚಾರವನ್ನೇನೋ ಮಾಡುತ್ತಾರೆ, ಆದರೆ ಅದರ ಅನುಸರಣೆ ಮಾಡುವುದಿಲ್ಲ. ಕೆಲವು ಭಾಗ್ಯಶಾಲಿಗಳು ಮಾತ್ರ ತಮ್ಮ ಕಣ್ಣುಗಳನ್ನು ತೆರೆಯುವ ಪ್ರಯತ್ನ ಮಾಡುತ್ತಾರೆ. ಧ್ಯಾನ, ಜಪಗಳು ಕಣ್ತೆರೆಸುತ್ತವೆ. ಭಜನೆಯ ಶಕ್ತಿಂದ ಕಣ್ಣುಗಳು ತೆರೆದುಕೊಳ್ಳುತ್ತವೆ. ಕಣ್ಣುಗಳು ತೆರೆದುಕೊಂಡ ಕೂಡಲೇ ಕ್ರಾಂತಿ ಘಟಿಸುತ್ತದೆ. ಕಣ್ತೆರೆಯುತ್ತಲೇ ಪತನ ಕಾಣಲಾರಂಭಿಸುತ್ತದೆ. ರೆಕ್ಕೆಗಳಲ್ಲಿ ಕಸುವು ಮೂಡೋದು ಆವಾಗಲೇ.

ಕಣ್ಣುಗಳು ತೆರೆದುಕೊಳ್ಳದೆ ಹೋದಲ್ಲಿ ರೆಕ್ಕೆಗಳೂ ಹರಡಿಕೊಳ್ಳುವುದಿಲ್ಲ. ಆದ್ದರಿಂದ ನೆಲಕ್ಕೆ ಬಿದ್ದು ನುಚ್ಚುನೂರಾಗುವುದನ್ನು ತಪ್ಪಿಸಿಕೊಳ್ಳಬೇಕು ಎಂದರೆ, ಜನನ ಮರಣ ಚಕ್ರದಲ್ಲಿ ಸಿಲುಕಿ ಸದಾ ನೆಲಕ್ಕೆ ಬೀಳುತ್ತಲೇ ಇರುವುದನ್ನು ತಪ್ಪಿಸಿಕೊಳ್ಳಬೇಕು ಎಂದರೆ, ಕಣ್ಣುಗಳನ್ನು ತೆರೆಯಿರಿ. ಪತನವನ್ನು ನೋಡಿ. ಆಗ ಹಾರುವ, ಮತ್ತೆ ಮುಗಿಲಿಗೇರುವ ಇಚ್ಛಾಶಕ್ತಿ ನಿಮ್ಮ ರೆಕ್ಕೆಗಳಲ್ಲಿ ತುಂಬಿಕೊಳ್ಳುವುದು.

ರೆಕ್ಕೆ ಸುಟ್ಟಷ್ಟೂ ಹಾರುವ ಕಸುವು
ಹೋಮಾ ಹಕ್ಕಿಯ ಕಥೆಯನ್ನು ಮತ್ತೂ ಒಂದು ದೃಷ್ಟಿಕೋನದಿಂದ ನೋಡಬಹುದು. ಅದನ್ನು ಸಕಾರಾತ್ಮಕ ನಿಲುವಿನ ಸಾಕಾರದಂತೆಯೂ ಕಾಣಬಹುದು. ಎತ್ತರದಲ್ಲಿರುವುದು ಎಂದರೆ ಅದೊಂದು ಬಹಳ ದೊಡ್ಡ ಜವಾಬ್ದಾರಿ. ಆ ಎತ್ತರದಲ್ಲಿ ಅಸ್ತಿತ್ವ ಕಾಯ್ದುಕೊಳ್ಳುತ್ತ ಒಂದಲ್ಲ ಒಂದು ಹಂತದಲ್ಲಿ ದಣಿವು ಆವರಿಸಿಕೊಳ್ಳಲೂಬಹುದು. ಈ ದಣಿವಿಗೆ ಕೈಸೋತಂತೆಲ್ಲ ಹೇಗೆ ಮತ್ತೆ ಛಲ ತುಂಬಿಕೊಂಡು ಮೇಲಕ್ಕೇರಬೇಕು ಎನ್ನುವುದನ್ನೂ ಸಂಕೇತಿಸುತ್ತದೆ ಈ ಹೋಮಾ ಹಕ್ಕಿ.

ಮತ್ತೊಂದು ಕಥೆಯ ಪ್ರಕಾರ ಹೋಮಾ ಹಕ್ಕಿ ಅದೆಷ್ಟು ಎತ್ತರದಲ್ಲಿರುತ್ತದೆಯೆಂದರೆ, ಹಾರುತ್ತ ಹಾರುತ್ತ ಸೂರ್ಯ ಮಂಡಲವನ್ನು ಹೊಕ್ಕುಬಿಡುತ್ತದೆ. ಆಗ ರವಿಯ ಉರಿಕಿರಣಗಳು ಸೋಕಿ ರೆಕ್ಕೆಗಳು ಸುಟ್ಟು ಇಡಿಯ ದೇಹ ಹೊತ್ತುರಿಯಲು ಆರಂಭವಾಗುತ್ತದೆ. ಅಲ್ಲಿಂದ ಕೆಳಗೆ ಬೀಳುತ್ತ ಬೀಳುತ್ತ ಹೋಮಾಹಕ್ಕಿಯು ಮೊಟ್ಟೆಯನ್ನಿಡುತ್ತದೆ. ಈ ಹಕ್ಕಿಯಲ್ಲಿ ಗಂಡು – ಹೆಣ್ಣೆರಡೂ ಅಂಶಗಳು ಸಂಯುಕ್ತವಾಗಿದ್ದು, ತನ್ನ ನಿರಂತರತೆಗೆಂದೇ ಮೊಟ್ಟೆಯನ್ನೀಯುತ್ತದೆ ಮತ್ತು ತಾನು ಉರಿದು ಬೂದಿಯಾಗಿ ಆಕಾಶದಲ್ಲಿ ಹರಡಿಕೊಳ್ಳುತ್ತದೆ. ಈ ಮೊಟ್ಟೆಯು ಕೆಳಗೆ ಬೀಳುತ್ತ ಇರುವಾಲೇ ಒಡೆದು, ಮರಿಯಾಗಿ, ರೆಕ್ಕೆ ಬಿಚ್ಚಿಕೊಂಡು ಹಾರತೊಡಗಿ, ತಾನೂ ಎತ್ತರೆತ್ತರ ಸಾಗುತ್ತದೆ.

ನಾವಾದರೂ ಅಷ್ಟೇ. ಯಾವುದೇ ಸಾಧನೆಯ ಹಂತ ಶಾಶ್ವತವಲ್ಲ. ಅಂತಹ ಶಾಶ್ವತ ಸಾಧನೆ ಮಾಡಿದವರು ಅಸ್ತಿತ್ವವನ್ನು ಮೂಲ ಹರಿವಲ್ಲಿ ಬೆರೆಸಿಕೊಂಡು ಸ್ವತಃ ತಾವೇ ಅತೀತರೂ ಅನಂತರೂ ಆಗಿಬಿಡುತ್ತಾರೆ. ಲೌಕಿಕ ಬದುಕಿನಲ್ಲಿ ನಾವು ಏನೇ ಸಾಧನೆ ಮಾಡಿದರೂ ಒಂದಲ್ಲ ಒಂದು ಅವಧಿಯಲ್ಲಿ ಅದರಿಂದ ಕೆಳಕ್ಕಿಳಿಯಬೇಕಾಗಿ ಬರಬಹುದು. ಆಗ ಎಲ್ಲಕ್ಕಿಂತ ಮೊದಲು ಕಣ್ ಬಿಟ್ಟು ನೋಡಿ, ಪತನಕ್ಕೆ ತಳ್ಳಿದ ನಮ್ಮ ತಪ್ಪನ್ನು ಗುರುತಿಸಿಕೊಳ್ಳಬೇಕು. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ರೆಕ್ಕೆ ಬಡಿಯುತ್ತಾ ಹಾರಾಟ ಆರಂಭಿಸಬೇಕು. ಅದು ಬಿಟ್ಟು ಪತಿತರಾಗುತ್ತಲೇ ಹೋದರೆ, ತಳವಿಲ್ಲದ ಕಾಲದ ಕಮರಿಯಲ್ಲಿ ಜನ್ಮಾಂತರಗಳವರೆಗೂ ಪತನ ಸಾಗುತ್ತಲೇ ಇರುವುದು.

Leave a Reply