ಹೆರಾಕ್ಲೀಸ್ ನೆಮಿಯಾದ ಸಿಂಹವನ್ನು ಕೊಂದಿದ್ದು :  ಗ್ರೀಕ್ ಪುರಾಣ ಕಥೆಗಳು  ~ 16

ಹೆರಾಕ್ಲೀಸ್ ಸಿಂಹದ ಶವವನ್ನು ಹೊತ್ತುತಂದು ಯೂರಿಸ್ತ್ಯೂಸನ ಎದುರು ಹಾಕಿದ. ಅದರ ಅಗಾಧ ದೇಹವನ್ನು ಕಂಡು ದೊರೆ ಹೆದರಿಹೋದ. ತನ್ನೆದುರು ಇರುವುದು ಸತ್ತ ಸಿಂಹದ ದೇಹವಾಗಿದ್ದರೂ ಅವನು ಬೆಚ್ಚಿಬಿದ್ದ. ಅವನಿಗೀಗ ಹೆರಾಕ್ಲೀಸನ ಮೇಲೆ ಭಯ ಶುರುವಾಯ್ತು. 

nemea lion

 

ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ಹೀರಾ ದೇವಿಯು ಸ್ಯೂಸ್ ದೇವನಿಗೆ ಭೂಮಿಯ ಹೆಣ್ಣಿನಲ್ಲಿ ಹುಟ್ಟಿದ ಮಗನೆಂದು ಹೆರಾಕ್ಲೀಸನ (ಹರ್ಕ್ಯುಲಸ್) ಮೇಲೆ ದ್ವೇಷ ತಾಳಿದ್ದಳು. ಅವಳು ಏನಾದರೂ ಮಾಡಿ ಅವನನ್ನು ಕೊಂದುಹಾಕಬೇಕೆಂದು ಬಯಸಿದ್ದಳು. ಆದರೆ ತಾನು ನೇರವಾಗಿ ಆ ಕೆಲಸವನ್ನು ಮಾಡಿದರೆ ಸ್ಯೂಸನ ಕೋಪಕ್ಕೆ ಗುರಿಯಾಗಬೇಕಾದೀತೆಂದು ಹೆದರಿ, ಅದನ್ನು ಯೂರಿಸ್ತ್ಯೂಸನಿಂದ ಮಾಡಿಸಲು ಹೊರಟಿದ್ದಳು. ತನ್ನ ಹಾಗೂ ಸಹೋದರನ ಮಕ್ಕಳನ್ನು ಕೊಂದ ಪಾಪಕ್ಕೆ ಗುರಿಯಾಗಿದ್ದ ಹೆರಾಕ್ಲೀಸನಿಗೆ ಯೂರಿಸ್ತ್ಯೂಸನಲ್ಲಿ ಹನ್ನೆರಡು ವರ್ಷಗಳ ಗುಲಾಮಗಿರಿ ಮಾಡಿ ಪರಿಹಾರ ಪಡೆಯುವಂತೆ ದೈವಾಜ್ಞೆ ಆಗಿದ್ದಿತು. ಅದರಂತೆ ಹೆರಾಕ್ಲೀಸ್ ಅವನಲ್ಲಿ ಗುಲಾಮನಾಗಿದ್ದ. ಹೀರಾ ದೇವಿಯು ಯೂರಿಸ್ತ್ಯೂಸನ ಬಳಿ ಬಂದು, ಆತನಿಗೆ ವರ್ಷಕ್ಕೊಂದರಂತೆ 12 ಕಠಿಣ ಪರೀಕ್ಷೆಗಳನ್ನೊಡ್ಡುವಂತೆ ಸೂಚಿಸಿದಳು. ಅವುಗಳಲ್ಲಿ ಒಂದರಿಂದಾದರೂ ಅವನು ಸಾಯುತ್ತಾನೆ ಅನ್ನುವ ನಂಬಿಕೆ ಅವಳದಾಗಿತ್ತು.

ಹೀರಾದೇವಿಯ ಮಾತಿನಂತೆ ಯೂರಿಸ್ತ್ಯೂಸನು ಹೆರಾಕ್ಲೀಸನಿಗೆ 12 ಪರೀಕ್ಷೆಗಳನ್ನು ನೀಡಿದ. ಅವುಗಳಲ್ಲಿ ಮೊದಲನೆಯದು ನೆಮಿಯಾದ ಸಿಂಹವನ್ನು ಕೊಲ್ಲುವುದು.

ನೆಮಿಯಾ ಎಂಬ ನಗರದ ಸಮೀಪ ಇದ್ದ ಭಯಾನಕ ಬೆಟ್ಟದಲ್ಲಿ ಅತಿಭಯಾನಕವಾದ ಸಿಂಹವೊಂದಿತ್ತು. ಅದು ಎಷ್ಟು ಬಲಶಾಲಿಯಾಗಿತ್ತೆಂದರೆ, ಅದರ ಕಬ್ಬಿಣ, ಕಲ್ಲು, ಯಾವುದೇ ಲೋಹದಿಂದ ಮಾಡಿದ ಯಾವ ಆಯುಧದಿಂದಲೂ ಅದನ್ನು ಏನೂ ಮಾಡಲಾಗುತ್ತಿರಲಿಲ್ಲ. ಅದರ ಚರ್ಮದ ಮೇಲೆ ಯಾವುದರಿಂದಲೂ ಕನಿಷ್ಠ ಗೀರು ಮೂಡಿಸಲಾಗುತ್ತಿರಲಿಲ್ಲ.

ಇಂಥ ಸಿಂಹವನ್ನು ಎದುರಿಸಲು ಶಕ್ತಿಗಿಂತ ಹೆಚ್ಚಾಗಿ ಯುಕ್ತಿಯ ಅಗತ್ಯವಿತ್ತು. ಹೆರಾಕ್ಲೀಸ್ ಎಷ್ಟು ಬಲಶಾಲಿಯೋ ಅಷ್ಟೇ ಬುದ್ಧಿವಂತ ಕೂಡ ಆಗಿದ್ದ. ಅವನು ಗುಹೆಯ ಮೇಲಿಂದ ಸಿಂಹದ ಕುತ್ತಿಗೆಯ ಮೇಲೆ ಎಗರಿದ. ತನ್ನ ಬಲಶಾಲಿ ಬಾಹುಗಳಿಂದ ಅದರ ಗಂಟಲನ್ನು ಅದುಮಿ ಹಿಡಿದು ಉಸಿರುಗಟ್ಟಿಸಿದ. ಸಿಂಹವು ಪ್ರತಿದಾಳಿ ಮಾಡಲಾಗದೆ ಗೊರಗೊರ ಸದ್ದು ಮಾಡುತ್ತಾ ಸತ್ತುಹೋಯಿತು.

ಹೆರಾಕ್ಲೀಸ್ ಸಿಂಹದ ಶವವನ್ನು ಹೊತ್ತುತಂದು ಯೂರಿಸ್ತ್ಯೂಸನ ಎದುರು ಹಾಕಿದ. ಅದರ ಅಗಾಧ ದೇಹವನ್ನು ಕಂಡು ದೊರೆ ಹೆದರಿಹೋದ. ತನ್ನೆದುರು ಇರುವುದು ಸತ್ತ ಸಿಂಹದ ದೇಹವಾಗಿದ್ದರೂ ಅವನು ಬೆಚ್ಚಿಬಿದ್ದ. ಅವನಿಗೀಗ ಹೆರಾಕ್ಲೀಸನ ಮೇಲೆ ಭಯ ಶುರುವಾಯ್ತು. ಅವನು ತನ್ನ ಕೋಟೆಯೊಳಗೆ ಕಾಲಿಡಕೂಡದು ಎಂದೂ, ಏನಾದರೂ ಕೆಲಸವಿದ್ದರೆ ದೂತನ ಮೂಲಕ ಹೇಳಿಕಳಿಸುತ್ತೇನೆ ಎಂದೂ ಆದೇಶಿಸಿದ. ಹೆರಾಕ್ಲೀಸ್ ಮುಗುಳುನಗುತ್ತಾ ಸಿಂಹದ ದೇಹವನ್ನು ಎತ್ತಿಕೊಂಡು ತನ್ನ ಟಿರೈನ್ಸ್ ಅರಮನೆಗೆ ಬಂದ.

ಸಿಂಹದ ಚರ್ಮವನ್ನು ಸುಲಿಯಲು ಹೆರಾಕ್ಲೀಸ್ ಪ್ರಯತ್ನಿಸಿ ಸೋತ. ಯಾವುದರಿಂದಲೂ ಅದನ್ನು ಹರಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಸಿಂಹದ ಕೋರೆ ಹಲ್ಲನ್ನೆ ಮುರಿದು, ಅದರಿಂದ ಚರ್ಮವನ್ನು ಸುಲಿದ. ಅದನ್ನು ತೆಗೆದು ತನ್ನ ಕವಚವನ್ನಾಗಿ ಮಾಡಿಕೊಂಡ. ಅದರ ತಲೆಬುರುಡೆಯಿಂದ ತಲೆಗವಚವನ್ನು ಮಾಡಿಕೊಂಡ. ಆ ಬಲಿಷ್ಠ ಸಿಂಹದ ಚಿರಸ್ಮರಣೆಗಾಗಿ ಹೀರಾದೇವಿ ಅದರ ಆತ್ಮವನ್ನು ನಕ್ಷತ್ರ ಪುಂಜವಾಗಿಸಿದಳು. (ಅದೇ ಲಿಯೋ ಪುಂಜ).

ಹೀಗೆ ಹೆರಾಕ್ಲೀಸ್ ತನ್ನ ಮೊದಲನೆ ಪರೀಕ್ಷೆಯನ್ನು ಪೂರೈಸಿದ. ಆದರೆ ಯೂರಿಸ್ತೀಸ್ ಎಷ್ಟು ಹೆದರಿದ್ದನೆಂದರೆ, ಕಂಚಿನದೊಂದು ಜಾಡಿ ಮಾಡಿಸಿಕೊಂಡು. ಅದನ್ನು ನೆಲದಲ್ಲಿ ಹುಗಿದು, ಹೆರಾಕ್ಲೀಸ್ ಬರುವ ಸುದ್ದಿ ಕೇಳಿದೊಡನೆ ಓಡಿ ಹೋಗಿ ಅದರಲ್ಲಿ ಅಡಗಿಕೊಳ್ಳುತ್ತಿದ್ದ!

 

 

2 Comments

Leave a Reply