ಸಂತ ಪರಂಪರೆ ಮತ್ತು ರಾಷ್ಟ್ರ ಭಾವನೆ

ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ಒಂದು ಸೂತ್ರದಲ್ಲಿ ಬೆಸೆದಿಟ್ಟಿರುವುದು. ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ಸಮಾಜ ಸುಧಾರಣೆಯ ಹರಿಕಾರರಾಗಿಯೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ  ~ ಆನಂದಪೂರ್ಣ

santa

ಭಾರತ  ರಾಜಕೀಯವಾಗಿ ಹಲವು ರಾಜ್ಯಗಳ ಒಕ್ಕೂಟ ಎನ್ನುವುದು ನಿಜ. ಆದರೆ ವಾಸ್ತವದಲ್ಲಿದು ಹಲವು ಸಂಸ್ಕೃತಿಗಳ, ಧರ್ಮಗಳ, ತತ್ತ್ವಗಳ, ಸಂಪ್ರದಾಯಗಳ ಒಕ್ಕೂಟ. ಈ ವಿಭಿನ್ನತೆಯನ್ನು ಒಗ್ಗೂಡಿಸಿರುವ ಮಹಾನ್ ಶಕ್ತಿಯೆಂದರೆ ಅದು ಅಧ್ಯಾತ್ಮ. ಭಾರತ ಸ್ವಾತಂತ್ರ್ಯಾನಂತರ ಒಂದು ಗಣರಾಜ್ಯವಾಗಿ ರೂಪುಗೊಂಡಿರುವಲ್ಲಿ ರಾಜಕೀಯ ಇಚ್ಛಾಶಕ್ತಿಯಷ್ಟೇ ಧಾರ್ಮಿಕ – ಆಧ್ಯಾತ್ಮಿಕ ಇಚ್ಛಾಶಕ್ತಿಗಳೇ ಪ್ರಭಾವ ಬೀರಿದ್ದವೆಂದರೆ ತಪ್ಪಾಗಲಾರದು.
ಜಗತ್ತಿನಲ್ಲಿ ಪ್ರತಿಯೊಂದು ರಾಷ್ಟ್ರಕ್ಕೂ ತನ್ನದೇ ಆದ ಕೇಂದ್ರವಿದೆ, ಆತ್ಮವಿದೆ. ರಾಜಕಾರಣ ಯುರೋಪಿನ ಆತ್ಮವಿದ್ದಂತೆ ಭಾರತಕ್ಕೆ ಆಧ್ಯಾತ್ಮಿಕತೆಯೇ ಆತ್ಮ. ಧರ್ಮ ಭಾರತದ ಕೇಂದ್ರಬಿಂದು – ಇದು ಸ್ವಾಮಿ ವಿವೇಕಾನಂದರ ಮಾತು. ಮುಂದೆ ಶ್ರೀ ಅರವಿಂದರೂ ಇವೇ ಮಾತುಗಳನ್ನು ಪುರುಚ್ಚರಿಸುತ್ತಾ `ಜಗತ್ತಿನ ಒಂದೊಂದು ರಾಷ್ಟ್ರಕ್ಕೆ ಒಂದೊಂದು ವಿಶಿಷ್ಟ ಸತ್ವ ಇರುತ್ತದೆ. ಭಾರತದ ವೈಶಿಷ್ಟ್ಯ ಅದರ ಆಧ್ಯಾತ್ಮಿಕ ಶಕ್ತಿ’ ಎಂದಿದ್ದರು.

ಹೌದು. ಭಾರತದ ಕೇಂದ್ರ ಇರುವುದು ಧಾರ್ಮಿಕತೆಯಲ್ಲಿಯೇ. ಈ ಎಳೆಯೇ ನೂರಾರು ವೈವಿಧ್ಯಗಳ ಪ್ರಾಂತ್ಯಗಳನ್ನು ಒಂದು ಸೂತ್ರದಲ್ಲಿ ಬೆಸೆದಿಟ್ಟಿರುವುದು. ಕಾಶಿ ಕಂಡು ಬಂದವರು ರಾಮೇಶ್ವರಕ್ಕೆ ಪಾದ ಬೆಳೆಸಬೇಕೆಂಬ ನಿಯಮವಿರಲಿ, ದೇಶದ ಎಂಟು ದಿಕ್ಕುಗಳಲ್ಲೂ ಹಂಚಿ ಹರಡಿದ ದ್ವಾದಶ ಜ್ಯೋತಿರ್ಲಿಂಗಗಳಿರಲಿ, ಹೆಚ್ಚೂಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಹರಡಿಕೊಂಡಿರುವ ಶಕ್ತಿಪೀಠಗಳಿರಲಿ- ಇವೆಲ್ಲವೂ ನಮ್ಮನ್ನು ಪರಸ್ಪರ ಜೋಡಿಸುವ ಕೊಂಡಿಗಳಾಗಿವೆ, ರಾಜ್ಯ – ರಾಜ್ಯಗಳ ಒಳಜಗಳಗಳಾಚೆಗೂ ನಾವೊಂದು `ರಾಷ್ಟ್ರ’ವಾಗಿರುವುದರ ಭಾವನೆಯನ್ನು ಕಾಯ್ದಿಟ್ಟಿವೆ. ಮತ್ತು ಈ ಎಲ್ಲ ಸ್ಥಳಗಳು ಧಾರ್ಮಿಕ ಭಾವನೆಗಳ ಪೋಷಣೆಯ ಜೊತೆಜೊತೆಗೇ ಆರ್ಥಿಕತೆಯನ್ನೂ ಪೋಷಿಸುತ್ತಾ ಜಾತಿಧರ್ಮಗಳ ಎಲ್ಲೆಗಳನ್ನು ಮೀರಿ ಈ ರಾಷ್ಟ್ರದ ಒಟ್ಟು ನಾಗರಿಕರಿಗೆ ಇಂಬಾಗಿ ನಿಂತಿವೆ. ಈ ಮೂಲಕ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿವೆ.

ಆಧುನಿಕ ಭಾರತದ ಅಧ್ಯಾತ್ಮ ಸಾಧಕರು
`ಭಾರತದ ಚರಿತ್ರೆಯೆಂದರೆ ಇಲ್ಲಿನ ಮಹಾಪುರುಷರ ಜೀವನಗಾಥೆಗಳೇ’ ಎಂದಿದ್ದಾರೆ ಇತಿಹಾಸಕಾರ ಸುರೇಂದ್ರನಾಥ ಬ್ಯಾನರ್ಜಿ. ಭಾರತದ ಮಹಾಪುರುಷರೆಂದರೆ ಶ್ರೀಮಂತ ವ್ಯಾಪಾರಿಗಳಲ್ಲ, ರಾಜಮಹಾರಾಜರುಗಳಲ್ಲ. ಇಲ್ಲಿ ಸಾಧು ಸಂತರು,  ಆಧ್ಯಾತ್ಮಿಕ ಜೀವಿಗಳಿಗೇ ಹೆಚ್ಚಿನ ಮನ್ನಣೆ, ಬೆಲೆ.  ಮತ್ತು ಈ ಸಂತ ಸಾಲಿನಲ್ಲಿ ವರ್ಗ ಭೇದಗಳಿಲ್ಲ. ಆಧ್ಯಾತ್ಮಿಕವಾಗಿ ವಿಕಾಸಗೊಂಡ ಪ್ರತಿಯೊಬ್ಬರನ್ನೂ ಇಲ್ಲಿನ ನೆಲ ಗುರುವೆಂದು ಸ್ವೀಕರಿಸಿದೆ, ಅನುಸರಿಸುತ್ತ ನೆಚ್ಚಿಕೊಂಡಿದೆ. 

ಅದಕ್ಕೆ ಪೂರಕವಾಗಿ ಇಲ್ಲಿ ಆಗಿಹೋದ ಸಂತರನೇಕರು ಸಮಾಜ ಸುಧಾರಣೆಯ ಹರಿಕಾರರಾಗಿಯೂ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆಧುನಿಕ ಭಾರತದ ಕಾಲಘಟ್ಟವನ್ನೆ ತೆಗೆದುಕೊಂಡರೆ, 20ನೇ ಶತಮಾನದಲ್ಲಿ ಆಗಿಹೋದ ಸ್ವಾಮಿ ವಿವೇಕಾನಂದ, ನಾರಾಯಣ ಗುರು, ಯೋಗಿ ಅರವಿಂದ ಮೊದಲಾದವರು ರಾಷ್ಟ್ರರ್ಷಿಗಳಂತೆ ಮುಂಚೂಣಿಯಲ್ಲಿ ನಿಂತು ಅಧ್ಯಾತ್ಮ ಹಾಗೂ ರಾಷ್ಟ್ರೀಯ ಭಾವನೆಗಳನ್ನು ಜೊತೆಜೊತೆಯಲ್ಲೆ ಪೋಷಿಸಿದರು. ವಿದೇಶದಿಂದ ಬಂದು ನೆಲೆಸಿ ಇಲ್ಲಿನ ತತ್ತ್ವ ಶಾಸ್ತ್ರ, ಅಧ್ಯಾತ್ಮಗಳ ಅಭ್ಯಾಸದಲ್ಲಿ ತೊಡಗಿದ್ದ ಆ್ಯನಿ ಬೆಸೆಂಟ್ ಹಾಗೂ ಸೋದರಿ ನಿವೇದಿತಾ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳ ವಿಸ್ತರಣೆಯಾಗಿ ಭಾರತ ಪ್ರೇಮದಲ್ಲಿ, ಭಾರತೀಯರ ಸೇವೆಯಲ್ಲಿ ಆಸಕ್ತಿ ತೋರಿದರು. `ಈ ರಾಷ್ಟ್ರದ ಕಂಪನವನ್ನು, ಮಿಡಿತವನ್ನು ನಾವು ಅರಿಯಲಿಲ್ಲವಾದರೆ, ಈ ನೆಲದ ಅತಿ ಶ್ರೇಷ್ಠ ಆಧ್ಯಾತ್ಮಿಕ ಕೊಡುಗೆಗಳನ್ನೂ ನಾವು ಅರಿಯಲು ಸಾಧ್ಯವಾಗದು’ ಎಂದಿದ್ದರು ಭಗಿನಿ ನಿವೇದಿತಾ.

ರಾಷ್ಟ್ರದೊಡನೆ ತಾದಾತ್ಮ್ಯದ ಪ್ರಸ್ತಾಪ ಬಂದಾಗ ವಿವೇಕಾನಂದರಿಗಿಂತಲೂ ಒಂದು ಹೆಜ್ಜೆ ಮುಂದೆ ನಿಲ್ಲುವವರು ರಾಮತೀರ್ಥರು. ಅಪ್ರತಿಮ ಅದ್ವೈತಿಯಾಗಿದ್ದ ರಾಮತೀರ್ಥರು `ನಾನೇ ಭಾರತ, ಭಾರತವೇ ನಾನು. ನಾನು ನಡೆದಾಡಿದರೆ ಭಾರತ ನಡೆದಾಡಿದಂತೆ, ಮಾತಾಡಿದರೆ ಭಾರತವೇ ಮಾತಾಡಿದಂತೆ ನನಗೆ ಭಾಸವಾಗುತ್ತದೆ’ ಎಂದು ಘೋಷಿಸಿದ್ದರು ಅವರು. ಒಬ್ಬ ವ್ಯಕ್ತಿಯಲ್ಲಿ ಒಂದು ದೇಶವನ್ನು ಕಾಣಲು ಸಾಧ್ಯವಾಗಬೇಕು. ಹೀಗೆ ಪ್ರತಿಯೊಬ್ಬರಲ್ಲೂ ರಾಷ್ಟ್ರವನ್ನೆ ಕಂಡರೆ, ಪರಸ್ಪರ ಸೇವೆಗೈಯುತ್ತ ದೇಶವನ್ನು ಪ್ರಗತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎನ್ನುವುದು ಅವರ ಬೋಧನೆಯ ಸಾರವಾಗಿತ್ತು.

ವೇದಗಳ ಉಲ್ಲೇಖ
ವೇದೋಪನಿಷತ್ತಿನ ಕಾಲದಿಂದಲೂ ನಮ್ಮ ಋಷಿಗಳಲ್ಲಿ `ರಾಷ್ಟ್ರ ಪ್ರಜ್ಞೆ’ ಅಧ್ಯಾತ್ಮ ಸಾಧನೆಯ ಒಂದು ಭಾಗವಾಗಿಯೇ ಬಂದಿದೆ. ಈ ಮಾತಿಗೆ ಪುಷ್ಟಿ ನೀಡುವ ಕೆಲವು ಶ್ಲೋಕಗಳು ಹೀಗಿವೆ:

ಆ ಯದ್ ವಾಮೀಯ ಚಕ್ಷಸಾ
ಮಿತ್ರ ವಯಂ ಚ ಸೂರಯಃ
ವ್ಯಚಿಷ್ಠೇ ಬಹುಪಾಯ್ಯೇ
ಯತೇಮಹಿ ಸ್ವರಾಜ್ಯೇ
`ವಿಶ್ವದೃಷ್ಟಿ ತಳೆದು ಸೌಹಾರ್ದದಿಂದ ನಾವೆಲ್ಲರೂ ಸಂಘಟಿತರಾಗಿ ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ಶ್ರಮಿಸೋಣ`
(ಋಗ್ವೇದ- 5:66:6)

ಭದ್ರಮಿಚ್ಛಂತ ಋಷಯಃ ಸ್ವರ್ವಿದಃ
ತಪೋದೀಕ್ಷಾಮುಪನಿಷೇದುರಗ್ರೇ
ತತೋ ರಾಷ್ಟ್ರಂ ಬಲಮೋಜಶ್ಚ ಜಾತಂ
ತದಸ್ಮೈ ದೇವಾ ಉಪಸಂ ನಮನ್ತು
`ಇಡೀ ಜಗತ್ತಿಗೆ ಕಲ್ಯಾಣವನ್ನುಂಟು ಮಾಡುವ ಇಚ್ಛೆಯಿಂದ ಆತ್ಮಜ್ಞಾನಿಗಳಾದ ಋಷಿಗಳು ಸೃಷ್ಟಿಯ ಆದಿಯಲ್ಲಿ ದೃಢ ದೀಕ್ಷೆ ತೊಟ್ಟು ಮಾಡಿದ ತಪಸ್ಸಿನ ಫಲವಾಗಿ ರಾಷ್ಟ್ರದ ನಿರ್ಮಾಣವಾಯಿತು. ರಾಷ್ಟ್ರದಲ್ಲಿ ಬಲಪರಾಕ್ರಮಗಳು ವೃದ್ಧಿಗೊಂಡವು. ಅಂಥಾ ಮಹಿಮಾನ್ವಿತ ರಾಷ್ಟ್ರವನ್ನು ದೇವತೆಗಳೂ ವಿದ್ವಾಂಸರೂ ನಮ್ರತೆಯಿಂದ ಉಪಾಸನೆ ಮಾಡಿ ಅದನ್ನು ವೃದ್ಧಿಗೊಳಿಸಲಿ’
(ಅಥರ್ವ ವೇದ- 19:41:1)

ವಯಂ ರಾಷ್ಟ್ರೇ ಜಾಗೃಯಾಮ ಪುರೋಹಿತಾಃ
`ನಾವೆಲ್ಲರೂ ರಾಷ್ಟ್ರಹಿತಕ್ಕಾಗಿ ಮುಂಚೂಣಿಯಲ್ಲಿ ನಿಂತು ಸದಾ ಜಾಗೃತರಾಗಿರೋಣ’
(ಯಜುರ್ವೇದ- 9:23)

Leave a Reply