ಅಂಬೆಯ ನೆನಪಲ್ಲಿ ಭೀಷ್ಮನ ಸ್ವಗತ…

ಕಾಯುತ್ತಲೇ ಇದ್ದ ಭೀಷ್ಮ. ಸಾಯುತ್ತಲೇ ಇದ್ದ ದಿನದಿನವೂ…. ಕುರುಕುಲ ಸಿಂಹಾಸನ ಬರಿದಾದಾಗಲೆಲ್ಲ; ಗಂಡುಗಳು ಬರಡಾದಾಗಲೆಲ್ಲ; ಸತ್ಯವತಿ ತಲೆಮೇಲೆ ಕೈಹೊತ್ತು ಮೂಲೆ ಹಿಡಿದಾಗಲೆಲ್ಲ; ರಾಜಕಾರಣದ ಪುರುಸೊತ್ತಿನ ನಡುವೆ ಅಂಬೆಯ ಮುನಿಸಿನ ಮುದ್ದು ಮುಖ ನೆನಪಾದ ಘಳಿಗೆ ಘಳಿಗೆಯೆಲ್ಲ…! ~ ಚೇತನಾ ತೀರ್ಥಹಳ್ಳಿ

mahabharat-20
ಚಿತ್ರಕೃಪೆ: ಇಂಟರ್ನೆಟ್

ಮಾತೆತ್ತಿದರೆ ಸತ್ಯವತಿ ತಲೆಮೇಲೆ ಕೈಹೊತ್ತು ಮಲಗುತ್ತಾಳೆ.
ಅಪ್ಪ ಸತ್ತಾಗ ಮೊದಲ ಸಾರ್ತಿ ಹೀಗೆ ಮೂಲೆ ಹಿಡಿದು ಕುಂತಿದ್ದಳು. ಚಿತ್ರ- ವಿಚಿತ್ರ ವೀರ್ಯರನ್ನ ಸಾಕುವ ಹೊಣೆ ನಾನೇ ಹೊತ್ತೆ.
ಒಬ್ಬ ಯುದ್ಧದಲ್ಲಿ ಸತ್ತ. ಮತ್ತೊಬ್ಬನಿಗೆ ಮದುವೆ ಮಾಡಲು ನಾನು ಹೆಣ್ಣುಗಳನ್ನ ಹೊತ್ತು ತಂದೆ.
ಅಂಬೆ, ಅಂಬಿಕೆ, ಅಂಬಾಲಿಕೆ….

ಆ ಹಿರಿಯ ಹುಡುಗಿ ಶಾಲ್ವ ರಾಜನ್ನ ಪ್ರೇಮಿಸಿದ್ದಳಂತೆ.
ಹೋಗುತ್ತೇನೆಂದಳು. ಬಿಟ್ಟುಕೊಟ್ಟೆ. ಅಂವ ಸ್ವೀಕರಿಸಲಿಲ್ಲವೆಂದು ವಾಪಸು ಬಂದಳು, ನನ್ನ ಮದುವೆಯಾಗೆಂದು ದುಂಬಾಲು ಬಿದ್ದಳು.
ನಾನೇನೂ ಬಯಸಿ ಬಯಸಿ ಬ್ರಹ್ಮಚಾರಿಯಾದವನಲ್ಲ. ಅದೊಂದು ಶಪಥ. ನನಗೆ ನಾನೇ ಕಟ್ಟಿಕೊಂಡ ಚೌಕಟ್ಟು. ಅದನ್ನ ಮೀರಲಾರದೆ ಹೋದೆ.
ಅವಳು ಉರಿಮೋರೆಯಲ್ಲಿ ಮುಂಜಾವದ ಸೂರ್ಯನ ಹಾಗೆ ಕಾಣ್ತಿದ್ದಳು. ಎತ್ತರದ ನಿಲುವಿನ ತೋರ ಮೊಲೆಗಳ ಕಾಶೀ ಸುಂದರಿ. ನನ್ನ ಬಾಹುಗಳಿಗೆ ಸವಾಲೆಸೆಯುವಂತಿತ್ತು ಅವಳ ದಿಟ್ಟ ನೋಟ. ಕಡೆದಿಟ್ಟ ಮೈ, ಕೆಚ್ಚು ತುಳುಕುವ ಅಂಗಾಂಗ. . .
ಇಲ್ಲ. ಮಾತಿಗೆ ತಪ್ಪಲಾರದಾದೆ. ನಾನು ಗಂಗೆಯ ಮಗ, ಗಾಂಗೇಯ!

ಅಂಬೆ ಅವಡುಗಚ್ಚಿದಳು. “ನನ್ನಿಂದಲೇ ನಿನಗೆ ಸಾವು!”
ಆ ಸುಂದರಿಯನ್ನ ಬದುಕಾಗಿಸಿಕೊಳ್ಳುವ ಯೋಗ ನನಗಿರಲಿಲ್ಲ. ಅವಳಿಂದ ಸಾವಾದರೂ. . . ಆಹಾ! ಎಂಥ ಸುಂದರ ಸಜೆ!!

ಕಾಲ ಸರಿಯಿತು. ಮತ್ತೆ ಕುರುಕುಲ ಸಿಂಹಾಸನ ಬರಿದು. ಮೂಲೆಯಲ್ಲಿ ತಲೆಮೇಲೆ ಕೈಹೊತ್ತ ಮಾತೆ, ಸತ್ಯವತಿ.
ಸೊಸೆಯರಿಗೆ ಮಕ್ಕಳಿಲ್ಲ. ಹೇಳುತ್ತಿದ್ದಾಳೆ ಆಕೆ: “ನೀನೊಂದು ಮದುವೆ ಮಾಡಿಕೋ”
ಅಪ್ಪ ಅವಳನ್ನ ಪ್ರೇಮಿಸಿದಾಗಲೇ ನನ್ನ ಮದುವೆ ಮಾತು ಮುರಿದು ಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ಕಥೆ. ನಾನು ಬಿಲ್ಕುಲ್ ಆಗೋಲ್ಲವೆಂದು ಮುಖ ತಿರುವಿದೆ.

ರಾಜಕುಲಗಳಲ್ಲಿ ಕುರ್ಚಿಯುಳಿಸಲಿಕ್ಕೆ ನೂರೆಂಟು ಒಳದಾರಿ. ನಿಯೋಗಕ್ಕೆ ಸಮ್ಮತಿಸು ಅಂದಳು.
ಅಂಬಿಕೆ, ಅಂಬಾಲಿಕೆಯರೊಟ್ಟಿಗೆ ನಿಯೋಗ!? ನನ್ನ ತಮ್ಮನ ಹೆಂಡತಿಯರೊಟ್ಟಿಗೆ ಮಲಗುವುದು? ಅದೂ ಅಂಬೆಯ ತಂಗಿಯರೊಟ್ಟಿಗೆ!?
ಅಂಬೆ. . .
ಕೇಕೆ ಹಾಕಿ ನಗುತ್ತಿದ್ದಳು. ಕೆಂಪಗೆ ಮುನಿಯುತ್ತಿದ್ದಳು. ಅಷ್ಟುದ್ದ ಕೂದಲನ್ನ ಚಾವಟಿ ಮಾಡಿ ಎದೆಯ ಮೇಲೆ ಬೀಸಿ, ನೋಯಿಸಿ ಮಾಯವಾದಳು!
ಎಲ್ಲಿ ಹೋದಳೋ? ಏನಾದಳೋ? ಈ ಚಿರಂಜೀವಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನಂದಿದ್ದಳು. ಅಲ್ಲಿಯವರೆಗೆ ಹೇಗೆ ಜೀವ ಹಿಡಿಯುವಳೋ? ಮತ್ತೆ ಹುಟ್ಟಿ ಬರುವಳೋ?
~
ಕಾಯುತ್ತಲೇ ಇದ್ದ ಭೀಷ್ಮ. ಸಾಯುತ್ತಲೇ ಇದ್ದ ದಿನದಿನವೂ…. ಕುರುಕುಲ ಸಿಂಹಾಸನ ಬರಿದಾದಾಗಲೆಲ್ಲ; ಗಂಡುಗಳು ಬರಡಾದಾಗಲೆಲ್ಲ; ಸತ್ಯವತಿ ತಲೆಮೇಲೆ ಕೈಹೊತ್ತು ಮೂಲೆ ಹಿಡಿದಾಗಲೆಲ್ಲ; ರಾಜಕಾರಣದ ಪುರುಸೊತ್ತಿನ ನಡುವೆ ಅಂಬೆಯ ಮುನಿಸಿನ ಮುದ್ದು ಮುಖ ನೆನಪಾದ ಘಳಿಗೆ ಘಳಿಗೆಯೆಲ್ಲ…!

2 Comments

Leave a Reply