ಅಧ್ಯಾತ್ಮ ಡೈರಿ : ಸಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ….

ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತೇವೆ! ~ ಅಲಾವಿಕಾ


ಮಸ್ಯೆ ಒಂದು ತಾತ್ಕಾಲಿಕ ಸ್ಥಿತಿ. ಮನುಷ್ಯನ ಮನಸ್ಥಿತಿಯನ್ನು ಅವಲಂಬಿಸಿದ ಒಂದು ಮಿಥ್ಯಾವಸ್ಥೆಯದು. ವಾಸ್ತವದಲ್ಲಿ ಸಮಸ್ಯೆ ಎಂಬುದೇ ಇಲ್ಲ. ಅದನ್ನು ನಾವೇ ಹುಟ್ಟುಹಾಕಿಕೊಳ್ಳುತ್ತೇವೆ. ನಾವು ಅವಕಾಶ ಮಾಡಿಕೊಡದ ಹೊರತು ಯಾವ ಸಂಗತಿಯೂ ನಮ್ಮನ್ನು ಬಾಧಿಸಲಾರವು. ಆದ್ದರಿಂದ ಸಮಸ್ಯೆಗಳು ತಲೆದೋರಿದಾಗ ಅವುಗಳ ಬೇರು ನಮ್ಮೊಳಗೇ ಇದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮತ್ತು ಅದನ್ನು ನಮ್ಮದೇ ದೃಢಮನಸ್ಕತೆಯಿಂದ ಬುಡ ಸಹಿತ ಕೆಡವಿಹಾಕಬೇಕು.

“ಸಮಸ್ಯೆಗೆ ಪರಿಹಾರವಿದೆಯೇ? ಮತ್ತೇಕೆ ಚಿಂತಿಸುತ್ತೀ!? ಸಮಸ್ಯೆಗೆ ಪರಿಹಾರ ಇಲ್ಲವೇ? ಹಾಗಾದರೆ ಮತ್ತೇಕೆ ವೃಥಾ ಚಿಂತಿಸುತ್ತೀ!?” ಎಂದು ಕೇಳುತ್ತಾನೆ ಸಂತ ಶಾಂತಿ ದೇವ. ಜೀವನದಲ್ಲಿ ನಮಗೆ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಮತ್ತು ಆ ಪರಿಹಾರವು ನಮ್ಮ ಅಂತರಂಗದಲ್ಲೇ ಅಡಗಿರುತ್ತದೆ.

ಸಮಸ್ಯೆಗೆ ಪರಿಹಾರ ಹುಡುಕುವುದು ಎಂದಾಗ ಒಂದು ಕಥೆ ನೆನಪಾಗುತ್ತದೆ.
ಮುದುಕಿಯೊಬ್ಬಳು ಬೀದಿ ದೀಪದ ಕೆಳಗೆ ಏನನ್ನೋ ಹುಡುಕುತ್ತ ಇರುತ್ತಾಳೆ. `ಅಜ್ಜಿ, ಏನು ಹುಡುಕುತ್ತಾ ಇದ್ದೀಯ?’ ಕೇಳುತ್ತಾನೆ ಮುಲ್ಲಾ ನಸ್ರುದ್ದೀನ್.
“ನನ್ನ ಸೂಜಿ ಕಳೆದು ಹೋಗಿದೆ. ಅದನ್ನೇ ಹುಡಕ್ತಾ ಇದ್ದೀನಿ” ಅನ್ನುವಳು ಅಜ್ಜಿ.
“ಅದನ್ನ ಇಲ್ಯಾಕೆ ತಂದುಕೊಂಡಿದ್ದೆ? ಸೂಜಿಯನ್ನ?” ಮುಲ್ಲಾನ ಪ್ರಶ್ನೆ,
“ಅಯ್ಯೋ! ನಾನೆಲ್ಲಿ ಸೂಜಿಯನ್ನ ಇಲ್ಲಿಗೆ ತಂದಿದ್ದೆ!? ಅದು ಕಳೆದುಹೋಗಿದ್ದು ಮನೆಯಲ್ಲಿ. ಆದರೆ ಮನೆಯೊಳಗೆ ಈ ಹೊತ್ತು ಬೆಳಕಿಲ್ಲ. ಎಲ್ಲಿ ಬೆಳಕಿದೆಯೋ ಅಲ್ಲಿ ತಾನೆ ಅದು ಕಾಣುವುದು?” ಅಜ್ಜಿಯ ಮರುಪ್ರಶ್ನೆ.
“ಬೆಳಕು ಎಲ್ಲಿದೆಯೋ ಅಲ್ಲಿ ಹುಡುಕಬೇಕಿಲ್ಲ ಅಜ್ಜಿ. ಹುಡುಕಬೇಕಿರೋದು ಎಲ್ಲಿ ಕಳೆದುಹೋಗಿದೆಯೋ ಅಲ್ಲಿ!” ಆಕೆಗೆ ತಿಳಿಸಿ ಹೇಳಲು ಬಾಯ್ತೆರೆದ ಮುಲ್ಲಾ ನಸ್ರುದ್ದೀನ್, ಇಷ್ಟೂ ವರ್ಷಗಳ ಕಾಲ ಆಕೆ ಮಾಡಿಕೊಂಡು ಬಂದಿರುವುದೇ ಇದನ್ನು. ಆದ್ದರಿಂದಲೇ ಆಕೆ ಕಳಕೊಂಡ ಯಾವ ವಸ್ತುವೂ ಇಲ್ಲೀತನಕ ಮರಳಿ ಸಿಕ್ಕಿಲ್ಲ ಅಂದುಕೊಂಡು ಸುಮ್ಮನಾಗುವನು.

ನಾವು ಮಾಡುವುದೂ ಇದನ್ನೇ. ಏನೋ ಒಂದು ಅನಿರೀಕ್ಷಿತ ಸಂಗತಿ ನಡೆದುಹೋದಾಗ ನಾವು ಅದನ್ನು ಕುರಿತು ಚಿಂತಿಸತೊಡಗುತ್ತೇವೆ. ಆತಂಕಪಡುತ್ತೇವೆ. ನೀರಿಗೆ ಬಿದ್ದಾಗ ಈಜುವುದು ಜಾಣತನ. ಅದನ್ನು ಬಿಟ್ಟು ನೀರಿಗೆ ಹೇಗೆ ಬಿದ್ದೆ, ಯಾಕೆ ಬಿದ್ದೆ, ಯಾರಾದರೂ ದೂಡಿದರೋ ನಾನೇ ಬಿದ್ದೆನೋ ಎಂದೆಲ್ಲ ಯೋಚಿಸುತ್ತ ಆ ಒಂದು ಘಟನೆಯನ್ನು ಸಮಸ್ಯೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತೇವೆ!

ವಿಷಯ ಸರಳವಿದೆ. ನಾವು ನೀರಿಗೆ ಬಿದ್ದಿದ್ದೇನೆ. ಈಜು ಬಂದರೆ ಕೈ ಕಾಲು ಬಡಿಯಬೇಕು. ಆಗ ಹೊರಬಂದು ಪಾರಾಗಬಹುದು. ಈಜು ಬರುವುದಿಲ್ಲವಾದಲ್ಲಿ ಉಸಿರುಗಟ್ಟಿ ಸಾಯುವುದು ಅನಿವಾರ್ಯ. ಸಾವು ಖಚಿತ ಇರುವಾಗ ಯಾವ ಆಕ್ಷೇಪ, ದೂರು, ದುಗುಡಗಳಿಂದ ತಾನೆ ಏನು ಪ್ರಯೋಜನ? ಅಥವಾ ಕೊನೆಪಕ್ಷ ಯಾರನ್ನಾದರೂ ಸಹಾಯಕ್ಕಾಗಿ ಯಾಚಿಸಿ ಕೂಗಬೇಕು. ಒಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೇ ಹೊರತು ಚಿಂತಿಸುತ್ತ ಉಳಿಯುವುದಲ್ಲ. ಅದರಿಂದ ಸಮಸ್ಯೆ ಒಂದು ಅಪಾಯವಾಗಿ ಬೆಳೆಯುತ್ತದೆಯೇ ವಿನಃ ಪರಿಹಾರವಂತೂ ಒದಗುವುದಿಲ್ಲ.

ಎಷ್ಟು ದೊಡ್ಡ ಕಲ್ಲನ್ನು ನಾವು ನಮ್ಮ ಅಂತರಂಗದ ಕೊಳಕ್ಕೆ ಎಸೆದುಕೊಳ್ಳುತ್ತೇವೋ ಅಷ್ಟು ಹೆಚ್ಚಿನ ತರಂಗಗಳು ಅಲ್ಲಿ ಮೂಡುತ್ತವೆ. ಸಮಸ್ಯೆಗಳೂ ಅಷ್ಟೇ. ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಚಿಕ್ಕ ಚಿಕ್ಕ ಪರಿಹಾರಗಳು, ಮತ್ತು ದೊಡ್ಡ ದೊಡ್ಡ ಸಮಸ್ಯೆಗಳಿಗೆ ದೊಡ್ಡ ದೊಡ್ಡ ಪರಿಹಾರಗಳ ಅವಶ್ಯಕತೆ ಇರುತ್ತದೆ. ಚಿಕ್ಕ ಸಮಸ್ಯೆಗಳ ಪರಿಹಾರಕ್ಕೆ ನಮಗೆ ಅಂತಹ ದೊಡ್ಡದಾದ ಧೈರ್ಯದ ಅವಶ್ಯಕತೆ ಇಲ್ಲದಿದ್ದರೂ ದೊಡ್ಡ ಸಮಸ್ಯೆಗಳನ್ನು ಎದುರಿಸಲು ಅಪಾರ ಸ್ಥೈರ್ಯ ಇರಬೇಕಾಗುತ್ತದೆ. ಚಿಕ್ಕ ಸಮಸ್ಯೆಗಳ ಪರಿಹಾರಕ್ಕೆ ಭೌತಿಕ ಪ್ರಯತ್ನ ಸಾಕಾಗುತ್ತದೆ. ಆದರೆ ದೊಡ್ಡ ಸಮಸ್ಯೆಗಳ ಪರಿಹಾರಕ್ಕೆ ಪ್ರಬಲ ಆತ್ಮಶಕ್ತಿಯ ಅವಶ್ಯಕತೆ ಇರುತ್ತದೆ. ಈ ಸನ್ನಿವೇಶದಲ್ಲಿ ನಮಗಿಂತಾ ಹೆಚ್ಚು ಆತ್ಮಶಕ್ತಿಯನ್ನು ಹೊಂದಿರುವ ಸ್ನೇಹಿತರು, ಸಂಬಂಧಿಕರು ಅಥವಾ ಗುರುಗಳನ್ನು ಸಹಾಯಕ್ಕಾಗಿ ಯಾಚಿಸುವುದು ತಪ್ಪಲ್ಲ.

ಆದರೆ ಹೀಗೆ ಸಹಾಯ ಯಾಚಿಸುವಾಗ ಒಂದು ಅಂಶ ಗಮನದಲ್ಲಿ ಇಟ್ಟುಕೊಳ್ಳಬೇಕು. ಇತರರು ನಮಗೆ ಮಾರ್ಗದರ್ಶನ ಮಾಡಬಲ್ಲರೇ ಹೊರತು ನಮ್ಮ ಸಮಸ್ಯೆಯನ್ನು ತಮ್ಮ ತಲೆಯ ಮೇಲೆ ಎಳೆದುಕೊಳ್ಳಲಾರರು. ಹಾಗೆ ಎಳೆದುಕೊಳ್ಳುವುದು ಸಾಧ್ಯವಿಲ್ಲ ಕೂಡ. ಏಕೆಂದರೆ ಸಮಸ್ಯೆಗಳಿಂದ ತುಂಬಿದ ಮನಸ್ಸು ಅಲುಗಾಡುತ್ತಿರುವ ಒಂದು ಬಿಂದಿಗೆಯಂತೆ. ಆ ಬಿಂದಿಗೆ ನಾವೇ ಆಗಿದ್ದೇವೆ. ಎಲ್ಲಿಯವರೆಗೆ ನಾವು ಅಲುಗಾಡುವುದನ್ನು ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೆ ಒಳಗಿನ ನೀರಿನ ಕುಲುಕಾಟವೂ ತಪ್ಪುವುದಿಲ್ಲ.

ಆದ್ದರಿಂದ ಕುಲುಕಾಟ ನಿಲ್ಲಿಸಿ, ಒಳಗಿನ ನೀರೂ ಕಂಪನವಿಲ್ಲದೆ ಶಾಂತವಾಗುವುದು. ಸಮಸ್ಯೆಗಳಿಗೆ ವಿಚಲಿತರಾಗಬೇಡಿ, ನೆಮ್ಮದಿ ನಿಮ್ಮದಾಗುವುದು.

Leave a Reply