ಎರೆಹುಳ ನುಂಗಿ ಹೊರಹಾಕಿದ ಮಣ್ಣು ನೆಲವಾಯ್ತು, ಹಂಸದ ಹೊಟ್ಟೆಯಲ್ಲಿ ಮನುಷ್ಯರು ಹುಟ್ಟಿದರು :  ಸೃಷ್ಟಿಕಥನಗಳು #1

ವಿಜ್ಞಾನದ ವಿವರಣೆಯಂತೂ ಸರಿ; ಧರ್ಮಗ್ರಂಥಗಳು, ಶಾಸ್ತ್ರಗ್ರಂಥಗಳು ಹೇಳುವ ಸೃಷ್ಟಿ ಕಥನಗಳಾಚೆ ನೂರಾರು ಸ್ವಾರಸ್ಯಕರ, ಕುತೂಹಲಭರಿತ ಸೃಷ್ಟಿಗಾಥೆಗಳಿವೆ. ಜನಪದ ಕಥೆ, ಕಾವ್ಯಗಳ ರೂಪದಲ್ಲಿ ಮೌಖಿಕವಾಗಿ ತಲೆಮಾರುಗಳಿಂದ ಹರಿದುಬಂದ ಈ ಕಥನಗಳು ನಮಗೆ ಆಯಾ ಸಮುದಾಯದ ನಂಬಿಕೆ, ಪ್ರಾಮುಖ್ಯತೆ, ಭೌಗೋಳಿಕ  ವಿವರಗಳೇ ಮೊದಲಾದ ತಿಳಿವನ್ನೂ ನೀಡುತ್ತವೆ. ಆದ್ದರಿಂದಲೇ ‘ಅರಳಿ ಬಳಗ’ ಸೃಷ್ಟಿಕಥನಗಳ ಸರಣಿಯನ್ನು ಆರಂಭಿಸುತ್ತಿದೆ. ಹಲವು ಆಕರಗಳಿಂದ ಸಂಗ್ರಹಿಸಿದ ಕಥನಗಳನ್ನು ಒಂದು ಚೌಕಟ್ಟಿನಲ್ಲಿ ಕೂರಿಸಿ ಅನುವಾದ ಮಾಡಲಾಗಿದೆ. ಈ ಸರಣಿ ನಿಮಗೆ ಇಷ್ಟವಾಗಲೆಂಬ ಆಶಯ ನಮ್ಮದು | ಅರಳಿ ಬಳಗ

 ಸಂತಾಲಿ ಜನಪದ ಕತೆಗಳ ಪ್ರಕಾರ ಸಮುದ್ರದಿಂದ ಮಣ್ಣು ತೆಗೆಸಿ ನೆಲವನ್ನು ನಿರ್ಮಿಸಿದ್ದು ಲಿತಾ ಎಂಬ ದೇವರು. ಈ ಕಾರ್ಯದಲ್ಲಿ ಮುಖ್ಯ ಪಾತ್ರ ವಹಿಸಿದ್ದು ಎರೆಹುಳ ಮತ್ತು ಆಮೆ. ಮನುಷ್ಯರು ಹುಟ್ಟಿದ್ದು ಹಂಸ ಇಟ್ಟ ಮೊಟ್ಟೆಯಿಂದ….

ಸಂಗ್ರಹ ಮತ್ತು ಅನುವಾದ | ಚೇತನಾ ತೀರ್ಥಹಳ್ಳಿ

sant
internet ಚಿತ್ರ

ಮೊದಲು ಇದ್ದಿದ್ದೆಲ್ಲಾ ಬರೀ ಸಮುದ್ರ. ನೆಲದ ಸುಳೀವೇ ಇಲ್ಲ. ಹೀಗಿರುವಾಗ ಲಿತಾ ದೇವರು ಠಾಕೂರ್ ಮತ್ತು ಠಾಕೂರಾಯಿನ್ ಅಣತಿಯಂತೆ ಸಮುದ್ರದ ಆಳದಲ್ಲೊಂದಷ್ಟು ಜೀವಿಗಳನ್ನು ಸೃಷ್ಟಿಸಿದ. ಇಚ್ಛಾ ಹಕು (ಸೀಗಡಿ), ಕಟಕಮ್ (ಏಡಿ), ಹೋರೋ (ಆಮೆ) ಮೊದಲಾದ ಜಲಚರಗಳು ಮತ್ತು ಲೆಂದೇತ್ (ಎರೆಹುಳ)ಗಳು ಹುಟ್ಟಿಕೊಂಡಿದ್ದು ಹೀಗೆ.

ಆಮೇಲೆ ಲಿತಾಗೆ ಒಂದು ದಿನ ಮನುಷ್ಯರನ್ನು ಸೃಷ್ಟಿಸುವ ಮನಸಾಯ್ತು. ಮೈಮೇಲಿನ ಕೊಳೆಯನ್ನೆಲ್ಲ ಉಜ್ಜಿ ತೆಗೆದು ಎರಡು ಗೊಂಬೆಗಳನ್ನು ಮಾಡಿದ. ಇನ್ನೀಗ ಅವಕ್ಕೆ ಜೀವ ತುಂಬಬೇಕು. ಸಹಾಯಕಿ ಬಳಿ, ಒಳ ಕೋಣೆಯಲ್ಲಿ ನೇತುಹಾಕಿದ್ದ ಎರಡು ಜೀವಗಳನ್ನು ತರಲು ಹೇಳಿದ. ಅವಳು ಹೋಗಿ ಜೀವಗಳನ್ನು ತಂದಳು. ಲಿತಾ ಅವನ್ನು ಗೊಂಬೆಗಳಿಗೆ ತುಂಬಿದ. ಅರೆ! ಆ ಎರಡೂ ಗೊಂಬೆಗಳು ಹಕ್ಕಿಗಳಾಗಿ ಹಾರಿ ಹೋದವು!! ಹಂಸ – ಹಂಸೆಯರಾಗಿ ರೆಕ್ಕೆ ಬೀಸಿ ಹೊರಟುಹೋದವು!!

ಲಿತಾ ಹೀಗೇಕಾಯ್ತೆಂದು ಕೇಳಿದಾಗ ಸಹಾಯಕಿ ತಪ್ಪೊಪ್ಪಿಕೊಂಡಳು. ಮನುಷ್ಯರ ಜೀವಗಳನ್ನು ಸ್ವಲ್ಪ ಎತ್ತರದಲ್ಲಿ ನೇತುಹಾಕಲಾಗಿತ್ತು. ಅವಳಿಗದು ಎಟುಕದೆ, ಕೈಗೆ ಸಿಕ್ಕ ಹಕ್ಕಿಗಳ ಜೀವವನ್ನೇ ತಂದುಕೊಟ್ಟಿದ್ದಳು.

ಈಗೇನು ಮಾಡುವುದು ಅಂತ ಲಿತಾ ಯೋಚನೆ ಮಾಡುತ್ತಿದ್ದಾಗ ಹಾರಿಹೋದ ಹಂಸಗಳು ಮರಳಿ ಬಂದವು. ಅವಕ್ಕೆ ಕಾಲೂರಲು ಎಲ್ಲೂ ಜಾಗವೇ ಸಿಗಲಿಲ್ಲ. ಅಷ್ಟು ಸಮುದ್ರವೇ ತುಂಬಿಕೊಂಡಿತ್ತು ಭೂಮಿಯ ಮೇಲೆ. ಲಿತಾ ಅವುಗಳನ್ನು ತನ್ನ ಕೈಮೇಲೆ ಕೂರಿಸಿಕೊಂಡ. ಬೆಳಗಾಗುವವರೆಗೂ ಆಸರೆ ಕೊಟ್ಟ. ಬೆಳಗಾಗುತ್ತಲೇ ಅವು ಮತ್ತೆ ಹಾರಿಹೋದವು. ಮತ್ತೆ ಸಂಜೆ ಮರಳಿ ಲಿತಾನ ದೇಹದಲ್ಲಿ ಆಸರೆ ಪಡೆದವು. ಹೀಗೇ ದಿನಗಳು ಕಳೆದು ಹಂಸೆ ಮೊಟ್ಟೆ ಇಡುವ ಸಮಯ ಬರತೊಡಗಿತು.

ಈಗಂತೂ ನೆಲದ ವ್ಯವಸ್ಥೆ ಮಾಡಲೇಬೇಕು! ಎಷ್ಟು ದಿನ ಅವನ್ನು ತನ್ನ ಕೈಮೇಲೆ ಕೂರಿಸಿಕೊಳ್ಳೋದು ಅಂತ ಯೋಚಿಸಿದ ಲಿತಾ ಸಮುದ್ರದಿಂದ ತಳದಿಂದ ಮಣ್ಣೆತ್ತಿ ಒಂದಷ್ಟು ನೆಲವನ್ನು ನಿರ್ಮಿಸಬೇಕು ಅಂದುಕೊಂಡ. ಅದಕ್ಕಾಗಿ ಸಮುದ್ರದ ಜೀವಿಗಳನ್ನೂ, ಸಮುದ್ರ ತಳದ ಮಣ್ಣಿನಲ್ಲಿ ವಾಸವಿದ್ದ ಎರೆಹುಳಗಳನ್ನೂ ಕರೆದ. ಸೀಗಡಿ, ಏಡಿಗಳು ಮಣ್ಣೆತ್ತಲು ಸೋತವು. ಎರೆಹುಳಗಳ ರಾಜ ಅಷ್ಟಿಷ್ಟು ಪ್ರಯತ್ನಿಸಿತಾದರೂ ಸಂಪೂರ್ಣವಾಗಿ ಯಶಸ್ಸು ಕಾಣಲಿಲ್ಲ. ಕೊನೆಗೆ ಆಮೆಗಳ ರಾಜನೊಂದಿಗೆ ಸೇರಿ ಒಂದು ಉಪಾಯ ಹೂಡಿತು. ಎರೆಹುಳಗಳ ರಾಜ ಸಮುದ್ರದ ಬುಡದಲ್ಲಿದ್ದ ಮಣ್ಣನ್ನೆಲ್ಲ ನುಂಗಿ ಮೇಲೆ ಬಂದು ದೇಹದ ಮತ್ತೊಂದು ತುದಿಯಿಂದ ನೇರವಾಗಿ ಆಮೆ ರಾಜನ ಬೆನ್ನ ಮೇಲೆ ಬೀಳುವಂತೆ ಹೊರಹಾಕಿತು. ಆಮೆ ರಾಜ ಆ ಸಮುದ್ರದಲ್ಲಿ ತೇಲುತ್ತಾ, ಬೆನ್ನ ಮೇಲಿನ ಮಣ್ಣು ಒದ್ದೆಯಾಗದಂತೆ ಕಾಪಾಡಿಕೊಂಡ. ಲಿತಾ ಅದರ ನಾಲ್ಕು ಕಾಲುಗಳನ್ನು ಚಿನ್ನದ ಸರಪಳಿಗಳಿಂದ ಬಂಧಿಸಿ, ಅದು ಅಲುಗಾಡದ ಹಾಗೆ ವ್ಯವಸ್ಥೆ ಮಾಡಿದ. ಆಮೇಲೆ ಎರೆಹುಳಗಳ ರಾಜ ತನ್ನ ಪ್ರಜೆಗಳನ್ನೆಲ್ಲ ಕರೆದುಕೊಂಡು ಹಗಲಿರುಳು ದುಡಿದು ಸಮುದ್ರದ ತಳದಿಂದ ಮತ್ತಷ್ಟು ಮಣ್ಣೆತ್ತಿ ಆಮೆ ರಾಜನ ಮೈಮೇಲೆ ಹಾಕಿಸಿದ. ಆಮೇಲೆ ಆ ಮಣ್ಣನ್ನೆಲ್ಲ ಸಮುದ್ರದ ಅಂಚಿನಲ್ಲಿ ಪೇರಿಸಿ ಸಮತಟ್ಟು ಮಾಡಲಾಯ್ತು. ಭೂಮಿಯಲ್ಲಿ ಸಮುದ್ರದಿಂದ ನೆಲವನ್ನು ತೆಗೆದಿದ್ದು ಹೀಗೆ.

ಆಮೇಲೆ ಲಿತಾ ಹಂಸ ಪಕ್ಷಿಗಳನ್ನು ಅಲ್ಲಿ ತಂದು ಬಿಟ್ಟ. ಅವು ಸಂತಸದಿಂದ ಕುಣಿದು ಕುಪ್ಪಳಿಸಿದವು. ಕ್ರಮೇಣ ಆ ನೆಲದಲ್ಲಿ ಸಿರಮ್ ಎಂಬ ಹುಲ್ಲು ಮತ್ತು ಕರಮ್ ಎಂಬ ಮರ ಬೆಳೆದವು. ಸಿರಮ್ ಹುಲ್ಲಿನಿಂದ ಕರಮ್ ಮರದ ಮೇಲೆ ಹಂಸಗಳು ಗೂಡು ಕಟ್ಟಿಕೊಂಡವು. ಮತ್ತು ಅಲ್ಲೇ ಹೆಣ್ಣು ಹಂಸವು ಎರಡು ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟಿತು.

ಸ್ವಲ್ಪ ದಿನ ಕಳೆದು ಆ ಮೊಟ್ಟೆಯೊಡೆದು ಒಂದು ಗಂಡು ಮತ್ತು ಹೆಣ್ಣು ಮನುಷ್ಯರು ಹೊರಬಂದರು. ಮನುಷ್ಯರನ್ನು ನೋಡಿ ಲಿತಾನ ಖುಷಿಗೆ ಪಾರವೇ ಇಲ್ಲವಾಯ್ತು! ಅವನು ಗಂಡಿಗೆ ಪಿಲ್ಚು ಹದಮ್ ಅಂತಲೂ ಹೆಣ್ಣಿಗೆ ಪಿಲ್ಚು ಬುಧಿ ಅಂತಲೂ ಹೆಸರಿಟ್ಟ.

ಅಂದ ಹಾಗೆ ‘ಪಿಲ್’ ಅಂದರೆ ‘ಹುಟ್ಟಿಸಬಲ್ಲವರು’ ಎಂದರ್ಥ.

ಸಂತಾಲಿ ಜನಪದ ನಂಬಿಕೆಯ ಪ್ರಕಾರ ಭೂಮಿಯಲ್ಲಿ ಮೊದಲ ಗಂಡು ಮತ್ತು ಹೆಣ್ಣು ಹುಟ್ಟಿಕೊಂಡಿದ್ದು ಹೀಗೆ.

(ಸಂತಾಲರು : ಜಾರ್ಖಂಡ್, ಬಂಗಾಳ, ಬಿಹಾರ ಮೊದಲಾದೆಡೆಯ ಗುಡ್ಡಗಾಡು ಪ್ರದೇಶಗಳಲ್ಲಿ ನೆಲೆಸಿರುವ ಬುಡಕಟ್ಟು ಜನಾಂಗ. ಭಾಷೆ : ಸಂತಾಲಿ )

 

 

 

Leave a Reply