ಹೋಜ ಮತ್ತು ಉಪವಾಸ ತಪ್ಪಿಸಿದ್ದ ಹೆಂಗಸು : ಸೂಫಿ ಕಥೆ

ಮ್ಮೆ ಒಬ್ಬ ಹೋಜ (ಶಿಕ್ಷಕ) ಸಂತೆಯಲ್ಲಿ ಆಲಿವ್ ಹಣ್ಣುಗಳನ್ನು ಮಾರುತ್ತ ನಿಂತಿದ್ದ. ಎಷ್ಟು ಗಂಟಲು ಹರಿದುಕೊಂಡು ಕೂಗಿದರೂ ಗ್ರಾಹಕರು ಅವನ ಕಡೆ ಬರುತ್ತಿರಲಿಲ್ಲ. ಸಂಜೆಯಾದರೂ ಅವನ ಬುಟ್ಟಿಯ ಹಣ್ಣುಗಳು ಹಾಗೇ ಉಳಿದುಹೋಗಿದ್ದವು.

ಇನ್ನೇನು ಮನೆಗೆ ಹೋಗುವ ಹೊತ್ತಾಯಿತು ಅಂದುಕೊಳ್ಳುವಾಗ ಒಬ್ಬ ಹೆಂಗಸು ಅವನ ಮುಂದೆ ಹಾದುಹೋದಳು. ಹೋಜನು ಅವಳನ್ನು ಗಟ್ಟಿಯಾಗಿ ಕೂಗಿ ಕರೆದ. “ಬಹಳ ರುಚಿಯಾದ ಹಣ್ಣುಗಳು. ಸ್ವಲ್ಪವಾದರೂ ಕೊಂಡುಕೊಳ್ಳಿ” ಎಂದು ಮನವೊಲಿಸಲು ಯತ್ನಿಸಿದ.

ಆಕೆ “ನಾನು ಹಣ ತಂದಿಲ್ಲ” ಅಂದಳು.

ಹೋಜ, “ಅಡ್ಡಿ ಇಲ್ಲ. ಹಣ ಆಮೇಲೆ ಕೊಡಿ. ಈಗ ಹಣ್ಣು ಕೊಂಡುಕೊಳ್ಳಿ” ಅಂದ.

ಆಕೆ ಅಂಜಾಣಿಸುತ್ತಾ ನಿಂತಳು. ಹೋಜ ಅವಳ ಮುಂದೆ ಒಂದೆರಡು ಹಣ್ಣೂ ಹಿಡಿದು, “ಯಾಕೆ ಯೋಚನೆ? ಒಮ್ಮೆ ಇದರ ರುಚಿ ನೋಡಿ. ಆಮೇಲೆ ನೀವೇ ಕೊಳ್ಳುತ್ತೀರ” ಅಂದ.

ಆ ಹೆಂಗಸು, “ರುಚಿಗೇನೂ ಬೇಕಾಗಿಲ್ಲ. ನಾನು ಉಪವಾಸದಲ್ಲಿದ್ದೇನೆ” ಅಂದಳು.

“ಉಪವಾಸ ಯಾಕೆ? ರಮ್’ದಾನ್ ಮುಗಿದು ಆರು ತಿಂಗಳಾದವಲ್ಲ?” ಹೋಜ ಕೇಳಿದ.

“ಹೌದು. ರಮ್’ದಾನಿನಲ್ಲಿ ನನ್ನಿಂದ ಒಂದು ದಿನದ ಉಪವಾಸ ತಪ್ಪಿಹೋಗಿತ್ತು. ಅದಕ್ಕಾಗಿ ಇವತ್ತು ಉಪವಾಸ ಹಿಡಿದಿದ್ದೇನೆ” ಅಂದ ಹೆಂಗಸು, “ಎಲ್ಲಿ, ಒಂದು ಕೆಜಿ ಕಪ್ಪು ಆಲಿವ್ ಕೊಡಿ” ಅಂದಳು.

ಹೋಜ ಸರಕ್ಕನೆ ಬುಟ್ಟಿಯನ್ನು ಹಿಂದಿಟ್ಟುಕೊಂಡು, “ಅಲ್ಲಾನಿಗೆ ಕೊಡಬೇಕಾದ ಬಾಕಿ ತೀರಿಸಲಿಕ್ಕೇ ನಿನಗೆ ಆರು ತಿಂಗಳು ಬೇಕಾಯ್ತು! ಇನ್ನು ನನ್ನ ಆಲಿವ್ ಹಣ್ಣುಗಳ ಬಾಕಿ ತೀರಿಸಲು ಎಷ್ಟು ಕಾಲ ತಗುಲಬಹುದು!? ನಿನ್ನ ಸಹವಾಸವೇ ಬೇಡ ನಡಿ” ಅಂದ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

2 Comments

  1. ತುಂಬಾ ಅರ್ಥಗರ್ಭಿತವಾದ ನೀತಿ ಉಳ್ಳಂತಹ ಲೇಖನ ಅಕ್ಕ ನೀವು ಬರೆದಿರುವುದು ತುಂಬಾ ಸಂತೋಷ

Leave a Reply