ಹಫೀಜ್ ಹೇಳಿದ್ದು ~ ಅರಳಿಮರ POSTER

ಕೆಲವರಿಗೆ ‘ಮೊದಲ ಪ್ರೇಮ’ ವಿಫಲವಾದಾಗ ನಿಜದ ಪ್ರೇಮದ ಸಾಕ್ಷಾತ್ಕಾರವಾಗುವುದಿದೆ. ಈ ಮೊದಲ ಪ್ರೇಮ ಎನ್ನುವುದು ಸುಮಾರಾಗಿ ಹದಿ ಹರೆಯದ ಆಕರ್ಷಣೆಯಷ್ಟೇ ಆಗಿರುತ್ತದೆ ~ ಸಾಕಿ

sufi

 

ಪ್ರೇಮವು ಅಧ್ಯಾತ್ಮ ಅನುಭೂತಿ. ಪ್ರೇಮ ನಿರ್ಮಲ ಮನಸ್ಸಿನ ಹೂವು. ಅದು ಯಾವುದೇ ಮೋಹವನ್ನು ಹೊಂದಿರುವುದಿಲ್ಲ. ಮೊಗೆದು ಕೊಟ್ಟಷ್ಟು ಬತ್ತದ ಸೆಲೆ. ಪ್ರೇಮ ವಿರಳವೂ ಅಲ್ಲ, ಸೀಮಿತವೂ ಅಲ್ಲ. ಎಂದೇ ಪ್ರೇಮದ ವ್ಯಾಪ್ತಿ ಅನಂತವಾಗಿರುವುದು. ಒಮ್ಮೆ ಹೃದಯದಲ್ಲಿ ಪ್ರೇಮದ ಕಿಡಿ ಹೊತ್ತಿತೆಂದರೆ ಅದು ಶಾಶ್ವತ ಬೆಳಕು. ಮಾನವನೆಂಬ ಜೀವಿ ಮನುಷ್ಯನಾಗುವುದು ಎಂದರೆ ಪ್ರೆಮಿಯಾಗುವುದಲ್ಲದೆ ಇನ್ನೇನಲ್ಲ. ಆದರೆ, ಈ ಪ್ರೇಮದ ಕಿಡಿ ಹೊತ್ತುವುದಾದರೂ ಹೇಗೆ?

ಅದನ್ನು ನೀವು ಬದಲಾವಣೆಯೆನ್ನಿ ಅಥವಾ ಜ್ಞಾನೋದಯವೆನ್ನಿ. ಆದರೆ ಬಹುತೇಕರಿಗೆ ಅದು ಘಟಿಸುವುದು ತಮ್ಮ ಜೀವನದ ಅತಿ ಕಠಿಣ ಪರಿಸ್ಥಿತಿಯಲ್ಲಿ. ಇನ್ನು ಕೆಲವರಿಗೆ ‘ಮೊದಲ ಪ್ರೇಮ’ ವಿಫಲವಾದಾಗ ನಿಜದ ಪ್ರೇಮದ ಸಾಕ್ಷಾತ್ಕಾರವಾಗುವುದಿದೆ. ಈ ಮೊದಲ ಪ್ರೇಮ ಎನ್ನುವುದು ಸುಮಾರಾಗಿ ಹದಿ ಹರೆಯದ ಆಕರ್ಷಣೆಯಷ್ಟೇ ಆಗಿರುತ್ತದೆ. ಅದನ್ನೇ ಪ್ರೇಮವೆಂದು ತಿಳಿದು ಬದುಕು ಪೂರ್ತಿ ಹೊಂದಾಣಿಕೆಯಲ್ಲಿ ಕಳೆಯುವ ಅದೆಷ್ಟು ಜನರನ್ನು ನಾವು ನೋಡುತ್ತೇವೆ. ನಿಜದಲ್ಲಿ ಪ್ರೇಮ ಮದುವೆಯಲ್ಲಿ ಪೂರ್ಣವಾಗುವಂತದಲ್ಲ. ಮತ್ತು ಅದು ಗಂಡು ಹೆಣ್ಣಿನ ನಡುವೆಯಷ್ಟೇ ಸೀಮಿತವಾಗಿರುವುದೂ ಅಲ್ಲ. ನೀವು ನಂಬಿದ ಪ್ರೇಮ ನಿಮ್ಮನ್ನು ಖಿನ್ನತೆಗೆ ತಳ್ಳುತ್ತಿದ್ದರೆ, ನೋವು, ಹತಾಶೆಯ ಕೂಪಕ್ಕೆ ದೂಡುತ್ತಿದ್ದರೆ ಅದು ಪ್ರೇಮವಲ್ಲ. ಅದು ನಿಮ್ಮೊಳಗಿರುವ ಏನನ್ನೋ ಕಳೆದುಕೊಳ್ಳುವೆನೆಂಬ ಅವ್ಯಕ್ತ ಭಯ ಮಾತ್ರ. ಪ್ರೇಮದಲ್ಲಿ ಕಳೆದುಕೊಳ್ಳುವ ಭಯ ಇರುವುದೇ ಇಲ್ಲ. ಕಳೆದುಕೊಳ್ಳಲು ಪ್ರೇಮವು ನಾವು ಸಂಪಾದಿಸಿಕೊಂಡಿರುವ ಸ್ವತ್ತಲ್ಲ. ಈ ತಿಳಿವು ಸಾಕು ಪ್ರೇಮದ ಸಾಕ್ಷಾತ್ಕಾರಕ್ಕೆ.

ಅದಕ್ಕೆ ಸೂಫಿ ಹಫೀಜ್ ‘ಪ್ರೇಮದಂತೆ ಇನ್ಯಾವುದೂ ನಮ್ಮನ್ನು ವಿಕಾಸಗೊಳಿಸಲಾರದು’ ಎಂದು ಹೇಳುತ್ತಾನೆ. ಆಧುನಿಕ ಜಗತ್ತು ವ್ಯಕ್ತಿತ್ವ ವಿಕಸನದ ಬೆನ್ನು ಬಿದ್ದಿರುವಾಗ ವ್ಯಕ್ತಿತ್ವ ವಿಕಸನ ಎಂದರೆ ಪ್ರೇಮದ ಸಾಕ್ಷಾತ್ಕಾರ ಎಂದು ಸೂಫಿಗಳು ಸಾರಿ ಹೇಳಿ ಹೋಗಿದ್ದಾರೆ. ಕೇಳಿಸಿಕೊಳ್ಳುವ ತಾಳ್ಮೆ ನಮಗಿರಲಿ.

2 Comments

  1. Beloved Friends
    I need mobile number and contact address of Chidambaram Narendra Sir. Please give me

Leave a Reply