ಪ್ರೇಮವೊಂದು ಸಂಬಂಧವಲ್ಲ. ಅದೊಂದು ಭಾವನೆ. ಅದೂ ಕೂಡಾ ನಮ್ಮ ಸಂತೋಷಕ್ಕಾಗಿ ನಾವು ನಮ್ಮೊಳಗೆ ಉದ್ದೀಪಿಸಿಕೊಳ್ಳುವ ಭಾವನೆ. ನಾವು ಪ್ರೇಮ ಭಾವನೆಯನ್ನು ತೋರ್ಪಡಿಸದ ಹೊರತು ನಾವು ಪ್ರೇಮಿಯಾಗಲಾರೆವು. ನಾವು ಯಾರ ಮೇಲೆ ಪ್ರೇಮವನ್ನು ತೋರುತ್ತೇವೋ ಅವರು ಅದನ್ನು ಸ್ವೀಕರಿಸದ ಹೊರತು ಅವರು ಕೂಡಾ ನಮ್ಮ ಪ್ರಿಯತಮರಾಗಲಾರರು ~ ಅಲಾವಿಕಾ
ಮನುಷ್ಯ ಜೀವಿಯ ಅತ್ಯಂತ ಅಮಾಯಕ ನಂಬಿಕೆಗಳಲ್ಲಿ ಪ್ರೇಮವೊಂದು ಸಂಬಂಧ ಎನ್ನುವುದೂ ಒಂದು. ಎಷ್ಟೋ ಜನರು ಸಂಬಂಧ ಬೆಳೆಸುವುದಕ್ಕಾಗಿಯೇ ಪ್ರೇಮಿಸುತ್ತಾರೆ; ತಮ್ಮ ಪ್ರೇಮ ಮದುವೆಯಲ್ಲಿ ಅಥವಾ ಬದ್ಧತೆಯ ಸಂಬಂಧದಲ್ಲಿ ಕೊನೆಯಾಗಬೇಕೆಂದು ಬಯಸುತ್ತಾರೆ. ದುರದೃಷ್ಟವಶಾತ್, ಅಂಥವರ ಪ್ರೇಮ ಬಹುತೇಕ ಮದುವೆಯೊಂದಿಗೆ ‘ಕೊನೆಯಾಗುತ್ತದೆ’ ಕೂಡಾ.
ವಾಸ್ತವದಲ್ಲಿ ಪ್ರೇಮವೊಂದು ಸಂಬಂಧವಲ್ಲ. ಅದೊಂದು ಭಾವನೆ. ಅದೂ ಕೂಡಾ ನಮ್ಮ ಸಂತೋಷಕ್ಕಾಗಿ ನಾವು ನಮ್ಮೊಳಗೆ ಉದ್ದೀಪಿಸಿಕೊಳ್ಳುವ ಭಾವನೆ. ನಾವು ಪ್ರೇಮ ಭಾವನೆಯನ್ನು ತೋರ್ಪಡಿಸದ ಹೊರತು ನಾವು ಪ್ರೇಮಿಯಾಗಲಾರೆವು. ನಾವು ಯಾರ ಮೇಲೆ ಪ್ರೇಮವನ್ನು ತೋರುತ್ತೇವೋ ಅವರು ಅದನ್ನು ಸ್ವೀಕರಿಸದ ಹೊರತು ಅವರು ಕೂಡಾ ನಮ್ಮ ಪ್ರಿಯತಮರಾಗಲಾರರು.
ಆದರೆ ಸಂಬಂಧಗಳು ಹಾಗಲ್ಲ. ನಾವು ಹೊಕ್ಕುಳ ಬಳ್ಳಿ ಕತ್ತರಿಸಿಕೊಂಡು ಲೋಕಕ್ಕೆ ಕಾಲಿಟ್ಟಕೂಡಲೇ ಹೆತ್ತವಳು ತಾಯಿಯೂ, ಹುಟ್ಟಿಗೆ ಕಾರಣನಾದವನು ತಂದೆಯೂ ಒಡಹುಟ್ಟಿದವರು ಸೋದರ – ಸೋದರಿಯರೂ ಆಗಿಬಿಡುತ್ತಾರೆ. ವಂಶ ಕಾರಣವಾಗಿ, ಮದುವೆ ಕಾರಣವಾಗಿ ನಮ್ಮ ಸಂಬಂಧಿಕರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. “ನಾನು ನಿನ್ನನ್ನು ಸೋದರನೆಂದು ಭಾವಿಸುವುದಿಲ್ಲ” ಎಂದು ನಾವು ಕಲ್ಲಿನ ಮೇಲೆ ಕೊರೆದರೂ ಒಡಹುಟ್ಟಿದವನು ಸೋದರನಾಗದೆ ಇರಲು ಸಾಧ್ಯವಿಲ್ಲ. ನಾವು ಒಪ್ಪಿದರೂ ಅಷ್ಟೇ, ಬಿಟ್ಟರೂ ಅಷ್ಟೇ. ಪ್ರೇಮಿಗಳ ವಿಷಯ ಹಾಗಲ್ಲ. ನೆನ್ನೆವರೆಗೆ ಪ್ರೇಮಿಗಳಾಗಿದ್ದವರು ನಾಳೆ ತಮ್ಮ ತಮ್ಮ ದಾರಿಹಿಡಿದು ಅಪರಿಚಿತರಾಗಿ ಬದಲಾಗಬಹುದು. “ನಮ್ಮ ಪ್ರೇಮ ಮುಗಿಯಿತು, ನಾವಿನ್ನು ಪ್ರೇಮಿಗಳಲ್ಲ” ಎಂದು ಘೋಷಿಸಬಹುದು. ಪ್ರೇಮ ಯಾವಾಗ ಬೇಕಾದರೂ ಘಟಿಸಬಹುದು, ಯಾವಾಗ ಬೇಕಾದರೂ ಪಲ್ಲಟಗೊಳ್ಳಬಹುದು.
ಇಷ್ಟಕ್ಕೂ ಅದು ಇರಬೇಕಾದುದೇ ಹಾಗೆ. ಪ್ರೇಮ ನಮ್ಮನ್ನು ಬಂಧನಕ್ಕೆ ಒಳಪಡಿಸಬಾರದು. ಅದು ನಮ್ಮನ್ನು ಕಟ್ಟುಬೀಳಿಸಬಾರದು. ಅದು ನಮ್ಮನ್ನು ಎಲ್ಲ ಬಂಧನಗಳಿಂದ ಮುಕ್ತಗೊಳಿಸಬೇಕು. ಪ್ರೇಮ ನಮ್ಮನ್ನು ಬಿಗಿಯುವ ಸರಪಳಿಯಾಗಬಾರದು. ನಮ್ಮನ್ನು ಹಾರಗೊಡುವ ರೆಕ್ಕೆಯಾಗಬೇಕು. ಮದುವೆ ಇತ್ಯಾದಿಗಳೆಲ್ಲ ಪರಸ್ಪರ ಆಕರ್ಷಣೆ, ಅಗತ್ಯ, ಮೆಚ್ಚುಗೆ, ಇಷ್ಟಗಳ ಮಾನದಂಡದ ಮೇಲೆ ನಡೆಯುತ್ತವೆ. ಅವುಗಳೊಡನೆ ಪ್ರೇಮವೂ ಸೇರಿದರೆ ಹೆಚ್ಚುವರಿ ಸುಖ ಸಿಗುತ್ತದೆ ಎಂದೇನಿಲ್ಲ. ಅಥವಾ ಪ್ರೇಮವಿಲ್ಲದೆ ಹೋದರೆ ಭಾರೀ ನಷ್ಟವಾಗುತ್ತದೆ ಎಂದೂ ಇಲ್ಲ. ಮದುವೆಯಲ್ಲಿ ಮುಖ್ಯವಾಗಿ ಬೇಕಾದುದು ಹೊಂದಾಣಿಕೆ ಮತ್ತು ಗೆಳೆತನ. ಗಂಡು – ಹೆಣ್ಣು ಪರಸ್ಪರರನ್ನು ಅರ್ಥಮಾಡಿಕೊಂಡು ನನಗೆ ನೀನು, ನಿನಗೆ ನಾನು ಎಂಬ ಬದ್ಧತೆಯನ್ನು ತೋರುವುದು ಮುಖ್ಯವಾಗುತ್ತದೆ. ಸಂಬಂಧಗಳು ಅಂದರೇನೇ ಜವಾಬ್ದಾರಿ ಮತ್ತು ಪರಸ್ಪರ ಬದ್ಧತೆ. ಅಲ್ಲಿ ಪ್ರೇಮವೊಂದು ಪೂರಕ ಸಂಗತಿಯಷ್ಟೆ.
ಆದರೆ ಪ್ರೇಮಿಗಳ ನಡುವೆ ಅಂಥ ಯಾವ ಬದ್ಧತೆಯ ನಿರೀಕ್ಷೆಗೆ ಅವಕಾಶವಿಲ್ಲ. ಏಕೆಂದರೆ ನಾವು ಪ್ರೇಮಿಸುವುದು ನಮಗೆ ಅದರಿಂದ ಸಂತೋಷ ಸಿಗುತ್ತದೆ ಅನ್ನುವ ಕಾರಣಕ್ಕಾಗಿ. ನಮ್ಮ ಸಂತೋಷವನ್ನು ಹೊಂದಿಸಿಕೊಳ್ಳುವ ಹೊಣೆ ನಮ್ಮದೇ ಆಗಿರುತ್ತದೆ ಹೊರತು ಇನ್ಯಾರೋ ಅದನ್ನು ಮಾಡಬೇಕೆಂದಿಲ್ಲ. ನಾವು ಪ್ರೀತಿಸುವ ವ್ಯಕ್ತಿ ನಮಗೆ ಪ್ರತಿಕ್ರಿಯೆ ನೀಡಬೇಕೆಂದು ಬಯಸುವುದು ಕೂಡಾ ಸರಿಯಲ್ಲ. ಏಕೆಂದರೆ ಪ್ರೇಮ ನಮ್ಮ ಆಯ್ಕೆ. ನಮ್ಮೊಳಗೆ ಉದಿಸಿದ ಭಾವನೆ. ಅದು ಹೇಗೆ ಮತ್ತೊಬ್ಬರಲ್ಲೂ ಇರಲೆಂದು ನಾವು ಬಯಸಲಾದೀತು? ಸಂಬಂಧಗಳು ಹಾಗಲ್ಲ. ಅಲ್ಲಿ ಸಂಬಂಧಿತರು ಪರಸ್ಪರ ಜವಾಬ್ದಾರರಾಗಿರಬೇಕು ಅನ್ನುವುದು ಒಪ್ಪಿತ. ಉದಾಹರಣೆಗೆ: ಗಂಡ – ಹೆಂಡತಿ ಪ್ರತ್ಯೇಕ ವ್ಯಕ್ತಿಗಳು, ಅವರ ಸ್ವಾತಂತ್ರ್ಯವನ್ನು ಗೌರವಿಸಬೇಕು. ಹಾಗೆಂದು ಗಂಡ ಅಥವಾ ಹೆಂಡತಿ ಏಕಾಏಕಿ ಮನೆ ಬಿಟ್ಟು ಹೋಗಿ ಮತ್ಯಾರನ್ನೋ ಮದುವೆಯಾಗುವುದು, ಅವಲಂಬಿತರ ಪ್ರತಿಯಾಗಿ ಕರ್ತವ್ಯ ನಿಭಾಯಿಸದೆ ಇರುವುದು ತಪ್ಪಾಗುತ್ತದೆ. ಪ್ರೇಮ ಹಾಗಲ್ಲ. ನಮಗೆ ಇಂದು ಒಬ್ಬ ವ್ಯಕ್ತಿಯ ಕುರಿತು ಆಲೋಚಿಸುವಾಗ ಸಿಗುವ ಸಂತೋಷ ನಾಳೆ ಮತ್ತೊಬ್ಬ ವ್ಯಕ್ತಿಯನ್ನು ಕುರಿತು ಆಲೋಚಿಸುವಾಗ ಸಿಗಬಹುದು. ಈ ಸಂತೋಷವೇ ಪ್ರೇಮ.
ಹಾಗೆ ಸಂತೋಷದ ಮೂಲಸ್ರೋತ ಆಗಾಗ ಬದಲಾಗೋದು ಲಂಪಟತನ ಅಲ್ಲವೆ? ಎಂದು ನೀವು ಕೇಳಬಹುದು. ಆ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಮಾತಾಡೋಣ.