ಶ್ರುತಿ – ಸ್ಮೃತಿಗಳು ಯಾವುವು?: ಸನಾತನ ಸಾಹಿತ್ಯ ~ ಮೂಲಪಾಠಗಳು #1

ಯಾವುದೇ ಧರ್ಮದ ಕುರಿತು ಪ್ರಾಥಮಿಕ ಮಾಹಿತಿ ಹೊಂದಲು ನಾವು ಧಾರ್ಮಿಕ ಮನಸ್ಥಿತಿಯನ್ನು ಹೊಂದಿರಲೇಬೇಕೆಂದಿಲ್ಲ. ಆಯಾ ಧರ್ಮದ ಕುರಿತು ಗೌರವ, ಸೌಹಾರ್ದ ಮತ್ತು ಸಹಿಷ್ಣುತೆಯನ್ನು ಬೆಳೆಸಿಕೊಳ್ಳಲು ಈ ತಿಳಿವಳಿಕೆ ಅಗತ್ಯವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲ ಪ್ರಯತ್ನವಾಗಿ ಹಿಂದೂ ಧರ್ಮದ ಕುರಿತು ಕೆಲವು ಪ್ರಾಥಮಿಕ ಸಂಗತಿಗಳ ಮಾಹಿತಿ ಸರಣಿಯನ್ನು ಪ್ರಕಟಿಸುತ್ತಿದ್ದೇವೆ ~ ಅರಳಿ ಬಳಗ

vedas

ತ್ಯಂತ ಪ್ರಾಚೀನ ಧರ್ಮವೆಂದು ಹೇಳಲಾಗುವ ಹಿಂದೂ ಧರ್ಮ, ಧರ್ಮಕ್ಕಿಂತ ಹೆಚ್ಚಾಗಿ ಜೀವನ ಮಾರ್ಗ ಎಂದು ಬಣ್ಣಿಸಲ್ಪಡುತ್ತದೆ. ಸನಾತನವೂ ಬದಲಾವಣೆಗಳಿಗೆ ಅಪರಿಮಿತ ಅವಕಾಶಗಳಿರುವುದರಿಂದ ನಿತ್ಯನೂತನವೂ ಆಗಿರುವ ಧರ್ಮವಿದು.

ವೇದ, ಉಪನಿಷತ್ತು ಮತ್ತು ಪುರಾಣಗಳು ಹಿಂದೂ ಧರ್ಮದ ಪ್ರಮುಖ ಸಾಹಿತ್ಯವೆಂದು ಗುರುತಿಸಲ್ಪಟ್ಟಿವೆ. ಸಾವಿರಾರು ವರ್ಷಗಳ ಕಾಲ ಮೌಖಿಕವಾಗಿಯೇ ತಲೆಮಾರುಗಳಿಂದ ತಲೆಮಾರುಗಳಿಗೆ ಹರಿದು ಬಂದಿದ್ದ ಈ ಧಾರ್ಮಿಕ ಸಾಹಿತ್ಯ ಅಕ್ಷರಗಳಲ್ಲಿ ದಾಖಲಾಗುವ ವೇಳೆಗೆ ಸಾಕಷ್ಟು ರಚನೆಗಳು ನಷ್ಟವಾಗಿದ್ದವೆಂದೂ, ಕೆಲವಷ್ಟು ನಂತರದಲ್ಲಿ ಸೇರ್ಪಡೆಯಾಗುತ್ತಾ ಸಾಗಿದವೆಂದೂ ಹೇಳಲಾಗುತ್ತದೆ.

ಹಿಂದೂ ಧಾರ್ಮಿಕ ಸಾಹಿತ್ಯವನ್ನು ಶ್ರುತಿ (ಕೇಳಿದ್ದು) ಮತ್ತು ಸ್ಮೃತಿ (ಸ್ಮರಣೆಯಲ್ಲಿಟ್ಟಿದ್ದು) ಎಂದು ಎರಡು ಭಾಗವಾಗಿ ಗುರುತಿಸಲಾಗುತ್ತದೆ. ಇವುಗಳಲ್ಲಿ ವೇದೋಪನಿಷತ್ತುಗಳು ಅತ್ಯಂತ ಪ್ರಾಚೀನವೂ ಅಧಿಕಾರಯುತವೂ ಆಗಿವೆ. ವೇದ, ಉಪನಿಷತ್ತು, ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು – ಇವೆಲ್ಲ ‘ಶ್ರುತಿ’ಗಳಾಗಿವೆ. ಪುರಾಣ, ಆಗಮ, ಶಾಸ್ತ್ರಗ್ರಂಥಗಳು ‘ಸ್ಮೃತಿ’ಗಳೆಂದು ಕರೆಸಿಕೊಳ್ಳುತ್ತವೆ. ಭಗವದ್ಗೀತೆಯು ಭಗವಂತನಿಂದ ಹೇಳಲ್ಪಟ್ಟಿರುವುದರಿಂದ ‘ಶ್ರುತಿ’ಯಾಗಿಯೂ, ಮಹಾಭಾರತ ಮಹಾಕಾವ್ಯದಲ್ಲಿ ವ್ಯಾಸರ ಮೂಲಕ ಬರೆಯಲ್ಪಟ್ಟಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ.

ವೇದಗಳು ಅಪೌರುಷೇಯ. ಅವು ಯಾವುದೇ ಒಬ್ಬ ಋಷಿ ಅಥವಾ ಋಷಿಕೆಯಿಂದ ರಚಿಸಲ್ಪಟ್ಟಿರುವುದಿಲ್ಲ. ಅದಾಗಲೇ ಇರುವ ಜ್ಞಾನವನ್ನು (ಭಗವಂತನೆಂಬ ತಿಳಿವಳಿಕೆ) ಕಂಡುಕೊಂಡವರು (ದೃಷ್ಟಾರರು) ನೀಡಿರುವ ವಿವರಣೆಯೇ ಋಚೆಗಳು ಅಥವಾ ಶ್ಲೋಕಗಳ ಗುಚ್ಛವಾಗಿ ವೇದಗಳಾದವು. ಇಂಥಾ ನಾಲ್ಕು ವೇದಗಳಿದ್ದು ಕ್ರಮವಾಗಿ – ಋಗ್, ಯಜುರ್, ಸಾಮ, ಅಥರ್ವ ವೇದಗಳೆಂದು ಹೆಸರು ಪಡೆದಿವೆ. ಪ್ರತಿಯೊಂದು ವೇದವೂ ನಾಲ್ಕು ಭಾಗಗಳಲ್ಲಿ ವಿಭಜನೆಗೊಂಡಿದ್ದು,  ಪವಿತ್ರ ಮಂತ್ರಗಳನ್ನು ಒಳಗೊಳ್ಳುವ ಪ್ರಮುಖ ಭಾಗವಾದ ಸಂಹಿತೆಯು ನಿಜಾರ್ಥದಲ್ಲಿ ವೇದವೆಂದು ಪರಿಗಣಿಸಲ್ಪಟ್ಟಿದೆ. ನಂತರದಲ್ಲಿ ಬರುವವು ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತುಗಳು.

ವೇದಗಳು ಧಾರ್ಮಿಕ ಕ್ರಿಯಾವಿಧಿಗಳಿಗೆ ಪ್ರಾಧಾನ್ಯ ನೀಡಿದರೆ, ಉಪನಿಷತ್ತುಗಳು ಆಧ್ಯಾತ್ಮಿಕ ಒಳನೋಟ ಮತ್ತು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ತಿಳಿವಿಗೆ ಪ್ರಾಧಾನ್ಯ ನೀಡುತ್ತವೆ.

1 Comment

Leave a Reply