ತೈತ್ತಿರೀಯ ಉಪನಿಷತ್ತು : ಸನಾತನ ಸಾಹಿತ್ಯ ~ ಮೂಲಪಾಠಗಳು #7

ತೈತ್ತಿರೀಯ ಉಪನಿಷತ್ತು, ಪರತತ್ವವೇ ಬ್ರಹ್ಮ ಎಂದು ಹೇಳುತ್ತದೆ. ಬ್ರಹ್ಮದಿಂದ ಜೀವ ಜಗತ್ತು, ಅನ್ನ, ಅಂತಃಕರಣ, ಜ್ಞಾನ ಇತ್ಯಾದಿ ಎಲ್ಲವೂ ಹುಟ್ಟಿ ಬಂದಿವೆ. ಅವೆಲ್ಲವೂ ಸ್ವತಃ ಬ್ರಹ್ಮವೇ ಆಗಿವೆ ಎಂದು ಈ ಉಪನಿಷತ್ತು ಘೋಷಿಸುತ್ತದೆ.

ಜೀವ ಜಗತ್ತು, ಆತ್ಮ ಇವುಗಳ ಬಗ್ಗೆ; ಇವುಗಳ ನಡುವಿನ ಸಂಬಂಧದ ಬಗ್ಗೆ ಮಾನವನ ಕುತೂಹಲ ಇಂದು ನೆನ್ನೆಯದಲ್ಲ. ವೇದಕಾಲೀನ ಸಮಾಜದಲ್ಲೇ ಈ ಚಿಂತನೆ ನಡೆದಿತ್ತು, ಈಗಲೂ ಅದು ನಡೆಯುತ್ತಲೇ ಇದೆ. ತೈತ್ತಿರೀಯ ಉಪನಿಷತ್ತು, ಇಂಥದ್ದೇ ಚಿಂತನ – ಮಂಥನದಿಂದ ಮೂಡಿ ಬಂದ ತಿಳಿವಿನ ಹೊಳಹು.

ತೈತ್ತಿರೀಯ ಉಪನಿಷತ್ತು ಕೃಷ್ಣ ಯಜುರ್ವೇದದ ತೈತ್ತಿರೀಯ ಆರಣ್ಯಕಕ್ಕೆ ಸೇರಿದ್ದು; ಇದರಲ್ಲಿ ಶಿಕ್ಷಾ ವಲ್ಲಿ, ಬ್ರಹ್ಮಾನಂದ ವಲ್ಲಿ ಹಾಗೂ ಭೃಗುವಲ್ಲಿ ಎಂಬ ಮೂರು ಅಧ್ಯಾಯಗಳಿವೆ. ಬ್ರಹ್ಮ ಎಂದರೇನು ಎಂಬ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವನ್ನು ಕಂಡುಕೊಳ್ಳಲು ಯತ್ನಿಸುವುದು ಈ ಉಪನಿಷತ್ತಿನ ಸಾರಸರ್ವ.

ತೈತ್ತಿರೀಯ ಉಪನಿಷತ್ತು, ಪರತತ್ವವೇ ಬ್ರಹ್ಮ ಎಂದು ಹೇಳುತ್ತದೆ. ಬ್ರಹ್ಮದಿಂದ ಜೀವ ಜಗತ್ತು, ಅನ್ನ, ಅಂತಃಕರಣ, ಜ್ಞಾನ ಇತ್ಯಾದಿ ಎಲ್ಲವೂ ಹುಟ್ಟಿ ಬಂದಿವೆ. ಅವೆಲ್ಲವೂ ಸ್ವತಃ ಬ್ರಹ್ಮವೇ ಆಗಿವೆ ಎಂದು ಈ ಉಪನಿಷತ್ತು ಘೋಷಿಸುತ್ತದೆ. ಹಾಗೂ “ಬ್ರಹ್ಮವೇ ಆನಂದ – ಆನಂದವೇ ಬ್ರಹ್ಮ”  ಎಂಬ ಸಿದ್ಧಾಂತವನ್ನು ಇದು ಸ್ಪಷ್ಟಪಡಿಸುತ್ತದೆ.

“ಮಾತೃ ದೇವೋ ಭವ , ಪಿತೃ ದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋ ಭವ” ; “ಕೊಡುವುದನ್ನು ಶ್ರದ್ಧೆಯಿಂದ ಕೊಡು, ಅಶ್ರದ್ಧೆಯಿಂದ ಎಂದೂ ಕೊಡಬೇಡ” ; “ಪ್ರತಿಷ್ಠೆಯನ್ನು ಉಪಾಸಿಸುವವನು ಪ್ರತಿಷ್ಠಾವಂತನಾಗುವನು. ಮಹತ್ತನ್ನು ಉಪಾಸಿಸುವವನು ಮಹಾನ್ ವ್ಯಕ್ತಿಯಾಗುವನು. ಮನಸ್ಸನ್ನು ಉಪಾಸಿಸುವವನು ಮಾನವನಾಗುವನು” – ಇವೇ ಮೊದಲಾದ ಉಕ್ತಿಗಳ ಮೂಲಕ ತೈತ್ತಿರೀಯ ಉಪನಿಷತ್ತು ಸನಾತನ ಸಂಸ್ಕೃತಿಯ ಹಿರಿಮೆಯನ್ನು ಸಾರುತ್ತದೆ.

ಹೆಸರಿನ ಹಿನ್ನೆಲೆ

ತೈತ್ತಿರೀಯ ಉಪನಿಷತ್ತಿಗೆ ಆ ಹೆಸರು ಬಂದ ಹಿನ್ನೆಲೆಯನ್ನು ಬಹುತೇಕ ಎಲ್ಲ ಪುರಾಣಗಳು ಒಂದೇ ಬಗೆಯಲ್ಲಿ ವಿವರಿಸುತ್ತವೆ:

ತಮ್ಮ ಗುರುಗಳ ಬ್ರಹ್ಮಹತ್ಯಾ ಪಾಪಕ್ಷಯಕ್ಕಾಗಿ ವೈಶಂಪಾಯನನ ಶಿಷ್ಯರಲ್ಲೊಬ್ಬನಾದ ಯಾಜ್ಞವಲ್ಕ್ಯನು “ಇತರ ಶಿಷ್ಯರೆಲ್ಲರೂ ಅಲ್ಪಜ್ಞರು” ಎಂದು ಅಹಂಕಾರದಿಂದ ಹೀಗಳೆದು, ತಾನೊಬ್ಬನೇ ಪ್ರಾಯಶ್ಚಿತ್ತ ವ್ರತವನ್ನು ಕೈಗೊಳ್ಳುವೆನೆಂದು ಘೋಷಿಸುತ್ತಾನೆ. ಆಗ ಕ್ರುದ್ಧರಾದ ವೈಶಂಪಾಯನರು, “ನಿನ್ನದು  ಅಹಂಕಾರದ ಮಾತಾಯಿತು. ಅಹಂಕಾರಿಯಾದ ನಿನಗೆ ನಾನು ಕಲಿಸಿದ ವಿದ್ಯೆಯಿಂದ ತಾನೆ ಏನು ಪ್ರಯೋಜನ? ಅದನ್ನೆಲ್ಲ ವಮನ (ವಾಂತಿ)ಮಾಡು” ಎಂದರು. ಯಾಜ್ಞವಲ್ಕ್ಯನು ಅವೆಲ್ಲವನ್ನೂ ವಮನ ಮಾಡಿದನು. ಆಗ, ಉಳಿದ ಶಿಷ್ಯರುಗಳು ವಿದ್ಯಾಲೋಲುಪರಾಗಿ, ತಿತ್ತಿರಿ ಪಕ್ಷಿಗಳ ರೂಪದಿಂದ ಅದೆಲ್ಲವನ್ನೂ ಸ್ವೀಕರಿಸಿದರು. ಹೀಗೆ ಅವರು ಪಡೆದ ಜ್ಞಾನವು ತೈತ್ತಿರೀಯ ಎಂಏ ಹೆಸರು ಪಡೆಯಿತು.

Leave a Reply