ಬಿಕ್ಖುಣಿಯರ ಅನುಭಾವ ಕಾವ್ಯ: 5 ಅನುವಾದಗಳು

ಬೌದ್ಧ ಬಿಕ್ಖುಣಿಯರು ಅತ್ಯಂತ ಪ್ರಾಮಾಣಿಕತೆಯಿಂದ, ಅಷ್ಟೇ ಸರಳವಾಗಿ ಹಾಡಿಕೊಂಡ ಆತ್ಮಕಥನಗಳಿವು. ಆದ್ದರಿಂದಲೇ ಈ ಗೀತೆಗಳನ್ನು’ಗಾಥಾ’ (ಕಥೆ) ಎಂದು ಕರೆಯಲಾಗಿದೆ. ಥೇರೀಗಾಥಾದ ಈ ಗೀತೆಗಳು ಸರಳವಾಗಿ ತೋರಿದರೂ ಅದ್ಭುತ ಹೊಳಹುಗಳಿಂದ ಕೂಡಿರುವಂಥವು. ಬುದ್ಧನ ಬೋಧನಾ ಸಾರವನ್ನೆ ತಮ್ಮ ಮುಗ್ಧ ತಿಳಿವಿನಲ್ಲಿ ಹಿಡಿದಿಟ್ಟುಕೊಂಡಂಥವು. ತಮ್ಮ ಕಾಣ್ಕೆಯಲ್ಲೇ ಅಧ್ಯಾತ್ಮ ಲೋಕವನ್ನು ನೋಡಲೊಂದು ಕಿಟಕಿ ತೆರೆದಿಟ್ಟಿದ್ದಾರೆ ಈ ಬಿಕ್ಖುಣಿಯರು. ಅವುಗಳಲ್ಲಿ ಆಯ್ದ 5 ಪದ್ಯಗಳ ಅನುವಾದ ಇಲ್ಲಿದೆ ~ ಚೇತನಾ

ನ್ನ ಕಾವಿಯುಡುಗೆ ಬಿಸುಟು,
ಭಿಕ್ಷಾಪಾತ್ರೆಯನ್ನು ಬೋರಲು ಹಾಕಿ,
ಹೆಬ್ಬಂಡೆಗೆ ಮುಖ ಮಾಡಿ
ಸುಮ್ಮನೆ ಕುಳಿತೆ;

ಕತ್ತಲ ಗರ್ಭ ಹರಿದು ಮೂಡಿತು ಬೆಳಕು

~ ಚಿತ್ತಾ

*

ನಾನೀಗ ಮುಕ್ತಳು!
ನಾನು ಸಂಪೂರ್ಣ ಮುಕ್ತಳು!!
ಒರಳು, ಒನಕೆ, ದುರುಳ ಪತಿಯ ಬಂಧ ಕಳಚಿ
ನಾನು ಪರಿಪೂರ್ಣ ಮುಕ್ತಳು..

~ ಮುತ್ತಾ

*

ಭಿಕ್ಷೆಗಾಗಿ ಅಲೆಯುತ್ತ
ಬೆರಳ ತುದಿಗಳು ಕಂಪಿಸುತ್ತಿವೆ.
ಗೆಳತಿಯರ ಹೆಗಲ ಮೇಲೆ ಕೈಯೂರಿ ನಡೆಯುತ್ತೇನೆ.
ಕಾಲು ಸಾಗದೆ ಕೃಶ ಶರೀರವಿದು ನೆಲವನಪ್ಪುತ್ತಿದೆ.

ಓಹ್! ಈ ದೇಹದ ದುರ್ಗತಿಯನ್ನು
ಕಣ್ಣಾರೆ ಕಾಣುತಿದ್ದೇನೆ,
ಮನಸ್ಸು ಅದರಿಂದ ಮುಕ್ತವಾಗಿ
ಹೊರ ಬರುತ್ತಿದೆ!

~ ಧಮ್ಮಾ

*

ನ್ನಿರುವ ಕಾಂತಿ, ಕಣ್ ಹೊಳಪು
ರೂಪ, ಮೈಬಣ್ಣಗಳಿಂದ
ನೆರಕೆಯ ಹೆಣ್ಣುಗಳ ಹೊಟ್ಟೆಯುರಿಸುತಿದ್ದೆ.
ಮೂರ್ಖ ಗಂಡಸರನ್ನ ಸೆಳೆಯಲಿಕ್ಕಾಗಿ
ಈ ದೇಹವನ್ನಲಂಕರಿಸಿಕೊಂಡು
ಕೋಠಿ ಬಾಗಿಲ ಮುಂದೆ ಕಾತರಳಾಗಿ
ನಿಂತು ಕಾಯುತ್ತಿದ್ದೆ.

ಬೇಟೆಗಾತಿಯಂತೆ ಹೊಂಚುತ್ತ
ನನ್ನಾಭರಣಗಳ ಕುಲುಕಿ ಸೆಳೆದು
ಮೋಹದ ಬಲೆಗೆ ಕೆಡವಿಕೊಳ್ಳುತ್ತಿದ್ದೆ,
ಬಿದ್ದವನ ಕಂಡು ಗುಂಪು ಸೀಳುವಂತೆ
ಅಬ್ಬರಿಸಿ ನಗುತಲಿದ್ದೆ.

ಈಗ ಅದೇ ದೇಹ
ದುಪ್ಪಟಿ ಕಾವಿ ಸುತ್ತಿಕೊಂಡಿದೆ;
ತಲೆಗೂದಲು ತೆಗೆದು ಸಪಾಟು.
ಭಿಕ್ಷೆಗಾಗಿ ಅಲೆದು ದಣಿವಲ್ಲಿ
ಮರದ ಬೊಡ್ಡೆಗೆ ಮೈಯಾನಿಸಿ ಕೂತಿದೇನೆ.
ಯಾವ ಯೋಚನೆಯೂ ಇಲ್ಲದ
ನಿತ್ಯಾನಂದ ಸ್ಥಿತಿಯ ಪಡೆದಿದೇನೆ.

ನಾನೀಗ ಎಲ್ಲ ಬಂಧಗಳ;
ಮನುಷ್ಯ , ದೈವಿಕ ಬಂಧಗಳೆಲ್ಲದರ
ಹೊರೆ ಇಳಿಸಿ ಹಗುರಾಗಿ ಕುಳಿತಿದೇನೆ;
ತಣ್ಣಗೆ ಒಬ್ಬಂಟಿ, ಎಲ್ಲ ಬಂಧಗಳ ಕಳಚಿ.

~ ವಿಮಲಾ 

*

ಪುನ್ನಾ,
ಸಕಲ ಸದ್ಗುಣಗಳಿಂದ ಬೆಳೆ- ಬೆಳಗು,
ಹುಣ್ಣಿಮೆಯ ಚಂದಿರನಂತೆ.

ಹೊಂದು ಪರಿಪೂರ್ಣತೆ;
ಸಂಪನ್ನಳಾಗು,
ಕತ್ತಲ ರಾಶಿಯ ತೊಡೆದು.

~ ಪುನ್ನಾ

Leave a Reply