ಪಟ್ಟದ ಆನೆಯಾದ ಬೋಧಿಸತ್ವ : ಜಾತಕ ಕಥೆಗಳು

ಒಂದಾನೊಂದು ಕಾಲದಲ್ಲಿ ಮಗಧರಾಜ್ಯವನ್ನು ವಿರೂಪಸೇನನೆಂಬ ರಾಜನು ಆಳಿಕೊಂಡಿದ್ದನು. ಆಗ ಬೋಧಿಸತ್ವನು ಒಂದು ಬಿಳಿಯ ಆನೆಯಾಗಿ ಅವತಾರವೆತ್ತಿದ್ದನು. ಮಗಧ ರಾಜನು ಆ ಆನೆಯನ್ನು ತನ್ನ ಪಟ್ಟದ ಆನೆಯಾಗಿ ಮಾಡಿಕೊಂಡನು.

ಹೀಗಿರುವಾಗ ಯಾವುದೋ ಒಂದು ಪರ್ವ ದಿನವು ಬಂದಿತು. ಆದಿನ ಮಗಧ ರಾಜ್ಯವು ದೇವಲೋಕದ ಹಾಗೆ ಅಲಂಕರಿಸಲ್ಪಟ್ಟಿತು. ರಾಜನು ಪಟ್ಟದಾನೆಯ ಅಂಬಾರಿಯಲ್ಲಿ ಆಸೀನನಾಗಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಹೊರಟನು. ಆಗ ದಾರಿಯಲ್ಲಿ ಉದ್ದಕ್ಕೂ ಎರಡು ಬದಿಯಲ್ಲಿಯೂ ಜನರು ನಿಂತು ನೋಡುತ್ತಿದ್ದರು. ಎಲ್ಲರ ಕಣ್ಣೂ ಪಟ್ಟದಾನೆಯ ಮೇಲೆಯೇ.
‘‘ಆಹಾ! ಏನು ಚಂದ ಈ ಆನೆ! ಇದರ  ನಡೆಯನ್ನು ನೋಡಿಯೇ ಗಜಗಮನವೆಂಬ ಹೆಸರು ಬಂದಿತೋ ಏನೋ. ಇದರ ಅಂದಚಂದಗಳನ್ನು ನೋಡುತ್ತಾ ಇದ್ದರೆ, ಇದು ಯಾವ ಸಾರ್ವಭೌಮನಿಗೋ ವಾಹನವಾಗಿರಬೇಕೆಂದೇ ಕಾಣುತ್ತದೆ!’’ ಎಂದು ಬಾಯಿಬಿಟ್ಟು ಮೆಚ್ಚುಗೆ ಪ್ರಕಟಿಸಿದರು.

ಜನರ ಹೊಗಳಿಕೆಯ ಮಾತುಗಳು ರಾಜನ ಕಿವಿಗೂ ಬಿದ್ದುವು. ಅವನಿಗೆ, “ಜನರು ನನ್ನನ್ನು ಗೌರವಿಸದೆ ನನ್ನ ಆನೆಯನ್ನು ಹೊಗಳುತ್ತಾರಲ್ಲಾ” ಎಂಬ ಈರ್ಷ್ಯೆಯು ಉಂಟಾಗಿ, ಅದನ್ನು ಕೊಂದು ಬಿಡಬೇಕೆಂದು ನಿಶ್ಚಯಿಸುವ ಮಟ್ಟಕ್ಕೂ ಹೋದ. ಅದಕ್ಕಾಘಿ ತಂತ್ರವೊಂದನ್ನು ರೂಪಿಸಿದ.

ಆಮೇಲೆ ಮಾವಟಿಗನನ್ನು ಕರೆಸಿಕೊಂಡ ರಾಜ, ‘‘ಈ ನಮ್ಮ ಪಟ್ಟದಾನೆ ಒಳ್ಳೆಯ ಶಿಕ್ಷಣ ಪಡೆದಿದೆಯೇ?’’ ಎಂದು ಕೇಳಿದ.
‘‘ಬೇಕಾದ ಶಿಕ್ಷಣವೆಲ್ಲಾ ಕೊಟ್ಟಿದ್ದೇನೆ ಪ್ರಭು. ತಮಗೇನಾದರೂ ಸಂದೇಹವಿದೆಯೇ?’’ ಕೇಳಿದ ಮಾವಟಿಗ. ‘‘ಸಂದೇಹವಿರುವುದರಿಂದಲೇ ಕೇಳುತ್ತೇನೆ. ನನಗೇನೋ ಅದೊಂದು ಗರ್ವಿಷ್ಠ ಪ್ರಾಣಿಯಂತೆ ತೋರುತ್ತಿದೆ. ಅಕೋ, ಅಲ್ಲಿ ಕಾಣುವ ಪರ್ವತ ಶಿಖರದ ಮೇಲೆ ಅದನ್ನು ಏರಿಸು. ನಿನ್ನ ಶಿಕ್ಷಣವನ್ನು ನೋಡೋಣ’’ ಎಂದ ರಾಜ.
‘‘ಅದನ್ನು ಈ ಆನೆಯು ಸುಲಭವಾಗಿಯೇ ಏರುತ್ತದೆ ಪ್ರಭೂ’’ ಎಂದು ಹೇಳಿ ಮಾವಟಿಗ, ಆ ಆನೆಯನ್ನು ಕೆಲವೇ ನಿಮಿಷಗಳಲ್ಲಿ ಪರ್ವತ ಶಿಖರದ ಮೇಲೇರಿಸಿದ.

ರಾಜ ತನ್ನ ಪರಿವಾರದೊಡನೆ ತಾನೂ ಆ ಶಿಖರವನ್ನೇರಿದ. ಆ ಶಿಖರದ ಒಂದು ಬದಿಯಲ್ಲಿ ಚಿಕ್ಕ ಸಮತಟ್ಟಾದ ಪ್ರದೇಶವಿದ್ದು, ಅದರಾಚೆಗೆ ಆಳವಾದ ಕಂದರ ಇದ್ದಿತು.
ರಾಜನು, ‘‘ನೀನು ಅದಕ್ಕೆ ಕೊಟ್ಟ ಶಿಕ್ಷಣದ ಪ್ರಭಾವವನ್ನು ನೋಡುತ್ತೇನೆ. ಎಲ್ಲಿ, ಆನೆಯನ್ನು ಮೂರು ಕಾಲುಗಳಲ್ಲಿ ನಿಲ್ಲಿಸು’’ ಎಂದ.
ಕೂಡಲೇ ಮಾವಟಿಗನು ಅಂಕುಶ ಭಾಷೆಯಲ್ಲಿ ಆನೆಗೆ ಸೂಚನೆಕೊಟ್ಟು, ‘‘ಪ್ರಭುಗಳ ಆಜ್ಞೆ. ಮೂರು ಕಾಲುಗಳಲ್ಲಿ ನಿಲ್ಲು’’ ಎಂದ. ಆನೆಯು ಹಾಗೆಯೇ ನಿಂತಿತು.
ಅದನ್ನು ನೋಡಿ ರಾಜನು ‘‘ಚೆನ್ನಾಗಿದೆ! ಈಸಾರಿ ಮುಂದಿನ ಎರಡು ಕಾಲುಗಳಲ್ಲಿ ಮಾತ್ರ ನಿಲ್ಲುವಂತೆ ಹೇಳು. ಹೇಗೆ ನಿಲ್ಲುವುದೋ ನೋಡುತ್ತೇನೆ’’ ಎಂದ.
ಮಾವಟಿಗನ ಸನ್ನೆಯಂತೆ ಆನೆಯು ಹಿಂದಿನ ಕಾಲುಗಳನ್ನೆತ್ತಿ ಮುಂದಿನ ಕಾಲುಗಳಲ್ಲಿ ನಿಂತಿತು.
‘‘ಇದೇನೋ ಸರಿ. ಈಗ ಹಿಂದಿನ ಕಾಲುಗಳ ಮೇಲೆ ನಿಲ್ಲಲಿಕ್ಕೆ ಹೇಳು’’ ಎಂದ ರಾಜ. ಕೂಡಲೇ ಆನೆಯು ಹಿಂದಿನ ಕಾಲುಗಳ ಮೇಲೆ ನಿಂತಿತು.
‘‘ಒಂಟಿಕಾಲಿನಲ್ಲಿ ನಿಲ್ಲಿಸು!’’ ರಾಜ ಆಜ್ಞೆ ಮಾಡಿದನು. ಮಾವಟಿಗನ ಸೂಚನೆಯಂತೆ ಆನೆಯು ಒಂದೇ ಕಾಲಿನಲ್ಲಿ ನಿಂತು ತೋರಿಸಿತು.

ಆನೆಯಿಂದ ಇಷ್ಟೆಲ್ಲಾ ಮಾಡಿಸುವಾಗ ಅದು ಸ್ವಲ್ಪ ಮಾತ್ರ ತೂಕ ತಪ್ಪಿದ್ದರೂ ಪಾತಳಕ್ಕೆ ಬೀಳಬೇಕಿತ್ತು. ಹಾಗೇನೂ ಆಗದೆ ಇದ್ದುದರಿಂದ ರಾಜನು ಮನಸ್ಸಿನಲ್ಲೇ ಕುದಿಯತೊಡಗಿದನು.
‘‘ಇಂತಹ ಕೆಲಸಗಳನ್ನು ಸ್ವಲ್ಪಮಟ್ಟಿಗೆ ಶಿಕ್ಷಣ ಕೊಟ್ಟರೂ ಎಂತಹ ಆನೆಯಾದರೂ ಮಾಡಿಬಿಡುತ್ತದೆ. ನೀನು ಹೇಳುವಂತೆ ಇದೊಂದು ವಿಶಿಷ್ಟ ಆನೆಯಾಗಿದ್ದರೆ, ಇದರ ಮಹತ್ವಕ್ಕೆ ತಕ್ಕಹಾಗೆ ಇನ್ನೂಂದು ಪರೀಕ್ಷೆ ಹೇಳುತ್ತೇನೆ ಮಾಡಿಸು’’ ಎಂದನು.
‘‘ಅದೇನು ಪರೀಕ್ಷೆಯೋ ಅಪ್ಪಣೆಯಾಗಲಿ ಪ್ರಭೂ’’ ಎಂದ ಮಾವಟಿಗ.
‘‘ನಿನ್ನ ಆನೆಗೆ ಆಕಾಶದಲ್ಲಿ, ಮೋಡಗಳ ಮೇಲೆ ನಡೆಯಲು ಹೇಳು. ಇದು ನನ್ನ ಆಜ್ಞೆ!!’’ ಎಂದ ಆ ಕುತ್ಸಿತ ಬುದ್ಧಿಯ ರಾಜ.
ರಾಜನ ಆಜ್ಞೆಯನ್ನು ಕೇಳಿದ ಕೂಡಲೇ ಮಾವಟಿಗನಿಗೆ ರಾಜನ ದುರುದ್ದೇಶವು ಅರ್ಥವಾಯಿತು. ಆದರೆ ಅವನು ಸ್ವಲ್ಪವೂ ಹೆದರದೆ ಆನೆಯ ಕಿವಿಯಲ್ಲಿ, ‘‘ನೀನು ಈ ಪರ್ವತ ಶಿಖರದಿಂದ ಬಿದ್ದು ಸಾಯಬೇಕೆಂದು ರಾಜನು ಹೀಗೆಲ್ಲಾ ಮಾಡಿಸುತ್ತಿದ್ದಾನೆ. ಅವನು ನಿನ್ನ ಬೆಲೆಯನ್ನು ಅರಿತಿಲ್ಲ. ಈ ಶಿಖರದ ಅಂಚಿನಿಂದ ಮುಂದಡಿಯಿಟ್ಟು ವಾಯುಸ್ತಂಭನ ಶಕ್ತಿಯಿಂದ ಗಾಳಿಯಲ್ಲಿ ನಡೆದುಬಿಡು’’ ಎಂದು ಗುಟ್ಟಾಗಿ ಸೂಚಿಸಿದ.
ಆನೆಯು ಮಾವಟಿಗನನ್ನು ಏರಿಸಿಕೊಂಡು ಶಿಖರದ ಮೇಲಿನಿಂದ ಮುಂದೆ ಹೋಗಿ, ಹಾಗೆಯೇ ಆಕಾಶಕ್ಕೆ ಕಾಲಿಟ್ಟು ಗಾಳಿಯಲ್ಲಿ ನಡೆಯುತ್ತಾ ಹೋಯಿತು. ಆಗ ಮಾವಟಿಗನು ರಾಜನಿಗೆ ಕೇಳುವಂತೆ ಗಟ್ಟಿಯಾಗಿ, ‘‘ರಾಜಾ! ಈ ಆನೆಯು ಸಾಮಾನ್ಯವಾದುದಲ್ಲ. ದೈವಾಂಶದಿಂದ ಜನಿಸಿದ್ದು. ನಿನ್ನಂಥ ಹೀನ ರಾಜನಿಗೆ ಪಟ್ಟದಾನೆಯಾಗಿರಲು ಇದು ತಕ್ಕುದಲ್ಲ. ಅಮೂಲ್ಯ ವಸ್ತುಗಳ ಬೆಲೆ ಅರಿಯದ ಮೂರ್ಖರು ಇಂತಹ ಆನೆಯನ್ನು ಮಾತ್ರವಲ್ಲ, ಅಮೂಲ್ಯವಾದ ಸಕಲವನ್ನೂ ಕಳೆದುಕೊಂಡು ಬಿಡುತ್ತಾರೆ. ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತ ಪಡುತ್ತಿರು’’ ಎಂದು ಕೂಗಿ ಹೇಳಿದ.

ಆನೆಯು ಅದೇ ರೀತಿಯಲ್ಲಿ ಗಾಳಿಯಲ್ಲಿ ನಡೆಯುತ್ತಾ ಸಾಗಿ ಕಾಶೀ ರಾಜ್ಯವನ್ನು ತಲುಪಿ, ಅಲ್ಲಿಯ ರಾಜನ ಉದ್ಯಾನವನದ ಮೇಲು ಭಾಗದ ಆಗಸದಲ್ಲಿ ನಿಂತಿತು. ಇದನ್ನು ನೋಡಿದ ನಗರದ ಪೌರರು ಅಚ್ಚರಿಯಿಂದ ಅಲ್ಲಿ ಗುಂಪುಗೂಡಿದರು.
‘‘ಆಕಾಶದಲ್ಲೊಂದು ಬಿಳಿಯಾನೆ ಬಂದು ನಿಂತಿದೆ’’ ಎಂಬ ವಾರ್ತೆಯು ರಾಜನವರೆಗೆ ತಲಪಿತು.
ಕಾಶೀರಾಜನು ಕೂಡಲೇ ಉದ್ಯಾನದ ಕಡೆಗೆ ಬಂದು ಅಂತರಿಕ್ಷದಲ್ಲಿ ನಿಂತಿದ್ದ ಆನೆಯ ಕಡೆಗೆ ನೋಡಿ ಕೈ ಜೋಡಿಸಿ, ‘‘ಹೇ! ಗಜರಾಜಾ! ನಿನ್ನ ಬರುವಿಕೆಯಿಂದ ನನ್ನ ರಾಜ್ಯವು ಪವಿತ್ರವಾಯಿತು. ದಯಮಾಡಿ ಕೆಳಗಿಳಿದು ಬರಬೇಕೆಂದು ಪ್ರಾರ್ಥಿಸುತ್ತೇನೆ’’ ಎಂದು ಬೇಡಿಕೊಂಡ.
ರಾಜನ ಪ್ರಾರ್ಥನೆಯನ್ನು ಕೇಳಿ ಆನೆಯ ರೂಪದಲ್ಲಿರುವ ಬೋಧಿಸತ್ವನು ಕೆಳಗಿಳಿದು ಬಂದು ಗಂಭೀರವಾಗಿ ನಿಂತನು. ಮಾವಟಿಗನು ನಡೆದ ಎಲ್ಲಾ ಸಂಗತಿಯನ್ನೂ ಕಾಶೀರಾಜನೊಂದಿಗೆ ಹೇಳಿದನು. ರಾಜನು ಆ ದೈವಿಕ ಶಕ್ತಿಯ ಆನೆಗಾಗಿ ಸುಂದರವಾದ ಗಜಶಾಲೆಯನ್ನು ನಿರ್ಮಿಸಿದ. ಆಮೇಲೆ ತನ್ನ ರಾಜ್ಯವನ್ನು ಮೂರು ಭಾಗಗಳಾಗಿ ಮಾಡಿ, ಒಂದು ಭಾಗವನ್ನು ಆನೆಯ ರೂಪದಲ್ಲಿರುವ ಬೋಧಿಸತ್ವನ ಪೋಷಣೆಗೂ, ಎರಡನೇ ಭಾಗವನ್ನು ಅದರ ಮಾವಟಿಗನಿಗೂ ಕೊಟ್ಟನು. ಉಳಿದ ಮೂರನೇ ಭಾಗವನ್ನು ಮಾತ್ರ ತನ್ನ ಉಪಯೋಗಕ್ಕೆ ಇಟ್ಟುಕೊಂಡ.

ಬೋಧಿಸತ್ವನು ಕಾಶೀರಾಜ್ಯವನ್ನು ಸೇರಿದ ಮೇಲೆ ಕಾಶೀರಾಜನ ಐಶ್ವರ್ಯವು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಾ ಹೋಯಿತು. ಅವನ ಹೆಸರು ಪ್ರಖ್ಯಾತವಾಗಿ ದಶದಿಶೆಗಳಲ್ಲಿಯೂ ವ್ಯಾಪಿಸಿತು.

(ಆಕರ: ಜಾತಕ ಕಥೆಗಳು)

Leave a Reply