ನಾವು ನಾವೇ ಆಗಿ ಬದುಕಬೇಕು ಮತ್ತು ಸಾಯಬೇಕು….

ಕೊನೆಯ ಕ್ಷಣಗಳನ್ನು ಎಣಿಸುತ್ತಿದ್ದ ಮಾಧವ ಲಾಹೋರಿಗೆ ಬದುಕಿಡೀ ತಾನು ಬೇರೆ ಯಾರೋ ಆಗಲು ಯತ್ನಿಸುತ್ತಿದ್ದೆನೆಂದೂ, ನಾನು ನಾನೇ ಆಗುವಲ್ಲಿ ಸೋತಿದ್ದೇನೆಂದೂ ಅರಿವಾಯಿತು. ಈ ಅರಿವನ್ನು ಪಡೆಯಲು ನಾವೂ ಕೊನೆ ಕ್ಷಣದವರೆಗೆ ಕಾಯಬೇಕೆ? ಮಾಧೋ ಹೇಳಿಹೋದ ಪಾಠ ಸಾಲದೇ? ~ ಆನಂದಪೂರ್ಣ

ಮಾಧವ ಲಾಹೋರಿ ಮರಣಶಯ್ಯೆಯಲ್ಲಿದ್ದನು. ಹೆಚ್ಚೂಕಡಿಮೆ ಕೊನೆಯುಸಿರಿನ ಕ್ಷಣಗಣನೆ ಸಾಗಿತ್ತು. ಹೀಗಿರುವಾಗ ಮಾಧವ ಲಾಹೋರಿ ಮಣಮಣ ಎಂದು ಏನೋ ಮಂತ್ರ ಹೇಳತೊಡಗಿದ. ಕಣ್ಣೀರು ದಳದಳನೆ ಇಳಿಯತೊಡಗಿತು. ಮೈ ಅದುರತೊಡಗಿತು.

ಹಾಸಿಗೆಯ ಪಕ್ಕದಲ್ಲೆ ಕುಳಿತಿದ್ದವನೊಬ್ಬ ಲಾಹೋರಿಯ ಕೈಗಳನ್ನು ಅದುಮುತ್ತಾ “ಏನಾಯಿತು ಮಾಧೋ?  ಯಾಕೆ ಕಂಪಿಸ್ತಿದ್ದೀಯ? ನಿನಗೇನು ಚಿಂತೆ?” ಎಂದು ವಿಚಾರಿಸಿದ.

ಮಾಧವ ಲಾಹೋರಿ ತನ್ನ ಮೆಲು ದನಿಯಲ್ಲೇ ಕಷ್ಟಪಟ್ಟು ಉತ್ತರಿಸಿದ; “ಹೌದು ನನಗೆ ಚಿಂತೆ ಕಾಡುತ್ತಿದೆ. ನಾನು ಸತ್ತಮೇಲೆ ಭಗವಂತನ ಬಳಿಗೆ ಹೋಗ್ತೀನಲ್ಲ, ಆಗ ಅವನಂತೂ ನನ್ನನ್ನು ನೀನು ‘ರಮಾನಂದನಂತೆ ಯಾಕೆ ಆಗಲಿಲ್ಲ?” ಅಂತ ಕೇಳೋದಿಲ್ಲ. ಹಾಗೇನಾದರೂ ಕೇಳಿದರೆ ನಾನು “ದೇವಾ! ನೀನು ನನಗೆ ರಮಾನಂದನ ಗುಣಗಳನ್ನು ಕೊಡಲಿಲ್ಲ, ಅದಕ್ಕೇ…” ಅಂತ ಹೇಳಬಹುದು. ಅವನು “ನೀನೇಕೆ ಕಬೀರನಂತೆ ಆಗಲಿಲ್ಲ?” ಅಂತಲೂ ಕೇಳೋದಿಲ್ಲ. ಹಾಗೇನಾದರೂ ಕೇಳಿದರೆ “ದೇವಾ! ನೀನು ನನಗೆ ಕಬೀರನ ಗುಣಗಳನ್ನು ಕೊಡಲಿಲ್ಲ, ಅದಕ್ಕೇ…” ಅಂದುಬಿಡಬಹುದು. ಆದರೆ ನನ್ನ ಭಯ ಏನೆಂದರೆ, ದೇವರೇನಾದರೂ “ಮಾಧವ ಲಾಹೋರಿ, ನೀನು ಮಾಧವ  ಲಾಹೋರಿಯಂತೆ ಯಾಕೆ ಆಗಲಿಲ್ಲ?” ಅಂತ ಕೇಳಿದರೆ ಏನು ಹೇಳೋದು?

ಲಾಹೋರಿ ಒಂದು ಕ್ಷಣ ಮಾತು ನಿಲ್ಲಿಸಿದ. “ಭಗವಂತ ಹಾಗೇನಾದರೂ ಕೇಳಿದರೆ ಕೊಡಲು ನನ್ನಲ್ಲಿ ಯಾವ ಉತ್ತರವೂ ಇಲ್ಲ. ನಾಚಿಕೆಯಿಂದ ತಲೆ ತಗ್ಗಿಸಿ ನಿಲ್ಲಬೇಕಾಗುತ್ತದೆ ಅಷ್ಟೆ. ಬದುಕಿಡೀ ನಾನು ರಮಾನಂದರಂತೆ ಆಗಲು, ಕಬೀರನಂತೆ ಆಗಲು ಯತ್ನಿಸುತ್ತಿದ್ದೆ. ನನಗೆ ಮಾಧವ ಲಾಹೋರಿಯೇ ಆಗುವ ಗುಣಗಳನ್ನು ಕೊಡಲ್ಪಟ್ಟಿದೆ, ನಾನು ಮಾಧವ ಲಾಹೋರಿಯೇ ಆಗಬೇಕು ಅನ್ನುವುದನ್ನು ಮರೆತುಹೋದೆ. ನಾನು ನಾನಾಗದೇ ಉಳಿದೆ. ಭಗವಂತನ ಪ್ರಶ್ನೆಗೆ ನಾನು ಏನಂತ ಉತ್ತರಿಸಲಿ?”

ಮಾಧವ ಲಾಹೋರಿಯ ಪ್ರಶ್ನೆಯೇ ತನ್ನ ಅನುಯಾಯಿಗಳಿಗೆ ನೀಡಿದ ಕೊನೆಯ ಪಾಠವಾಯಿತು.

~

ಮಾಧವ ಲಾಹೋರಿಯೇನೋ ಕೊನೆಯ ಪಾಠ ಹೇಳಿಹೋದ. ಆದರೆ ಅದನ್ನು ಅಲ್ಲಿದ್ದವರು ಯಾರೂ ಕಲಿತುಕೊಳ್ಳಲಿಲ್ಲ. ಲಾಹೋರಿಗಿಂತಲೂ ಮುಂಚೆ ಬಹಳ ಜನ ಅದನ್ನು ತಮ್ಮ ಬದುಕಿನ ಮೂಲಕವೂ ಬೋಧನೆಯ ಮೂಲಕವೂ ಹೇಳಿದ್ದರು. ಆಗಲೂ ಅವರವರ ಅನುಯಾಯಿಗಳು ಅದನ್ನು ಕಲಿತುಕೊಳ್ಳದೆ ಉಳಿದಿದ್ದರು.

ಈಗಿನ ನಾವಾದರೂ ಅಷ್ಟೇ. ನಮಗೆ ನಾವು ನಾವೇ ಆಗಿ ಇರುವಲ್ಲಿ ಆಸಕ್ತಿ ಇಲ್ಲ. ನಾವು ಇನ್ಯಾರೋ ಆಗಲು ಬಯಸುತ್ತೇವೆ. ನಾವು ಇಂಥಾ ಉದ್ಯಮಿಯಂತೆ, ಇಂಥಾ ನಟ/ನಟಿಯಂತೆ, ಇಂಥಾ ವಿಜ್ಞಾನಿಯಂತೆ ಅಥವಾ ಇಂಥಾ ರಾಜಕಾರಣಿಯಂತೆ ಆಗಬೇಕು ಎಂದು ಕನಸು ಕಾಣುತ್ತೇವೆ. ಅದಕ್ಕಾಗಿ ಪ್ರಯತ್ನವನ್ನೂ ಮಾಡುತ್ತೇವೆ. ನಮ್ಮ ಸುತ್ತಲಿನವರೂ ನಮಗೆ ಅದನ್ನೆ ಹೇಳುತ್ತಾ ಇರುತ್ತಾರೆ. ನಮ್ಮೆದುರು ಒಂದು ಆದರ್ಶವನ್ನು ನಿಲ್ಲಿಸಿ “ನೀನು ಅವರಂತೆ ಆಗು” ಎಂದು ತಲೆಗೆ ತುಂಬುತ್ತಲೇ ಇರುತ್ತಾರೆ. ನಾವೂ ಕೂಡ ನಮ್ಮ ಮಕ್ಕಳಿಗೆ, ಕಿರಿಯರಿಗೆ ಮಾಡುವುದು ಇದನ್ನೇ.

ನಮಗೆ ಆದರ್ಶ ವ್ಯಕ್ತಿಗಳ/ ಸಾಧಕರ ಬದುಕಿನ ಮೌಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಆಸಕ್ತಿ ಇರುವುದಿಲ್ಲ. ನಮ್ಮದೇನಿದ್ದರೂ ಅವರು ಅನುಭವಿಸಿದ ಕೀರ್ತಿ, ಸಂಪತ್ತು, ಮನ್ನಣೆ, ಅಧಿಕಾರಗಳನ್ನು ಗಳಿಸುವ ಹಪಾಹಪಿ. ಅಥವಾ ಆ ವ್ಯಕ್ತಿಗಳನ್ನು ಮೂರ್ತಿಯಾಗಿ ಪ್ರತಿಷ್ಠಾಪಿಸಿ, ಮಠ ಕಟ್ಟಿ, ತಾವು ಅದರ ಪರಿಚಾರಕನೆಂದೋ ಉತ್ತರಾಧಿಕಾರಿಯೆಂದೋ ಹೇಳಿಕೊಳ್ಳುವ ಖುಷಿ.

ಯಾವ ಎರಡು ಜೀವಿಯೂ ಸಮವಾಗಿರುವುದಿಲ್ಲ, ಪ್ರತಿಯೊಂದು ಜೀವಿಯ ಜೀವಕೋಶಗಳ ಸಂರಚನೆಯಿಂದ ಹಿಡಿದು, ಹಸ್ತರೇಖೆಗಳವರೆಗೆ ಸ್ಥೂಲ – ಸೂಕ್ಷ್ಮಗಳೆಲ್ಲವೂ ಭಿನ್ನವಾಗಿರುತ್ತವೆ. ಹೀಗಿರುವಾಗ ನಾವು ಮತ್ಯಾರೋ ಆಗುವುದು ಹೇಗೆ? ನಾವು ನಾವಾಗಿ ಬದುಕಲೆಂದೇ ಹುಟ್ಟಿದ್ದೇವೆ. ಹತ್ತು ಜನ ಹೊಗಳುವಂಥ ಸಾಧನೆ ಮಾಡುತ್ತೇವೆಯೋ ಬಿಡುತ್ತೇವೆಯೋ…. ಹೆಸರು, ಕೀರ್ತಿ, ಸಂಪತ್ತುಗಳೆಲ್ಲ ನಮಗೆ ಸಿಗುವ ಬೋನಸ್. ಆದರೆ ನಮ್ಮ ವ್ಯಕ್ತಿತ್ವ, ನಮಗೆಂದೇ ಕೊಡಲ್ಪಟ್ಟಿರುವ unique ಆದ ಗುಣವಿಶೇಷಗಳ output. ಅದನ್ನು ನಾವು ಕಂಡುಕೊಂಡು, ನಮ್ಮ ವ್ಯಕ್ತಿತ್ವವನ್ನು, ನಮ್ಮದೇ ಗುರುತನ್ನು ಕಟ್ಟಿಕೊಳ್ಳಬೇಕು.

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s