ಗಾಂಧಾರಿಯ ತಪ್ಪುಗಳಿಂದ ನಾವು ಕಲಿಯಬೇಕಾದ ಪಾಠಗಳು

ನಾವೂ ಗಾಂಧಾರಿಯಂತೆ ಒಳಗಣ್ಣಿನ ಕುರುಡುತನಕ್ಕೆ ಪಕ್ಕಾಗಿದ್ದೇವೆ. ನಮ್ಮ ಕ್ರಿಯೆಪ್ರಕ್ರಿಯೆಗಳ ಪರಿವೆಯೇ ಇಲ್ಲದಂತೆ, ನಮ್ಮ ತಪ್ಪುಗಳ ಅರಿವೇ ಆಗದಂತೆ ನಡೆಯುತ್ತಿರುತ್ತೇವೆ. ನಮ್ಮ ಬಹಳಷ್ಟು ಮೂರ್ಖ ನಿರ್ಧಾರಗಳಿಗೆ ಕಾರಣ ಇದೇ ಆಗಿದೆ  ~ ಗಾಯತ್ರಿ

ಗಾಂಧಾರಿ

ದೇಹಕ್ಕೆ ಸಂಬಂಧಿಸಿದ ಕುರುಡುತನ ಬೇರೆ, ಬುದ್ಧಿಗೆ ಸಂಬಂಧಿಸಿದ ಕುರುಡುತನವೇ ಬೇರೆ. ಕಣ್ಣು ಕುರುಡಿದ್ದರೂ ಒಳಗಣ್ಣು ತೆರೆದುಕೊಂಡು ಆ ಮೂಲಕವೇ ಬದುಕು ಕಟ್ಟಿಕೊಂಡಿರುವ ಎಷ್ಟೊಂದು ಜನರು ನಮ್ಮ ನಡುವೆ ಇದ್ದಾರೆ. ಪುರಾಣೇತಿಹಾಸಗಳಲ್ಲೂ ಆಗಿಹೋಗಿದ್ದಾರೆ. ಆದರೆ ಒಳಗಣ್ಣಿನ ಕುರುಡಿನಿಂದಾಗಿ ದಿನ ನಿತ್ಯವೂ ದಾರಿ ತಪ್ಪುತ್ತ, ಎಡವಿ ಬೀಳುತ್ತ ಬದುಕನ್ನು ಅನಿಶ್ಚತತೆಗೆ ದೂಡಿಕೊಂಡವರ ಸಂಖ್ಯೆಯೇ ವಿಪರೀತವಿದೆ.

ನೀವು ಧೃತರಾಷ್ಟ್ರ ಕುರುಡನ್ನು ಕೇಳಿದ್ದೀರಿ. ಅದು ಬೇರೆ. ಆತನ ಕುರುಡು ದೈಹಿಕವಾಗಿಯೂ ಇತ್ತು. ಬೌದ್ಧಿಕವಾಗಿಯೂ ಆತನದ್ದು ‘ಜಾಣ ಕುರುಡು’. ಆದರೆ, ಹೊರಗಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡ ಗಾಂಧಾರಿ ಒಳಗಣ್ಣಿಗೂ ಪರದೆ ಇಳಿ ಬಿಟ್ಟುಕೊಂಡಿದ್ದು ದುರಂತ.

ಹಾಗೆಂದು, ಗಾಂಧಾರಿ ಅಧರ್ಮಿಯೇನಲ್ಲ. ಆಕೆ ಮಗನಿಗೆ ಆಶೀರ್ವಾದ ಮಾಡುವಾಗೆಲ್ಲ ‘ಧರ್ಮಕ್ಕೆ ಜಯ ನಿಶ್ಚಿತ’ ಎಂದೇ ಹೇಳುತ್ತಿದ್ದುದು. ಮಹಾಭಾರತ ಯುದ್ಧ ಆರಂಭವಾಗುವ ಮುನ್ನ ದುರ್ಯೋಧನ ಆಶೀರ್ವಾದ ಬೇಡಲು ಬಂದಾಗಲೂ ಆಕೆಯ ಆಶೀರ್ವಚನ ‘ನಿನಗೆ ಜಯವಾಗಲಿ’ ಎಂದಲ್ಲ, ‘ಧರ್ಮಕ್ಕೆ ಜಯವಾಗಲಿ’ ಎಂದೇ ಇತ್ತು. ಹಾಗಾದರೆ ಗಾಂಧಾರಿಗೆ ತನ್ನ ಮಗ ಅಧರ್ಮಿಯೆಂದು ಗೊತ್ತಿರಲಿಲ್ಲವೆ? ಮೂಲ ಮಹಾಭಾರತ ಹಾಗೂ ಅದರ ಬಹುತೇಕ ಪ್ರಕ್ಷೇಪಗಳು ಈ ಕುರಿತು ಏನನ್ನೂ ಹೇಳಿಲ್ಲ. ಆಕೆಯ ಒಳಗಣ್ಣಿಗೆ ತನ್ನ ಮಗ ದುಷ್ಟನಾಗಿ ಕಂಡಂತಿಲ್ಲ. ಜೊತೆಗೆ, ಧರ್ಮಿಷ್ಟೆ, ಪುತ್ರವತ್ಸಲೆ ಎಲ್ಲವೂ ಆಗಿದ್ದರೂ ಹೊಟ್ಟೆ ಕಿಚ್ಚಿನ ಉರಿ ಗಾಂಧಾರಿಯ ಒಳಗಣ್ಣನ್ನು ಸುಟ್ಟು ಹಾಕಿತ್ತು. ಆಕೆಯ ಕುರುಡು ಈ ನಿಟ್ಟಿನದು.

ಬುದ್ಧಿಗೆ ಕುರುಡು ಕವಿದಾಗ

ಮಹಾಭಾರತದ ಒಂದು ಪ್ರಕ್ಷೇಪದಲ್ಲಿ  ಗಾಂಧಾರಿ ಮತ್ತು ದುರ್ಯೋಧನರ ಭೇಟಿಗಳ ವಿವರಣೆಯಿದೆ. ಗಾಂಧಾರಿ ದೃಷ್ಟಿ ಸಮಂಜಸವಾಗಿದ್ದ ತನ್ನ ಕಣ್ಣುಗಳನ್ನು ಮದುವೆಯ ಅನಂತರ ಲೋಕದ ನೋಟಕ್ಕೆ ತೆರೆಯಲಿಲ್ಲ. ಆದ್ದರಿಂದ ಆ ಕಣ್ಣುಗಳಲ್ಲಿ ಅಪಾರವಾದ ಶಕ್ತಿ ಸಂಚಯವಾಗಿದ್ದಿತು. ದುರ್ಯೋಧನನನ್ನು ವಜ್ರಕಾಯನಾಗಿಸಬೇಕೆಂಬ ಬಯಕೆಯಿಂದ ಆಕೆ ತನ್ನ ಕಣ್ಣುಗಳಲ್ಲಿ ಸಂಚಿತವಾಗಿದ್ದ ಶಕ್ತಿಯನ್ನು ಆತನಿಗೆ ಧಾರೆ ಎರುವ ನಿರ್ಧಾರ ಮಾಡಿದಳು. ಹನ್ನೆರಡು ವರ್ಷಗಳಿಗೊಮ್ಮೆ ಮಗನನ್ನು ಕರೆಸಿಕೊಂಡು ಆತನ ಮೇಲೆ ತನ್ನ ದೃಷ್ಟಿಯನ್ನು ಬೀರಿ ಶಕ್ತಿಪಾತ ಮಾಡುವ ಯೋಚನೆ ಅವಳದು. ಮೊದಲ ಬಾರಿಗೆ ದುರ್ಯೋಧನನ್ನು ಕರೆಸಿಕೊಂಡಾಗ ಆತ ಹನ್ನೆರಡರ ಬಾಲಕ. ಅವನನ್ನು ನಿರ್ವಸ್ತ್ರನಾಗಿ ನಿಲ್ಲಲು ಹೇಳಿ ತಾನು ಕಟ್ಟಿಕೊಂಡಿದ್ದ ರೇಶಿಮೆ ಪಟ್ಟಿ ಕಳಚುತ್ತಾಳೆ ಗಾಂಧಾರಿ. ಆಕೆಯ ತಪಃತೇಜದ ದೃಷ್ಟಿಯಿಂದ ದುರ್ಯೋಧನನ ದೇಹ ಸಂಸ್ಕಾರಗೊಳ್ಳುತ್ತದೆ. 

ಮತ್ತೆ ಹನ್ನೆರಡು ವರ್ಷ ಕಳೆದು ಶಕ್ತಿಪಾತಕ್ಕೆ ಹೇಳಿಕಳಿಸುತ್ತಾಳೆ ಗಾಂಧಾರಿ. ಆದರೆ ಈಗ ದುರ್ಯೋಧನ ತರುಣ. ತಾಯಿಯಾದರೂ ಸರಿ, ಹೋಗಿ ನಿರ್ವಸ್ತ್ರನಾಗಿ ನಿಲ್ಲುವುದೆ? ಮಾವ ಶಕುನಿಯ ಸಲಹೆಯಂತೆ ಎಲ್ಲಿಂದಲೋ ಹನ್ನೆರಡು ವರ್ಷದ ಬಾಲಕನನ್ನು ಕರೆಸಿ, ವಿವಸ್ತ್ರಗೊಳಿಸಿ ಗಾಂಧಾರಿಯ ಬಳಿ ಕಳಿಸುತ್ತಾನೆ. ಆಕೆ ಹಿಂದಿನಂತೆಯೇ ದೃಷ್ಟಿ ಬೀರಿ ಕಳಿಸುತ್ತಾಳೆ. ಅನಂತರದ ಸರದಿಯಲ್ಲೆಲ್ಲ ದುರ್ಯೋಧನ ತನ್ನ ಬದಲು ಹನ್ನೆರಡರ ಬಾಲಕರನ್ನೆ ತಾಯಿಯ ಬಳಿ ಕಳಿಸುತ್ತ ಇರುತ್ತಾನೆ. ಗಾಂಧಾರಿಯೂ ತನ್ನ ಕರ್ತವ್ಯ ಪೂರೈಸಿ ಕಳಿಸುತ್ತಾಳೆ. 

ಆದರೆ ಜೂಜಿನ ಪ್ರಸಂಗ ನಡೆದು ಪಾಂಡವರು ವನವಾಸಕ್ಕೆ ತೆರಳಿದಾಗ ಗಾಂಧಾರಿಗೆ ಹೊಸ ಯೋಚನೆ ಮೂಡುತ್ತದೆ. ಇನ್ನೀಗ ವನವಾಸ, ಅಜ್ಞಾತವಾಸ ಕಳೆದು ಮರಳುವ ಪಾಂಡವರು ತನ್ನ ಮಕ್ಕಳನ್ನು ಉಳಿಸಲಾರರು. ಆದ್ದರಿಂದ ತನ್ನ ಮಗನನ್ನು ಮತ್ತಷ್ಟು ಬಲಶಾಲಿಯಾಗಿಸಬೇಕು. ಅದಕ್ಕಾಗಿ ಹೆಚ್ಚು ನೇಮ ನಿಷ್ಠೆಗಳನ್ನು ಮಾಡಿ ಶಕ್ತಿ ಸಂಚಯ ಮಾಡಿಕೊಳ್ಳಬೇಕು! ಅದರಂತೆ ತಪೋನಿರತಳಾಗುತ್ತಾಳೆ ಗಾಂಧಾರಿ. 

ಮುಂದೆ ನಿರೀಕ್ಷೆಯಂತೆ ಎಲ್ಲವೂ ನಡೆದು ಯುದ್ಧ ಘೋಷಣೆಯೂ ಆಗುತ್ತದೆ. ಅದೇ ಸಂದರ್ಭದಲ್ಲಿ ಒದಗಿಬರುತ್ತದೆ ಗಾಂಧಾರಿಯ ಶಕ್ತಿಪಾತ ಪರ್ವ. ಈ ಬಾರಿ ಸಾಧ್ಯವಿರುವ ಎಲ್ಲ ಶಕ್ತಿಯನ್ನೂ ತನ್ನದಾಗಿಸಿಕೊಳ್ಳಬೇಕೆಂಬ ಹಪಾಹಪಿಗೆ ಬಿದ್ದ ದುರ್ಯೋಧನ ತಾನೇ ತಾಯಿಯ ಬಳಿ ತೆರಳುವುದಾಗಿ ಹೇಳುತ್ತಾನೆ. ಅದರಂತೆ ವಿವಸ್ತ್ರನಾಗಿ ಹೊರಡುತ್ತಾನೆ ಕೂಡ. ಆದರೆ ನಡುವೆ ಬರುವ ಶ್ರೀಕೃಷ್ಣ ಆತನನ್ನು ತಡೆದು, ‘ತಾಯಿಯಾದರೂ ಆಕೆ ಸ್ತ್ರೀಯಲ್ಲವೆ? ಸ್ತ್ರೀಯೊಬ್ಬಳ ಎದುರು ಬಟ್ಟೆ ಇಲ್ಲದೆ ನಿಲ್ಲುವುದು ಕ್ಷತ್ರಿಯನಿಗೆ ತರವೆ?’ ಎಂದು ಮೂದಲಿಸುತ್ತಾನೆ. ಹಾಗಾದರೆ ಏನು ಮಾಡಬೇಕೆಂದು ಕೇಳಿದಾಗ, ಒಂದು ಬಾಳೆ ಎಲೆಯನ್ನಾದರೂ ಸುತ್ತಿಕೊಂಡು ಹೋಗು ಎನ್ನುತ್ತಾನೆ ಕೃಷ್ಣ. ಅದರಂತೆ ದುರ್ಯೋಧನ ಗಾಂಧಾರಿಯ ಎದುರು ನಿಲ್ಲುತ್ತಾನೆ. ತನ್ನ ಈ ಬಾರಿಯ ತಪೋವಿಶಿಷ್ಟ ಶಕ್ತಿಯನ್ನು ಮಗನ ಮೇಲೆ ಸುರಿದುಬಿಡುವ ಹುಮ್ಮಸ್ಸಿನಿಂದ ಗಾಂಧಾರಿ ಪಟ್ಟಿ ಕಳಚುತ್ತಾಳೆ. ಅರೆ! ಎಂಥ ಆಘಾತ!! ಇಷ್ಟು ವರ್ಷ ಕಾಲ ತನ್ನೆದುರು ನಿಲ್ಲುತ್ತಿದ್ದ ಹನ್ನೆರಡರ ಬಾಲಕನೆಲ್ಲಿ? ಈ ನಡುವಯಸ್ಸು ಮೀರಿದ ಪುರುಷನ್ಯಾರು? ಅದು ಕೂಡ ಆತ ಸಂಪೂರ್ಣ ನಿರ್ವಾಣದಲ್ಲಿ ನಿಂತಿಲ್ಲ!! ಅವಳ ತಲೆಯಲ್ಲಿ ನೂರು ಸಿಡಿಲು. ಅಷ್ಟೂ ಪರ್ವಗಳ ಕಾಲ ತಾನು ಅವಿವೇಕಿಯಂತೆ ಹನ್ನೆರಡರ ಹುಡುಗನನ್ನೆ ದುರ್ಯೋಧನ ಎಂದುಕೊಂಡಿದ್ದಳಲ್ಲವೆ? ಅಷ್ಟೊಂದು ಕುರುಡು ಕವಿದಿತ್ತೆ ಬುದ್ಧಿಗೆ? ಶಕ್ತಿ ಎರೆಯುವ ಧಾವಂತದಲ್ಲಿ ಯುಕ್ತಿ ಮೂರ್ಛೆ ಹೋಗಿತ್ತೆ? ಈಗ ತನ್ನ ವಿಶಿಷ್ಟ ಶಕ್ತಿ ಸಂಚಯ ಪಾತ ಮಾಡುವ ಹೊತ್ತಲ್ಲಿ ಈ ದುರ್ಯೋಧನ ಬಾಳೆ ಎಲೆಯ ಮಧ್ಯಸ್ಥಿಕೆ ಬೇರೆ ಮಾಡಿದ್ದಾನೆ! 

ಅವಳಿಗೆ ತಿಳಿವು ಮೂಡುವ ವೇಳೆಗಾಗಲೇ ಎಲ್ಲವೂ ಮಿಂಚಿಹೋಗಿತ್ತು. ಆಕೆಯ ಬುದ್ಧಿಗುರುಡು ಮಗನ ಯಶಸ್ಸನ್ನು ನೂರು ಹೆಜ್ಜೆ ಹಿಂದಾಗುವಂತೆ ಮಾಡಿತ್ತು. ಆತ ಎರಡನೆ ಬಾರಿ ಬದಲಿ ಹುಡುಗನನ್ನು ಕಳಿಸಿದ್ದಾಗಲೇ ತಾನು ಎಚ್ಚರಗೊಂಡು ಆತನನ್ನೂ ಎಚ್ಚರಿಸಿದ್ದಿದ್ದರೆ ಪರಿಣಾಮದಲ್ಲಿ ಮಹತ್ತರ ವ್ಯತ್ಯಾಸ ಸಾಧ್ಯವಿತ್ತೇನೋ. 

ಒಳಗಣ್ಣ ರೆಪ್ಪೆ ಫಡಫಡಿಸಲಿ

ಬೇಕೆಂದೇ ತಿಳಿವುಗೇಡಿಯಾಗುವುದು ನಮಗೆ ಗೊತ್ತಿದೆ. ಆದರೆ ನಮಗೇ ಅರಿವಿಲ್ಲದಂತೆ ತಿಳಿವುಗೇಡಿಯಾಗಿಸುವುದು ನಮ್ಮ ಅಂತರಂಗದ ಕುರುಡುತನ. ನಮ್ಮೊಳಗೆ ಅಂತರ್ಗತವಾದ ಲೋಭ ಮೋಹ ಮದ ಮಾತ್ಸರ್ಯಾದಿಗಳು ಪೊರೆಗಟ್ಟಿ ಒಳಗಣ್ಣನ್ನು ಕುರುಡಾಗಿಸುತ್ತವೆ. ನಾವೂ ಗಾಂಧಾರಿಯಂತೆ ನಮ್ಮ ಕ್ರಿಯೆಪ್ರಕ್ರಿಯೆಗಳ ಪರಿವೆಯೇ ಇಲ್ಲದಂತೆ, ನಮ್ಮ ತಪ್ಪುಗಳ ಅರಿವೇ ಆಗದಂತೆ ನಡೆಯುತ್ತಿರುತ್ತೇವೆ. ಅವಳಂತೆಯೇ ನಾವೂ ‘ಧರ್ಮಕ್ಕೆ ಜಯವಾಗುತ್ತದೆ’ ಎಂದು ನಂಬಿರುತ್ತೇವೆ. ಆದರೆ ಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದೇವೆಯೇ ಎಂದು ಸ್ವತಃ ನೋಡಿಕೊಳ್ಳುವಲ್ಲಿ ಗಾಂಧಾರಿಯಂತೆಯೇ ನಾವೂ ಸೋತಿರುತ್ತೇವೆ. 

ನಮ್ಮಲ್ಲೂ ಶಕ್ತಿ ಸಂಚಯವಿದೆ. ನಾವು ಬಾಳುವೆ ಮಾಡುತ್ತಿದ್ದೇವೆ ಅಂದರೆ ನಿರಂತರ ಚಲನೆಯಲ್ಲಿದ್ದೇವೆ ಎಂದೇ ಅರ್ಥ. ಚಲಿಸುತ್ತಿರುವ ಪ್ರತಿಯೊಂದೂ ಶಕ್ತಿಯ ಸ್ರೋತವೇ ಆಗಿರುತ್ತದೆ. ಆದರೆ ಗಾಂಧಾರಿಯಂತೆ ನಾವು ಅದನ್ನು ತಪ್ಪಾಗಿ ವಿನಿಯೋಗಿಸುತ್ತಿದ್ದೇವೆ. ಅವಳು ತನ್ನ ಮತ್ಸರಕ್ಕೆ ಪುಷ್ಟಿಯಾಗಿ ಅದನ್ನು ವಿನಿಯೋಗಿಸುವ ಹಾಗೇ ನಾವೂ ಮತ್ತೊಬ್ಬರ ಮೇಲಿನ ಪೈಪೋಟಿಗೆಂದೇ ಬಹುಪಾಲು ಶಕ್ತಿವ್ಯಯ ಮಾಡಿಕೊಳ್ಳುತ್ತೇವೆ. ಮಾತ್ರವಲ್ಲ, ಆಕೆಯಂತೆಯೇ ಆದ್ಯತೆ ಬೇಡುವ ವಿಷಯಗಳನ್ನು ಉಪೇಕ್ಷಿಸಿ ನಾವು ನಡೆಯುತ್ತಿರುವ ಹಾದಿಯೇ ಸರಿ ಎಂಬ ಮೂಢ ವಿಶ್ವಾಸದಿಂದ ತಪ್ಪು ಗುರಿಯೆಡೆಗೆ ಸಾಗುತ್ತೇವೆ. ತಾನು ಅತ್ಯಂತ ಪ್ರೀತಿಸುವ ಜೀವ ಎಂದುಕೊಂಡೇ ಗಾಂಧಾರಿ ದುರ್ಯೋಧನನ ಪಾಲಿಗೆ ಮುಳುವಾಗುತ್ತಾಳೆ. ಆತನು ಅಸೀಮ ಬಲಶಾಲಿಯಾಗುವ ಅವಕಾಶ ಆಕೆಯ ಅಂತಃಚಕ್ಷುವಿನ ದೃಷ್ಟಿಹೀನತೆಯಿಂದಾಗಿಯೇ ಕಳೆದುಹೋಗುತ್ತದೆ. ನಾವು ಕೂಡ ನಮ್ಮ ದೃಷ್ಟಿದೋಷದಿಂದ ನಮ್ಮ ಪ್ರೀತಿಪಾತ್ರರನ್ನು ತಪ್ಪು ದಾರಿಗೆಳೆಯುತ್ತ ಅವರ ಅಭಿವೃದ್ಧಿಯನ್ನೂ ಕುಂಠಿತಗೊಳಿಸುತ್ತೇವೆ. 

ಯಾವ ಕ್ಷಣದಲ್ಲಿ ನಮಗೆ ಅದು ಅರ್ಥವಾಗುತ್ತದೆಯೋ ಆ ಹೊತ್ತು ಒಳಗಣ್ಣ ರೆಪ್ಪೆ ಫಡಫಡಿಸುವುದು. ನಾವೇ ಬೆಳೆಸಿಕೊಂಡ ಪೊರೆಗೆ ಚಿಕಿತ್ಸೆ ಮಾಡಿಕೊಳ್ಳಲು ಅದುವೇ ಸಕಾಲ. ಗಾಂಧಾರಿಯ ಸಂಕಟಗಳು ನಮ್ಮ ದಾರಿಯಲ್ಲಿ, ನಮ್ಮ ಬಗೆಗೆ ನಿಲುಕುವ ರೀತಿಯಲ್ಲಿ ಅಡ್ಡಿ ಬರಬಾರದು ಎಂದರೆ ಈಗಿಂದಲೇ ಅರ್ಥೈಸಿಕೊಳ್ಳುವ ಪ್ರಕ್ರಿಯೆಗೆ ಸಿದ್ಧರಾಗಿ. ಫಲಿತಾಂಶ ನಿಶ್ಚಿತವಾಗಿ ಕಾದು ನಿಂತಿದೆ.

 

Leave a Reply