ಅಡುಗೆ ಮಾಡುವುದೂ ಒಂದು ಧ್ಯಾನ!

ಸಂತನಾದವನು ಮಾಡುವ ಅಡುಗೆ ರುಚ್ಚಿಕಟ್ಟಾಗಿ ಇದ್ದೇ ಇರುತ್ತದೆ ಎಂದಿದ್ದರು ಸ್ವಾಮಿ ವಿವೇಕಾನಂದರು. `ಒಳ್ಳೆಯ ಮನಸ್ಸುಳ್ಳವರು ಮಾಡುವ ಅಡುಗೆ ರುಚಿಕರವಾಗಿ ಇದ್ದೇ ಇರುತ್ತದೆ. ಸಂತರ ಮನಸ್ಸು ನಿಷ್ಕಲ್ಮಷವಾಗಿರುತ್ತದೆಯಾದ್ದರಿಂದ ಅದು ಚೆನ್ನಾಗಿರುತ್ತದೆ ಎನ್ನುವುದರಲ್ಲಿ ಸಂದೇಹವೇನು?’ ಅನ್ನೋದು ಅವರ ವಿವರಣೆ! ~ ಗಾಯತ್ರಿ

zen cooking
ಡುಗೆ ಮಾಡುವುದು ಯಾರೊಬ್ಬರ ಸೊತ್ತಾಗಲೀ ಕರ್ತವ್ಯವಾಗಲೀ ಅಲ್ಲ. ಯಾರಾದರೂ ಆಪ್ತರನ್ನು ಮನೆಗೆ ಕರೆಯುವಾಗ `ಊಟಕ್ಕೆ ಬನ್ನಿ’ ಅಂತ ಹೇಳುತ್ತೇವೆ. ಹಾಗೆ ಆಪ್ತರಾದವರು ಮನೆಗೆ ಬಂದು ಊಟಕ್ಕೆ ನಿಲ್ಲದೆ ಹೋದರೆ ಬೇಜಾರು ಮಾಡಿಕೊಳ್ತೇವೆ. ಇಲ್ಲಿ ಊಟ ಒಂದು ಸಂಕೇತ ಮಾತ್ರ. ಪ್ರಿಯರಾದವರಿಗೆ ಉಣಬಡಿಸೋದು ನಮ್ಮ ಸಂಸ್ಕೃತಿಯಲ್ಲಿ ಪ್ರೀತಿಯ ಅಭಿವ್ಯಕ್ತಿಯಾಗಿ ಬೆಳೆದುಬಂದಿದೆ.

ಅಡುಗೆಯನ್ನು ರುಚಿಯಾಗಿಸುವುದು ಅದರಲ್ಲಿ ಬಳಸುವ ಪದಾರ್ಥಗಳಲ್ಲ. ಯಾವ ಬ್ರ್ಯಾಂಡ್‍ನ, ಯಾವ ದೇಶಮೂಲದ ಪದಾರ್ಥ ಬಳಸ್ತೀವಿ ಅನ್ನುವುದರ ಮೇಲದು ಅವಲಂಬಿತವಾಗಿರೋದಿಲ್ಲ. ನಮ್ಮ ಪಾಲಿಗೆ ಸಾರ್ವಕಾಲಿಕ ರುಚಿಯೆಂದರೆ ಅಮ್ಮನ ಕೈಯಡುಗೆಯೇ ಅಲ್ಲವೆ? ಫೈವ್ ಸ್ಟಾರ್ ಹೋಟೆಲಿನಲ್ಲಿ ಗಡದ್ದು ಊಟ ಮಾಡಿದ ನಂತರವೂ ನಮಗೆ ಅಮ್ಮ ಮಾಡುವ ತಿಳಿ ಸಾರೇ ಚೆಂದ ಅನ್ನಿಸುತ್ತೆ ಅಲ್ಲವೆ? ನಮ್ಮ ಊಟದ ತಟ್ಟೆಯಲ್ಲಿ ಬೆಂದ ಬೇಳೆ ಕಾಳುಗಳು ತುಂಬಿವೆಯೆಂದರೂ ವಾಸ್ತವವಾಗಿ ಅಲ್ಲಿ ಇರುವುದು ಯಾರದೋ ಪರಿಶ್ರಮ, ಇನ್ಯಾರದೋ ಪ್ರಾರ್ಥನೆ, ಅಡುಗೆ ಮಾಡಿದವರ ಶ್ರದ್ಧೆ, ಪ್ರೀತಿ ಮತ್ತು ಕರುಣೆ.

ಅದೊಂದು ಧ್ಯಾನದಂತೆ
ಆಸ್ಥೆಯಿಂದ ಅಡುಗೆಮನೆ ಹೊಕ್ಕರೆ ಅದು ನಮ್ಮ ಸಂಪೂರ್ಣ ಗಮನವನ್ನು ಹಿಡಿದಿಟ್ಟುಕೊಳ್ಳುತ್ತೆ. ನೀವು ಸಾಕ್ಷಿಯಾಗಿ ನಿಂತು ನೋಡಿ ಬೇಕಿದ್ದರೆ. ಮೊದಲು ನೀವು ಅಡುಗೆಗೆ ಬಳಸಬೇಕಾದ ಪದಾರ್ಥಗಳ ಬಗ್ಗೆ ಯೋಚಿಸುತ್ತ ಇರುತ್ತೀರಿ. ಬರಬರುತ್ತ ಅಭ್ಯಾಸ ಬಲ ಅಥವಾ ನಿಮ್ಮ ಅಂತಃ ಪ್ರಜ್ಞೆಯಿಂದಾಗಿ ಕೆಲಸ ತಾನೇತಾನಾಗಿ ಸಾಗುತ್ತದೆ. ಇತರ ಯೋಚನೆಗಳೂ ಜಾಗ ಖಾಲಿ ಮಾಡಿರುತ್ತವೆ. ಮತ್ತು ಒಂದು ಹಂತದಲ್ಲಿ ನೀವು ಏನನ್ನೂ ಯೋಚಿಸುತ್ತಿರದೆ ಸಂಪೂರ್ಣ ಅಮನರಾಗಿಬಿಟ್ಟಿರುತ್ತೀರಿ! ಇಂತಹ ಅಮನಸ್ಕ (ಮನಸ್ಸು ಇಲ್ಲದಂತಿರುವ – ಖಾಲಿಯಾಗಿರುವ) ಸ್ಥಿತಿ ಹೊಂದಲಿಕ್ಕಾಗಿ ಸಾಧನಾಸಕ್ತರು ಗಂಟೆಗಟ್ಟಲೆ ಧ್ಯಾನದಲ್ಲಿ ತೊಡಗುತ್ತಾರೆ, ಸಾಧನೆ ಮಾಡುತ್ತಾರೆ. ಏಕಾಂತ, ನಿರ್ಜನ ಸ್ಥಳದ ಮೌನದಲ್ಲಿ ಕೈಗೊಳ್ಳುವ ಇಂತಹ ಸಾಧನೆಗಿಂತ ತುಂಬು ಮನೆಯ, ಸದ್ದುಗದ್ದಲದ ನಡುವೆಯೂ ನೀವದನ್ನು ಹೊಂದುತ್ತೀರಲ್ಲ, ಅದನ್ನು ಗಮನಿಸಿ, ಆ ಸ್ಥಿತಿಯ ಆನಂದವನ್ನು ಪ್ರಜ್ಞಾಪೂರ್ವಕವಾಗಿ ಸವಿಯಿರಿ. ಒಮ್ಮೆ ಇದರ ರುಚಿ ಹತ್ತಿತೆಂದರೆ ನೀವು ಮತ್ತೆ ಮತ್ತೆ ಅದನ್ನು ಹೊಂದಲು ಹಂಬಲಿಸುತ್ತೀರಿ. ಅಲ್ಲಿಂದ ಮುಂದೆ ನಿಮ್ಮ ಆಧ್ಯಾತ್ಮಿಕ ಸಾಧನೆಗೊಂದು ದಿಕ್ಕು ತೆರೆದುಕೊಂಡಂತಾಗುತ್ತದೆ.

ಇದೊಂದು ಸರಳ ಸೂತ್ರ. ನೀವಿದನ್ನು ಮಾಡಿ ನೋಡಬಹುದು. ಏನಾದರೂ ಚಿಂತೆ ತಲೆಹೊಕ್ಕಾಗ ಚಡಪಡಿಸುತ್ತ ಕೂರುವುದರ ಬದಲು, ಸುಮ್ಮನೆ ಕುಳಿತುಕೊಂಡು ತಲೆಯೊಳಗೆ ಬೆಳೆಯುತ್ತಲೇ ಇರುವ ಯೋಚನಾಪಿಶಾಚಿಯನ್ನು ಪೋಷಿಸುವುದರ ಬದಲು ಅಡುಗೆ ಮನೆಗೆ ಹೋಗಿ. ಏನಾದರೂ ಹೊಸ ರುಚಿಯ ಪ್ರಯೋಗಕ್ಕೆ ನಿಮ್ಮನ್ನು ಸಮರ್ಪಿಸಿಕೊಳ್ಳಿ. ಆದರೆ ಇಲ್ಲೊಂದು ಸವಾಲಿದೆ. ನಾವು ಕೋಪದಲ್ಲಿದ್ದಾಗ ಅಥವಾ ಬೇಸರದಲ್ಲಿದ್ದಾಗ ಅಡುಗೆಯ ರುಚಿಯಲ್ಲಿ ವ್ಯತ್ಯಾಸವಾಗುತ್ತದೆ. ಅಡುಗೆ ಮಾಡುವವರು ಸಿಟ್ಟು ಬಂದಾಗ ಉಪ್ಪನ್ನೂ ದುಃಖದಲ್ಲಿದ್ದಾಗ ಹುಳಿಯನ್ನೂ ಹೆಚ್ಚು ಹಾಕಿಬಿಡುತ್ತಾರೆ ಎನ್ನುತ್ತದೆ ಲೋಕಜ್ಞಾನ. ಆದ್ದರಿಂದ ನಿಮ್ಮ ಮನಸ್ಸನ್ನು ಹಿಡಿತಕ್ಕೆ ತಂದುಕೊಳ್ಳುತ್ತಾ ಅಡುಗೆಯ ಪ್ರಕ್ರಿಯೆಯಲ್ಲಿ ಒಂದಾಗುತ್ತಾ ನಿಮ್ಮಮನಸ್ಸು ಶಾಂತಗೊಳ್ಳುವುದನ್ನು ಅನುಭವಿಸಿ.

ಆಸ್ವಾದನೆಯ ಪ್ರಕ್ರಿಯೆ
 ಜಪಾನ್, ಚೀನಾಗಳಲ್ಲಿ ಕೆಲವು ಸಮುದಾಯಗಳಲ್ಲಿ ಆಹಾರ ತಯಾರಿಸುವ ಮತ್ತು ಸೇವಿಸುವ ಪ್ರಕ್ರಿಯೆಯನ್ನು ಒಂದು ಆಧ್ಯಾತ್ಮಿಕ ಆಚರಣೆಯಂತೆ ನಡೆಸಲಾಗುತ್ತದೆ. ನಿರ್ದಿಷ್ಟವಾಗಿ `ಟೀ ರಿಚುವಲ್’ಗೆ ಈ ಪಂಥ ಹೆಚ್ಚಿನ ಮನ್ನಣೆ ನೀಡುತ್ತದೆ. ಶಾಂತ, ನಿಶ್ಶಬ್ದ ಕೋಣೆಯಲ್ಲಿ ಕುಳಿತು, ಹಿತವಾದ ಸದ್ದು ಹೊರಡಿಸುವ ಪಿಂಗಾಣಿ ಪಾತ್ರಗಳಲ್ಲಿ ಟೀ ತಯಾರಿಸಿ ಅತಿಥಿಗಳಿಗೆ ನೀಡುವುದು ಕೂಡ ಝೆನ್ ಪಂಥೀಯರಿಗೆ ಒಂದು ಧ್ಯಾನದಂತೆ. ಪಾತ್ರೆಗಳ ಸದ್ದನ್ನು ಆಲಿಸುತ್ತ, ನೀರು ಕುದ್ದು ಹೊಮ್ಮುವ ಆವಿಯನ್ನು ಅನುಭವಿಸುತ್ತ, ಅದರೊಳಗೆ ಚಹಾ ಸೊಪ್ಪು ಬೆರೆತು ಬೇಯುವಾಗಿನ ಘಮದ ಸೊಗಡು ಆಸ್ವಾದಿಸುತ್ತ ಆ ಪ್ರಕ್ರಿಯೆಯೊಳಗೆ ಒಂದಾಗುವುದು, ಮತ್ತು ಚಹಾ ಕುಡಿಯುವಾಗ ಆ ಎಲ್ಲ ಅನುಭವಗಳನ್ನೂ ಆತ್ಮಸ್ಥಗೊಳಿಸಿಕೊಳ್ಳುವುದು ಈ `ಟೀ ಸರ್ಮನಿ’ಯ ಉದ್ದೇಶ.

ಅಡುಗೆ ಮಾಡುವಂತೆ ತಿನ್ನುವ ಪ್ರಕ್ರಿಯೆಯೂ ಪವಿತ್ರವಾದುದು. ಊಟ ಮಾಡುವುದು ಎಂದರೆ ನಮ್ಮೊಳಗಿನ ಅಗ್ನಿಗೆ ಹವಿಸ್ಸು ಸಮರ್ಪಿಸಿದಂತೆ. ಅದೊಂದು ಯಜ್ಞ. ಭೋಜನವೆಂಬ ಯಜ್ಞದಲ್ಲಿ ಅಗ್ನಿಯೆಂಬ ನಾಲಗೆಯ ಮೂಲಕ ದೇವತೆಗಳು ಹವಿಸ್ಸು ಸ್ವೀಕರಿಸಿ ತೇಜೋಬಲ ಪಡೆಯುವಂತೆ ನಮ್ಮ ದೇಹ ಕೂಡ ಆಹಾರ ಸ್ವೀಕರಿಸಿ ಶಕ್ತಿ ಪಡೆಯುತ್ತದೆ. ಆಹಾರವನ್ನು ಅತ್ಯಂತ ಪ್ರೀತಿಯಿಂದ, ಗೌರವದಿಂದ ಸ್ವೀಕರಿಸಬೇಕು ಎಂದು ಹಿಂದಿನವರು ಹೇಳಿರುವುದು ಈ ಕಾರಣದಿಂದಲೇ.

ಕೊನೆಯಲ್ಲೊಂದು ಮಾತು. ಪ್ರಜ್ಞಾಪೂರ್ವಕವಾಗಿ ಅಡುಗೆ ಮಾಡುವ ಪ್ರಕ್ರಿಯೆಯಿಂದ ನಾವು ವೈಯಕ್ತಿಕ ಆನಂದ, ಧನ್ಯತೆಯನ್ನೇನೋ ಹೊಂದುವೆವು. ಅದು ಪರಿಪೂರ್ಣವಾಗಬೇಕೆಂದರೆ, ಆಹಾರ ತಯಾರಿಕೆಯು ‘ಧ್ಯಾನ’ವಷ್ಟೇ ಅಲ್ಲ, ‘ದಾನ’ವೂ ಆಗಬೇಕು. ಹಸಿದವರಿಗೆ ಉಣಬಡಿಸುವ ಮೂಲಕ, ಆಹಾರವನ್ನು ಪೋಲು ಮಾಡದೆ ಇರುವ ಮೂಲಕ ನಾವು ಈ ಧ್ಯಾನವನ್ನು ಯಶಸ್ವಿಯಾಗಿ, ಅರ್ಥಪೂರ್ಣವಾಗಿ ಸಂಪನ್ನಗೊಳಿಸಬಹುದು. 

1 Comment

  1. ನಿಜ, ಅಡುಗೆ ಮನೆಯ ಭಾ ವಿಭಾವ, ರುಚಿ ಸಂಸ್ಕಾರಗಳೇ ಕ್ರಮೇಣ ಜಗತ್ತನ್ನು ಆವರಿಸಿಕೊಳ್ಳುತ್ತವೆ.

Leave a Reply