ಒಲವೇ ಜೀವನ ಸಾಕ್ಷಾತ್ಕಾರ….

ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ ಪರಿಪೂರ್ಣ ಪ್ರೇಮ ಬೆಳೆಸಿಕೊಳ್ಳುತ್ತೇವಲ್ಲ, ಅದು ನಮ್ಮನ್ನು ಸಾಮಾನ್ಯ ಮಾನವರಿಂದ ಸಂತರ ಎತ್ತರಕ್ಕೆ ಏರಿಸುತ್ತದೆ. ಆದರೆ ಈ ಆರೋಹಣ ಸುಲಭವೇನಲ್ಲ….

ಫೋತಿ ಪಢ್ ಪಢ್ ಜಗ್ ಮುವಾ ಪಂಡಿತ್ ಭಾಯಾ ನ ಕೋಯ್ |

ಧಾಯಿ ಅಕ್ಷರ್ ಪ್ರೇಮ್ ಕೆ ಜೋ ಪಢೇ ಸೋ ಪಂಡಿತ್ ಹೋಯ್ ||

ಎನ್ನುತ್ತದೆ ಸಂತ ಕಬೀರರದೊಂದು ದೋಹೆ.

ಎಷ್ಟು ಓದಿದರೇನು, ಏನು ಓದಿದರೇನು, ಪಂಡಿತರಾಗೋದು ಅಷ್ಟರಲ್ಲೇ ಇದೆ…. `ಪ್ರೇಮ’ದ ಎರಡೂವರೆ ಅಕ್ಷರವನ್ನ ಯಾರು ಓದಿ ಅರಿಯುತ್ತಾರೋ ಅವರು ಪಂಡಿತರಾಗುತ್ತಾರೆ – ಅನ್ನೋದು ಇದರರ್ಥ.

ಇಲ್ಲಿ ಪಾಂಡಿತ್ಯವೆಂದರೆ ಒಣ ಮಾಹಿತಿಗಳ ಅರಿವಲ್ಲ. ಅದು ಜೀವನ ಕಲಿಕೆಯ ಪಾಂಡಿತ್ಯ. ಬದುಕನ್ನು ಎಷ್ಟು ಸುಂದರವಾಗಿ, ನಿರುಮ್ಮಳವಾಗಿ ಜೀವಿಸಬಹುದು ಅನ್ನುವ ತಿಳಿವಿನ ಪಾಂಡಿತ್ಯ. ಈ ಪಾಂಡಿತ್ಯವನ್ನು ಗಳಿಸಲು ಏನೆಲ್ಲ ಓದಬೇಕಿಲ್ಲ. ಅದರ ಗಳಿಕೆಗೆ ಯಾವ ಅಧ್ಯಯನವೂ ಬೇಡ. ಬರಿದೇ `ಪ್ರೇಮ’ ಎಂಬ ಪದವನ್ನು ಅರಿತರೆ ಸಾಕು. ಬದುಕಿನೆಡೆಗೆ ಪ್ರೇಮ, ಭಗವಂತನೆಡೆಗೆ ಪ್ರೇಮ, ಸಹಜೀವಿಗಳೊಡನೆ ಪ್ರೇಮ… ಒಟ್ಟಾರೆ ನಮ್ಮ ಚಿಂತನೆಗಳೆಲ್ಲವೂ ಪ್ರೇಮದಿಂದ ತುಂಬಿಕೊಂಡಿರಬೇಕು. ಹೀಗಿರುವಾಗ ದ್ವೇಷಕ್ಕೆ, ಸ್ಪರ್ಧೆಗೆ, ವಿಷಾದಕ್ಕೆ ಆಸ್ಪದವೇ ಇರುವುದಿಲ್ಲ!

ತನ್ನನ್ನು ತಾನು ಪ್ರೀತಿಸಿಕೊಳ್ಳಲಾಗದ ವ್ಯಕ್ತಿ ಯಾರನ್ನೂ ಪ್ರೀತಿಸಲು ಸಾಧ್ಯವಿಲ್ಲವೆಂದು ಓಶೋ ಹೇಳುತ್ತಾರೆ. ತನ್ನೊಳಗಿ ಚೈತನ್ಯದ ಮೇಲೆ ಪ್ರೀತಿ ಇರಿಸಿಕೊಳ್ಳದವನೇ ಪರಮ ನಾಸ್ತಿಕ ಎನ್ನುತ್ತಾರೆ ವಿವೇಕಾನಂದರು. ಪ್ರೇಮಿಸದ ಮನುಷ್ಯ ಮುಕ್ತಿ ಪಡೆಯಲಾರ ಎನ್ನುತ್ತಾರೆ ಸ್ವಾಮಿ ರಾಮತೀರ್ಥ. `ಪ್ರೇಮ’ಕ್ಕಿಂತ ಮಿಗಿಲಾದ ಧರ್ಮ ನಿಮ್ಮ ಪಾಲಿಗೆ ಇರದಿರಲಿ ಎಂದು ಮೋಸೆಸ್ ನುಡಿದರೆ, ಪ್ರೇಮವೇ ಭಗವಂತ ಎಂದ ಜೀಸಸ್. ಬುದ್ಧನ ಬೋಧನೆಗಳೆಲ್ಲವೂ ಪ್ರೇಮದ ಸುತ್ತಲೇ ಸುತ್ತಿದರೆ, ಪ್ರೇಮ ಪ್ರಚಾರಕ್ಕಾಗಿಯೇ ಸೂಫಿ, ದಾಸರುಗಳ ಪರಂಪರೆಗಳು ಹುಟ್ಟಿಕೊಂಡವು. ನಮ್ಮ ಬದುಕಲ್ಲೂ ಅಷ್ಟಾದಶ ಪುರಾಣಗಳಿಗಿಂತ ಪ್ರೇಮ ಪುರಾಣವೇ ಹೆಚ್ಚು ಬಳಕೆಯಲ್ಲಿರುವಂಥದ್ದು.

ಪ್ರೇಮ ಕುರುಡಲ್ಲ, ಸ್ವಯಂ ಬೆಳಕು

`ಪ್ರೇಮವೊಂದು ಸುಗಂಧದಂತೆ. ದನ್ನು ಯಾರಿಗಾದರೂ ಹಂಚಿದರೆ, ಹಂಚುವವರ ಕೈಗಳೂ ಪರಿಮಳ ಸೂಸತೊಡಗುತ್ತವೆ` ಎನ್ನುವ ಮಾತಿದೆ. ಆದರೆ ನಾವು ಪ್ರೇಮವನ್ನು `ಪ್ರೇಮ’ವೆಂದು ಕರೆಯಲು ಸಿದ್ಧರಿಲ್ಲದೆ, ನಮ್ಮದೇ ಭಾವನೆಗಳಿಗೊಂದು ಚೌಕಟ್ಟು ತೊಡಿಸಿ ಪ್ರೇಮವೆಂದು ಹೆಸರಿಟ್ಟು ಅದೊಂದು `ಮಿಥ್ಯೆ’ ಎಂದು ಗೋಳಿಡುತ್ತಿದ್ದೇವೆ. ಯಾವುದು ಸ್ವಯಂ ಬೆಳಕೋ ಅಂತಹ ಪ್ರೇಮವನ್ನೇ `ಕುರುಡು’ ಎಂದು ಕರೆದು ಅವಮಾನಿಸುತ್ತಿದ್ದೇವೆ. ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಅಂದರೆ ಅವರನ್ನು ಭಾವನಾತ್ಮಕವಾಗಿ ಅವಲಂಬಿಸುವುದು ಎಂದಲ್ಲ. ಪ್ರೇಮ ಎಂದರೆ ಸ್ವಾತಂತ್ರ್ಯವೇ ಹೊರತು ಅವಲಂಬನೆಯ ಬಂಧನವಲ್ಲ. ಆದರೆ ನಾವು ಅದನ್ನು `ಆಸರೆ’ಯಾಗಿಸಿಕೊಳ್ಳುತ್ತಿದ್ದೇವೆ. `ಪ್ರೇಮದಲ್ಲಿ ಬೀಳಬೇಡಿ, ಪ್ರೇಮದಲ್ಲಿ ಏಳಿ’ ಎಂದು ಓಶೋ ಹೇಳಿರುವುದು ಅದಕ್ಕೇ. ಪ್ರೇಮ ನಮ್ಮೊಳಗನ್ನು ಕಂಡುಕೊಳ್ಳಲು ಪ್ರೇರೇಪಿಸಬೇಕೆ ಹೊರತು, ದಾರಿ ತಪ್ಪಲು ಪ್ರಚೋದಿಸಬಾರದು ಎಂದಿದ್ದಾರೆ ಓಶೋ.

ಚಿಂತಕ, ಕವಿ ಡೇವಿಡ್ ಹಾಕಿನ್ಸ್ ಹೇಳುವಂತೆ, `ಪ್ರೇಮವನ್ನು ನಾವು ಒಂದು ಭಾವನೆಯೆಂದು ತಪ್ಪಾಗಿ ತಿಳಿದಿದ್ದೇವೆ. ವಾಸ್ತವವಾಗಿ ಅದು ಜಾಗೃತಿಯ ಪ್ರತೀಕ. ಪ್ರೀತಿಸುವುದೆಂದರೆ ಸಂಪೂರ್ಣ ಎಚ್ಚರಿಕೆಯಲ್ಲಿ ಜೀವಿಸುವುದು. ತನ್ನನ್ನು ಜಗತ್ತಿನ ಇತರರಲ್ಲಿ ಒಬ್ಬನನ್ನಾಗಿ ಕಂಡುಕೊಳ್ಳುವುದು’. ಆದರೆ ನಮ್ಮ ಪಾಲಿಗೆ ಅಪಾರ್ಥಗೊಂಡಿರುವ ಪ್ರೇಮ ನಮ್ಮನ್ನು ಜಗತ್ತಿನಿಂದ ದೂರವಿಡುತ್ತದೆ. ತಪ್ಪು ಹೆಜ್ಜೆಗಳ ಮೂಲಕ ಎಚ್ಚರದಪ್ಪಿಸುತ್ತದೆ. ದೈಹಿಕ ಪ್ರಚೋದನೆಗಳು, ಮಾನಸಿಕ ಆಕರ್ಷಣೆಗಳನ್ನೆ ಪ್ರೇಮವೆಂದು ನೆಚ್ಚಿಕೊಂಡುಬಿಡುವ ನಾವು ಒಳಗಣ ಚೈತನ್ಯದ ಮೊರೆಯನ್ನು ಕೇಳುವ ವ್ಯವಧಾನವನ್ನೆ ತೋರುವುದಿಲ್ಲ.

ಪರಿಪೂರ್ಣತೆಗೆ ಪೂರಕ

ಪ್ರತಿಯೊಬ್ಬರೂ ಮತ್ತೊಬ್ಬರನ್ನ ಪ್ರೀತಿಸೋದು ತಮ್ಮನ್ನ ತಾವು ಪ್ರೀತಿಸಿಕೊಳ್ಳೋದ್ರಿಂದಲೇ. ತಮ್ಮೊಳಗಿನ ಪ್ರೀತಿಯನ್ನ ಪ್ರತಿಬಿಂಬಿಸಲಿಕ್ಕೆ ಕನ್ನಡಿಯಾಗಿ ಯಾರಾದರೊಬ್ಬರು ಬೇಕೆಂದು ಬಯಸ್ತಾರೆ. ಆ ಮತ್ತೊಬ್ಬರೇ `ಪ್ರೇಮಿ’ ಅನ್ನಿಸೋದು. ಸಂತರಿಗೆ, ಮಹಾತ್ಮರಿಗೆಲ್ಲ ಒಂದು ಕನ್ನಡಿ ಸಾಕಾಗೋಲ್ಲ. ಅವರೊಳಗಿನ ಉತ್ಕಟ ಪ್ರೇಮವನ್ನ ಪ್ರತಿಬಿಂಬಿಸೋಕೆ ಜಗತ್ತೇ ಬೇಕಾಗುತ್ತದೆ. ಆದ್ದರಿಂದಲೇ ಅವರು ಇಡಿಯ ಜಗತ್ತನ್ನು ಸಮನಾಗಿ ಪ್ರೀತಿಸಲು ಸಾಧ್ಯವಾಗೋದು. ನಾವು `ಪ್ರೇಮಿ’ ಅಂತ ಆಯ್ದುಕೊಂಡ ಕನ್ನಡಿಯಲ್ಲಿ ಸಾಕಷ್ಟು ಪ್ರೇಮ ಕಾಣ್ತಿಲ್ಲವೆಂದರೆ ನಮ್ಮನ್ನ ನಾವು ಹೆಚ್ಚಾಗಿ ಪ್ರೀತಿಸ್ಕೊಳ್ತಿಲ್ಲ ಅಂತಲೇ ಅರ್ಥ. ನಮ್ಮೊಳಗಿನ ಕೊರತೆಯನ್ನೇ ನಾವು ಮತ್ತೊಬ್ಬರ ಮೇಲೆ ಹೇರಿ, ತಿದ್ದಿಕೊಳ್ಳುವ ಉಸಾಬರಿಯಿಂದ ನುಣುಚಿಕೊಳ್ತೇವೆ. ಇಂತಹ ನುಣುಚಿಕೊಳ್ಳುವಿಕೆಯಿಂದ ನಷ್ಟ ನಮಗೇ. ಇದರಿಂದ ನಾವು ಬದುಕಲ್ಲಿ ಕಲಿಯಬಹುದಾಗಿದ್ದ ಎಷ್ಟೋ ಅನುಭವ ಪಾಠಗಳು ಕೈಬಿಟ್ಟುಹೋಗುತ್ತವೆ. ಪರಿಣಾಮ, ಅಪೂರ್ಣ ಬದುಕು.

ಒಂದು ಸಲದ ಹುಟ್ಟಿನಲ್ಲಿ ಬದುಕನ್ನ ಪರಿಪೂರ್ಣವಾಗಿಸ್ಕೊಳ್ಳದೆ ಹೋದರೆ ಮತ್ತೊಮ್ಮೆ ಹುಟ್ಟಿ ಬರಬೇಕಾಗುತ್ತದೆ. ನಾವು ಜನನ ಮರಣಗಳ ನಿರಂತರ ಚಕ್ರದಲ್ಲಿ ಸಿಲುಕಿಕೊಳ್ಳೋದು ಹೀಗೇನೇ.

ಪ್ರಿಯತಮರೊಡನೆ ನಮ್ಮ ಸಂಬಂಧ ಹಕ್ಕಿ ಮತ್ತು ಕೊಂಬೆಯ ಸಂಬಂಧದ ಹಾಗಿರಬೇಕೆನ್ನುತ್ತಾರೆ ಸ್ವಾಮಿ ರಾಮತೀರ್ಥರು. `ಹಕ್ಕಿಯು ತೂಗಾಡುವ ಒಂದು ಸಣ್ಣ ರೆಂಬೆಯ ಮೇಲೆಕೆಲ ಕಾಲ ಕೂರುತ್ತದೆ. ರೆಂಬೆಯು ತೂಗಾಡುತ್ತಿದ್ದರೂ ಅದು ಭಯಪಡದೆ ಕುಳಿತು ಆನಂದದಿಂದ ಚಿಂವ್‍ಗುಡುತ್ತ ಇರುತ್ತದೆ. ಏಕೆಂದರೆ ತನಗೆ ರೆಕ್ಕೆಗಳಿವೆಯೆಂಬ ಭರವಸೆ ಅದಕ್ಕಿದೆ. ತಾನೂ ಕೆಲ ಕಾಲ ಆಶ್ರಯಿಸುವ ರೆಂಬೆಯನ್ನೇನೂ ನೆಚ್ಚಿಕೊಂಡಿಲ್ಲವೆಂದೂ ತಾನು ನೆಚ್ಚಿಕೊಂಡಿರುವುದು ತನ್ನ ರೆಕ್ಕೆಯ ಬಲವನ್ನೇ ಎಂದೂ ಅದಕ್ಕೆ ಗೊತ್ತಿರುತ್ತದೆ. ಹಾಗೆಯೇ ನಾವು ನಮ್ಮೊಳಗಿನ ಚೈತನ್ಯವನ್ನು ನೆಚ್ಚಿಕೊಂಡಿರಬೇಕು. ಅದರ ನಿತ್ಯ-ಶಾಶ್ವತ ಪ್ರೇಮವನ್ನು ನೆಚ್ಚಿಕೊಂಡಿರಬೇಕು, ತಾತ್ಕಾಲಿಕ ಪ್ರೇಮವನ್ನಲ್ಲ’ ಎಂದು ರಾಮತೀರ್ಥರು ವಿವರಿಸುತ್ತಾರೆ.

ಪ್ರೇಮ ನಮ್ಮನ್ನು ನಾವು ಸಾಕ್ಷಿಯಾಗಿ ನೋಡಿಕೊಳ್ಳಲು ಸಹಕರಿಸುತ್ತದೆ. ಇತರ ಜೀವಿಗಳೊಡನೆ ನಾವೆಷ್ಟು ಪ್ರೇಮದಿಂದ ವರ್ತಿಸುತ್ತೇವೆ ಎಂಬುದರ ಮೇಲೆ ನಮ್ಮ ಆಂತರ್ಯದಲ್ಲಿ ಸುಪ್ತವಾಗಿರುವ ಭಾವನೆಗಳು ಎಂಥವು ಎಂಬುದು ವ್ಯಕ್ತಗೊಳ್ಳುತ್ತದೆ. ನಮಗೆ ಸಮಾನ ಆಸಕ್ತರು, ಸಮಾನ ಅಭಿರುಚಿಯುಳ್ಳವರು ಇಷ್ಟವಾಗುತ್ತಾರೆ, ಅವರೆಡೆಗೆ ಪ್ರೀತಿ ಬೆಳೆಸಿಕೊಳ್ಳುತ್ತೇವೆ ಎಂದಾದರೆ, ನಾವು ನಮ್ಮ ಗುಣವನ್ನು ಬಹಳವಾಗಿ ಪ್ರೀತಿಸಿಕೊಳ್ಳುತ್ತಿದ್ದೇವೆ ಎಂದರ್ಥ. ಹಾಗಿಲ್ಲದೆ ನಮಗಿಂತ ಭಿನ್ನ ಸ್ವಭಾವದವರನ್ನು, ವ್ಯತಿರಿಕ್ತವಾಗಿರುವವರನ್ನು ಪ್ರೀತಿಸುತ್ತೇವೆ ಎಂದಾದರೆ, ನಮ್ಮಲ್ಲಿ ಇಲ್ಲದ ಗುಣವನ್ನು ತುಂಬಿಸಿಕೊಳ್ಳಲು ಬಯಸುತ್ತಿದ್ದೇವೆ ಎಂದರ್ಥ. ಆದರೆ ಯಾವ ಕಾರಣವೂ ಇಲ್ಲದೆ, ನಿರ್ದಿಷ್ಟ ಉದ್ದೇಶವೇ ಇಲ್ಲದೆ ಯಾರ ಮೇಲಾದರೂ ಪ್ರೀತಿ ಬೆಳೆಸ್ಕೊಳ್ತೇವಲ್ಲ, ಅದು `ನೈಜ ಪ್ರೇಮ’ವಾಗುತ್ತದೆ. ಇಂತಹ ಪ್ರೇಮ ನಮ್ಮನ್ನು ಆಂತರಿಕವಾಗಿ ಬೆಳೆಸುತ್ತದೆ. ಅಕಾರಣ ಪ್ರೇಮ ಎಂದಿಗೂ ಉದ್ದೇಶಗಳನ್ನು ಹೊತ್ತುಕೊಂಡಿರುವುದಿಲ್ಲ. ಮತ್ತು ಉದ್ದೇಶ ಅಥವಾ ಲಾಭಾಪೆಕ್ಷೆಯಿಲ್ಲದ ಪ್ರೇಮ ಶಾಶ್ವತ ಪ್ರೇಮವಾಗಿ ನೆಲೆಗೊಳ್ಳುತ್ತದೆ. ಇಂತಹ ಪ್ರೇಮದ ವಿಸ್ತರಣೆಯೇ ಮನುಷ್ಯನನ್ನು ದೈವಿಕತೆಯೆಡೆಗೆ ಕರೆದೊಯ್ಯೋದು. ಇಂತಹಾ ಪ್ರೇಮವೇ ಮುಕ್ತಿಪಥದ ಬೀಗಗಳಿಗೆ ಚಾವಿಯಾಗೋದು.

ಪ್ರೇಮಿ – ಪ್ರೇಮವೆಂಬ ಎರಡಳಿದು ಒಂದಾದ ಘಳಿಗೆಯೆ ಸಾಕ್ಷಾತ್ಕಾರದ ಘಳಿಗೆ. ಇದು ನಮ್ಮ ಪ್ರತಿ ದಿನದ ಬದುಕಲ್ಲೂ ಘಟಿಸಬಹುದು. ಅಂಗಸಂಗಕ್ಕೆ ಒದಗುವ ಭಿನ್ನ ಲಿಂಗದ ಮನುಷ್ಯ ಮಾತ್ರವೇ ಪ್ರೇಮಿ ಎಂಬ ಭಾವನೆ ಅಳಿದು, ಪ್ರತಿಯೊಂದು ಜೀವವೂ ಪ್ರೇಮಿಸಲು ಅರ್ಹವೆಂದು ತಿಳಿಯುವುದು ಅತಿ ಮುಖ್ಯ. ಆ ತಿಳಿವಿನ ನಂತರ ಪರಿಪೂರ್ಣ ಪ್ರೇಮ ಬೆಳೆಸಿಕೊಳ್ಳುತ್ತೇವಲ್ಲ, ಅದು ನಮ್ಮನ್ನು ಸಾಮಾನ್ಯ ಮಾನವರಿಂದ ಸಂತರ ಎತ್ತರಕ್ಕೆ ಏರಿಸುತ್ತದೆ. ಆದರೆ ಈ ಆರೋಹಣ ಸುಲಭವೇನಲ್ಲ. ಆ ಏಳಿಗೆಯ ಏಣಿಗೆ ಅಹಂಕಾರವೆಂಬ ಬಾಗಿಲೊಂದು ಅಡ್ಡಿ ಇದೆ. ಅದನ್ನೊಂದು ತೆರೆದೊಗೆಯಲು ಸಾಧ್ಯವಾದರೆ, ಅದರಾಚೆಗೆ ಕಾದಿರುವುದೇ ಮೋಕ್ಷ. 

1 Comment

Leave a Reply