ವಿವೇಕಾನಂದರ ಸಂನ್ಯಾಸಿ ಗೀತೆ; ಕುವೆಂಪು ಅನುವಾದದಲ್ಲಿ…

optimizegeneralವಿವೇಕಾನಂದರ ಸುಪ್ರಸಿದ್ಧ ಸಂನ್ಯಾಸಿ ಗೀತೆಯನ್ನು ಕುವೆಂಪು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುವೆಂಪು, ರಾಮಕೃಷ್ಣ ಪರಂಪರೆಯ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದರು. ಸ್ವತಃ ದಾರ್ಶನಿಕರೂ ಆಗಿದ್ದ ಕುವೆಂಪು, ಈ ಪ್ರಭಾವವನ್ನು ತಮ್ಮ ಸಾಹಿತ್ಯಸೃಷ್ಟಿಯ ಉದ್ದಕ್ಕೂ ಪ್ರಕಟಪಡಿಸಿದ್ದಾರೆ. ಮೂಲದಷ್ಟೇ, ಕಂಪನವನ್ನೂ ಶಕ್ತಿಯನ್ನೂ ಹೊಂದಿರುವ ‘ಸಂನ್ಯಾಸಿ ಗೀತೆ’ಯ ಈ ಅನುವಾದ, ಓದುಗರಲ್ಲಿ ಹೊಸ ಚೈತನ್ಯ ನೀಡುವುದು ಸುಳ್ಳಲ್ಲ….

ಳು, ಮೇಲೇಳೇಳು ಸಾಧುವೆ, ಹಾಡು ಚಾಗಿಯ ಹಾಡನು;
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು! ||ಪ||

ದೂರದಡವಿಯೊಳೆಲ್ಲಿ ಲೌಕಿಕ ವಿಷಯ ವಾಸನೆ ಮುಟ್ಟದೋ,
ಎಲ್ಲಿ ಗಿರಿ ಗುಹೆ ಕಂದರದ ಬಳಿ ಜಗದ ಗಲಿಬಿಲಿ ತಟ್ಟದೋ,
ಎಲ್ಲಿ ಕಾಮವು ಸುಳಿಯದೋ – ಮೇಣ್
ಎಲ್ಲಿ ಜೀವವು ತಿಳಿಯದೋ
ಕೀರ್ತಿ ಕಾಂಚನವೆಂಬುವಾಸೆಗಳಿಂದ ಜನಿಸುವ ಭ್ರಾಂತಿಯ,
ಎಲ್ಲಿ ಆತ್ಮವು ಪಡೆದು ನಲಿವುದೋ ನಿಚ್ಚವಾಗಿಹ ಶಾಂತಿಯ,
ನನ್ನಿವರಿವಾನಂದವಾಹಿನಿಯೆಲ್ಲಿ ಸಂತತ ಹರಿವುದೋ,
ಎಲ್ಲಿ ಎಡೆಬಿಡದಿರದ ತೃಪ್ತಿಯ ಝರಿ ನಿರಂತರ ಸುರಿವುದೋ
ಅಲ್ಲಿ ಮೂಡಿದ ಹಾಡನುಲಿಯೈ, ವೀರ ಸಂನ್ಯಾಸಿ
ಓಂ! ತತ್! ಸತ್! ಓಂ! ||೧||

ಕುಟ್ಟಿ ಪುಡಿ ಪುಡಿ ಮಾಡು ಮಾಯೆಯು ಕಟ್ಟಿಬಿಗಿದಿಹ ಹಗ್ಗವ;
ಕಿತ್ತು ಬಿಸುಡೈ ಹೊಳೆವ ಹೊನ್ನಿನ ಹೆಣ್ಣು ಮಣ್ಣಿನ ಕಗ್ಗವ!
ಮುದ್ದಿಸಲಿ ಪೀಡಿಸಲಿ ದಾಸನು ದಾಸನೆಂಬುದೆ ಸತ್ಯವು;
ಕಬ್ಬಿಣವೋ? ಕಾಂಚನವೊ? ಕಟ್ಟಿದ ಕಣ್ಣಿ ಕಣ್ಣಿಯೆ ನಿತ್ಯವು.
ಪಾಪಪುಣ್ಯಗಳೆಂಬುವು,-
ಮಾತ್ಸರ್ಯ ಪ್ರೇಮಗಳೆಂಬುವು
ದ್ವಂದ್ವ ರಾಜ್ಯದ ಧೂರ್ತಚೋರರು! ಬಿಟ್ಟು ಕಳೆ,
ಕಳೆಯವರನು!
ಮೋಹಗೊಳಿಪರು, ಬಿಗಿವರಿರಿವರು; ಎಚ್ಚರಿಕೆಯೆಂದವರನು
ತಳ್ಳು ದೂರಕೆ ಓ ವಿರಕ್ತನೆ! ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಹಾಡು ಮುಕ್ತಿಯ ಗಾನವನು, ಓ ವೀರ ಸಂನ್ಯಾಸಿ-
ಓಂ! ತತ್! ಸತ್! ಓಂ! ||೨||

ಕತ್ತಲಳಿಯಲಿ; ಮಬ್ಬುಕವಿಸುವ ಭವದ ತೃಷ್ಣೆಯು ಬತ್ತಲಿ;
ಬಾಳ ಮೋಹವು ಮರುಮರೀಚಿಕೆ; ಮಾಯೆ ಕೆತ್ತಿದ ಪುತ್ತಳಿ;
ಜನನದೆಡೆಯಿಂ ಮರಣದೆಡೆಗಾಗೆಳೆವುದೆಮ್ಮನು ದೇಹವು!
ಜನ್ಮ ಜನ್ಮದಿ ಮರಳಿ ಮರಳುವುದೆಮ್ಮ
ಬಿಗಿಯಲು ಮೋಹವು!
ತನ್ನ ಜಯಿಸಿದ ಶಕ್ತನು-
ಅವನೆಲ್ಲ ಜಯಿಸಿದ ಮುಕ್ತನು!
ಎಂಬುದನು ತಿಳಿ; ಹಿಂಜರಿಯದಿರು.
ಸನ್ಯಾಸಿಯೇ, ನಡೆಮುಂದಕೆ.
ಗುರಿಯು ದೊರಕುವವರೆಗೆ ನಡೆ, ನಡೆ;
ನೋಡದಿರು ನೀ ಹಿಂದಕೆ.
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು
ಹಾಡು ಸಿದ್ದನೆ, ಓ ಪ್ರಬುದ್ಧನೆ , ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ! ||೩||

“ಬೆಳೆಯ ಕೊಯ್ವನು ಬಿತ್ತಿದಾತನು;
ಪಾಪ ಪಾಪಕೆ ಕಾರಣ;
ವೃಕ್ಷಕಾರ್ಯಕೆ ಬೀಜಕಾರಣ; ಪುಣ್ಯ, ಪುಣ್ಯಕೆ ಕಾರಣ;
ಹುಟ್ಟಿ ಮೈವಡೆದಾತ್ಮ ಬಾಳಿನ ಬಲೆಯ ತಪ್ಪದೆ ಹೊರುವುದು;
ಕಟ್ಟು ಮೀರಿಹನಾವನಿರುವನು? ಕಟ್ಟು ಕಟ್ಟನೆ ಹೆರುವುದು!”
ಎಂದು ಪಂಡಿತರೆಂಬರು-ಮೇಣ್
ತತ್ವದರ್ಶಿಗಳೆಂಬರು!
ಆದೊಡೇನಂತಾತ್ಮವೆಂಬುದು ನಾಮರೂಪತೀತವು;
ಮುಕ್ತಿಬಂಧಗಳಿಲ್ಲದಾತ್ಮವು ಸರ್ವನಿಯಮಾತೀತವು!
ತತ್ವಮಸಿಯೆಂದರಿತು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು ಸಿದ್ಧನೆ, ವಿಶ್ವವರಿಯಲಿ! ಹಾಡು ಸಂನ್ಯಾಸಿ
ಓಂ! ತತ್! ಸತ್! ಓಂ! ||೪||

ತಂದೆ ತಾಯಿಯು ಸತಿಯು ಮಕ್ಕಳು
ಗೆಳೆಯರೆಂಬುವರರಿಯರು
ಕನಸು ಕಾಣುತಲವರು ಸೊನ್ನೆಯೆ ಸರ್ವವೆನ್ನುತ ಮೆರೆವರು.
ಲಿಂಗವರಿಯದ ಅತ್ಮವಾರಿಗೆ ಮಗುವು? ಆರಿಗೆ ತಾತನು?
ಆರ ಮಿತ್ರನು ? ಆರ ಶತ್ರುವು? ಒಂದೆಯಾಗಿರುವಾತನು!
ಆತ್ಮವೆಲ್ಲಿಯು ಇರುವುದು;- ಮೇಣ್
ಆತ್ಮವೊಂದಾಗಿರುವುದು.
ಭೇದವೆಂಬುವ ತೋರಿಕೆಯು ನಮ್ಮಾತ್ಮನಾಶಕೆ ಹೇತುವು.
ಭೇದವನು ತೊರೆದೊಂದೆಯೆಂಬುದನರಿಯೆ ಮುಕ್ತಿಗೆ ಸೇತುವು.
ಧೈರ್ಯದಿಂದಿದನೆಲ್ಲರಾಲಿಸೆ ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ಸಾರು, ಜೀವನ್ಮುಕ್ತ! ಸಾರೈ ಧೀರ ಸಂನ್ಯಾಸಿ-
ಓಂ! ತತ್! ಸತ್! ಓಂ! ||೫||

ಇರುವುದೊಂದೇ! ನಿತ್ಯಮುಕ್ತನು, ಸರ್ವಜ್ಞಾನಿಯು ಆತ್ಮನು!
ನಾಮರೂಪತೀತನಾತನು; ಪಾಪಪುಣ್ಯಾತೀತನು!
ವಿಶ್ವಮಾಯಾಧೀಶನಾತನು; ಕನಸು ಕಾಣುವನಾತನು!
ಸಾಕ್ಷಿಯಾತನು; ಪ್ರಕೃತಿಜೀವನ ತೆರದಿ ತೋರುವನಾತನು!
ಎಲ್ಲಿ ಮುಕ್ತಿಯ ಹುಡುಕುವೆ?– ಏ-
ಕಿಂತು ಸುಮ್ಮನೆ ದುಡುಕುವೆ?
ಇಹವು ತೋರದು, ಪರವು ತೋರದು;
ಗುಡಿಯೊಳದು ಮೈದೋರದು.
ವೇದ ತೋರದು, ಶಾಸ್ತ್ರ ತೋರದು;
ಮತವು ಮುಕ್ತಿಯ ತೋರದು!
ನಿನ್ನ ಕೈಲಿದೆ ನಿನ್ನ ಬಿಗಿದಿಹ ಕಬ್ಬಿಣದ ಯಮಪಾಶವು;
ಬರಿದೆ ಶೋಕಿಪುದೇಕೆ? ಬಿಡು, ಬಿಡು!
ನಿನಗೆ ನೀನೇ ಮೋಸವು!
ಬೇಡ, ಪಾಶವ ಕಡಿದು ಕೈಬಿಡು! ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ! ||೬||

‘ಶಾಂತಿ ಸರ್ವರಿಗಿರಲಿ’ ಉಲಿಯೈ, ‘ಜೀವಜಂತುಗಳಾಳಿಗೆ
ಹಿಂಸೆಯಾಗದೆ ಇರಲಿ ಎನ್ನಿಂದೆಲ್ಲ ಸೊಗದಲಿ ಬಾಳುಗೆ!
ಬಾನೊಳಾಡುವ ನೆಲದೊಳೋಡುವ ಸರ್ವರಾತ್ಮನು ನಾನಹೆ;
ನಾಕನರಕಗಳಾಸೆಭಯಗಳನೆಲ್ಲ ಮನದಿಂದ ದೂಡುವೆ!’
ದೇಹ ಬಾಳಲಿ, ಬೀಳಲಿ;-ಅದು
ಕರ್ಮನದಿಯಲಿ ತೇಲಲಿ!
ಕೆಲರು ಹಾರಗಳಿಂದ ಸಿಂಗರಿಸದನು ಪೂಜಿಸಿ ಬಾಗಲಿ!
ಕೆಲರು ಕಾಲಿಂದೊದೆದು ನೂಕಲಿ!
ಹುಡಿಯು ಹುಡಿಯೊಳೆ ಹೋಗಲಿ!
ಎಲ್ಲ ಒಂದಿರಲಾರು ಹೊಗಳುವರಾರು ಹೊಗಳಿಸಿಕೊಂಬರು?
ನಿಂದೆ ನಿಂದಿಪರೆಲ್ಲ ಕೂಡಲು ಯಾರು ನಿಂದೆಯನುಂಬರು?
ಪಾಶಗಳ ಕಡಿ! ಬಿಸುಡು, ಕಿತ್ತಡಿ! ಹಾಡು ಸಂನ್ಯಾಸಿ-
ಓಂ! ತತ್! ಸತ್! ಓಂ! ||೭||

ಎಲ್ಲಿ ಕಾಮಿನಿಯೆಲ್ಲಿ ಕಾಂಚನದಾಸೆ ನೆಲೆಯಾಗಿರುವುದೋ,
ಸತ್ಯವೆಂಬುವುದಲ್ಲಿ ಸುಳಿಯದು!
ಎಲ್ಲಿ ಕಾಮವು ಇರುವುದೋ,
ಅಲ್ಲಿ ಮುಕ್ತಿಯು ನಾಚಿ ತೋರದು!
ಎಲ್ಲಿ ಸುಳಿವುದೋ ಭೋಗವು
ಅಲ್ಲಿ ತೆರೆಯದು ಮಾಯೆ ಬಾಗಿಲಿನಲ್ಲಿಹುದು ಭವರೋಗವು;
ಎಲ್ಲಿ ನೆಲೆಸದೋ ಚಾಗವೋ,-ದಿಟ
ವಲ್ಲಿ ಸೇರದೋ ಯೋಗವು!
ಗಗನವೇ ಮನೆ! ಹಸುರೇ ಹಾಸಿಗೆ!
ಮನೆಯು ಸಾಲ್ವುದೆ ಚಾಗಿಗೆ?
ಹಸಿಯೋ, ಬಸಿಯೋ? ಬಿದಿಯು
ಕೊಟ್ಟಾಹಾರವನ್ನವು ಯೋಗಿಗೆ!
ಏನು ತಿಂದರೆ, ಏನು ಕುಡಿದರೆ, ಏನು? ಆತ್ಮಗೆ ಕೊರತೆಯೆ?
ಸರ್ವಪಾಪವ ತಿಂದುತೇಗುವ ಗಂಗೆಗೇಂ ಕೊಳೆ ಕೊರತೆಯೆ?
ನೀನು ಮಿಂಚೈ! ನೀನು ಸಿಡಿಲೈ! ಮೊಳಗು ಸನ್ಯಾಸಿ-
ಓಂ! ತತ್! ಸತ್! ಓಂ! ||೮||

ನಿಜವನರಿತವರೆಲ್ಲೋ ಕೆಲವರು; ನಗುವರುಳಿದವರೆಲ್ಲರೂ
ನಿನ್ನ ಕಂಡರೆ, ಹೇ ಮಹಾತ್ಮನೆ! ಕುರುಡರೇನನು ಬಲ್ಲರು?
ಗಣಿಸದವರನು ಹೋಗು, ಮುಕ್ತನೆ, ನೀನು ಊರಿಂದೂರಿಗೆ
ಸೊಗವ ಬಯಸದೆ, ಅಳಲಿಗಳುಕದೆ! ಕತ್ತಲಲಿ ಸಂಚಾರಿಗೆ
ನಿನ್ನ ಬೆಳಕನು ನೀಡೆಲೈ;
ಸಂಸಾರ ಮಾಯೆಯ ದೂಡೆಲೈ!
ಇಂತು ದಿನದಿನ ಕರ್ಮಶಕ್ತಿಯು ಮುಗಿವವರೆಗೂ ಸಾಗೆಲೈ!
ನಾನು ನೀನುಗಳಳಿದು ಆತ್ಮದೊಳಿಳಿದು ಕಡೆಯೊಳು ಹೋಗೆಲೈ!
ಏಳು ಮೇಲೇಳೇಳು, ಸಾಧುವೆ, ಹಾಡು ಚಾಗಿಯ ಹಾಡನು!
ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು!
ತತ್ವಮಸಿ ಎಂದರಿತು ಹಾಡೈ, ಧೀರ ಸನ್ಯಾಸಿ-
ಓಂ! ತತ್! ಸತ್! ಓಂ! ||೯||

Advertisements

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.