ವರ್ತಮಾನದ ನಮ್ಮ ಬದುಕು ನೆನಪು ಮತ್ತು ಕನಸುಗಳ ಭಾರವನ್ನು ಹೊತ್ತುಕೊಂಡಿರದೆ, ಅರಿವು ಮತ್ತು ಎಚ್ಚರಗಳ ನಡಿಗೆಯಾಗಿರಬೇಕು ~ ಚಿತ್ಕಲಾ
ಒಬ್ಬ ಮನುಷ್ಯ ವರ್ತಮಾನದಲ್ಲಿ ಹೇಗೆ ಇರಬೇಕು? – ಇದು ಜಯಪ್ರಕಾಶ್ ಅವರು ‘ಅರಳಿಮರ’ದ ಮುಂದಿಟ್ಟ ಪ್ರಶ್ನೆ.
ವರ್ತಮಾನವು ಗತದಲ್ಲಿ ನಾವು ಏನು ಮಾಡಿರುತ್ತೇವೆಯೋ ಅದರ ಪರಿಣಾಮವಾಗಿರುತ್ತದೆ. ನಾವು ಈ ಪರಿಣಾಮವನ್ನು ಹೇಗೆ ಎದುರಿಸುತ್ತೇವೆ ಅನ್ನುವುದು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಆದ್ದರಿಂದ, ನಾವು ವರ್ತಮಾನದಲ್ಲಿ ಹೇಗೆ ಇರುತ್ತೇವೆ ಎನ್ನುವುದು ನಮ್ಮ ಬದುಕಿನಲ್ಲಿ ಅತ್ಯಂತ ಮಹತ್ವದ ಸಂಗತಿಯಾಗಿದೆ.
“ವರ್ತಮಾನದಲ್ಲಿ ಇರುವುದು ಎಂದರೆ; ನೆನ್ನೆಯ ನೆನಪುಗಳ ಹೊರೆಯಿಳಿಸಿ, ನಾಳೆಯ ಕನಸುಗಳ ಹೊರೆ ಹೊತ್ತುಕೊಳ್ಳದೆ, ಹಗುರಾಗಿ ಬದುಕು ಬೀಸಿದತ್ತ ಸಾಗುವುದು” ಎಂದು ಝೆನ್ ಹೇಳುತ್ತದೆ.
ನಾವು ನೆನಪುಗಳ ಹೊರೆಯನ್ನೇನೋ ಇಳಿಸಿಬಿಡಬಹುದು. ಆದರೆ ನಮ್ಮ ವರ್ತಮಾನವು ನೆನ್ನೆಗಳ ಪರಿಣಾಮವೇ ಆಗಿರುವಾಗ, ನೆನ್ನೆಗಳು ನಮ್ಮ ವರ್ತಮಾನವನ್ನು ಬಾಧಿಸದಂತೆ ತಡೆಯುವುದು ಹೇಗೆ? ಮತ್ತು ನಾಳೆಗಳು ನಮ್ಮ ವರ್ತಮಾನದ ಪರಿಣಾಮವಾಗಲಿರುವುದರಿಂದ, ನಾಳೆಯ ಆಲೋಚನೆಯನ್ನೇ ಮಾಡದೆ ವರ್ತಮಾನವನ್ನು ಜೀವಿಸುವುದು ಹೇಗೆ? ಮೇಲಿನ ಝೆನ್ ಹೊಳಹಿನಂತೆ, ಅವನ್ನು ಹೊರೆಯಾಗಿಸಿಕೊಳ್ಳದೆ ಇದ್ದರೆ, ನಿಭಾಯಿಸುವುದು ಸುಲಭ.
ನಾವು ಇಂದು ಸುಖಸವಲತ್ತುಗಳನ್ನು ಅನುಭವಿಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ನೆನ್ನೆಯವರೆಗಿನ ಶ್ರಮ, ನಿರ್ಧಾರಗಳೇ ಕಾರಣ. ನಾವು ದುಃಖವನ್ನೂ ನಷ್ಟವನ್ನೂ ಅನುಭವಿಸುತ್ತಿದ್ದರೆ, ಅದಕ್ಕೂ ನಮ್ಮ ಶ್ರಮ (ಕೊರತೆಯ ರೂಪದಲ್ಲಿ), ನಿರ್ಧಾರಗಳೇ ಕಾರಣ. ಇದು ನಮ್ಮಲ್ಲಿ ‘ಈ ದಿನ’ ನಾವು ಎಷ್ಟು ಎಚ್ಚರದಿಂದ ಇರಬೇಕೆಂಬ ಅರಿವನ್ನು ಮೂಡಿಸಬೇಕು. ಅರಿವು ಯಾವತ್ತೂ ಹೊರೆಯಲ್ಲ. ಅದರ ಬದಲು ದುಃಖಿಸುತ್ತಾ ಕುಳಿತರೆ, ನಮ್ಮ ನಾಳೆಗಳ ಮೇಲೆ ನಮ್ಮ ದುಃಖದ ನಕಾರಾತ್ಮಕತೆಯ ಪರಿಣಾಮವೇ ಬೀರುತ್ತದೆ. ಮತ್ತು ನಕಾರಾತ್ಮಕತೆಯ ಪರಿಣಾಮ ಯಾವತ್ತೂ ಒಳಿತಾಗಿರುವುದಿಲ್ಲ. ಹಾಗೆಯೇ ನೆನ್ನೆಯ ಫಲಿತಾಂಶವಾದ ಇಂದಿನ ಸಂತೋಷ ಮತ್ತು ಸಾಧನೆಗಳನ್ನು ನಾವು ಆಲಸ್ಯ ಮತ್ತು ಅಹಂಕಾರವನ್ನಾಗಿಸಿಕೊಂಡರೆ, ಅವು ಕೂಡಾ ಅರಿವಾಗದೆ ಹೊರೆಯೇ ಆಗುತ್ತವೆ. ಈ ಆಲಸ್ಯ, ಈ ಅಹಂಕಾರವೂ ಕೂಡಾ ನಾಳೆಗಳ ಮೇಲೆ ನಕಾರಾತ್ಮಕ ಪರಿಣಾಮವನ್ನೇ ಬೀರುತ್ತವೆ.
ಸಾರಾಂಶ ಇಷ್ಟೇ…ವರ್ತಮಾನದ ನಮ್ಮ ಬದುಕು ನೆನಪು ಮತ್ತು ಕನಸುಗಳ ಭಾರವನ್ನು ಹೊತ್ತುಕೊಂಡಿರದೆ, ಅರಿವು ಮತ್ತು ಎಚ್ಚರಗಳ ನಡಿಗೆಯಾಗಿರಬೇಕು.