ಅದ್ವೈತ, ವಿಶಿಷ್ಟಾದ್ವೈತ, ದ್ವೈತ | ಸನಾತನ ಸಾಹಿತ್ಯ ~ ಮೂಲಪಾಠಗಳು #34

trio

ದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಮತಗಳು ಉಪನಿಷತ್ , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಎಂಬ ಪ್ರಸ್ಥಾನತ್ರಯಗಳ ಅರ್ಥೈಸುವಿಕೆಯಿಂದ ಹೊಮ್ಮಿದ ಮತಗಳಾಗಿವೆ. ಕ್ರಮವಾಗಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಈ ಮೂರು ಸಿದ್ಧಾಂತಗಳ ಪ್ರವರ್ತಕರಾಗಿದ್ದಾರೆ. ಈ ಮೂವರು ಆಚಾರ್ಯರಿಗೂ ಕೃಷ್ಣದ್ವೈಪಾಯನ ವ್ಯಾಸರೇ ಮೂಲ ಗುರುವಾಗಿದ್ದಾರೆ.
ಈ ಮೂರೂ ಮತಗಳು ವೈದಿಕ ಸಂಪ್ರದಾಯದಲ್ಲೇ ಬರುತ್ತದೆ. ಇವು ಮೂರೂ ವೇದಾಂತ ದರ್ಶನಗಳೇ ಆಗಿದ್ದು, ತಮ್ಮ ತಮ್ಮ ಆಧ್ಯಾತ್ಮಿಕ‌ ಅನುಭವದ ಆಧಾರದ ಮೇಲೆ ಆಚಾರ್ಯರು ಜನರಿಗೆ ಇವನ್ನು ತಿಳಿಸಿದ್ದಾರೆ. ಮೊದಲು ಶಂಕರಾಚಾರ್ಯರು ಅದ್ವೈತ ದರ್ಶನವನ್ನು ಸಾದರಪಡಿಸಿದರು, ಆನಂತರ ರಾಮಾನುಜಾಚಾರ್ಯರು ವಿಶಿಷ್ಟಾದ್ವೈತವನ್ನೂ ; ಮಧ್ವಾಚಾರ್ಯರು ದ್ವೈತವೇದಾಂತವನ್ನು ಜನರ ಮುಂದಿಟ್ಟರು.

ಅದ್ವೈತ
ಅದ್ವೈತದ ಪ್ರಕಾರ ಬ್ರಹ್ಮವೊಂದೇ ಸತ್ಯ, ಜಗತ್ತು ಮಿಥ್ಯ. ಜೀವವು ಬ್ರಹ್ಮವೇ ಹೊರತು ಬೇರಲ್ಲ, ಜ್ಞಾನಬಲದಿಂದ ಜೀವವು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳ್ಳಬಹುದು.
ಅದ್ವೈತ ಮತವು “ಸರ್ವಂ ಖಲ್ವಿದಂ ಬ್ರಹ್ಮ” ಎಂದು ಹೇಳುತ್ತದೆ. ಸೃಷ್ಟಿಯ ಪ್ರತಿಯೊಂದೂ ಸಚ್ಚಿದಾನಂದ ಬ್ರಹ್ಮವೇ ಆಗಿದೆ. “ಜೀವೋ ಬ್ರಹ್ಮೈವ ನಾಪರಃ”  ಎಂದು ಇದು ಸಾರುತ್ತದೆ.
“ಜೀವನು ಬ್ರಹ್ಮನೇ ಹೊರತು ಬೇರಲ್ಲ, ಜೀವ ಜಗತ್ತಾಗಿ ಏನೇನು ಗೋಚರಿಸುತ್ತಿದೆಯೋ ಅವೆಲ್ಲವೂ ಪರಬ್ರಹ್ಮದ ಮಾಯಾವಿಲಾಸ, ಜೀವಿಗಳ ಬುದ್ಧಿಗೆ ಕವಿದ ಭ್ರಮೆಯ ಕಾರಣದಿಂದ ಈ ಜಗತ್ತು – ಜನನ – ಮರಣ, ಸುಖ – ದುಃಖಾದಿದ್ವಂದಗಳು ಕಾಣಿಸಿಕೊಳ್ಳುತ್ತವೆ. ಭ್ರಮೆಯು ಹರಿದಾಗ ಎಲ್ಲವೂ ಮಾಯವಾಗಿ ಬ್ರಹ್ಮವೊಂದೇ ವಿರಾಜಿಸುತ್ತದೆ. ಈ ಭ್ರಮೆಯ ಪೊರೆಯನ್ನು ಹರಿಯುವುದೇ ಸಾಧನೆಯ ಉದ್ದೇಶ” ಎಂಬುದು ಇದರ ತಾತ್ಪರ್ಯ.

ವಿಶಿಷ್ಟಾದ್ವೈತ
ಚಿತ್ ಮತ್ತು ಅಚಿತ್ ಎಂಬ ವಿಶೇಷಣಗಳಿಂದ ಕೂಡಿದ ಅದ್ವೈತವೇ ವಿಶಿಷ್ಟಾದ್ವೈತ. “ಚಿತ್ ಎಂದರೆ ಚೇತನ, ಅಚಿತ್ ಎಂದರೆ ಜಡವಸ್ತು. ಈ ಚಿತ್ ಮತ್ತು ಅಚಿತ್ ಸೇರಿ ಪರಮಾತ್ಮನ ಶರೀರವೆನಿಸಿಕೊಳ್ಳುತ್ತದೆ. ಅಂಶ – ಅಂಶೀ ಭಾವದಿಂದ; ಶೇಷ – ಶೇಷೀ ಸಂಭಂಧದಿಂದ ಚಿತ್ ಮತ್ತು ಅಚಿತ್ ಗಳು ಬೇರೆ ಬೇರೆಯಾಗಿ ಕಂಡರೂ ಪರಮಾತ್ಮನೊಂದಿಗೆ ಸೇರಿಕೊಂಡಿವೆ” ಎಂದು ವಿಶಿಷ್ಟಾದ್ವೈತವು ಸಾರುತ್ತದೆ.
“ಪರಮಾತ್ಮನು ವಿಶಿಷ್ಟನಾಗಿದ್ದಾನೆ , ಶ್ರೀಮನ್ನಾರಯಣನೇ ಪರಬ್ರಹ್ಮ , ಅವನು ಚಿತ್ ಮತ್ತು ಅಚಿತ್ ನಿಂದ ತುಂಬಿದ್ದಾನೆ. ಜೀವಾತ್ಮ ಅದರ ಒಂದು ಅಂಶ. ಶರಣಾಗತಿಯಿಂದ ಭಕ್ತಿಯಿಂದ ಪರಮಾತ್ಮ ನೊಡನೆ ಇರುವುದೇ ಮೋಕ್ಷ. ಅವರವರ ಅನುಭವ ಅವರವರಿಗೆ ನಿಜ, ಅದೇ ಪ್ರಮಾಣ , ಇವೆಲ್ಲಾ ಒಂದಕ್ಕೊಂದು ವಿರೋಧವಲ್ಲ ; ಪೂರಕವಾಗಿದೆ. ಭಗವಂತನ ಉಪಾಸನೆಯ ವಿಷಯದಲ್ಲಿ ‌ನಮಗೆ ಸ್ವಾತಂತ್ರ್ಯವಿದೆ. ಅದರಂತೆ ನಮ್ಮ ಅನುಭೂತಿ – ಅನುಭವ – ಅಭಿರುಚಿ ಸಿದ್ಧಿಸುತ್ತದೆ.” ಇದು ವಿಶಿಷ್ಟಾದ್ವೈತದ ತಿರುಳು.

ದ್ವೈತ
ದ್ವೈತವೆಂದರೆ ಎರಡು. ಜಗತ್ತು ಸತ್ಯ , ಜೀವಾತ್ಮ ಪರಮಾತ್ಮ ಬೇರೆ ಬೇರೆ ಎಂಬುದು ಇದರ ಮುಖ್ಯ ತತ್ವ. “ಈ ಜಗತ್ತು ಸತ್ಯವೇ ಹೊರತು ಮಿಥ್ಯೆಯಲ್ಲ , ಜೀವರು ಎಂದೆಂದಿಗೂ ಶ್ರೀ ಹರಿಗೆ ಅನುಚರರಾಗಿದ್ದು ಬೇರೆ  ಬೇರೆಯೇ ಆಗಿರುವವರು. ಜೀವನಿಗೆ ಸ್ವರೂಪದ ಆನಂದ ದೊರೆತಾಗ ಅದೇ ಮುಕ್ತಿಯೆನಿಸಿಕೊಳ್ಳುತ್ತದೆ. ಅಂತಹಾ ಮುಕ್ತಿಗೆ ಭಕ್ತಿಯೇ ಪ್ರಧಾನ ಸಾಧನ.” ಎಂದು ದ್ವೈತವು ಸಾರುತ್ತದೆ.
ದ್ವೈತ ಮತವು “ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀ ಹರಿಯ ಕುರಿತೇ ಆಗಿದೆ” ಎಂದು ಹೇಳುತ್ತದೆ. ಅದರ ಪ್ರಕಾರ ಪ್ರಕಾರ ಹರಿಯೇ ಸರ್ವೋತ್ತಮನು; ಅವನನ್ನು ಭಕ್ತಿಮಾರ್ಗದಿಂದ ಭಜಿಸಿ ಅವನ ಸಾಯಜ್ಯದಲ್ಲಿರುವುದೇ ಮೋಕ್ಷ.

ಸರಳವಾಗಿ ಹೇಳುವುದಾದರೆ:
ಆತ್ಮಬುದ್ಧಿಯಿಂದ ನೀನು ನಾನು ಎಂಬ ಬೇಧವಿಲ್ಲ ಎಂದು ಸಾರುವುದು ಅದ್ವೈತ.
ಜೀವಬುದ್ಧಿಯಿಂದ ನಾನು ಅಂಶ, ನೀನು ಅಂಶಿ ಎಂದು ಸಾರುವುದು ವಿಶಿಷ್ಟಾದ್ವೈತ.
ದೇಹ ಬುದ್ಧಿಯಿಂದ ನಾನು ದಾಸ, ನೀನು ಈಶ ಎಂದು ಸಾರುವುದು ದ್ವೈತ.

Leave a Reply