ಬಸ್ಯ, ಸಿಂಗ ಮತ್ತು ಅಗಸನ ಕಲ್ಲು : ಒಂದು ಜನಪದ ಕಥೆ

ಒಂದೂರಲ್ಲಿ ಒಬ್ಬ ಅಗಸ ಇದ್ದ. ಅವನ ಹೆಸ್ರು ಬಸ್ಯ. ಅವನ ಸಂಗಾತಿ ಸಿಂಗ, ಅವನ ನೆಚ್ಚಿನ ಕತ್ತೆಯೇ ಆಗಿತ್ತು. ಯಾವಾಗ್ಲೂ ಬಸ್ಯನ ಹಿಂದೆ ಸಿಂಗ, ಸಿಂಗನ ಮುಂದೆ ಬಸ್ಯ ಇರ್ಲೇಬೇಕು. ಹಾಂಗಿತ್ತು ಅವರ ದೋಸ್ತಿ.
ಒಂದಿನ ಬಸ್ಯ ಮತ್ತು ಸಿಂಗ ಅದೆಲ್ಲಿಗೂ ದೂರದೂರಿಗೆ ಹೊರಟ್ರು. ಹೋಗ್ತಾ ಹೋಗ್ತಾ ಕತ್ಲಾಯ್ತಾ, ಸರಿ. ಒಂದ್ ಮರದ್ ಕೆಳಗೆ ಅಡ್ಡಾದ್ರು. ಸಿಂಗ ತನ್ ಯಜಮಾನನ್ನ “ಒಂದ್ ಕಥೆ ಹೇಳು…. ಒಂದ್ ಕಥೆ ಹೇಳು” ಅಂತ ಪೀಡಿಸ್ದ. ಆದ್ರೆ ಅಗಸಂಗೆ ಅದಾಗ್ಲೇ ಕಣ್ಣು ಕುಗುರ್ತಿತ್ತು. ಸಿಂಗನ ಹಟಕ್ಕೆ ಜಗ್ಗದೆ ಅಂವ ಹಾಗೇ ನಿದ್ದೆ ಹೋದ.

ಹೀಗೆ ಅಗಸ ಗಾಢ ನಿದ್ದೆಯಲ್ಲಿದ್ದಾಗ ಅವನ ಹೊಟ್ಟೇಲಿದ್ದ ನಾಲ್ಕು ಕಥೆಗಳು ಎದ್ದು ಬಂದು ಅವನ ಮೈಮೇಲೆ ಕೂತ್ಕೊಂಡ್ವು. ಕೂತು ಮಾತಾಡ್ಲಿಕ್ ಶುರು ಮಾಡಿದ್ವು. ಅವಕ್ಕೆ ತುಂಬ ಕೋಪ ಬಂದಿತ್ತು. “ಅಲ್ಲ, ಚಿಕ್ಕಂದಿಂದ್ಲು ಈ ಅಗಸಂಗೆ ನಮ್ ವಿಷಯ ಚೆನ್ನಾಗ್ ಗೊತ್ತಿದೆ. ಆದ್ರೂ ಯಾರಿಗೂ ಇವ್ನು ನಮ್ ಬಗ್ಗೆ ಹೇಳೋಲ್ವಲ್ಲ ಯಾಕೆ? ಮತ್ಯಾಕೆ ನಾವು ಅವ್ನ ಹೊಟ್ಟೇಲಿರ್ಬೇಕು? ನಾವು ಅವನನ್ನ ಕೊಂದು ಬೇರೆಲ್ಲಿಗಾದ್ರೂ ಹೊರಟ್ ಹೋಗೋಣ” ಅಂತ ಮಾತಾಡ್ಕೊಂಡ್ವು. ಅವರ ಮಾತು ಸಿಂಗನಿಗೆ ಕೇಳಿಸ್ಬಿಡ್ತು. ಮುಂದೇನು ಮಾತಾಡ್ತಾರೋ ಅಂತ ನಿದ್ದೆ ನಟಿಸ್ತ ಅವುಗಳ ಮಾತನ್ನ ಕಿವಿಕೊಟ್ಟು ಕೇಳಿಸ್ಕೊಂಡ. ಮೊದಲ ಕಥೆ ಹೇಳ್ತು. “ಈ ಅಗಸ ಬೆಳಗ್ಗೆ ಎದ್ದು ಬುತ್ತಿ ಬಿಚ್ಚಿ ತಿನ್ನೋಕೆ ಕೂರ್ತಾನಲ್ಲ, ಆಗ ನಾನು ಮುಳ್ಳಾಗಿ ತುತ್ತಿನೊಳಗೆ ಸೇರ್ಕೊಂಡು ಅವನ ಗಂಟಲಿಗೆ ಚುಚ್ಚಿ ಕೊಲ್ತೀ ನಿ”. “ಒಂದು ವೇಳೆ ಅಂವ ಸಾಯದಿದ್ರೆ ನಾನು ಇದೇ ಮರದೊಳಗೆ ಸೇರ್ಕೊಂಡು ಅವನ ಮೇಲೆ ಬಿದ್ದು ಸಾಯಿಸ್ತೀನಿ” ಅಂತು ಎರಡನೆ ಕಥೆ. ಮೂರನೆಯದು, “ನಿಮ್ಮಿಬ್ಬರ ಕೈಲಿ ಆಗದಿದ್ರೆ ನಾನು ಇಲ್ಲೇ ಹತ್ತಿರ ಇರೋ ಆ ಹುತ್ತದಲ್ಲಿ ಹಾವಾಗಿ ಕಾದು ಕೂತು ಅವನನ್ನ ಕಚ್ತೀನಿ” ಅಂತು. ಕೊನೆಗೆ ನಾಲ್ಕನೇ ಕಥೆ, ಈ ಯಾವುದ್ರಿಂದ್ಲೂ ಅಂವ ಸಾಯ್ದೆ ಹೋದ್ರೆ, ಅಂವ ಹೊಳೆ ದಾಟ್ತಾನಲ್ಲ, ಆಗ ದೊಡ್ಡ ತೆರೆಯಾಗಿ ಬಂದು ಅವನನ್ನ ಕೊಚ್ಕೊಂಡು ಹೋಗ್ತೀನಿ” ಅಂತ ಹೇಳ್ತು.
ಅವುಗಳಲ್ಲಿ ಒಂದು ಕಥೆಗೆ ತಮ್ಮ ಮಾತನ್ನ ಯಾರಾದ್ರೂ ಕೇಳಿಸ್ಕೊಂಡ್ರೆ ಅನ್ನೋ ಅನುಮಾನ ಬಂತು. ನಾಲ್ಕೂ ಕಥೆಗಳು ಸೇರಿ, ಯಾರಾದ್ರೂ ಅಗಸನಿಗೆ ತಮ್ಮ ಮಾತುಗಳ್ನ ತಿಳಿಸಿದ್ರೆ ಅವ್ರು ಕಲ್ಲಾಗ್ತಾರೆ ಅಂತ ಶಾಪ ಕೊಟ್ವು.

ಬೆಳ್ಗಾಯ್ತು. ಹತ್ರ ಇದ್ದ ನದೀಲಿ ಮುಖ ತೊಳ್ಕೊಂಡ್ ಬಂದ ಅಗಸ ಬುತ್ತಿ ಬಿಚ್ಚಿ ತಿನ್ನೋಕೆ ಕೂತ. ಆಗ ಸಿಂಗ ಓಡಿ ಬಂದವ್ನೇ ತನ್ನ ಮೂತಿಯಿಂದ ಅನ್ನದ ಬಟ್ಟಲನ್ನ ತಳ್ಳಿ ಚೆಲ್ಲಿಬಿಟ್ಟ. ಸಿಟ್ಟಿಗೆದ್ದ ಅಗಸ ಇನ್ನೇನು ಹೊಡೀಬೇಕು ಅನ್ನುವಾಗ ಅವಂಗೆ ಚೆಲ್ಲಿದ ಅನ್ನದಲ್ಲಿ ಮುಳ್ಳುಗಳಿರೋದು ಕಾಣಿಸ್ತು.
ಈ ಸಂಗತಿಯಿಂದ ತಲೆಕೆಟ್ಟ ಅಗಸ ಇನ್ನೇನು ಸುಧಾರಿಸ್ಕೊಳ್ಬೇಕು ಅನ್ನುವಾಗ ಇದ್ದಕ್ಕಿದ್ದಹಾಗೇ ಓಡಿಬಂದ ಸಿಂಗ ತನ್ನ ಯಜಮಾನನ ಪಂಚೆ ಹಿಡಿದು ಎಳೆದು ಎಳೆದೂ ಎಲ್ಲಿಗೋ ಕರೆಯತೊಡಗಿದ. ಅಗಸನೂ ಸಿಟ್ಟಿಗೆದ್ದು ಹೊರಟ. ಇನ್ನೇನು ಅಂವ ಮರದ ಬುಡದಿಂದ ಎದ್ದಿರಬೇಕು, ರೆಂಬೆಯೊಂದು ಧೊಪ್ಪೆಂದು ಬಿದ್ದ ಸದ್ದು!
ಸರಿ. ಅಗಸ ಇನ್ನು ಅಲ್ಲಿಂದ ಹೊರಡೋದೇ ವಾಸಿ ಅಂದುಕೊಂಡ. ತನ್ನ ಬಟ್ಟೆಗಂಟು ಸರಿ ಮಾಡಿಕೊಳ್ಳತೊಡಗಿದ. ಅಲ್ಲೇ ಹತ್ತಿರವಿದ್ದ ಹುತ್ತದಿಂದ ಹಾವು ಹೊರಬಂತು. ಅದನ್ನೇ ಕಾಯ್ತಿದ್ದ ಸಿಂಗ, ತನ್ನ ಗೊರಸಿಂದ ಅದನ್ನ ತುಳಿತುಳಿದು ಕೊಂದು ಹಾಕಿದ.
ಅಗಸ ‘ಭಲಾ…!’ ಅಂತ ಬೆನ್ನು ನೇವರಿಸಿ ಹೊಳೆಯತ್ತ ಹೊರಟ. ಅಲ್ಲೂ ಭಾರೀ ತೆರೆ ಬರೋದನ್ನ ನೋಡಿದ ಸಿಂಗ, ಯಜಮಾನನ್ನ ಬೆನ್ನ ಮೇಲೆ ಕೂರಿಸ್ಕೊಂಡು ಆಚೆ ದಡಕ್ಕೆ ಕರೆದೊಯ್ದ.

ಅಷ್ಟೂ ಹೊತ್ತು ಸುಮ್ಮನಿದ್ದ ಅಗಸ ಸಮಾಧಾನವಾದ ಮೇಲೆ ಸಿಂಗನ್ನ ಕೇಳ್ದ, “ಪ್ರತಿ ಸಾರ್ತಿ ನೀನು ನನ್ ಜೀವ ಉಳಿಸ್ತಲೇ ಬಂದಿದೀಯ. ನಿಂಗೆ ನನ್ ವಿಷ್ಯ ಏನೋ ಗೊತ್ತಾಗಿದ್ದೆ. ಏನದು ಹೇಳು?”
ಊಹೂಂ… ಸಿಂಗ ಬಾಯಿ ಬಿಗಿದ್ಕೊಂಡು ನಿಂತುಬಿಟ್ಟ. ಅಗಸ ಪೀಡಿಸಿ ಪೀಡಿಸಿ ಕೇಳಿದಾಗ, ‘ಅದನ್ನ ಹೇಳಿದ್ರೆ ನಾನು ಕಲ್ಲಾಗಿಹೋಗ್ತೀನಿ’ ಅಂದ. ಆದ್ರೂ ಅಂವ ಬಿಡಲಿಲ್ಲ. ಹೇಳಲೇಬೇಕು ಅಂತ ಹಟ ಹಿಡಿದ. ಕೊನೆಗೆ ಸಿಂಗ ಕಥೆಗಳ ಮಾತನ್ನ ಹೇಳಿದ. ಹೇಳಿ ಮುಗೀತಲೇ ನಿಂತಲ್ಲಿ ಕಲ್ಲಾಗಿಹೋದ!

ನಾಲ್ಕು ನಾಲ್ಕು ಸಾರ್ತಿ ಜೀವ ಉಳಿಸಿದ ತನ್ನ ಪ್ರೀತಿಯ ಭಂಟ ಹಾಗೆ ನಿಜವಾಗಿಯೂ ಕಲ್ಲಾಗಿದ್ದು ನೋಡಿ ಕಣ್ಣೀರು ಸುರಿಸಿದ ಅಗಸ, ಆ ಕಲ್ಲಿನ ಮೇಲೆ ಬಟ್ಟೆ ಒಗೆಯೋದನ್ನ ರೂಢಿಸ್ಕೊಂಡ. ಹೀಗೆ ಸದಾ ತನ್ನ ಸಂಗಾತಿ ಜೊತೆ ಇರುವ ಸಮಾಧಾನ ಅವನದಾಗ್ತಿತ್ತು. ಮುಂದೆ ಊರಿನ ಜನ, ಹೊಳೆ ಹತ್ತಿರದ ಆ ಕಲ್ಲನ್ನ ‘ಅಗಸನ ಕಲ್ಲು’ ಅಂತ್ಲೇ ಕರೆದರು.

(ಕನ್ನಡ ಜನಪದ ಕಥೆ)

3 Comments

  1. ತುಂಬಾ ಚೆನ್ನಾಗಿದೆ ಕಥೆ. ನಾಳೆ ಮಗಳಿಗೆ ಈ ಕಥೆಓದಲು ಹೇಳುತ್ತೇನೆ.

Leave a Reply