ನಮ್ಮ ಸಂಸ್ಕಾರವೆಲ್ಲ ನಮಸ್ಕಾರಕ್ಕೆ ಮುಗಿದುಹೋಗುತ್ತಿದೆಯೇ?

ಈ ಜಾಲದ ಯಾವುದೇ ಒಂದು ಕೊಂಡಿ ಕಳಚಿದರೂ ಭೂಮಿಯ ಸಮತೋಲನ ತಪ್ಪುವುದು ಖಚಿತವೆಂದು ಈವರೆಗಿನ ವಿಜ್ಞಾನಿಗಳು, ತತ್ತ್ವಶಾಸ್ತ್ರಜ್ಞರು, ಅಧ್ಯಾತ್ಮ ಚಿಂತಕರೆಲ್ಲರೂ ಹೇಳುತ್ತಲೇ ಬಂದಿದ್ದಾರೆ. ಮನುಷ್ಯನ ಹೊರತಾಗಿ ಭೂಮಿಯ ಮೇಲಿನ ಇನ್ಯಾವ ಜೀವಿಯೂ ಪರಿಸರದಲ್ಲಿ ಸಹಬಾಳ್ವೆಯ ಆಶಯಕ್ಕೆ ಧಕ್ಕೆ ತಂದಿಲ್ಲ ಎನ್ನುವುದು ನಾಚಿಕೆಗೇಡಿನ ವಿಷಯ. ~ ಗಾಯತ್ರಿ 

 

ಭೂಮಿ, ಸದ್ಯದ ತಿಳಿವಳಿಕೆಯಂತೆ ಜೀವರಾಶಿಗಳ ಏಕೈಕ ಆವಾಸ ಸ್ಥಾನ. ಜೀವಿಯ ಆವಾಸ ಸ್ಥಾನವೆಂದರೆ ಕೇವಲ ಕಾಲೂರುವ ನೆಲೆಯಲ್ಲ. ಜೀವಿ ಅಂದರೆ ಕೇವಲ ಮನುಷ್ಯನೂ ಅಲ್ಲ. ನೆಲ, ಗಾಳಿ, ನೀರು, ಮರ ಗಿಡ, ಪ್ರಾಣಿ, ಪಕ್ಷಿ, ಕ್ರಿಮಿ ಕೀಟಗಳೆಲ್ಲ ಸೇರಿ  ಜೀವರಾಶಿಯ ನಿರ್ಮಾಣವಾಗುತ್ತದೆ. ಈ ಎಲ್ಲವೂ ಪ್ರತ್ಯಕ್ಷ – ಪರೋಕ್ಷವಾಗಿ ಒಂದಕ್ಕೊಂದು ಬೆಸೆದುಕೊಂಡು ಅಂತಸ್ಸಂಬಂಧ ರೂಪಿಸಿಕೊಂಡಿವೆ. ಇದೊಂದು ಹೆಜ್ಜಾಲ. ಈ ಜಾಲದ ಯಾವುದೇ ಒಂದು ಕೊಂಡಿ ಕಳಚಿದರೂ ಭೂಮಿಯ ಸಮತೋಲನ ತಪ್ಪುವುದು ಖಚಿತವೆಂದು ಈವರೆಗಿನ ವಿಜ್ಞಾನಿಗಳು, ತತ್ತ್ವಶಾಸ್ತ್ರಜ್ಞರು, ಅಧ್ಯಾತ್ಮ ಚಿಂತಕರೆಲ್ಲರೂ ಹೇಳುತ್ತಲೇ ಬಂದಿದ್ದಾರೆ. ಮನುಷ್ಯನ ಹೊರತಾಗಿ ಭೂಮಿಯ ಮೇಲಿನ ಇನ್ಯಾವ ಜೀವಿಯೂ ಪರಿಸರದಲ್ಲಿ ಸಹಬಾಳ್ವೆಯ ಆಶಯಕ್ಕೆ ಧಕ್ಕೆ ತಂದಿಲ್ಲ ಎನ್ನುವುದು ನಾಚಿಕೆಗೇಡಿನ ವಿಷಯ.

“ಮನುಷ್ಯನು ತನ್ನ ಮೌಢ್ಯತೆ, ದುರಾಸೆ ಮತ್ತು ಪ್ರತಿಯೊಂದೂ ತನಗೆ ಸೇರಿದ್ದೆಂಬ ಸ್ವಾರ್ಥಗಳಿಂದಾಗಿ ಪರಿಪರಿಸರ ಮತ್ತು ಅದನ್ನು ಅವಲಂಬಿಸಿ ಬದುಕುತ್ತಿರುವ ಪ್ರಾಣಿಗಳ ಅವ್ಯಾಹತ ನಾಶಕ್ಕೆ ಇಳಿದಿದ್ದಾನೆ. ಇದರಿಂದ ಜಗತ್ತಿನಲ್ಲಿ ಶಾಂತಿಯು ಇಲ್ಲವಾಗಿದೆ. ಮನುಸ್ಯನು ತನ್ನ ಈ ಚಾಳಿಯನ್ನೇ ಮುಂದುವರಿಸುತ್ತ ಸಕಲ ಜೀವಿಗಳ ಹಕ್ಕಾಗಿರುವ ಶಾಂತಿಗೆ ಭಂಗ ತಂದಿದ್ದೇ ಆದಲ್ಲಿ, ಮುಂದಿನ ಪೀಳಿಗೆಯು ಪ್ರೇತ ಕಳೆಯ ಸತ್ತ ಜಗತ್ತಿನಲ್ಲಿ ವಾಸಿಸಬೇಕಾಗುತ್ತದೆ” ಎನ್ನುತ್ತಾರೆ ದಲೈ ಲಾಮಾ. ಅವರ ಈ ಮಾತು ಮನುಕುಲಕ್ಕೆ ನೀಡುತ್ತಿರುವ ಎಚ್ಚರಿಕೆ ಗಂಟೆಯಂತೆ ಭಾಸವಾಗುತ್ತದೆ.

ಪರಿಸರ ರಕ್ಷಣೆ ಮತ್ತು ಭೂ ಸೂಕ್ತ
ಅಶ್ವ ಇವ ರಜೋ ದುಧುವೇ ವಿ ತಾನ್ ಜನಾನ್|
ಯ ಆಕ್ಷಿಯನ್ ಪೃಥಿವೀಂ ಯಾದಜಾಯತ ||
– ಅನ್ನುತ್ತದೆ ಭೂಸೂಕ್ತ (57ನೇ ಶ್ಲೋಕ).
“ಭೂಮಿಯು ಕುದುರೆಯು ತನ್ನ ಕಾಲಿನಡಿಯ ಧೂಳನ್ನು ಕೊಡವಿಕೊಳ್ಳುವಂತೆ ತನ್ನಲ್ಲಿ ಹಿಂದೆ ಹುಟ್ಟಿ ವಾಸಿಸಿದ ಎಲ್ಲರನ್ನೂ ಝಾಡಿಸಿ ತೊರೆಯುವಂಥವಳು” ಎಂಬುದು ಇದರರ್ಥ.
ಆದ್ದರಿಂದ ಯಾವುದೂ ಯಾರೂ ಶಾಶ್ವತವಲ್ಲ. ತನ್ನ ಮೇಲೆ ಏನಿರಬೇಕು, ಯಾವುದು ಅಳಿಯಬೇಕು ಅನ್ನುವುದನ್ನು ಸ್ವತಃ ಭೂಮಿಯೇ ನಿರ್ಧರಿಸುತ್ತದೆ. ಲಕ್ಷಗಟ್ಟಲೆ ವರ್ಷಗಳ ಭೂಮಿಯ ಇತಿಹಾಸದಲ್ಲಿ ಅದೆಷ್ಟೋ ಪರ್ವತಗಳು ನೆಲಸಮವಾಗಿವೆ, ಎದ್ದು ನಿಂತಿವೆ. ಖಂಡಗಳು ಸರಿಯುತ್ತ ಬಂದು ಕೂಡಿಕೊಂಡಿವೆ, ಮತ್ತೆ ಕೆಲವು ಸಾಗರತಳದಲ್ಲಿ ಮುಳುಗಿಹೋಗಿವೆ. ಕಾಲಕಾಲಕ್ಕೆ ಭೂಮಿ ತನ್ನನ್ನು ತಾನು ಸೌರಮಂಡಲದಲ್ಲಿ ಸಂತುಲಿತವಾಗಿ ಇರಿಸಿಕೊಳ್ಳಲು ಏನು ಬೇಕೋ ಅವೆಲ್ಲವನ್ನೂ ಮಾಡುತ್ತ ಬಂದಿದೆ. ಆದರೆ ಭೂಮಿಯ ಈ ಸಹಜ ವ್ಯವಹಾರದಲ್ಲಿ ಮನುಷ್ಯನ ಹಸ್ತಕ್ಷೇಪ ಇತ್ತೀಚಿನ ದಶಕಗಳಲ್ಲಿ ಮಿತಿ ಮೀರುತ್ತ ಬಂದಿದ್ದು, ಮುಂದೊಮ್ಮೆ ಭಾರೀ ಅಪಾಯವನ್ನೆ ತಂದೊಡ್ಡಬಹುದು.

ವೇದ ಕಾಲದ ಋಷಿಗಳು ಪರಿಸರದ ಮಹತ್ವವನ್ನು ಚೆನ್ನಾಗಿ ಅರಿತಿದ್ದರು. ಆಕಾಶ (ದ್ಯೌಃ) ಮತ್ತು ಭೂಮಿ (ಪೃಥ್ವೀ) ಗಳ ನಡುವಿನ ಅವಕಾಶವನ್ನು ಅವರು ಪರ್ಯಾವರಣ ಎಂದು ಕರೆದರು. ದ್ರಷ್ಟಾರರೂ ವಿಜ್ಞಾನಿಗಳೂ ಆಗಿದ್ದ ಋಷಿಗಳು ಭೂಮ್ಯಾಕಾಶಗಳು ಸುಸ್ಥಿತಿಯಲ್ಲಿ ಇರಬೇಕಾದರೆ ಪರ್ಯಾವರಣದ ಸುಸ್ಥಿರತೆಯು ಅತ್ಯಗತ್ಯ ಎಂಬುದನ್ನು ಕಂಡುಕೊಂಡಿದ್ದರು. ಈ ನಿಟ್ಟಿನಲ್ಲಿ ಜನರನ್ನು ಜಾಗೃತಗೊಳಿಸಲು ಕೆಲವು ಬೋಧನೆಗಳನ್ನೂ ನಿಯಮಾಚಾರಗಳನ್ನೂ ಜಾರಿಗೊಳಿಸಿದರು. ವೇದಕಾಲೀನ ಪ್ರಕೃತಿಪೂಜೆಯ ಹಿನ್ನೆಲೆ ಇದೇ ಆಗಿದೆ. ಮರ, ನದಿಗಳನ್ನೂ ಪರಿಸರ ಸ್ನೇಹಿ, ಮನುಕುಲ ಸ್ನೇಹಿ ಪ್ರಾಣಿ ಪಕ್ಷಿಗಳನ್ನೂ ದೇವತೆಗಳೆಂದು ಕರೆಯುವ ಮೂಲಕ ಅವುಗಳಿಗೆ ಮನುಷ್ಯರಿಗಿಂತ ಎತ್ತರವಾದ ಸ್ಥಾನವನ್ನೇ ಕೊಟ್ಟು ಗೌರವದಿಂದ ಕಾಣಲಾಗಿದೆ.
ನಮ್ಮ ಪ್ರಾಚೀನ ಋಷಿಗಳು “ಭೂಮಿಯಿಂದ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ತೆಗೆದುಕೊಳ್ಳುವ” ಮತ್ತು ಅದರ “ಮರುಪೂರಣ ಮಾಡಲು ಪ್ರಯತ್ನಿಸುವ” ಬಗ್ಗೆ ಹೇಳಿದ್ದರು. ಅಥರ್ವಣ ವೇದದ ಭೂಸೂಕ್ತವು ಹೀಗೆ ಭೂಮಿಯನ್ನು ಸ್ತುತಿಸುವ, ಅದಕ್ಕೆ ತಾಯ್ತನ ಭಾವಿಸಿ ಆಕೆಯಲ್ಲಿ ಆಶ್ರಯವನ್ನೂ ಕ್ಷಮೆಯನ್ನೂ ಬೇಡಿಕೊಳ್ಳುವ ಹಾಗೆಯೇ ತನ್ನಿಂದಾಗುವ ಪ್ರಮಾದಗಳನ್ನು ಸರಿಪಡಿಸಿಕೊಳ್ಳುವ ಸಂಕಲ್ಪ ತೊಡುವ ಹೇಳಿಕೆಗಳನ್ನು ಒಳಗೊಂಡಿದೆ.

ಭೂಸೂಕ್ತವನ್ನು ಹಾಡಿದ ಋಷಿಯು, “ನಾನು ಮಣ್ಣನ್ನು ಬಗೆಯುವಾಗ ನಿನಗೆ ನೋವಾಗದಿರಲಿ, ನಾನು ತೆಗೆಯುವ ಕುಳಿಯು ಹಾಗೆಯೇ ಮತ್ತೆ ಮುಚ್ಚಿಕೊಳ್ಳಲಿ. ನನ್ನಿಂದಾಗುವ ಅಪಚಾರಗಳನ್ನು ಕ್ಷಮಿಸು” ಎಂದು ಕೇಳಿಕೊಳ್ಳುತ್ತಾನೆ. ವೇದ ಕಾಲದ ಮತ್ತೊಬ್ಬ ಋಷಿಯು “ಸಮುದ್ರವನ್ನು ಉಟ್ಟವಳೇ, ನದಿಗಳ ಉಗಮಸ್ಥಾನವಾದ ಪರ್ವತಗಳಂಥ ವಾತ್ಸಲ್ಯಪೂರ್ಣ ಸ್ತನವುಳ್ಳವಳೇ, ವಿಷ್ಣುಪತ್ನಿಯೇ ನಿನಗೆ ನಮಸ್ಕಾರ. ನಾನೀಗ ನನ್ನ ಕಾಲುಗಳನ್ನು ನಿನ್ನಂಥ ಮಹಾಮಹಿಮಳ ಮೇಲೆ ಅನಿವಾರ್ಯವಾಗಿ ಇರಿಸುತ್ತಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ನಮಸ್ಕರಿಸುತ್ತಾನೆ.

ಆದರೆ… ಈ ಕಾಲಮಾನದ ನಮ್ಮ ಸಂಸ್ಕಾರವೆಲ್ಲ ಕೇವಲ ನಮಸ್ಕಾರಕ್ಕೆ ಮುಗಿದುಹೋಗಿದೆಯೇ? ಭೂಮಿಯ ಮೇಲಿನ ನಮ್ಮ ಪ್ರೇಮವನ್ನು ಸಾಬೀತುಪಡಿಸಲು ನಾವು ಪ್ರಾಯೋಗಿಕವಾಗಿ ಏನೆಲ್ಲ ಮಾಡಬಹುದು? 

ಈಗಲೂ ಕಾಲ ಮಿಂಚಿಲ್ಲ. ನಮ್ಮ ಪೂರ್ವಜರು ಹಚ್ಚಿಟ್ಟ ತಿಳಿವಿನ ಬೆಳಕಲ್ಲಿ ಮುಂದಿನ ಹೆಜ್ಜೆಯಿಡೋಣ. ಆಗದೇ? 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.